ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒತ್ತಡಕ್ಕೆ ಮಣಿಯದೆ ಪಾರದರ್ಶಕ ಆಡಳಿತ

Last Updated 9 ಜನವರಿ 2018, 5:02 IST
ಅಕ್ಷರ ಗಾತ್ರ

ಮೈಸೂರು: ಉನ್ನತ ಶಿಕ್ಷಣದ ಸುಧಾರಣೆಗೆ ಸಮಿತಿ ರಚಿಸಿ, ಕೊಳೆಗೇರಿಗಳಲ್ಲಿ ಖಾಸಗಿ ಶಾಲೆಗಳನ್ನು ಸ್ಥಾಪಿಸಿ, ಪ್ರತಿ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಆಹಾರ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಿ, ವಿ.ವಿ. ಕುಲಪತಿಗಳ ನೇಮಕದಲ್ಲಿ ರಾಜಕೀಯಕ್ಕೆ ಅವಕಾಶ ನೀಡಬೇಡಿ...

ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಅವರು ಸೋಮವಾರ ನಗರದಲ್ಲಿ ಆಯೋಜಿಸಿದ್ದ ‘ಬಲ್ಲವರೊಡನೆ ಬೌದ್ಧಿಕ ಚಿಂತನೆ’ ಕಾರ್ಯಕ್ರಮದಲ್ಲಿ ಬಂದ ಸಲಹೆಗಳು ಮತ್ತು ಕೋರಿಕೆಗಳು ಇವು.

ಮುಂದಿನ ಚುನಾವಣೆಗೆ ಪಕ್ಷದ ಪ್ರಣಾಳಿಕೆ ಸಿದ್ಧಪಡಿಸಲು ಬುದ್ಧಿ ಜೀವಿಗಳು, ಶಿಕ್ಷಣ ತಜ್ಞರು, ಶಿಕ್ಷಕರು, ಸಂಶೋಧನಾ ವಿದ್ಯಾರ್ಥಿಗಳಿಂದ ಸಲಹೆಗಳನ್ನು ಪಡೆಯಲು ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಶಿಕ್ಷಣದ ಸುಧಾರಣೆ ಮತ್ತು ಮಾದರಿ ಆಡಳಿತ ನೀಡಲು ಸಲಹೆಗಳ ಮಹಾಪೂರ ಹರಿದುಬಂತು.

ಸಲಹೆ ಆಲಿಸಿದ ಬಳಿಕ ಮಾತನಾಡಿದ ಕುಮಾರಸ್ವಾಮಿ, ‘ನಾನು ಅಧಿಕಾರಕ್ಕೆ ಬಂದರೆ ಯಾವುದೇ ಒತ್ತಡಗಳಿಗೆ ಮಣಿಯದೆ ಪಾರದರ್ಶಕ ಆಡಳಿತ ನೀಡುತ್ತೇನೆ. ಐಎಎಸ್‌ ಅಧಿಕಾರಿಗಳು ಮತ್ತು ರಾಜಕಾರಣಿಗಳ ಸಲಹೆಗಳನ್ನು ಮಾತ್ರ ಪಡೆದು ಆಡಳಿತ ನಡೆಸುವುದಿಲ್ಲ’ ಎಂದರು.

‘ಸಾಮಾನ್ಯ ಜನರು ಯಾರು ಬೇಕಾದರೂ ಯಾವುದೇ ಸಂದರ್ಭದಲ್ಲಿ ಈ ರಾಜ್ಯದ ಮುಖ್ಯಮಂತ್ರಿಯನ್ನು ಭೇಟಿಯಾಗುವ ವ್ಯವಸ್ಥೆಯನ್ನು ಜಾರಿಗೆ ತರುತ್ತೇನೆ’ ಎಂದು ಭರವಸೆ ನೀಡಿದರು.

‘ಸರ್ಕಾರ ಸರಿಯಾದ ರೀತಿಯಲ್ಲಿ ನೀತಿಗಳನ್ನು ರೂಪಿಸಿದರೆ ಕರ್ನಾಟದ ವಿ.ವಿಗಳು ಕೂಡ ವಿಶ್ವಮಟ್ಟದ ವಿ.ವಿಗಳಾಗಿ ಬೆಳೆಯಬಹುದು. ಇಸ್ರೇಲ್‌ಗೆ ಭೇಟಿ ನೀಡಿದ್ದಾಗ ಒಂದು ವಿ.ವಿಗೆ ಕರೆದುಕೊಂಡು ಹೋಗಿದ್ದರು. ಕೇವಲ 17 ಎಕರೆ ಜಾಗದಲ್ಲಿ ಆ ವಿ.ವಿ ಇತ್ತು. ಅಲ್ಲಿನ ಇಬ್ಬರು ಪ್ರೊಫೆಸರ್‌ಗಳಿಗೆ ನೊಬೆಲ್‌ ಪ್ರಶಸ್ತಿ ಬಂದಿದೆ. ಕರ್ನಾಟಕ ವಿ.ವಿಗಳಿಗೆ ನೂರಾರು ಎಕರೆ ಜಾಗ ಇದೆ. ಆದರೆ ವಿಶ್ವಮಟ್ಟಕ್ಕೆ ಬೆಳೆದಿಲ್ಲ’ ಎಂದು ಹೇಳಿದರು.

ಜೆಡಿಎಸ್‌ ಮುಖಂಡ ಎಚ್‌.ವಿಶ್ವನಾಥ್ ಮಾತನಾಡಿ, ‘ವಿಶ್ವವಿದ್ಯಾ ಲಯಗಳಲ್ಲಿ ಚುನಾವಣೆ ಮೂಲಕ ವಿದ್ಯಾರ್ಥಿ ಸಂಘದ ಆಯ್ಕೆಗೆ ಅವ ಕಾಶ ನೀಡಬೇಕು. ಇದರಿಂದ ಯುವಕ ರನ್ನು ಕಾಲೇಜಿನಲ್ಲಿರುವಾಗಲೇ ಜನ ತಂತ್ರದ ವ್ಯವಸ್ಥೆಗೆ ಅಣಿಗೊಳಿಸಲು ಸಾಧ್ಯವಾಗುತ್ತದೆ’ ಎಂದು ಅಭಿಪ್ರಾಯ ಪಟ್ಟರು.

ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯ ಗಳ ವಿಶ್ರಾಂತ ಕುಲಪತಿಗಳ ವೇದಿಕೆಯ ಅಧ್ಯಕ್ಷ ಪ್ರೊ.ಎಸ್‌.ಎನ್‌.ಹೆಗ್ಡೆ, ‘ಜೆಡಿಎಸ್‌ ಅಧಿಕಾರಕ್ಕೆ ಬಂದರೆ ವಿಜ್ಞಾನಿಗಳು, ಶಿಕ್ಷಣ ತಜ್ಞರನ್ನು ಸಂಪುಟದಲ್ಲಿ ಸೇರಿಸ ಬೇಕು’ ಎಂದು ಸಲಹೆ ನೀಡಿದರು.

ಜೆಡಿಎಸ್‌ ಮುಖಂಡ ಪ್ರೊ.ಕೆ.ಎಸ್‌.ರಂಗಪ್ಪ ಕಾರ್ಯಕ್ರಮ ನಿರ್ವಹಿಸಿದರು. ವಿಶ್ರಾಂತ ಕುಲಪತಿಗಳಾದ ಪ್ರೊ.ಜೆ.ಎ.ಕೆ.ತರೀನ್, ಪ್ರೊ.ಮಹದೇವಪ್ಪ, ಪ್ರೊ.ಪಿ.ವೆಂಕಟರಾಮಯ್ಯ, ಶಾಸಕ ಜಿ.ಟಿ.ದೇವೇಗೌಡ, ಡಾ.ಎಸ್‌.ಪಿ.ಯೋಗಣ್ಣ, ಪ್ರೊ.ಗೋವಿಂದಯ್ಯ, ವಾಸುದೇವಮೂರ್ತಿ, ಪ್ರೊ.ಬಿ.ಕೆ.ಶಿವಣ್ಣ, ಹಿರಿಯ ವಿಜ್ಞಾನಿ ಮಹದೇವಯ್ಯ ಪಾಲ್ಗೊಂಡಿದ್ದರು.

‘ಸಮೀಕ್ಷೆಗಳ ಬಗ್ಗೆ ತಲೆಕೆಡಿಸಿಕೊಂಡಿಲ್ಲ’

ಮುಂದಿನ ಬಾರಿ ಸಮ್ಮಿಶ್ರ ಸರ್ಕಾರ ಬರಲಿದೆ ಎಂದು ತೀರ್ಮಾನ ತೆಗೆದುಕೊಳ್ಳಬೇಡಿ. ಜೆಡಿಎಸ್‌ಗೆ 40–50 ಸ್ಥಾನಗಳು ಬರಬಹುದು ಎಂದು ಕೆಲವು ಸಮೀಕ್ಷೆಗಳು ಹೇಳಿವೆ. ಇನ್ನು ಕೆಲವರು 20–25 ಸ್ಥಾನಗಳು ಎಂದು ಅಂದಾಜು ಮಾಡಿವೆ. ಚುನಾವಣೆ ಹತ್ತಿರ ಬರುವಾಗ ಅದು 10–15 ಸ್ಥಾನಗಳಿಗೆ ಇಳಿದುಬಿಡಬಹುದು. ಸಮೀಕ್ಷೆಗಳ ಬಗ್ಗೆ  ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಮಾಧ್ಯಮಗಳು ಜನರನ್ನು ದಾರಿತಪ್ಪಿಸುವ ಕೆಲಸ ಮಾಡಬಾರದು ಎಂದು ತಿಳಿಸಿದರು.

‘ರಾಜ್ಯಪಾಲರಿಗೆ ಗೌರವ ಇಲ್ಲ’

ಇಂದು ರಾಜ್ಯಪಾಲರ ಕಚೇರಿಗಳಲ್ಲಿ ಕೂಡ ರಾಜಕೀಯ ನಡೆಯುತ್ತದೆ. ರಾಜ್ಯಪಾಲರು ಹಿಂದಿನ ಗೌರವ ಉಳಿಸಿಕೊಂಡಿಲ್ಲ. ಹಿಂದೆಲ್ಲ ರಾಜ್ಯಪಾಲರಿಗೆ ಮುಖ್ಯಮಂತ್ರಿಗಳು ಹೆದರುತ್ತಿದ್ದರು. ಈಗ ಪರಿಸ್ಥಿತಿ ಬದಲಾಗಿದ್ದು, ಗೌರವ ಕಡಿಮೆಯಾಗುತ್ತಿದೆ ಎಂದು ಕುಮಾರಸ್ವಾಮಿ ತಿಳಿಸಿದರು.

ಕುಲಪತಿಗಳ ನೇಮಕದ ವಿಚಾರದಲ್ಲಿ ರಾಜಕಾರಣಿಗಳು, ಮುಖ್ಯಮಂತ್ರಿಗಳು ಮಧ್ಯಪ್ರವೇಶಿಸಬಾರದು. ಜಾತಿಯ ಆಧಾರದಲ್ಲಿ ನೇಮಕ ನಡೆಯಲಿ, ಅರ್ಹತೆಯ ಆಧಾರದಲ್ಲಿ ನಡೆಯಲಿ ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT