ಉನ್ನತ ಶಿಕ್ಷಣದತ್ತ ಹೆಚ್ಚಿದ ಒಲವು: ರಾಯರಡ್ಡಿ

7

ಉನ್ನತ ಶಿಕ್ಷಣದತ್ತ ಹೆಚ್ಚಿದ ಒಲವು: ರಾಯರಡ್ಡಿ

Published:
Updated:
ಉನ್ನತ ಶಿಕ್ಷಣದತ್ತ ಹೆಚ್ಚಿದ ಒಲವು: ರಾಯರಡ್ಡಿ

ಬೆಳಗಾವಿ: ‘ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಉನ್ನತ ಶಿಕ್ಷಣ ಪಡೆಯುವವರ ಸಂಖ್ಯೆ ಯಲ್ಲಿ ಶೇ 4ರಷ್ಟು ಹೆಚ್ಚಳವಾಗಿದ್ದು, ಶೇ 28ಕ್ಕೆ ತಲುಪಿದೆ. ಇದು ರಾಷ್ಟ್ರ ಮಟ್ಟದ ಸರಾಸರಿ ಶೇ 24ಕ್ಕಿಂತಲೂ ಹೆಚ್ಚಾಗಿದೆ’ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ತಿಳಿಸಿದರು.

ಕಾಲೇಜು ಶಿಕ್ಷಣ ಇಲಾಖೆ ಮತ್ತು ಜಿಲ್ಲಾಡಳಿತವು ನಗರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಬೆಳಗಾವಿ ಜಿಲ್ಲಾ ವ್ಯಾಪ್ತಿಯ 21 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಹಾಗೂ 2 ಸರ್ಕಾರಿ ಪಾಲಿಟೆಕ್ನಿಕ್‌ ಕಾಲೇಜುಗಳ ಪರಿಶಿಷ್ಟ ಜಾತಿ, ಪಂಗಡದ 682 ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್‌ಗಳನ್ನು ವಿತರಿಸಿ ಮಾತನಾಡಿದರು.

‘ರಾಜ್ಯ ಸರ್ಕಾರವು ಉನ್ನತ ಶಿಕ್ಷಣ ಬಲಪಡಿಸಲು ₹ 30,000 ಕೋಟಿ ಬಜೆಟ್‌ ನೀಡಿದೆ. ಇದರ ಫಲವಾಗಿ ಇಂದು ರಾಜ್ಯದಲ್ಲಿ ಉನ್ನತ ಶಿಕ್ಷಣ ಪಡೆಯುವವರ ಸಂಖ್ಯೆಯಲ್ಲಿ ಏರಿಕೆ ಕಂಡಿದೆ. ಮುಂದಿನ ಐದು ವರ್ಷಗಳಲ್ಲಿ ಜಾಗತಿಕ ಮಟ್ಟದ ಸರಾಸರಿಯಾದ ಶೇ 40ಕ್ಕೆ ತಲುಪಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ರಾಷ್ಟ್ರದಲ್ಲಿ ಶೇ 98ರಷ್ಟು ಜನರು ಪ್ರಾಥಮಿಕ ಶಿಕ್ಷಣ ‍ಪಡೆದು ಕೊಳ್ಳುತ್ತಿ ದ್ದಾರೆ. ಶೇ 60ರಷ್ಟು ಜನರು ದ್ವಿತೀಯ ಪಿಯುವರೆಗೆ ವ್ಯಾಸಂಗ ಪಡೆಯುತ್ತಾರೆ. ಪದವಿ ಶಿಕ್ಷಣವನ್ನು ಕೇವಲ ಶೇ 24ರಷ್ಟು ಜನರು ಪಡೆಯುತ್ತಿದ್ದಾರೆ. ಉನ್ನತ ಶಿಕ್ಷಣ ಪಡೆಯುವಲ್ಲಿ ಜಾಗತಿಕ ಮಟ್ಟದಲ್ಲಿ ದಕ್ಷಿಣ ಕೊರಿಯಾ (ಶೇ 98) ಅಗ್ರಸ್ಥಾನದಲ್ಲಿದೆ.  ಜಪಾನ್‌ (ಶೇ 86), ಅಮೆರಿಕ (81) ನಂತರದ ಸ್ಥಾನದಲ್ಲಿವೆ’ ಎಂದು ಹೇಳಿದರು.

175 ರೆಸಿಡೆನ್ಸಿ ಕಾಲೇಜುಗಳ ಸ್ಥಾಪನೆ: ರಾಜ್ಯದ ಎಲ್ಲ 175 ತಾಲ್ಲೂಕು ಕೇಂದ್ರಗಳಲ್ಲಿ ವಸತಿ ಸಹಿತ ಪದವಿ ಕಾಲೇಜುಗಳನ್ನು (ರೆಸಿಡೆನ್ಸಿ ಕಾಲೇಜ್‌) ಮುಂದಿನ 5 ವರ್ಷಗಳಲ್ಲಿ ಸ್ಥಾಪಿಸಲು ನಿರ್ಧರಿಸಲಾಗಿದ್ದು, ಮೊದಲ ಹಂತವಾಗಿ ಇಂತಹ 16 ಕಾಲೇಜುಗಳನ್ನು 2017–18ನೇ ಶೈಕ್ಷಣಿಕ ವರ್ಷದಿಂದ ಆರಂಭಿಸ ಲಾಗುವುದು ಎಂದು ಹೇಳಿದರು.

‘ಬೆಳಗಾವಿ, ವಿಜಯಪುರ, ಹಾವೇರಿ, ಕೋಲಾರ, ಚಾಮರಾಜನಗರ ಸೇರಿದಂತೆ ಹೈದರಾಬಾದ್‌ ಕರ್ನಾಟಕ ಭಾಗದಲ್ಲಿ ಮೊದಲ ಹಂತದಲ್ಲಿ ಕಾಲೇಜು ಸ್ಥಾಪಿಸಲಾಗುವುದು. ಮೊರಾರ್ಜಿ ದೇಸಾಯಿ ಶಾಲೆಯ ಮಾದರಿಯಲ್ಲಿ ಕಾಲೇಜು ಕಟ್ಟಡ, ವಿದ್ಯಾರ್ಥಿಗಳಿಗೆ ಹಾಗೂ ಉಪನ್ಯಾಸಕರಿಗೆ ವಸತಿ ಗೃಹ ಗಳು, ಗ್ರಂಥಾಲಯ ಸೇರಿದಂತೆ ಎಲ್ಲ ಮೂಲಸೌಕರ್ಯಗಳನ್ನು ಆವರಣ ದಲ್ಲಿಯೇ ಕಲ್ಪಿಸಲಾಗುವುದು. ಇದಕ್ಕಾಗಿ ಪ್ರತಿ ಕಾಲೇಜುಗಳಿಗೆ ಅಂದಾಜು ₹ 25 ಕೋಟಿ ವೆಚ್ಚವಾಗಲಿದೆ’ ಎಂದು ಹೇಳಿದರು.

ಭವಿಷ್ಯದ ಜೊತೆ ಚೆಲ್ಲಾಟ: ‘ವಿದ್ಯಾರ್ಥಿ ಗಳಿಗೆ ಉತ್ತೇಜನ ನೀಡುವ ಸಲುವಾಗಿ ಸರ್ಕಾರವು ಉಚಿತ ಲ್ಯಾಪ್‌ಟಾಪ್‌ ನೀಡುತ್ತಿದೆ. ಪರಿಶಿಷ್ಟ ವಿದ್ಯಾರ್ಥಿಗಳ ಜೊತೆ ಇತರ ಎಲ್ಲ ವರ್ಗದ ಬಡ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ ನೀಡಲು ಹೊರಟಾಗ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ನಮ್ಮ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿದರು. ಇದರಿಂದಾಗಿ ಲ್ಯಾಪ್‌ ಟಾಪ್‌ ನೀಡಲು 2–3 ತಿಂಗಳು ವಿಳಂಬ ವಾಯಿತು. ನಮ್ಮ ಮೇಲೆ ಗೂಬೆ ಕೂರಿಸಲು ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟ ಆಡಬಾರದು’ ಎಂದು ಟೀಕಿಸಿದರು.

ಅಧಿಕಾರಿಗಳ ಬೇವರಿಳಿಸಿದ ಸಚಿವ: ಜಿಲ್ಲೆಯಲ್ಲಿರುವ ಸರ್ಕಾರಿ 21 ಪ್ರಥಮ ಪದವಿ ಕಾಲೇಜುಗಳು ಹಾಗೂ 2 ಪಾಲಿಟೆಕ್ನಿಕ್‌ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಬಡ ವಿದ್ಯಾರ್ಥಿಗಳ ಸಂಖ್ಯೆ ಒದಗಿಸುವಲ್ಲಿ ವಿಫಲರಾದ ಕಾಲೇಜು ಶಿಕ್ಷಣ ಇಲಾಖೆಯ ಪ್ರಾದೇಶಿಕ ಜಂಟಿ ನಿರ್ದೇಶಕ ಪ್ರೊ.ಡಿ.ಎಂ. ನಿಡವಣಿ ಅವರನ್ನು ಸಚಿವ ರಾಯರಡ್ಡಿ ವೇದಿಕೆಯಲ್ಲಿಯೇ ತರಾಟೆಗೆ ತೆಗೆದುಕೊಂಡರು.

ತಮ್ಮ ಮಾತು ಆರಂಭಿಸುವ ಮೊದಲು ರಾಯರಡ್ಡಿ ಅವರು, ಜಿಲ್ಲೆಯ ಸರ್ಕಾರಿ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಎಲ್ಲ ವರ್ಗದ ವಿದ್ಯಾರ್ಥಿಗಳ ಸಂಖ್ಯೆ ಕೇಳಿದರು. ತಕ್ಷಣಕ್ಕೆ ತಮ್ಮ ಬಳಿ ಮಾಹಿತಿ ಇಲ್ಲ ತರಿಸಿಕೊಡುವುದಾಗಿ ನಿಡವಣಿ ಹೇಳಿದಾಗ, ಆಕ್ರೋಶ ವ್ಯಕ್ತಪಡಿಸಿದರು. ‘ಕೆಲಸ ಮಾಡಲು ನೀವು ನಾಲಾಯಕ್ಕು’ ಎಂದು ಟೀಕಿಸಿದರು. ಶಾಸಕ ಫಿರೋಜ್‌ ಸೇಠ್‌ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಆಶಾ ಐಹೊಳೆ, ಇತರರು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry