ಪ್ರಶ್ನೋತ್ತರ

7

ಪ್ರಶ್ನೋತ್ತರ

Published:
Updated:
ಪ್ರಶ್ನೋತ್ತರ

-ಬಸವರಾಜ, ವಿಜಯಪುರ

ವಯಸ್ಸು 34. ಖಾಸಗಿ ಕಂಪನಿಯಲ್ಲಿ ಬೆಂಗಳೂರಿನಲ್ಲಿ ಕೆಲಸ. ಮಾಸಿಕ ಸಂಬಳ ₹ 22,000. ನನ್ನ ಹೆಸರಿನಲ್ಲಿ ಎಲ್.ಐ.ಸಿ. ಮೂರು ಪಾಲಿಸಿಗಳು ಇವೆ. ವಾರ್ಷಿಕವಾಗಿ ₹ 17,716 ಪ್ರೀಮಿಯಂ ಹಣ ತುಂಬುತ್ತೇನೆ. ಅಂಚೆಕಚೇರಿಯಲ್ಲಿ ತಿಂಗಳಿಗೆ ₹ 3,000 ಆರ್.ಡಿ. ಮಾಡಿದ್ದೇನೆ. ನನಗೆ ಪಿತ್ರಾರ್ಜಿತ ಮೂರು ಎಕರೆ ಜಮೀನು ಬರುತ್ತದೆ. ನಾನು ಓರ್ವ ಮುಸ್ಲಿಮ್ ಬಾಂಧವರಿಂದ 30X36 ಅಳತೆ ನಿವೇಶನ ತೋಂಡಡಿ ಬಕ್ಷಿಸ್ ಎಂದು ದಾನ ಪತ್ರದ ಮುಖಾಂತರ ಪಡೆದಿದ್ದೇನೆ. ಇದರ ವಾಯಿದೆ ಎಲ್ಲಿವರೆಗೆ ಇದೆ. ನನಗೆ ಒಂದು ಗಂಡು ಹಾಗೂ ಒಂದು ಹೆಣ್ಣು ಮಕ್ಕಳಿದ್ದಾರೆ. ಎರಡೂ ಮಕ್ಕಳು ಸಣ್ಣವರು. ಮನೆ ಬಾಡಿಗೆ ಖರ್ಚು ಹೋಗಿ ₹ 6,000 ಉಳಿಯುತ್ತದೆ. ಇದನ್ನು ಏನು ಮಾಡಲಿ?

ಉತ್ತರ: ನಿಮಗಿರುವ ವಿಮೆ ಇನ್ನೂ ಹೆಚ್ಚಿಸುವ ಅವಶ್ಯವಿಲ್ಲ. ಆದರೆ ಇವುಗಳನ್ನು ಮಧ್ಯದಲ್ಲಿ ನಿಲ್ಲಿಸಬೇಡಿ. ಹೆಣ್ಣು ಮಗುವಿನ ಸಲುವಾಗಿ ತಿಂಗಳಿಗೆ ಕನಿಷ್ಠ ₹ 2,000 ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ತೊಡಗಿಸಿರಿ. ಉಳಿದ ₹ 4000, 5 ವರ್ಷಗಳ ಆರ್.ಡಿ. ಮಾಡಿರಿ. ಯಾವುದೇ ವ್ಯಕ್ತಿ ಸ್ಥಿರ ಆಸ್ತಿ ದಾನಪತ್ರ ಅಥವಾ ಕ್ರಯ ಪತ್ರ ಮಾಡುವಾಗ ಅಂತಹ ಆಸ್ತಿ ಆತನ ಹೆಸರಿನಲ್ಲಿಯೇ ಇರಬೇಕು ಹಾಗೂ ಬೇರೆ ವಾರಸುದಾರರು ಇರಬಾರದು.

ಸ್ಥಿರ ಆಸ್ತಿ ಹಕ್ಕುಪತ್ರ (Property Document) ಹಾಗೂ ನೀವು ಪಡೆದ ದಾನ ಪತ್ರ ನಿಮ್ಮ ಊರಿನ ವಕೀಲರಿಗೆ ತೋರಿಸಿ ಸಂಶಯ ನಿವಾರಿಸಿಕೊಳ್ಳಿ. ನಿಮಗೆ ಬಂದಿರುವ ಪಿತ್ರಾರ್ಜಿತ ಮೂರು ಎಕರೆ ಜಮೀನು ಎಂದಿಗೂ ಮಾರಾಟ ಮಾಡಬೇಡಿ. ಈ ಭೂಮಿ ತಾಯಿ ನಿಮ್ಮ ಜೀವನದ ಸಂಜೆಯಲ್ಲಿ ನಿಮ್ಮನ್ನು ಕಾಪಾಡುತ್ತಾಳೆ.

*

-ಮಂಜುಳ, ಮಂಗಳೂರು

ನಮ್ಮದು 4 ಜನರಿರುವ ಕುಟುಂಬ, ಪತಿ 58, ನಾನು 48, ಮಗಳು 21, ಮಗ 19. ಆರೋಗ್ಯ ವಿಮೆ ಮಾಡಿಸಬೇಕೆಂದಿದ್ದೇವೆ. ಕಾರ್ಪೋರೇಟ್ ಆಸ್ಪತ್ರೆಯಲ್ಲಿಯೂ ಸೌಲಭ್ಯವಿರಬೇಕು. ಮಗಳಿಗೆ ಮದುವೆ ಆದನಂತರ ಅವಳು ವಿಮೆಯಿಂದ ಹೊರ ಹೋಗುತ್ತಾಳೆಯೇ ತಿಳಿಸಿರಿ. ತುಂಬಾ ಜನರು ಆರೋಗ್ಯ ವಿಮೆ ಹಣ ಸಂದಾಯವಾಗುವುದಿಲ್ಲ ಎನ್ನುವುದನ್ನು ಹೇಳುವುದನ್ನು ಕೇಳಿದ್ದೇನೆ. ಇದಕ್ಕೆ ಕಾರಣ ತಿಳಿಸಿ?

ಉತ್ತರ: ನಿಮ್ಮ 4 ಜನರೂ ಸೇರಿ ಒಂದೇ ಆರೋಗ್ಯ ವಿಮೆ ಪಾಲಿಸಿ ಮಾಡಬಹುದು. ಇದನ್ನು Floating Policy ಎಂದು ಕರೆಯುತ್ತಾರೆ. 4ರಲ್ಲಿ ಯಾರಾದರೊಬ್ಬರು ಆಸ್ಪತ್ರೆಗೆ ಸೇರುವ ಸಂದರ್ಭದಲ್ಲಿ ವಿಮೆ ಮೊತ್ತದಲ್ಲಿ ಸಂಪೂರ್ಣ ಚಿಕಿತ್ಸೆ ಸೌಲತ್ತು ಪಡೆಯಬಹುದು. ಮದುವೆ ನಂತರವೂ ಪಾಲಿಸಿ ಅವಧಿಯಲ್ಲಿ ಮಗಳಿಗೆ ಈ ಸೌಲಭ್ಯ ದೊರೆಯುತ್ತದೆ.

ನಿಮ್ಮ ಮನೆಗೆ ಸಮೀಪದ,  ಸಿಂಡಿಕೇಟ್‌ ಬ್ಯಾಂಕಿನಲ್ಲಿ ‘ಸಿಂಡ್‌ ಆರೋಗ್ಯ’ ಎನ್ನುವ ಆರೋಗ್ಯ ವಿಮೆ ಪಾಲಿಸಿ ಪಡೆಯಿರಿ. ಈ ಪಾಲಿಸಿ ಕಾರ್ಪೊರೇಟ್‌ ಆಸ್ಪತ್ರೆಯಲ್ಲಿ ಕೂಡಾ ಚಿಕಿತ್ಸೆ ಪಡೆಯಲು ಅನುಕೂಲವಾಗುತ್ತದೆ. ಆಸ್ಪತ್ರೆಗೆ ಸೇರುವ ಮುನ್ನ ವಿಮಾ ಕಂಪನಿಯವರು ವಿತರಿಸುವ ಐ.ಡಿ. ಕಾರ್ಡ್‌ ತೋರಿಸಬೇಕು. ಇದು ಹಣ ರಹಿತ ಸೌಲತ್ತಿರುವ (Cash Les) ಪಾಲಸಿ. ನೀವು ಕಾರ್ಡು ಆಸ್ಪತ್ರೆಗೆ ತೋರಿಸಿದಲ್ಲಿ, ಇಳಿಸಿದ ವಿಮಾ ಮೊತ್ತದ ತನಕ ಹಣರಹಿತ ಸೌಲತ್ತು ದೊರೆಯುತ್ತದೆ.

ಆರೋಗ್ಯ ವಿಮೆಯಲ್ಲಿ, ಈಗಲೇ ಇರುವ ಕಾಯಿಲೆಗಳಿಗೆ ವಿಮೆ ಇಳಿಸಿದ ಮೂರು ವರ್ಷಗಳ ತನಕ ಸೌಲತ್ತು ಇರುವುದಿಲ್ಲ. ಆರೋಗ್ಯ ವಿಮೆ ಪ್ರೀಮಿಯಂ ಹಣ ವಾರ್ಷಿಕವಾಗಿ ಕಟ್ಟಬೇಕು. ಜೀವವಿಮೆಯಂತೆ, ಇಲ್ಲಿ ಕಟ್ಟಿದ ಹಣ ವಾಪಸು ಬರುವುದಿಲ್ಲ. ಆದರೆ, ವ್ಯಕ್ತಿ ಕಾಯಿಲೆಗೆ ತುತ್ತಾಗಿ, ಆಸ್ಪತ್ರೆಗೆ ಸೇರುವಲ್ಲಿ, ವಿಮಾ ಮೊತ್ತದೊಳಗೆ, ನಗದು ರಹಿತ ಚಿಕಿತ್ಸೆ ಸೇವೆ ದೊರೆಯುವುದಿಲ್ಲ ಎನ್ನುವ ಮಾತು ಸತ್ಯಕ್ಕೆ ದೂರವಾಗಿದೆ. ಧೈರ್ಯ ಮಾಡಿ ಆರೋಗ್ಯ ವಿಮೆ ಮಾಡಿರಿ.

 

-ಕೆ.ಎಸ್‌. ಮಂಜುನಾಥ, ಬೆಂಗಳೂರು

ನಾನೊಬ್ಬ ಸರ್ಕಾರಿ ನೌಕರ. ನನ್ನ ವಾರ್ಷಿಕ ಆದಾಯ ₹ 6 ಲಕ್ಷ. ನನ್ನ ಇಬ್ಬರು ಮಕ್ಕಳು ಐ.ಟಿ. ಕಂಪೆನಿಯಲ್ಲಿ ಕೆಲಸ ಮಾಡುತ್ತಾರೆ. ನಾನು ಸಮಯಕ್ಕೆ ಸರಿಯಾಗಿ ರಿಟರ್ನ್‌ ಸಲ್ಲಿಸುತ್ತಿದ್ದೇನೆ. ನಾವೆಲ್ಲರೂ ಒಂದೇ ಮನೆಯಲ್ಲಿ ವಾಸವಾಗಿದ್ದೇವೆ. ಮನೆ ಹೆಂಡತಿ ಹೆಸರಿನಲ್ಲಿ ಇದೆ. ನನ್ನ ಮಕ್ಕಳಿಂದ ನಾನು ಮನೆ ಬಾಡಿಗೆ ಪಡೆದು, ಅದನ್ನು ಬೇರೆ ವರಮಾನವೆಂದು ತೋರಿಸಿ ಅದಕ್ಕೆ ಆದಾಯ ತೆರಿಗೆ ಸಲ್ಲಿಸಬಹುದೇ, ಕಾನೂನಿನ ತೊಡಕಿದೆಯೇ?

ಉತ್ತರ: ತಂದೆ ತಾಯಿಗಳು ತಮ್ಮ ಮನೆಯನ್ನು ಮಕ್ಕಳಿಗೆ ಬಾಡಿಗೆ ಕೊಡಲು ಕಾನೂನಿನಲ್ಲಿ ಅವಕಾಶವಿದೆ. ನಿಮ್ಮ ವಿಚಾರದಲ್ಲಿ ಮನೆ ನಿಮ್ಮ ಹೆಂಡತಿ ಹೆಸರಿನಲ್ಲಿರುವುದರಿಂದ, ನಿಮ್ಮ ಹೆಂಡತಿ ಮಗನಿಗೆ ಬಾಡಿಗೆ ಕೊಡಬಹುದು.

ಬಾಡಿಗೆ ಚೆಕ್‌ ಮುಖಾಂತರವೇ ಪಡೆಯಬೇಕು ಹಾಗೂ ಬಾಡಿಗೆ ಪತ್ರ ಕೂಡಾ (Rental agreement) ಕ್ರಮದಂತೆ ಮಾಡಬೇಕು. ಮನೆ ನಿಮ್ಮ ಹೆಂಡತಿ ಹೆಸರಿನಲ್ಲಿ ಇರುವುದರಿಂದ, ಇಲ್ಲಿ ಬರುವ ಆದಾಯ ನಿಮ್ಮ ಆದಾಯಕ್ಕೆ ಸೇರಿಸುವ ಅವಶ್ಯವಿಲ್ಲ. ಅವರು ಪಡೆಯುವ ಬಾಡಿಗೆ ಆದಾಯ ಅಥವಾ ಇನ್ನಿತರ ಆದಾಯ ವಾರ್ಷಿಕವಾಗಿ ₹ 2.50 ಲಕ್ಷ ದಾಟಿದಲ್ಲಿ ಮಾತ್ರ ಅವರು ತೆರಿಗೆ ಸಲ್ಲಿಸಬೇಕು ಹಾಗೂ ರಿಟರ್ನ್‌ ತುಂಬಬೇಕಾಗುತ್ತದೆ.

ಮನೆಯನ್ನು ಯಾರಾದರೊಬ್ಬ ಮಗನಿಗೆ ಬಾಡಿಗೆ ಕೊಡಿರಿ. ಬಾಡಿಗೆ ಆದಾಯದಲ್ಲಿ ಸೆಕ್ಷನ್‌ 24(ಎ) ಆಧಾರದ ಮೇಲೆ ಶೇ 30 ಕಳೆದು ತೆರಿಗೆ ಸಲ್ಲಿಸುವ ಅವಕಾಶವಿದೆ. ಪ್ರಾಯಶಃ ಬಾಡಿಗೆ ಆದಾಯ ಬಂದರೂ, ನಿಮ್ಮ ಹೆಂಡತಿಗೆ ಆದಾಯ ತೆರಿಗೆ ಬರುವುದಿಲ್ಲ.

*

-ರವೀಂದ್ರ, ಧಾರವಾಡ

ನನ್ನ ತಂದೆಯವರು 38 ವರ್ಷ ಸೇವೆ ಸಲ್ಲಿಸಿ ಸರ್ಕಾರಿ ಇಲಾಖೆಯಲ್ಲಿ ನಿವೃತ್ತರಾಗುತ್ತಿದ್ದಾರೆ. ಇಲ್ಲಿವರೆಗೆ ಆದಾಯ ರಿಟರ್ನ್‌ ಸಲ್ಲಿಸಿದ್ದಾರೆ. ನಿವೃತ್ತಿಯಿಂದ ಬಂದ ಹಣ ಹೇಗೆ ವಿನಿಯೋಗಿಸಬೇಕು ತಿಳಿಸಿರಿ. ಬ್ಯಾಂಕ್‌ ಠೇವಣಿ, ಟಿಡಿಎಸ್‌ ಕುರಿತಾಗಿ ನಿಶ್ಚಿಂತೆಯಿಂದ ಬಾಳಲು ಮಾರ್ಗದರ್ಶನ ಮಾಡಿರಿ. ನಾನು ಸ್ವತಹ ತಮ್ಮ ಉಳಿತಾಯ ಸಲಹೆಗಳನ್ನು ಪಾಲಿಸುತ್ತಾ ಸ್ವಾವಲಂಬಿ ಜೀವನ ನಡೆಸುತ್ತಿದ್ದೇನೆ.

ಉತ್ತರ: ನಿಮ್ಮ ಪ್ರಶ್ನೆಯಲ್ಲಿ ನಿಮ್ಮ ತಂದೆಯವರಿಗೆ ನಿವೃತ್ತಿಯಿಂದ ಬರಬಹುದಾದ ಹಣ, ಪಿಂಚಣಿ ಹಾಗೂ ಅವರ ಇತರೆ ಉಳಿತಾಯ ತಿಳಿಸಿಲ್ಲ. ನಿವೃತ್ತಿಯಿಂದ ಬರುವ ಹಣದಲ್ಲಿ ₹ 15 ಲಕ್ಷ ಅಂಚೆ ಕಚೇರಿ ‘Senior Citizen Deposit’ನಲ್ಲಿ ಠೇವಣಿ ಇರಿಸಲಿ, ಇಲ್ಲಿ ಶೇ. 8.3 ಬಡ್ಡಿ ಬರುತ್ತದೆ. ಇಷ್ಟು ಹೆಚ್ಚಿನ ಬಡ್ಡಿ ಬೇರೆ ಬ್ಯಾಂಕ್‌ ಠೇವಣಿಯಲ್ಲಿ ದೊರೆಯುವುದಿಲ್ಲ. ಇಲ್ಲಿ ಮೂರು ತಿಂಗಳಿಗೊಮ್ಮೆ ಬಡ್ಡಿ ಪಡೆಯಬಹುದು. ಉಳಿದ ಹಣ ₹ 5 ಲಕ್ಷದಂತೆ ವಿಂಗಡಿಸಿ, ನಿಮ್ಮ ಮನೆಗೆ ಸಮೀಪದ ಬ್ಯಾಂಕಿನಲ್ಲಿ, ಒಮ್ಮೆಲೇ ಬಡ್ಡಿ ಬರುವ ಠೇವಣಿಯಲ್ಲಿ 5 ವರ್ಷಗಳ ಅವಧಿಗೆ ಇರಿಸಿರಿ.

ಠೇವಣಿ ವಿಂಗಡಿಸಿ ಇರಿಸುವುದರಿಂದ ಅವಶ್ಯವಿರುವಾಗ ಒಂದು ಬಾಂಡು ಮುರಿಸಿ ಹಣ ಪಡೆದು, ಉಳಿದ ಹಣ ಹಾಗೆಯೇ ಮುಂದುವರಿಸಬಹುದು. ವಾರ್ಷಿಕವಾಗಿ ₹ 10,000ಕ್ಕೂ ಹೆಚ್ಚಿನ ಬಡ್ಡಿ ಬಂದಾಗ  ಬ್ಯಾಂಕು ಹಾಗೂ ಅಂಚೆ ಕಚೇರಿಯಲ್ಲಿ ಟಿಡಿಎಸ್‌ ಮಾಡುತ್ತಾರೆ. ನಿಮ್ಮ ತಂದೆಯ ಪಿಂಚಣಿ ಹಾಗೂ ಬಡ್ಡಿ ಆದಾಯ ವಾರ್ಷಿಕವಾಗಿ ₹ 3 ಲಕ್ಷ ದೊಳಗಿರುವಲ್ಲಿ ಮಾತ್ರ ಠೇವಣಿಗೆ 15H ನಮೂನೆ ಫಾರಂ ಸಲ್ಲಿಸಿರಿ. ₹ 3 ಲಕ್ಷ ದಾಟಿದಲ್ಲಿ ಟಿಡಿಎಸ್‌ ಮಾಡಲಿ. ನೀವು ರಿಟರ್ನ್‌ ತುಂಬುವಾಗ ಹೆಚ್ಚಿನ ಟಿಡಿಎಸ್‌ ಆದಲ್ಲಿ ವಾಪಸು ಪಡೆಯಬಹುದು. ನೀವು ನನ್ನ ಉಳಿತಾಯ ಸಲಹೆಯನ್ನು ಪಾಲಿಸಿ ಸ್ವಾವಲಂಬಿ ಜೀವನ ನಡೆಸುತ್ತಿರುವುದಕ್ಕೆ ಧನ್ಯವಾದಗಳು.

*

-ಹೆಸರು, ಊರು ಬೇಡ

ನನ್ನ ವಯಸ್ಸು 20. ‍ಪ್ರಥಮ ಬಿ.ಕಾಂ. ಓದುತ್ತಿದ್ದೇನೆ ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿಯಲ್ಲಿ ಕ್ರಮವಾಗಿ ಶೇ 78 ಹಾಗೂ ಶೇ 62ರಷ್ಟು ಅಂಕ ಪಡೆದಿದ್ದೇನೆ. ನಾನು ಮತ್ತು ತಂದೆ ಮಾತ್ರ ಇರುವುದು. ಅವರು ಆಟೋ ಚಾಲಕರು. ವಯಸ್ಸು 56. ಸ್ವಂತ ಮನೆ ಇದೆ. 3 ಎಕರೆ ಮಳೆ ಆಧಾರಿತ ಜಮೀನಿದೆ. ನನ್ನ ತಂದೆ ಕುಡಿತ ಹಾಗೂ ಮಟ್ಕ, ಜೂಜು ಆಟ ಆಡುತ್ತಾರೆ. ನಾನು ಜೀವನದಲ್ಲಿ ಬೆಂದಿದ್ದೇನೆ. ತಂದೆ ಜಮೀನು ಮಾರಾಟ ಮಾಡಬೇಕು ಎಂದು ಹಟ ಹಿಡಿದಿದ್ದಾರೆ. ಓದಲು ಮನಸ್ಸು ಬರುತ್ತಿಲ್ಲ. ಸೂಕ್ತ ಸಲಹೆ ನೀಡಿ?

ಉತ್ತರ: ಓದನ್ನು ಎಂದಿಗೂ ನಿಲ್ಲಿಸಬೇಡಿ. ಇದರಿಂದ ನಿಮ್ಮ ಭವಿಷ್ಯ ಒಮ್ಮೆಲೇ ಕುಂಠಿತವಾಗುತ್ತದೆ. ಇನ್ನೆರಡು ವರ್ಷ ಕಾದರೆ ನಿಮಗೆ ಉತ್ತಮ ಭವಿಷ್ಯವಿದೆ. ನೀವು ಪ್ರಾಪ್ತ ವಯಸ್ಕರಾದ್ದರಿಂದ ನಿಮ್ಮ ಸಹಿ ಇಲ್ಲದೆ ನಿಮ್ಮ ತಂದೆಯವರಿಗೆ ಜಮೀನು ಮಾರಾಟ ಮಾಡಲು ಬರುವುದಿಲ್ಲ. ಜಮೀನು ಮಾರಾಟ ಮಾಡಿದರೆ ಮುಂದೆ ಕೊಳ್ಳಲು ಸಾಧ್ಯವಾಗಲಾರದು. ಕಷ್ಟ ಪಟ್ಟು ಬಿ.ಕಾಂ. ಡಿಗ್ರಿ ಮುಗಿಸಿ ಕೆಲಸಕ್ಕೆ ಸೇರಿರಿ. ಅಲ್ಲಿವರೆಗೆ ಮನಸ್ಸಿಗೆ ಸಮಾಧಾನ ಮಾಡಿಕೊಳ್ಳಿ. ಸರ್ವಶಕ್ತನಾದ ಪರಮಾತ್ಮ ನಿಮ್ಮ ಜೀವನದಲ್ಲಿ ಹೊಸಬೆಳಕು ಚೆಲ್ಲಲಿ ಎಂದು ಪ್ರಾರ್ಥಿಸುತ್ತೇನೆ.

*

-ಹೆಸರು ಬೇಡ, ಊರು: ಹುಬ್ಬಳ್ಳಿ

ನನ್ನ ವಯಸ್ಸು 62. ನನ್ನ ಹೆಂಡತಿ ವಯಸ್ಸು 59. ಒಬ್ಬಳೇ ಮಗಳು. ಮದುವೆ ಆಗಿದೆ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿ ನಿವೃತ್ತನಾಗಿದ್ದೇನೆ. ನನ್ನೊಡನೆ ಏನೂ ಹಣವಿಲ್ಲ ಹಾಗೂ ಪಿಂಚಣಿ ಕೂಡ ಬರುವುದಿಲ್ಲ. ನನ್ನ ಹೆಂಡತಿಗೆ ₹ 5,500 ಪಿಂಚಣಿ ಬರುತ್ತದೆ. ಅವಳ ನಿವೃತ್ತಿಯಿಂದ ಬಂದ ಹಣ ₹ 9 ಲಕ್ಷ ನನ್ನ ಹೆಸರಿನಲ್ಲಿ ಅಂಚೆ ಕಚೇರಿಯಲ್ಲಿ Senior citizen Deposit ನಲ್ಲಿ ಇಟ್ಟಿದ್ದೇನೆ. ಇದರಿಂದ ಕಾನೂನು ತೊಡಕಿದೆಯೇ, ನಾವಿಬ್ಬರೂ I.T. Return ತುಂಬಬೇಕೇ?

ಉತ್ತರ: ಗಂಡ ಅಥವಾ ಹೆಂಡತಿ, ಅವರವರು ದುಡಿದ ಹಣ ಯಾರಾದರೊಬ್ಬರ ಹೆಸರಿನಲ್ಲಿ ಠೇವಣಿ ಇರಿಸುವುದು ಅಪರಾಧವಲ್ಲ ಹಾಗೂ ಇದಕ್ಕೆ ಕಾನೂನು ತೊಡಕೂ ಇರುವುದಿಲ್ಲ. ತೆರಿಗೆ ವಿಚಾರ ಬಂದಾಗ ಗಂಡ ದುಡಿದ ಹಣ ಹೆಂಡತಿ ಹೆಸರಿನಲ್ಲಿ ಇರಿಸಿದಾಗ, ಹೆಂಡತಿ ಪಡೆಯುವ ಬಡ್ಡಿ ಹಣ ಗಂಡನ ಆದಾಯಕ್ಕೆ ಸೇರಿಸಿ ತೆರಿಗೆ ಸಲ್ಲಿಸಬೇಕಾಗುತ್ತದೆ. ಅದೇ ರೀತಿ ಹೆಂಡತಿ ದುಡಿದ ಹಣ ಗಂಡನ ಹೆಸರಿನಲ್ಲಿ ಇರಿಸಿದಾಗ, ಗಂಡ ಪಡೆಯುವ ಬಡ್ಡಿ ಹಣ ಹೆಂಡತಿ ಆದಾಯಕ್ಕೆ ಸೇರಿಸಿ ತೆರಿಗೆ ಸಲ್ಲಿಸಬೇಕಾಗುತ್ತದೆ. ನಿಮ್ಮ ಹಾಗೂ ನಿಮ್ಮ ಹೆಂಡತಿ ವಿಚಾರದಲ್ಲಿ ನಿಮ್ಮೀರ್ವರಲ್ಲಿ ಯಾರು ದುಡಿದ ಹಣ ಯಾರ ಹೆಸರಿನಲ್ಲಿ ಇರಿಸಿದರೂ, ಬರುವ ಬಡ್ಡಿಹಣಕ್ಕೆ I.T. Return ತಂಬುವ ಅವಶ್ಯವೂ ಇಲ್ಲ. ವಾರ್ಷಿಕ ಮಿತಿಗಿಂತ ಆದಾಯ ಕಡಿಮೆ ಇದೆ.

*

-ಎಸ್.ಬಿ. ಪಾಟೀಲ್, ಮುಂಡರಗಿ

ನಿಮ್ಮ ಸಲಹೆಯಂತೆ ತೆರಿಗೆ ಉಳಿಸಲು 5 ವರ್ಷಗಳ ಬ್ಯಾಂಕ್ ಠೇವಣಿ ಮಾಡುತ್ತಾ ಬಂದಿದ್ದೇನೆ. ಬಡ್ಡಿ ದರ ಶೇ 5.5 ಬರುತ್ತದೆ. ಇದರಿಂದ ಏನೂ ಪ್ರಯೋಜನವಿಲ್ಲ. ದಯಮಾಡಿ ಬೇರೆ ಮಾರ್ಗ ತಿಳಿಸಿ?

ಉತ್ತರ: ಸೆಕ್ಷನ್ 80ಸಿ ಆಧಾರದ ಮೇಲೆ ಬೇರೆ ಬೇರೆ ಹೂಡಿಕೆ ಮಾಡಲು ಅವಕಾಶವಿದೆ. ಬ್ಯಾಂಕ್ ಠೇವಣಿ ಬದಲಾಗಿ ಅಂಚೆಕಚೇರಿ (ನೀವು ಹಿರಿಯ ನಾಗರಿಕರಾದಲ್ಲಿ) Senior citizen Deposit ಮಾಡಿರಿ. ಇಲ್ಲಿ ನೀವು ಶೇ. 8.3 ಬಡ್ಡಿ ವಾರ್ಷಿಕವಾಗಿ ಪಡೆಯಬಹುದು. ಈ ಠೇವಣಿಯಲ್ಲಿ ಮೂರು ತಿಂಗಳಿಗೊಮ್ಮೆ ಬಡ್ಡಿ ನಿಮ್ಮ ಉಳಿತಾಯ ಖಾತೆಗೆ ಜಮಾ ಮಾಡುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry