ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಕೀರ್ಣ ಇತಿಹಾಸದ ಸರಳೀಕರಣ

Last Updated 9 ಜನವರಿ 2018, 19:30 IST
ಅಕ್ಷರ ಗಾತ್ರ

ಇತ್ತೀಚಿನ ಭೀಮಾ ಕೋರೆಗಾಂವ್ ಪ್ರಕರಣದ ಹಿಂದಿನ ಹಿಂಸಾಚಾರಕ್ಕೆ ಯಾರೇ ಕಾರಣರಾಗಿರಲಿ, ಅವರು ದುಷ್ಟರೇ ಸರಿ ಮತ್ತು ಅವರನ್ನು ವಿಚಾರಣೆಗೆ ಒಳಪಡಿಸಿ ಸೂಕ್ತ ಶಿಕ್ಷೆ ನೀಡಬೇಕೆಂಬುದರಲ್ಲಿ ಎರಡು ಮಾತಿಲ್ಲ. ಆದರೆ ಈ ಪ್ರಕರಣವನ್ನು ನೆಪ ಮಾಡಿಕೊಂಡು ಜಾತಿ ಭಾವನೆಗಳನ್ನು ಕೆರಳಿಸುವ ಪ್ರಯತ್ನ ಮಾಡುವುದು ಉಚಿತವಲ್ಲ. ಈ ದೃಷ್ಟಿಯಿಂದ ಡಿ. ಉಮಾಪತಿಯವರ ‘ಕೋರೆಗಾಂವ್ ವಿಜಯೋತ್ಸವ ದೇಶದ್ರೋಹದ್ದೇ?’ ಎಂಬ ಲೇಖನ (ಪ್ರ.ವಾ., ಜ.8) ಈ ಪ್ರಕರಣದ ಹಿಂದಿನ ಸಂಕೀರ್ಣ ಇತಿಹಾಸ ಕಥನವನ್ನು ಸರಳೀಕರಿಸಿ ಪ್ರಸ್ತುತಪಡಿಸಿದೆ ಎನ್ನದೆ ವಿಧಿಯಿಲ್ಲ.

1818ರಲ್ಲಿ ನಡೆದ ಭೀಮಾ ಕೋರೆಗಾಂವ್ ಯುದ್ಧವನ್ನು ಪೇಶ್ವೆಗಳ ಬ್ರಾಹ್ಮಣಶಾಹಿ ವಿರುದ್ಧ ಮಹಾರರು ನಡೆಸಿದ ಹೋರಾಟ ಅಥವಾ ಗಳಿಸಿದ ಜಯ ಎಂದು ಅದು ನಡೆದ ಒಂದು ಶತಮಾನಕ್ಕೂ ಹೆಚ್ಚಿನ ಕಾಲದ ನಂತರ ಮೊದಲಿಗೆ ನಿರೂಪಿಸಿದವರು ಡಾ. ಬಿ.ಆರ್. ಅಂಬೇಡ್ಕರ್ ಎಂದು ಹೇಳಲಾಗುತ್ತದೆ. ಅದಕ್ಕೆ ಮುನ್ನ ಇತಿಹಾಸದಲ್ಲಿ ಅದು ಬ್ರಿಟಿಷರಿಗೂ ಭಾರತದ ರಾಜಸಂಸ್ಥಾನವೊಂದಕ್ಕೂ ನಡೆದ ಒಂದು ಯುದ್ಧವೆಂದು ಮಾತ್ರವಲ್ಲದೆ, ಭಾರತ ಪೂರ್ಣ ಬ್ರಿಟಿಷರ ಕೈವಶವಾದುದನ್ನು ಸಂಕೇತಿಸುವ ಯುದ್ಧವೆಂದೂ ಗುರುತಿಸಲಾಗುತ್ತಿತ್ತು. ಅಂಬೇಡ್ಕರ್ ಆ ಯುದ್ಧಕ್ಕೆ ಪೇಶ್ವೆ ವಿರುದ್ಧದ ಮಹಾರರ ಹೋರಾಟ ಮತ್ತು ವಿಜಯ ಎಂಬ ವ್ಯಾಖ್ಯಾನ ನೀಡಲು, ಅವರು ಆ ಕಾಲದಲ್ಲಿ ಕೈಗೆತ್ತಿಕೊಂಡಿದ್ದ ಜಾತಿ ವಿಶಿಷ್ಟ ರಾಜಕೀಯ ಹೋರಾಟದ ಸಂದರ್ಭದ ಒತ್ತಡಗಳು ಕಾರಣವಾಗಿರಬಹುದು. ಆದರೆ ಇಂದಿನ ಸಂದರ್ಭದಲ್ಲಿಯೂ ಈ ಯುದ್ಧವನ್ನು ಹಾಗೆ ಜಾತಿ ಸಂಘರ್ಷದ ಕಥೆಯಾಗಿ ನೋಡಲು ಅವಕಾಶವಿದೆಯೇ, ಅದು ಎಷ್ಟು ಸಾಧು ಎಂಬ ಪ್ರಶ್ನೆಗಳನ್ನೂ ನಾವು ಕೇಳಿಕೊಳ್ಳಬೇಕಲ್ಲವೇ?

ಮೊನ್ನೆಯ ಗಲಭೆಗೆ ಕಾರಣವಾದ ಈ ಯುದ್ಧದ ದ್ವಿಶತಮಾನೋತ್ಸವ ಆಚರಣೆಗೆ ಸಂಬಂಧಿಸಿದಂತೆ ದಲಿತ ಚಿಂತಕ (ಮತ್ತು ಅಂಬೇಡ್ಕರ್ ಕುಟುಂಬಕ್ಕೇ ಸೇರಿದ) ಆನಂದ ತೇಲ್ತುಂಬ್ಡೆ ಬರೆದಿರುವ ಲೇಖನವೊಂದರಲ್ಲಿ (ದಿ ವೈರ್, ಜ. 2) ಈ ಯುದ್ಧವನ್ನು ಹಾಗೆ ಗ್ರಹಿಸಲು ಯಾವ ಆಧಾರಗಳೂ ಇಲ್ಲ ಎನ್ನುತ್ತಾರೆ. ಪೇಶ್ವೆಗಳ ವಿರುದ್ಧ ಯುದ್ಧ ಮಾಡಿದ ಬ್ರಿಟಿಷ್ ಸೇನೆಯ ಒಂದು ತುಕಡಿಯಲ್ಲಿ ಮಾತ್ರ ಮಹಾರರು ಗಣನೀಯ ಸಂಖ್ಯೆಯಲ್ಲಿದ್ದರೆಂದೂ, ಆ ಯುದ್ಧದಲ್ಲಿ ಮರಣ ಹೊಂದಿದ ಸೈನಿಕರಲ್ಲಿ ಮಹಾರರಗಿಂತ ಇತರೆ ಜಾತಿಯ ಸೈನಿಕರೇ ಹೆಚ್ಚಿದ್ದರೆಂದೂ ಹೇಳುತ್ತಾರೆ. ಜೊತೆಗೆ ಆ ಕಾಲದ ಎಲ್ಲ ಸೈನ್ಯಗಳಲ್ಲಿದ್ದಂತೆ ಬ್ರಿಟಿಷರ ಮತ್ತು ಪೇಶ್ವೆಗಳ ರಾಜ್ಯದ ಸೈನ್ಯಗಳಲ್ಲೂ ಎಲ್ಲ ಜಾತಿಯ ಜನರೂ ಇದ್ದರೆನ್ನುತ್ತಾರೆ. ಹೇಗೆ ಬ್ರಿಟಿಷರ ಪರವಾಗಿ ಮಹಾರರ ತುಕಡಿ ವೀರಾವೇಶದಿಂದ ಹೋರಾಡಿತೋ ಹಾಗೇ ಪೇಶ್ವೆಗಳ ಪರವಾಗಿ ಅರಬ್ಬರಿಂದ ಕೂಡಿದ ತುಕಡಿ ಹೋರಾಡಿತೆಂದೂ, ಆ ಕಾರಣಕ್ಕೆ ಮುಸ್ಲಿಮರಾದ ಅರಬ್ಬರು ಪೇಶ್ವೆಗಳ ಬ್ರಾಹ್ಮಣಶಾಹಿಯ ಉತ್ಕರ್ಷಕ್ಕಾಗಿ ಹೋರಾಡಿದರು ಎಂದು ಹೇಳಲಾಗುವುದೇ ಎಂದು ಪ್ರಶ್ನಿಸುತ್ತಾರೆ. ಹಾಗೇ ಅವರು ಹೇಳುವ ಇನ್ನೊಂದು ಸಂಗತಿ ಎಂದರೆ, ಆ ಯುದ್ಧ ನಡೆದ ಹೊತ್ತಿಗೆ ಮಹಾರರಲ್ಲಿ ಜಾತಿ ಅಸಮಾನತೆ ಅಥವಾ ಶೋಷಣೆಯ ಬಗೆಗೆ ಯಾವುದೇ ಪ್ರಜ್ಞಾಪೂರ್ವಕತೆ ಜಾಗೃತವಾಗಿದ್ದ ಯಾವ ಸಾಕ್ಷ್ಯಗಳೂ ಇಲ್ಲ ಎಂಬುದು.

ಇನ್ನು ಇದೇ 5ರ ‘ದ ಹಿಂದೂ’ ಪತ್ರಿಕೆಯಲ್ಲಿ ‘ಪ್ರಗತಿಪರ’ ಎಂದು ಕರೆಯಲಾಗುವ ಇನ್ನೋರ್ವ ಚಿಂತಕ ಶಿವ ವಿಶ್ವನಾಥನ್, ಇದೇ ಸಂಬಂಧವಾಗಿ ಬರೆದಿರುವ ಲೇಖನವೊಂದರಲ್ಲಿ ಪೇಶ್ವೆಗಳಿಗೂ ಬ್ರಿಟಿಷರಿಗೂ ಮೊದಲ ಯುದ್ಧವಾದಾಗ ಮಹಾರರು ಪೇಶ್ವೆಗಳ ಸೈನ್ಯದಲ್ಲಿ ಸೇವೆ ಸಲ್ಲಿಸಲು ಮುಂದಾಗಿದ್ದರೆಂದೂ, ಆದರೆ ಪೇಶ್ವೆಗಳು ಅದನ್ನು ಬೇಡವೆಂದದ್ದರಿಂದ ಅವರು ಮುಂದಿನ ಯುದ್ಧದ ಹೊತ್ತಿಗೆ ಬ್ರಿಟಿಷ್ ಸೇನೆಗೆ ಸೇರಿಕೊಂಡರೆಂಬ ಮಹಾರರಲ್ಲಿನ ಸ್ಮೃತಿ ಕಥನವೊಂದನ್ನು ಪ್ರಸ್ತಾಪಿಸುತ್ತಾರೆ. ಈ ಮೂಲಕ ಅವರು ಸೂಚಿಸುವುದೇನೆಂದರೆ ಮಹಾರರು ಮೂಲತಃ ಯೋಧ ಗುಣದವರಾಗಿದ್ದು, ಯಾವುದೇ ಸೇನೆಯಲ್ಲಿ ಯುದ್ಧ ಮಾಡಲು ಸಿದ್ಧರಿರುತ್ತಿದ್ದರು ಎಂಬುದು.

ಹೀಗಾಗಿ ಬ್ರಿಟಿಷರು ಭಾರತದ ಮೇಲಿನ ತಮ್ಮ ಸಂಪೂರ್ಣ ಪ್ರಭುತ್ವವನ್ನು ಸಾರಲು ಕೋರೆಗಾಂವ್‍ನಲ್ಲಿ ಸ್ಥಾಪಿಸಿದ ವಿಜಯಸ್ತಂಭವನ್ನು ತಮ್ಮ ವಿಜಯದ ಸಂಕೇತವೆಂದು ಆಧುನಿಕ ಭಾರತದ ಪ್ರಜೆಗಳಾದ ಮಹಾರರು ಗೌರವಿಸುವ ಆಚರಣೆ ಈ ಎರಡು ಶತಮಾನಗಳ ಇತಿಹಾಸ ಪ್ರವಾಹವನ್ನೇ, ಈ ಅವಧಿಯಲ್ಲಿ ಜಾತಿ ಸಂಬಂಧಗಳಲ್ಲಿ ಆಗಿರುವ ಗಣನೀಯ ಬದಲಾವಣೆಗಳನ್ನೇ, ಅದಕ್ಕೆ ಕಾರಣರಾದ ಪ್ರಮುಖರಲ್ಲೊಬ್ಬರಾದ ಅಂಬೇಡ್ಕರ್ ಅವರ ಕೊಡುಗೆಯನ್ನೇ ನಿರಾಕರಿಸಿದಂತೆ ಅಲ್ಲವೇ? ಉಮಾಪತಿಯವರು ಈ ಸಂಬಂಧದ ತಮ್ಮ ಲೇಖನವನ್ನು ಪರಿಣಾಮಕಾರಿ ಮಾಡಲೋ ಎಂಬಂತೆ ಜಾತಿ ಪದ್ಧತಿಯ ವಿರುದ್ಧ ಧ್ವನಿ ಎತ್ತದವರೆಂದು ತಥಾಕಥಿತ ಮೇಲ್ಜಾತಿ ಮತ್ತು ಮಧ್ಯಮ ವರ್ಗೀಯರನ್ನು ಸಾರ್ವತ್ರಿವಾಗಿ ದೂಷಿಸುತ್ತಾ ಅವರನ್ನೂ ಈ ವಿವಾದದಲ್ಲಿ ಅಪರಾಧಿಗಳನ್ನಾಗಿ ಮಾಡಿದ್ದಾರೆ. ಆದರೆ ಇಂತಹ ಸ್ಥೂಲ ಹೇಳಿಕೆಗಳು ಜನಪ್ರಿಯ ರೋಚಕತೆಯ ಹೊರತಾಗಿ ಇನ್ನಾವ ಪರಿಣಾಮವನ್ನೂ ಉಂಟು ಮಾಡುವುದಿಲ್ಲ. ಜಾತಿ ಪದ್ಧತಿಯನ್ನು ಮಾನ್ಯ ಮಾಡದವರು ವರ್ಷದಲ್ಲಿ ಎಷ್ಟು ಬಾರಿ ಯಾವಾಗ, ಎಲ್ಲಿಗೆ ಬಂದು ಸಾರ್ವಜನಿಕವಾಗಿ ಜಾತಿ ವಿರುದ್ಧ ಕೂಗು ಹಾಕಿ ಹಾಜರಿ ದಾಖಲಿಸಬೇಕೆಂಬುದನ್ನು ಉಮಾಪತಿಯವರು ನಿಗದಿ ಮಾಡಿದರೆ ಒಳ್ಳೆಯದು.

***

ಎಡಪಂಥೀಯರ ಷಡ್ಯಂತ್ರ

ಜಾತಿ ವ್ಯವಸ್ಥೆ ದೇಶದ್ರೋಹದ ಕೆಲಸವಾಗಿದ್ದರೆ ಅದನ್ನು ಪೊಷಿಸುವವರು ಯಾರು?

ಹಿಂದುತ್ವವಾದಿಗಳ ಮೇಲೆ ಜಾತಿವಾದದ ಆರೋಪವನ್ನು ಮಾಡಿ ಹಿಂದೂಗಳು ಒಂದಾಗದಂತೆ ತಡೆಯುವುದು ಎಡಪಂಥಿಯರ ಹಾಗೂ ತಮ್ಮನ್ನು ತಾವೇ ಬುದ್ಧಿಜೀವಿಗಳು ಎಂದುಕೊಳ್ಳುವವರ ಷಡ್ಯಂತ್ರ. ತಮ್ಮ ಜಾತಿಗೆ ಮೀಸಲಾತಿ ಬೇಕು, ತಮ್ಮ ಜಾತಿಯನ್ನು ಆ ಪಂಗಡಕ್ಕೆ ಸೇರಿಸಬೇಕು, ತಮ್ಮ ಜಾತಿಗೆ ಪ್ರತ್ಯೇಕ ಧರ್ಮದ ಸ್ಥಾನ ನೀಡಬೇಕು ಎನ್ನುವವರು ಜಾತಿವಾದಿಗಳೇ ಹೊರತು ಹಿಂದುತ್ವವಾದಿಗಳಲ್ಲ.

ಪ್ಲಾಸಿ ಕಾಳಗದಲ್ಲಿಯೂ ಬ್ರಿಟಿಷರ ಸೈನ್ಯದಲ್ಲಿ ಬಂಗಾಲದ ದಲಿತರಿದ್ದರು. ಕೋರೆಗಾಂವ್‌ ಯುದ್ದವು ಪೇಶ್ವೆಗಳ ವಿರುದ್ಧವಾಗಿತ್ತು ಅದಕ್ಕಾಗಿ ಸಂಭ್ರಮವೇ? ಔರಂಗಜೇಬನು ಶಿವಾಜಿಯ ಮೊಮ್ಮಗನಾದ ಸಾಹುವನ್ನು ಸೆರೆಮನೆಯಲ್ಲಿಟ್ಟು ಆಳಲು ಅಯೋಗ್ಯನನ್ನಾಗಿ ಮಾಡಿ ಬಿಡುಗಡೆ ಮಾಡಿದಾಗ ಅವನನ್ನು ರಾಜನನ್ನಾಗಿ ಸಾತಾರಾದಲ್ಲಿ ಕೂಡಿಸಿ ಮಂತ್ರಿಗಳಾದ ಪೇಶ್ವೆಗಳು ಕಠಿಣ ಪರಿಸ್ಥಿತಿಯಲ್ಲಿ ರಾಜ್ಯವನ್ನು ರಕ್ಷಿಸಿ ಬೆಳೆಸಿದರು. 3ನೇ ಪಾಣಿಪತ್‌ ಕದನದ ನಂತರ ಅನೇಕ ಸ್ವತಂತ್ರ ರಾಜ್ಯಗಳಾಗಿ ವಿಭಜನೆಗೊಂಡ ಸಾಮ್ರಾಜ್ಯವನ್ನು ಬ್ರಿಟಿಷರು ಹಂತಹಂತವಾಗಿ ಗೆದ್ದುಕೊಂಡರು. ಈ ಸಂದರ್ಭದಲ್ಲಿ ಬ್ರಿಟಿಷರು ದಲಿತರಿಗೆ ಅಧಿಕಾರ ಹಸ್ತಾಂತರಿಸಿದರೇ? ಅವರಿಗೆ ಮೀಸಲಾತಿ ನೀಡಿದರೇ? ದಲಿತರು ಸೈನ್ಯಕ್ಕೆ ಅಯೋಗ್ಯರು ಎನ್ನುವ ಬಿರುದನ್ನು ನೀಡಿ ಮಹಾರ ರೆಜಿಮೆಂಟನ್ನು ರದ್ದುಪಡಿಸಿದರು.

ಬುದ್ಧಿಜೀವಿಗಳಿಗೆ ಮೊಗಲರು, ಬ್ರಿಟಿಷರು ಒಳ್ಳೆಯವರು. ಬ್ರಾಹ್ಮಣರು ಮಾತ್ರ ದುಷ್ಟರು. ಹಿಂದೂಗಳಲ್ಲಿ ಶೇ 4ರಷ್ಟಿರುವ ಬ್ರಾಹ್ಮಣರೇ ಸಮಸ್ಯೆಯಾಗಿದ್ದರೆ, ಬ್ರಾಹ್ಮಣರನ್ನು ಹಿಂದೂ ಧರ್ಮದಿಂದ ಹೊರಹಾಕಿ ಉಳಿದ ಶೇ 96ರಷ್ಟು ಹಿಂದೂಗಳನ್ನು ಉದ್ಧಾರ ಮಾಡುವ ಜವಾಬ್ದಾರಿಯನ್ನು ಬುದ್ಧಿಜೀವಿಗಳು ಹೊತ್ತುಕೊಳ್ಳಲಿ.

ಡಾ. ದೇವಿದಾಸ ಪ್ರಭು, ಭಟ್ಕಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT