ಆಕಸ್ಮಿಕ ಬೆಂಕಿ: ಮೆಕ್ಕೆಜೋಳ, ರಾಗಿ ಭಸ್ಮ

7

ಆಕಸ್ಮಿಕ ಬೆಂಕಿ: ಮೆಕ್ಕೆಜೋಳ, ರಾಗಿ ಭಸ್ಮ

Published:
Updated:

ಕೂಡ್ಲಿಗಿ: ಪಟ್ಟಣದ ಹೊರ ವಲಯದಲ್ಲಿನ ರಾಷ್ಟ್ರೀಯ ಹೆದ್ದಾರಿ 50ರ ಸಮೀಪ ಕಣವೊಂದಕ್ಕೆ ಭಾನುವಾರ ರಾತ್ರಿ ಆಕಸ್ಮಿಕ ಬೆಂಕಿ ತಗುಲಿ ಲಕ್ಷಾಂತರ ಮೌಲ್ಯದ ಮೆಕ್ಕೆ ಜೋಳ ಸೊಪ್ಪೆ, ತೆನೆ, ರಾಗಿ ಹುಲ್ಲು ಸುಟ್ಟು ಭಸ್ಮವಾಗಿದೆ.

ಪಟ್ಟಣದ ಮಳ್ಳಪ್ಪರ ಕೆಂಚೀರಮ್ಮ ಹಾಗೂ ರೇವಣ್ಣ ಅವರಿಗೆ ಸೇರಿದ ಕಣವಾಗಿದೆ. ಎಂದಿನಂತೆ ಕೆಂಚೀರಮ್ಮನ ಮಗ ಪತ್ರೆಪ್ಪ ರಾತ್ರಿ 11 ಗಂಟೆಗೆ ಕಣದಲ್ಲಿ ಮಲಗಲು ಹೋದ ಸಂದರ್ಭದಲ್ಲಿ ಕಣಕ್ಕೆ ಬೆಂಕಿ ತಗಲಿದ್ದು ತಿಳಿದಿದೆ.

ನೋಡು ನೋಡುತ್ತಿದ್ದಂತೆ ಕಣಕ್ಕೆ ಬೆಂಕಿ ಆವರಿಸಿಕೊಂಡಿದೆ. ತಕ್ಷಣ ಪಂಪ್‌ಸೆಟ್‌ ನೀರಿನ ಮೂಲಕ ಬೆಂಕಿ ನಂದಿಸಲು ಪ್ರಯತ್ನಿಸಿದ್ದು, ನಿಯಂತ್ರಣಕ್ಕೆ ಬಾರದಿದ್ದರಿಂದ ಅಗ್ನಿ ಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಬಳಿಕ ದಳದ ಸಿಬ್ಬಂದಿಗಳು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

‘200 ಕ್ವಿಂಟಲ್‌ನಷ್ಟು ಮೆಕ್ಕೆ ಜೋಳದ ತೆನೆ, 8 ಟ್ರ್ಯಾಕ್ಟರ್ ಸೊಪ್ಪೆ, ಎರಡು ಗಾಡಿಯಷ್ಟು ತೆನೆ ಸಮೇತ ರಾಗಿ ಹುಲ್ಲು ಬೆಂಕಿಯಲ್ಲಿ ಸುಟ್ಟು ಹೋಗಿದ್ದು, ಒಟ್ಟು ನಾಲ್ಕು ಲಕ್ಷ ರೂಪಾಯಿಗಳಷ್ಟು ನಷ್ಟವಾಗಿದೆ’ ಎಂದು ಅಗ್ನಿಶಾಮದಳ ಸಿಬ್ಬಂದಿ ತಿಳಿಸಿದ್ದಾರೆ. ‘ಕಿಡಿಗೇಡಿಗಳ ಕೃತ್ಯದಿಂದ ಬೆಂಕಿ ಅನಾಹುತ ಸಂಭವಿಸಿದೆ’ ಎಂದು ಕೆಂಚೀರಮ್ಮ, ರೇವಣ್ಣ ಅನುಮಾನ ವ್ಯಕ್ತಪಡಿಸಿದ್ದಾರೆ. 

ಶಾರ್ಟ್‌ ಸರ್ಕಿಟ್‌ನಿಂದ ಕಣ ಭಸ್ಮ

ಕೂಡ್ಲಿಗಿ ತಾಲ್ಲೂಕಿನ ಗಂಗಮ್ಮನ ಹಳ್ಳಿಯಲ್ಲಿ ಭಾನುವಾರ ವಿದ್ಯುತ್ ಶಾರ್ಟ್ ಸರ್ಕಿಟ್‌ನಿಂದ ಕಣದಲ್ಲಿದ್ದ ಮೆಕ್ಕೆ ಜೋಳ ಭಸ್ಮವಾಗಿದೆ. ಗ್ರಾಮದ ಗುರುಸಿದ್ದಪ್ಪ ಎಂಬುವವರಿಗೆ ಕಣ ಸೇರಿದ್ದು. ಕಣದ ಮೇಲೆ ಹಾದು ಹೋಗಿರುವ ವಿದ್ಯುತ್ ತಂತಿಗಳು ಪರಸ್ಪರ ಸ್ಪರ್ಶದಿಂದ ಉಂಟಾದ ಬೆಂಕಿ ಕಿಡಿಯಿಂದ ಘಟನೆ ಸಂಭವಿಸಿದೆ. ಇದೇ ಕಣಕ್ಕೆ ಹೊಂದಿಕೊಂಡಿದ್ದ ಉತ್ತಂಗಿ ಸಿದ್ದೇಶ ಅವರ ಕಣದಲ್ಲಿದ್ದ ರಾಗಿ ಹುಲ್ಲಿನ ಬಣವಿ ಸಹ ಸುಟ್ಟುಹೋಗಿದೆ.

ಕಣದಲ್ಲಿದ್ದ ಸುಮಾರು 45 ಕ್ವಿಂಟಲ್ ಮೆಕ್ಕೆ ಜೋಲದ ರಾಶಿ ಸಂಪೂರ್ಣ ಸುಟ್ಟು ಹೋಗಿದೆ. ವಿಷಯ ತಿಳಿದ ಕೊಟ್ಟೂರು ಅಗ್ನಿ ಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಬಂದು ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.

ಜೋಳದ ಬೆಳೆ ಭಸ್ಮ

ಬಳ್ಳಾರಿ: ತಾಲ್ಲೂಕಿನ ಸಂಗನಕಲ್ಲು ಗ್ರಾಮದಲ್ಲಿ ಸೋಮವಾರ ಆಕಸ್ಮಿಕ ಬೆಂಕಿ ತಗುಲಿ ಮೆಕ್ಕೆಜೋಳದ ಬೆಳೆ ಸುಟ್ಟಿದೆ. ಸಾವಿತ್ರಮ್ಮ, ಕೆ.ಮಲ್ಲಿಕಾರ್ಜುನ, ಹಂಪಮ್ಮ, ತುಳಶಪ್ಪ ಮತ್ತು ಪಾಂಡುರಂಗ ಎಂಬುವವರು ಬೆಳೆ ಕಟಾವು ಮಾಡಿ ಒಂದೇ ಕಡೆ ರಾಶಿ ಹಾಕಿದ್ದರು.

ಸೋಮವಾರ ಮಧ್ಯಾಹ್ನ ಬೆಂಕಿ ತಗುಲಿ ಸಂಜೆ ವೇಳೆಗೆ ಎಲ್ಲವೂ ಸುಟ್ಟಿತ್ತು ಎಂದು ರೈತರು ಮಾಹಿತಿ ನೀಡಿದರು ಎಂದು ಸ್ಥಳಕ್ಕೆ ಭೇಟಿನೀಡಿದ್ದ ಉಪ ತಹಸೀಲ್ದಾರ್ ಹೊನ್ನಮ್ಮ ‘ಪ್ರಜಾವಾಣಿ’ಗೆ ತಿಳಿಸಿದರು. ‘ಬೆಂಕಿಗೆ ಕಾರಣ ತಿಳಿದುಬಂದಿಲ್ಲ. ಪ್ರಕರಣ ದಾಖಲಾದ ಬಳಿಕ ಸರ್ವೆ ನಡೆಸಲಾಗುವುದು. ನಂತರ ನಷ್ಟದ ಅಂದಾಜು ಮಾಡಲಾಗುವುದು’ ಎಂದರು.

ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಹುಸೇನ್ ಸಾಬ್, ಜೆಡಿಎಸ್ ಪರಿಶಿಷ್ಟ ಪಂಗಡ ವಿಭಾಗದ ರಾಜ್ಯ ಮಹಾಪ್ರಧಾನ ಕಾರ್ಯದರ್ಶಿ ಮೀನಹಳ್ಳಿ ತಾಯಣ್ಣ ಭೇಟಿ ನೀಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry