ಮೀಸಲಾತಿಗೆ ‘ಉಪ್ಪಿನ ಸತ್ಯಾಗ್ರಹ’

7

ಮೀಸಲಾತಿಗೆ ‘ಉಪ್ಪಿನ ಸತ್ಯಾಗ್ರಹ’

Published:
Updated:

ಬಾಗಲಕೋಟೆ: ಉಪ್ಪಾರ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಉಪ್ಪಾರ ಮೀಸಲಾತಿ ಹೋರಾಟ ಸಮಿತಿ ವತಿಯಿಂದ ನವನಗರದ ಜಿಲ್ಲಾಡಳಿತ ಭವನದ ಎದುರು ಮಂಗಳವಾರ ‘ಉಪ್ಪಿನ ಸತ್ಯಾಗ್ರಹ’ ನಡೆಸಲಾಯಿತು.

ಪ್ರತಿಭಟನೆ ಆರಂಭಿಸಿರುವ ಉಪ್ಪಾರ ಸಮುದಾಯದ ನೂರಾರು ಕಾರ್ಯಕರ್ತರು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಹೋರಾಟ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ಲಕ್ಷ್ಮಣ ಉಪ್ಪಾರ ಮಾತನಾಡಿ, ‘ಉಪ್ಪಾರ ಸಮಾಜ ಎಲ್ಲ ಕ್ಷೇತ್ರಗಳಲ್ಲಿಯೂ ಸಾಕಷ್ಟು ಹಿಂದುಳಿದಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಸಮಾಜದವರು ಮುಂಚೂಣಿಯಲ್ಲಿದ್ದರು. ಈ ಬಗ್ಗೆ ಬರಹಗಾರರು ಸರಿಯಾಗಿ ದಾಖಲಿಸಿಲ್ಲ.

ದಾಖಲೆಗಳಲ್ಲಿ ಸಮುದಾಯವನ್ನು ಸಂಪೂರ್ಣವಾಗಿ ಮರೆಮಾಚಲಾಗಿದೆ. ಸರ್ಕಾರ ಈ ಬಗ್ಗೆ ಚಿಂತನೆ ನಡೆಸಿ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯವಾಗಿ ಹಿಂದುಳಿದಿರುವ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು’ ಎಂದು ಆಗ್ರಹಿಸಿದರು.

‘ಸಮುದಾಯಕ್ಕೆ ಸರಿಯಾಗಿ ರಾಜಕೀಯ ಪ್ರಾತಿನಿಧ್ಯ ಸಿಕ್ಕಿಲ್ಲ. ಗಾರೆ ಕೆಲಸ, ಕೂಲಿ ಮಾಡುವುದು, ಕಲ್ಲು ಒಡೆಯುವುದು ಸೇರಿದಂತೆ ಸಣ್ಣಪುಟ್ಟ ಕಸುಬುಗಳನ್ನು ಮಾಡುತ್ತಾ ಬಂದಿದ್ದಾರೆ. ಉದ್ಯೋಗದಲ್ಲಿ ವಡ್ಡರ ಸಮಾಜ ಮತ್ತು ಉಪ್ಪಾರ ಸಮಾಜದ ಕಸುಬುಗಳು ಒಂದೇ ಆಗಿವೆ. ಈಗಾಗಲೇ ವಡ್ಡರ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲಾಗಿದೆ. ಆದರೆ ಉಪ್ಪಾರರನ್ನು ಇದುವರೆಗೂ ಮೀಸಲಾತಿ ಪಟ್ಟಿಗೆ ಸೇರಿಸಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಸರ್ಕಾರಕ್ಕೆ ಅನೇಕ ಬಾರಿ ಮನವಿ ಮಾಡಲಾಗಿದೆ. ಆದರೆ ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಸಮಾಜದ ಮೇಲೆ ನಿರಂತರವಾಗಿ ದಬ್ಬಾಳಿಕೆ ನಡೆಯುತ್ತಿದೆ. ಎಲ್ಲ ರಾಜಕೀಯ ಪಕ್ಷಗಳು ನಮ್ಮನ್ನು ಕೀಳಾಗಿ ಕಾಣುತ್ತಿವೆ. ಸರ್ಕಾರ ಸಮುದಾಯವನ್ನು ಗಂಭೀರವಾಗಿ ಪರಿಗಣಿಸದಿದ್ದಲ್ಲಿ ಮುಂದಿನ ಚುನಾವಣೆಯಲ್ಲಿ ತಕ್ಕಪಾಠ ಕಲಿಸಲಾಗುವುದು’ ಎಂದು ಎಚ್ಚರಿಸಿದರು.

ಹೋರಾಟ ಸಮಿತಿ ಕಾರ್ಯಾಧ್ಯಕ್ಷೆ ಸರಸ್ವತಿ ಚಿಮ್ಮಲಗಿ ಮಾತನಾಡಿ, ‘ಸಮಾಜಕ್ಕೆ ಸರ್ಕಾರ ಎಸ್‌ಟಿ ಮೀಸಲಾತಿ ಕಲ್ಪಿಸಬೇಕು. ಕೂಡಲೇ ಮುಖ್ಯಮಂತ್ರಿಗಳು ಕೇಂದ್ರಕ್ಕೆ ಶಿಫಾರಸು ಮಾಡುವ ಮೂಲಕ ಸಮುದಾಯಕ್ಕೆ ನ್ಯಾಯ ಕಲ್ಪಿಸಿಕೊಡಬೇಕು. ನ್ಯಾಯ ಸಿಗುವವರೆಗೂ ಹೋರಾಟ ಮುಂದುವರೆಯಲಿದೆ’ ಎಂದರು.

ಈ ಸಂದರ್ಭದಲ್ಲಿ ಮುಖಂಡರಾದ ಕಮಲಾ ಜೇಡರ್, ಪರಪ್ಪ ಬ್ಯಾಕೋಡ, ಭೀಮಸಿ ಪಾಟೀಲ, ಮಂಜು ಉಪ್ಪಾರ, ಲಕ್ಷ್ಮೀ, ಸಿದ್ದು ಮುಸೆಪ್ಪಗೋಳ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry