ಕಾಂಗ್ರೆಸ್‌ನತ್ತ ಎಂ.ಸಿ. ನಾಣಯ್ಯ?

7

ಕಾಂಗ್ರೆಸ್‌ನತ್ತ ಎಂ.ಸಿ. ನಾಣಯ್ಯ?

Published:
Updated:
ಕಾಂಗ್ರೆಸ್‌ನತ್ತ ಎಂ.ಸಿ. ನಾಣಯ್ಯ?

ಮಡಿಕೇರಿ: ನಾಯಕರ ನಡೆಯ ವಿರುದ್ಧ ಅಸಮಾಧಾನಗೊಂಡಿರುವ ಮಾಜಿ ಸಚಿವ, ಜೆಡಿಎಸ್‌ ಹಿರಿಯ ಮುಖಂಡ ಎಂ.ಸಿ.ನಾಣಯ್ಯ ಅವರು ಪಕ್ಷ ತೊರೆಯುವ ನಿರ್ಧಾರಕ್ಕೆ ಬಂದಿದ್ದಾರೆ. 10 ದಿನಗಳಲ್ಲಿ ಅಂತಿಮ ನಿರ್ಧಾರ ಪ್ರಕಟಿಸುವ ಸಾಧ್ಯತೆಯಿದೆ.

ಕೊಡಗು ಜಿಲ್ಲಾ ಜೆಡಿಎಸ್‌ ಪದಾಧಿಕಾರಿಗಳ ಆಯ್ಕೆಯಲ್ಲಿ ತಮ್ಮನ್ನು ಕಡೆಗಣಿಸಲಾಗಿದೆ. ಬೆಂಬಲಿಗರಿಗೆ ಯಾವುದೇ ಸ್ಥಾನ ನೀಡಿಲ್ಲ, ಸಲಹೆ ಪಡೆಯುತ್ತಿಲ್ಲವೆಂದು ಕೆಲ ದಿನಗಳಿಂದ ಪಕ್ಷದ ಚಟುವಟಿಕೆಯಿಂದ ದೂರ ಉಳಿದಿದ್ದರು. ಜತೆಗೆ ಮಾಜಿ ಸಚಿವ, ಮಡಿಕೇರಿ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿ ಬಿ.ಎ.ಜೀವಿಜಯ ಹಾಗೂ ನಾಣಯ್ಯ ನಡುವೆ ಭಿನ್ನಾಭಿಪ್ರಾಯ ಸ್ಫೋಟಗೊಂಡಿತ್ತು. ಕೆಲವು ದಿನಗಳಿಂದ ಇಬ್ಬರೂ ವೇದಿಕೆ ಹಂಚಿಕೊಂಡಿರಲಿಲ್ಲ.

ಕೊಡಗಿನಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ನಾಣಯ್ಯ ಅಡ್ಡಗಾಲು ಹಾಕುತ್ತಿದ್ದಾರೆ. ಅವರನ್ನು ಪಕ್ಷದಿಂದ ಹೊರ ಹಾಕಬೇಕೆಂದು ಜೀವಜಯ ವರಿಷ್ಠರ ಮುಂದೆ ಬೇಡಿಕೆ ಇಟ್ಟಿದ್ದರು. ಇದಕ್ಕೆ ರಾಜ್ಯ ಘಟಕದ ಅಧ್ಯಕ್ಷ ಕುಮಾರಸ್ವಾಮಿ ಸಮ್ಮತಿಸಿದ್ದು, ಈ ವಿಚಾರ ಗೊತ್ತಾಗಿ ಪಕ್ಷದಿಂದ ಹೊರಹೋಗುವ ನಿರ್ಧಾರಕ್ಕೆ ನಾಣಯ್ಯ ಬಂದಿದ್ದಾರೆ ಎನ್ನಲಾಗಿದೆ.

ಸೋಮವಾರ ನಗರದಲ್ಲಿ ನಾಣಯ್ಯ ಬೆಂಬಲಿಗರು ಸಭೆ ನಡೆಸಿದರು. ‘ಶೀಘ್ರದಲ್ಲಿ ಅತೃಪ್ತರ ಮತ್ತೊಂದು ಸಭೆ ನಡೆಸಿ ನಾವೆಲ್ಲ ಯಾವ ಪಕ್ಷ ಸೇರುತ್ತೇವೆ ಎನ್ನುವುದನ್ನು ಪ್ರಕಟಿಸುತ್ತೇವೆ. ನಾಣಯ್ಯ ಅವರು ಕಾಂಗ್ರೆಸ್‌ ಸೇರುವುದೇ ಸೂಕ್ತ ಎನ್ನುವ ಅಭಿಪ್ರಾಯಗಳು ಸಭೆಯಲ್ಲಿ ವ್ಯಕ್ತವಾಗಿವೆ’ ಎಂದು ಬೆಂಬಲಿಗ ಮುನೀರ್‌ ತಿಳಿಸಿದರು. ನಾಣಯ್ಯ ಅವರು ಈ ಸಭೆಯಲ್ಲಿ ಪಾಲ್ಗೊಂಡಿರಲಿಲ್ಲ.

‘ಸದ್ಯಕ್ಕೆ ಪಕ್ಷ ತೊರೆಯುವ ಆಲೋಚನೆ ಮಾಡಿಲ್ಲ. ನಿಷ್ಠಾವಂತರನ್ನು ಕಡೆಗಣಿಸಿದ್ದರಿಂದ ನನ್ನ ಬೆಂಬಲಿಗರಿಗೆ ಬೇಸರವಾಗಿದೆ. ಹೊಸಬರಿಗೆ ಮಣೆ ಹಾಕಲಾಗಿದೆ; ಅಪರಾಧ ಹಿನ್ನೆಲೆಯವರಿಗೆ ಸ್ಥಾನ ನೀಡಲಾಗಿದೆ. ಜಾತ್ಯತೀತ ಶಕ್ತಿಗಳು ಒಂದಾಗಬೇಕಿದ್ದು ಬೆಂಬಲಿಗರು ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧ’ ಎಂದು ನಾಣಯ್ಯ ತಿಳಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಇಲ್ಲಿಗೆ ಭೇಟಿ ನೀಡುತ್ತಿದ್ದು, ನಾಣಯ್ಯ ಅವರ ನಿವಾಸಕ್ಕೆ ತೆರಳಿ ಪಕ್ಷ ಸೇರ್ಪಡೆ ವಿಚಾರ ಚರ್ಚಿಸುವ ಸಾಧ್ಯತೆಯಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry