ಕಳಂಕ ಕಳಚಿದ ಜಿಲ್ಲೆಗೆ ಕಾಮಗಾರಿಗಳ ಭಾಗ್ಯ

7

ಕಳಂಕ ಕಳಚಿದ ಜಿಲ್ಲೆಗೆ ಕಾಮಗಾರಿಗಳ ಭಾಗ್ಯ

Published:
Updated:

ಚಾಮರಾಜನಗರ: ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಸಿದ್ದರಾಮಯ್ಯ ಅವರ 23ನೇ ಭೇಟಿಗೆ ಜಿಲ್ಲೆ ಸಜ್ಜುಗೊಂಡಿದೆ. ಸಾಧನಾ ಸಮಾವೇಶ ಮತ್ತು ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆಗಳನ್ನು ಮುಖ್ಯಮಂತ್ರಿ ನೆರವೇರಿಸಲಿದ್ದಾರೆ.

ತಾಲ್ಲೂಕಿಗೆ 8ನೇ ಭೇಟಿ: ಶಾಪಗ್ರಸ್ಥ ಎಂಬ ಹಣೆಪಟ್ಟಿ ಕಟ್ಟಿಕೊಂಡಿದ್ದ ಚಾಮರಾಜನಗರ ತಾಲ್ಲೂಕಿಗೆ ಇದು ಅವರ 8ನೇ ಭೇಟಿ. ಜಿಲ್ಲಾ ಕೇಂದ್ರಕ್ಕೆ ಭೇಟಿ ನೀಡಿದರೆ ಅಧಿಕಾರ ಹೋಗುತ್ತದೆ ಎಂಬ ನಂಬಿಕೆ ಜನಪ್ರತಿನಿಧಿಗಳಲ್ಲಿ ಆಳವಾಗಿ ಬೇರೂರಿತ್ತು. ಹಾಗಾಗಿ, ಮುಖ್ಯಮಂತ್ರಿಗಳು ಮತ್ತು ಸಚಿವರು ಭೇಟಿ ನೀಡಲು ಹಿಂದೇಟು ಹಾಕುತ್ತಿದ್ದರು.

ಮುಖ್ಯಮಂತ್ರಿಯಾಗಿದ್ದ ಎಸ್. ನಿಜಲಿಂಗಪ್ಪ, ಡಿ. ದೇವರಾಜ ಅರಸು, ಗುಂಡೂರಾವ್, ರಾಮಕೃಷ್ಣ ಹೆಗಡೆ ಜಿಲ್ಲೆ ರಚನೆಯಾಗುವುದಕ್ಕೂ ಮೊದಲು ಚಾಮರಾಜನಗರಕ್ಕೆ ಭೇಟಿ ನೀಡಿದ್ದರು.

1992ರಲ್ಲಿ ವೀರೇಂದ್ರ ಪಾಟೀಲ ಕಾವೇರಿ ಕುಡಿಯುವ ನೀರು ಪೂರೈಕೆ ಯೋಜನೆಯ ಉದ್ಘಾಟನೆಗೆ ಜಿಲ್ಲಾ ಕೇಂದ್ರಕ್ಕೆ ಭೇಟಿ ನೀಡಿದ್ದರು. ನಂತರ ಕಾಕತಾಳೀಯ ಎಂಬಂತೆ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿ­ದರು. ಅಂದಿನಿಂದಲೂ ಚಾಮರಾಜನಗರಕ್ಕೆ ಹೋದರೆ ಅಧಿಕಾರ ಹೋಗುತ್ತದೆ ಎಂಬ ಕಳಂಕ ಗಟ್ಟಿಯಾಯಿತು.

ಜೆ.ಎಚ್‌. ಪಟೇಲ್‌ ಮುಖ್ಯಮಂತ್ರಿಯಾಗಿದ್ದ ವೇಳೆ 1997ರ ಆ. 15ರಂದು ಚಾಮರಾಜನಗರ ಹೊಸ ಜಿಲ್ಲೆಯಾಗಿ ಉದಯಿಸಿತು. ಆದರೆ, ಅವರು ಮಲೆಮಹದೇಶ್ವರಬೆಟ್ಟದಲ್ಲಿ ಹೊಸ ಜಿಲ್ಲೆ­ ಉದ್ಘಾಟಿಸಿದ್ದರು. ಜಿಲ್ಲಾ ಕೇಂದ್ರಕ್ಕೆ ಬರುವ ಧೈರ್ಯ ಮಾಡಲಿಲ್ಲ. ಆಗ ಉಪಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಚಾಮರಾಜನಗರಕ್ಕೆ ಬಂದು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ಎಚ್.ಡಿ. ಕುಮಾರಸ್ವಾಮಿ ತಮ್ಮ ಅಧಿಕಾರಾವಧಿಯ ಕೊನೆಯಲ್ಲಿ ಜಿಲ್ಲಾ ಕೇಂದ್ರಕ್ಕೆ ಭೇಟಿ ನೀಡಿದ್ದರು. ಬಿ.ಎಸ್. ಯಡಿಯೂರಪ್ಪ ತಮ್ಮ ಅಧಿಕಾರಾವಧಿಯಲ್ಲಿ ನಡೆದ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಗಳ ಪ್ರಚಾರಕ್ಕೆ ಜಿಲ್ಲೆಗೆ ಭೇಟಿ ನೀಡಿದ್ದರು. ಸಮೀಪದ ಸಂತೇಮರಹಳ್ಳಿಗೆ ಬಂದಿದ್ದ ಅವರು ಜಿಲ್ಲಾ ಕೇಂದ್ರಕ್ಕೆ ಬರಲು ಹಿಂದೇಟು ಹಾಕಿದ್ದರು. ಬಿಜೆಪಿ ರಾಜ್ಯ ಸರ್ಕಾರದ ಕೊನೆಯ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಜಗದೀಶ ಶೆಟ್ಟರ್ ಜಿಲ್ಲಾ ಕೇಂದ್ರಕ್ಕೆ ಭೇಟಿ ನೀಡಿದ್ದರು.

ಸತತ ಭೇಟಿ: ವಿಧಾನಸಭೆ ಚುನಾವಣೆ ಪ್ರಚಾರಕ್ಕೆ ಬಂದಿದ್ದ ಸಿದ್ದರಾಮಯ್ಯ, ಅಧಿಕಾರಕ್ಕೆ ಬಂದರೆ ಚಾಮರಾಜನಗರಕ್ಕೆ ಮೊದಲ ಭೇಟಿ ನೀಡುವುದಾಗಿ ಹೇಳಿದ್ದರು. ಆದರೆ, ಮುಖ್ಯಮಂತ್ರಿಯಾಗಿ ನಾಲ್ಕು ತಿಂಗಳು ಕಳೆದರೂ ಬಾರದಿದ್ದರಿಂದ ಅವರೂ ಮೌಢ್ಯಕ್ಕೆ ಒಳಗಾಗಿದ್ದಾರೆ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು.

ಇದನ್ನು ನಿವಾರಿಸಲು 2013ರ ಅ. 7ರಂದು ಸಿದ್ದರಾಮಯ್ಯ ಜಿಲ್ಲಾ ಕೇಂದ್ರಕ್ಕೆ ಭೇಟಿ ನೀಡಿದರು. ‘ಮನಸ್ವಿನಿ’ ಯೋಜನೆ ಮತ್ತು ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದರು.

2014ರಲ್ಲಿ ಜಿಲ್ಲೆಗೆ ಐದು ಬಾರಿ ಭೇಟಿ ನೀಡಿದ್ದರು. ಈ ವೇಳೆ ಮಲೆಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರಕ್ಕೆ ಚಾಲನೆ ನೀಡಿದರು. 2015 ಮತ್ತು 2016ರಲ್ಲಿ ತಲಾ 3 ಬಾರಿ ಜಿಲ್ಲೆಗೆ ಭೇಟಿ ನೀಡಿದರು.

2017 ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಜಿಲ್ಲೆಗೆ ಅತಿ ಹೆಚ್ಚು ಬಾರಿ ಭೇಟಿ ನೀಡಿದ ವರ್ಷ. ಮಹದೇವಪ್ರಸಾದ್‌ ನಿಧನ ಮತ್ತು ಗುಂಡ್ಲುಪೇಟೆ ಉಪಚುನಾವಣೆ ಕಾರಣಕ್ಕೆ ಅವರು ಗುಂಡ್ಲುಪೇಟೆಗೆ 6 ಸಲ ಬಂದಿದ್ದರು. ಜಿಲ್ಲಾ ಕೇಂದ್ರಕ್ಕೂ 3 ಬಾರಿ ಭೇಟಿ ನೀಡಿದ್ದರು. 2018ರಲ್ಲಿ ಜಿಲ್ಲೆಗೆ ಇದು ಅವರ ಮೊದಲ ಭೇಟಿ. ಜಿಲ್ಲೆಯ ನಾಲ್ಕು ವಿಧಾನಸಭೆ ಕ್ಷೇತ್ರಗಳ ಪೈಕಿ ಮೂರು ಕ್ಷೇತ್ರಗಳಿಗೆ ಒಂದೇ ದಿನ ಭೇಟಿ ನೀಡಲಿರುವುದು ವಿಶೇಷ.

ಹೆಲಿಪ್ಯಾಡ್‌ ನಿರ್ಮಾಣ

ಮಡಿಕೇರಿಯಿಂದ ಹೆಲಿಕ್ಯಾಪ್ಟರ್‌ ಮೂಲಕ ಚಾಮರಾಜನಗರ ತಾಲ್ಲೂಕಿನ ನಾಗವಳ್ಳಿ ಗ್ರಾಮದಲ್ಲಿ ನಿರ್ಮಿಸಲಾಗಿರುವ ಹೆಲಿಪ್ಯಾಡ್‌ಗೆ ಬಂದಿಳಿಯಲಿರುವ ಅವರು, ಅದರ ಎದುರಿನ ವಿಶಾಲ ಜಮೀನಿನಲ್ಲಿ ನಿರ್ಮಿಸಿರುವ ವೇದಿಕೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದ ₹435.95 ಕೋಟಿ ಅಂದಾಜು ವೆಚ್ಚದ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ.

ಬಳಿಕ ಕೊಳ್ಳೇಗಾಲದ ಎಂ.ಜಿ.ಎಸ್‌.ವಿ. ಕಾಲೇಜು ಮೈದಾನದಲ್ಲಿ ಮಧ್ಯಾಹ್ನ 12 ಗಂಟೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ₹196.14 ಅಂದಾಜು ವೆಚ್ಚದ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ. 3 ಗಂಟೆಗೆ ಹನೂರು ಮಹದೇಶ್ವರ ಕ್ರೀಡಾಂಗಣದಲ್ಲಿ ₹118.18 ಕೋಟಿ ವೆಚ್ಚದ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ.

ಸಂಜೆ, ಮಲೆಮಹದೇಶ್ವರ ಬೆಟ್ಟಕ್ಕೆ ತೆರಳಿ ‘ರಾಷ್ಟ್ರಪತಿ ಭವನ’ದಲ್ಲಿ ತಂಗಲಿದ್ದಾರೆ. ಜ. 11ರ ಬೆಳಿಗ್ಗೆ ರಂಗಮಂದಿರ ಉದ್ಘಾಟನೆ ಮತ್ತು ಪ್ರತಿಮೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಕೊಳ್ಳೇಗಾಲ ಮತ್ತು ಹನೂರುಗಳಲ್ಲಿ ಹೆಲಿಪ್ಯಾಡ್‌ ನಿರ್ಮಿಸಲಾಗಿದ್ದು, ಹನೂರು ಕಾರ್ಯಕ್ರಮ ಮುಗಿದ ಬಳಿಕ ಕಾರಿನಲ್ಲಿ ಮಹದೇಶ್ವರ ಬೆಟ್ಟಕ್ಕೆ ತೆರಳಲಿದ್ದಾರೆ.

ಅಂತೂ ಇಂತೂ ಗುಂಡಿ ಮುಚ್ಚಿದವು

ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಸ್ಟ್ 10ರಂದು ಬಿ. ರಾಚಯ್ಯ ಸ್ಮಾರಕ ಮತ್ತು ಜೋಡಿ ರಸ್ತೆ ಕಾಮಗಾರಿಗಳಿಗೆ ಚಾಲನೆ ನೆರವೇರಿಸಲು ಬಂದಿದ್ದಾಗ ನಗರದ ರಸ್ತೆಗಳಲ್ಲಿನ ಗುಂಡಿಗಳು ಜಲ್ಲಿ ಮತ್ತು ಟಾರು ಭಾಗ್ಯ ಕಂಡಿದ್ದವು. ಕಾರ್ಯಕ್ರಮದ ಬೆನ್ನಲ್ಲೇ ಪುನಃ ಗುಂಡಿಗಳು ಪ್ರತ್ಯಕ್ಷವಾಗಿ, ರಸ್ತೆಗಳು ದೂಳುಮಯವಾದವು. ಅಂದಿನಿಂದ ಮತ್ತೆ ಗುಂಡಿಮುಚ್ಚಿ ಸವಾರರಿಗೆ ಅನುಕೂಲ ಮಾಡಿಕೊಡಲು ಮುಂದಾಗದ ಅಧಿಕಾರಿಗಳು ಸಿ.ಎಂ. ಭೇಟಿಯ ಹಿಂದಿನ ದಿನವಾದ ಮಂಗಳವಾರ ಗುಂಡಿಬಿದ್ದ ರಸ್ತೆಗಳಿಗೆ ಏಕಾಏಕಿ ತೇಪೆಹಚ್ಚುವ ಕಾರ್ಯ ನಡೆಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry