ಹಣಕ್ಕಾಗಿ ಸೇನೆ ಸೇರಿದರೂ ದೇಶದ ಹಿತ ಮರೆಯಲ್ಲ

5
ಮಲೆನಾಡಿಗರ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅನುಭವ ಬಿಚ್ಚಿಟ್ಟ ಬೆಟ್ಟೇಗೌಡ

ಹಣಕ್ಕಾಗಿ ಸೇನೆ ಸೇರಿದರೂ ದೇಶದ ಹಿತ ಮರೆಯಲ್ಲ

Published:
Updated:
ಹಣಕ್ಕಾಗಿ ಸೇನೆ ಸೇರಿದರೂ ದೇಶದ ಹಿತ ಮರೆಯಲ್ಲ

ಬೆಂಗಳೂರು: ‘ಕಾರ್ಗಿಲ್‌ ಯುದ್ಧದಲ್ಲಿ ನನ್ನ ದೇಹಕ್ಕೆ ಗುಂಡೇಟು ಬಿದ್ದಿತ್ತು. ವಿಶ್ವದ ಅತ್ಯಂತ ಎತ್ತರದ ಯುದ್ಧ ಭೂಮಿ ಸಿಯಾಚಿನ್ ನೀರ್ಗಲ್ಲು ಪ್ರದೇಶದಲ್ಲೂ ಕೆಲಸ ಮಾಡಿದ್ದೇನೆ. ಅಲ್ಲಿನ ಜೀವನ ಶೈಲಿಯೇ ಭಿನ್ನ. ದಿನಕ್ಕೆ ಒಂದು ಬಾಟಲಿ ಹಣ್ಣಿನ ರಸ, ಅರ್ಧ ಗಂಟೆ ನಿದ್ದೆ ಹಾಗೂ ತಿಂಗಳಿಗೆ ಒಂದೆರಡು ಬಾರಿ ಬಹಿರ್ದೆಸೆ...’

ಸೇನೆಯಲ್ಲಿ ಸೇವೆ ಸಲ್ಲಿಸಿದ್ದ ಕ್ಯಾಪ್ಟನ್‌ ಬೆಟ್ಟೇಗೌಡ ಅವರ ನುಡಿಗಳಿವು.

ಮಲೆನಾಡು ಸಂಘ ಹಾಗೂ ಮಲೆನಾಡು ಸ್ಪೋರ್ಟ್‌ ಆ್ಯಂಡ್‌ ಕಲ್ಚರಲ್‌ ರಿಕ್ರಿಯೇಷನ್‌ ಕ್ಲಬ್‌ ಆಶ್ರಯದಲ್ಲಿ ನಗರದಲ್ಲಿ ಆಯೋಜಿಸಿದ್ದ ‘ಮಲೆನಾಡಿಗರ ಸಾಂಸ್ಕೃತಿಕ ಕಾರ್ಯಕ್ರಮ’ದಲ್ಲಿ ಸನ್ಮಾನ ಸ್ವೀಕರಿಸಿ, ಅವರು ಮಾತನಾಡಿದರು.

ಸಿಯಾಚಿನ್‌ ಪ್ರದೇಶದಲ್ಲಿ –40 ಡಿಗ್ರಿ ಸೆಲ್ಶಿಯಸ್‌ಗಿಂತ ಕಡಿಮೆ ತಾಪಮಾನ ಇರುತ್ತದೆ. ಅಲ್ಲಿಗೆ ಹೋಗಲು ಒಂದು ತಿಂಗಳು ಕಾಲಾವಕಾಶ ಬೇಕು. ಒಮ್ಮೆ ಹೋದರೆ 90 ದಿನ ಅಲ್ಲೇ ಇರಬೇಕು. ಅಲ್ಲಿ ಎಲ್ಲ ತರಹದ ಊಟದ ವ್ಯವಸ್ಥೆ ಮಾಡಿದ್ದರೂ ಅದನ್ನು ತಿನ್ನಲು ಆಗುವುದಿಲ್ಲ. ಹೊಟ್ಟೆ ತುಂಬಿದ ರೀತಿಯಲ್ಲೇ ಇರುತ್ತದೆ. ಹೀಟರ್‌ ಮೂಲಕ ಹಣ್ಣಿನ ರಸದ ಬಾಟಲಿ ಬಿಸಿ ಮಾಡಿ, ಬಳಿಕ ಕುಡಿಯಬೇಕು ಎಂದು ತಿಳಿಸಿದರು.

‘ಹೊಟ್ಟೆಪಾಡಿಗಾಗಿ ಸೇನೆಗೆ ಸೇರಿದರೂ, ಅಲ್ಲಿಗೆ ಹೋದ ಮೇಲೆ ಮನೆ, ಸಂಸಾರ ಮರೆಯುತ್ತಾರೆ. ದೇಶದ ಹಿತಕ್ಕಾಗಿ ಹಗಲು ರಾತ್ರಿ ಶ್ರಮಿಸುತ್ತಾರೆ’ ಎಂದರು.

ಕೃಷಿಕ ಕೆ.ಆರ್‌.ಕೇಶವ, ‘ಬೆಂಗಳೂರಿನಲ್ಲಿ ಎಂಜಿನಿಯರಿಂಗ್‌ ಪದವಿ ಪಡೆದ ಬಳಿಕ 1984ರಲ್ಲಿ ಊರಿಗೆ ಹೋಗಿ ಕೃಷಿಯಲ್ಲಿ ತೊಡಗಿಸಿಕೊಂಡೆ. ಕೃಷಿಯಲ್ಲಿ ಸ್ವಾವಲಂಬನೆ ಸಾಧಿಸುವ ಹಾಗೂ ಕಾಳುಮೆಣಸು ಬೆಳೆಯುವ ಕುರಿತು ಯುವಕರಿಗೆ ತರಬೇತಿ ನೀಡಲು ಸಂಸ್ಥೆಯೊಂದನ್ನು ಸ್ಥಾಪಿಸಿದ್ದೇವೆ. ನಗರಕ್ಕೆ ವಲಸೆ ಹೋಗುವ ಯುವಕರನ್ನು ಕರೆದೊಯ್ದು, ಕೃಷಿಯಲ್ಲೂ ಲಾಭವಿದೆ ಎಂಬುದನ್ನು ತೋರಿಸಿಕೊಡುತ್ತಿದ್ದೇವೆ’ ಎಂದರು.

ಕಸ್ಟಮ್ಸ್‌ ಉಪ ಆಯುಕ್ತ ಜೆ.ದರ್ಶನ್‌, ‘ಮಲೆನಾಡಿನ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದರೂ ಯುಪಿಎಸ್‌ಸಿ, ಕೆಪಿಎಸ್‌ಸಿ ಪರೀಕ್ಷೆಗಳಲ್ಲಿ ತೇರ್ಗಡೆಯಾಗುವವರ ಪ್ರಮಾಣ ಕಡಿಮೆ ಇದೆ. ಅನೇಕ ಸಾಹಿತಿಗಳು, ಚಿಂತಕರ ತವರು ಆಗಿರುವ ಮಲೆನಾಡಿನಲ್ಲಿ ಯುವಜನರು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೇರ್ಗಡೆಯಾಗುವಲ್ಲಿ ಹಿಂದೆ ಉಳಿದಿದ್ದಾರೆ. ಅವರಿಗೆ ಮಾರ್ಗದರ್ಶನ ನೀಡುವ ಅಗತ್ಯವಿದೆ’ ಎಂದರು.

ಅಕ್ಕ ಸಮ್ಮೇಳನಕ್ಕೆ ಕಳುಹಿಸಿ: ಮಲೆನಾಡಿನ ಕಲೆ ವಿಶಿಷ್ಟವಾದದ್ದು. ಈ ಕಲೆಯ ಪ್ರದರ್ಶನಕ್ಕೆ ‘ಅಕ್ಕ’ ಸಮ್ಮೇಳನದಲ್ಲಿ ಅವಕಾಶ ನೀಡುವಂತೆ ಪತ್ರ ಬರೆದಿದ್ದೇವೆ. ಈ ಸಮ್ಮೇಳನಕ್ಕೆ ಕಳುಹಿಸಿ ಕೊಡುವಂತೆ ಸರ್ಕಾರದ ಮಟ್ಟದಲ್ಲಿ ಮಾತುಕತೆ ನಡೆಸಬೇಕು ಎಂದು ಕಲಾವಿದ ಜೆ.ಡಿ.ಪುಟ್ಟಸ್ವಾಮಿಗೌಡ ಅವರು ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಅವರಿಗೆ ಮನವಿ ಮಾಡಿದರು.

ವಿವಿಧ ಸ್ಪರ್ಧೆಗಳು: 10 ವರ್ಷದವರಿಗೆ ನೃತ್ಯ, ಛದ್ಮವೇಷ, ಮಹಿಳೆಯರಿಗೆ ಜನಪದ ಗೀತೆಗಳ ಗಾಯನ ಹಾಗೂ ರಂಗೋಲಿ ಸ್ಪರ್ಧೆ, ಪುರುಷರಿಗೆ ಜನಪದ ಗೀತೆಗಳ ಗಾಯನ ಹಾಗೂ ಅಶುಭಾಷಣ ಸ್ಪರ್ಧೆ ಮತ್ತು ಸುಗ್ಗಿ ಕುಣಿತ, ಮಲೆನಾಡು ಉಡುಗೆ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.

ಟಾಪ್‌ ಸ್ಟಾರ್‌ ರೇಣು ಮತ್ತು ತಂಡದವರು ನಡೆಸಿಕೊಟ್ಟ ರಸಮಂಜರಿ ಹಾಗೂ ಜೆ.ಡಿ.ಪುಟ್ಟಸ್ವಾಮಿಗೌಡ ಮತ್ತು ತಂಡದವರು ನಡೆಸಿಕೊಟ್ಟ ಮಲೆನಾಡಿನ ಕಹಳೆ ವಾದ್ಯದೊಂದಿಗೆ ಸುಗ್ಗಿ ಕುಣಿತ ಗಮನ ಸೆಳೆಯಿತು.

‘ಯೋಧ ಕೊಪ್ಪದಗೆ ತರಬೇತಿ ನೀಡಿದ್ದೆ’

‘ಎರಡು ವರ್ಷಗಳ ಹಿಂದೆ ಸಿಯಾಚಿನ್‌ ಪ್ರದೇಶದ ಹಿಮದಡಿ ಸಿಲುಕಿ ಯೋಧರು ಮೃತಪಟ್ಟಿದ್ದರು. ಅದರಲ್ಲಿ ನಮ್ಮ ರೆಜಿಮೆಂಟ್‌ನ ನಾಗೇಶ್‌, ಹನುಮಂತ ಕೊಪ್ಪದ ಸೇರಿದ್ದರು. ಆ ಪ್ರದೇಶದಲ್ಲಿ ಕಾರ್ಯ ನಿರ್ವಹಿಸುವ ಕುರಿತು ಕೊಪ್ಪದ ಅವರಿಗೆ ತರಬೇತಿ ನೀಡುವ ಭಾಗ್ಯ ನನಗೆ ಸಿಕ್ಕಿತ್ತು’ ಎಂದು ಬೆಟ್ಟೇಗೌಡ ಸ್ಮರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry