ಶಿಗ್ಲಿಯ ರಾಮಪ್ಪ ಶಿರಸಂಗಿಯ ಅರಸನಾದ...

7

ಶಿಗ್ಲಿಯ ರಾಮಪ್ಪ ಶಿರಸಂಗಿಯ ಅರಸನಾದ...

Published:
Updated:
ಶಿಗ್ಲಿಯ ರಾಮಪ್ಪ ಶಿರಸಂಗಿಯ ಅರಸನಾದ...

ಲಕ್ಷ್ಮೇಶ್ವರ: ಇಡೀ ಆಸ್ತಿಯನ್ನೇ ಶಿಕ್ಷಣ ಸಂಸ್ಥೆ ಕಟ್ಟಲು ದಾನ ಮಾಡಿದ ದಾನಶೂರ ಶಿರಸಂಗಿ ಲಿಂಗರಾಜರ ದೇಸಾಯಿಯವರ 157ನೇ ಜಯಂತಿ ಅವರ ಜನ್ಮ ಸ್ಥಳವಾದ ಲಕ್ಷ್ಮೇಶ್ವರ ಸಮೀಪದ ಶಿಗ್ಲಿಯಲ್ಲಿ ಬುಧವಾರ ನಡೆಯಲಿದೆ.

ಪರಿಚಯ: ಶಿಕ್ಷಣ ಕ್ಷೇತ್ರದಲ್ಲಿ ಉನ್ನತ ಸಾಧನೆ ಮಾಡಿರುವ ಕೆಎಲ್‌ಇ ಸಂಸ್ಥೆ ಹುಟ್ಟಲು ಕಾರಣೀಕರ್ತರಾದ ಲಿಂಗರಾಜರು ಶಿಗ್ಲಿಯ ಕುಡುವಲ್ಲಿಗೇರ ಸಮಾಜದ ಗೂಳಪ್ಪ ಮತ್ತು ಯಲ್ಲವ್ವ ಮಡ್ಲಿ ದಂಪತಿ ಉದರದಲ್ಲಿ 1861ರ ಜ.10ರಂದು ಜನಿಸಿದರು.

ಅವರ ಮೂಲ ಹೆಸರು ರಾಮಪ್ಪ. ಇದೇ ಸಮಯಕ್ಕೆ ನವಲಗುಂದದ ಶಿರಸಂಗಿ ದೇಸಗತಿ ಮನೆತನದ ಜಾಯಪ್ಪನವರು ದೇಸಾಯಿ ದತ್ತಕ ಪುತ್ರನ ಹುಡುಕಾಟದಲ್ಲಿ ಇದ್ದರು. ಆಗ ರಾಮಪ್ಪನವರು ಅವರ ಕಣ್ಣಿಗೆ ಬಿದ್ದರು. ರಾಮಪ್ಪನವರನ್ನು ದತ್ತಕ ತೆಗೆದುಕೊಂಡರು.

ಅಲ್ಲಿಯವರೆಗೆ ಬರೀ ರಾಮಪ್ಪ ಮಡ್ಲಿ ಆಗಿದ್ದ ಅವರು 1872ರ ಜೂನ್‌ 2ರಂದು ಶಿರಸಂಗಿ ಲಿಂಗರಾಜ ದೇಸಾಯಿ ಎಂದು ನಾಮಾಂಕಿತಗೊಂಡರು. ಶಿಗ್ಲಿಯ ಬಡ ಕೃಷಿ ಕುಟುಂಬದಲ್ಲಿ ಜನಿಸಿದ್ದ ಲಿಂಗರಾಜರು ಐಶ್ವರ್ಯ ಬಂದಾಕ್ಷಣ ಬದಲಾಗದೆ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದರು. ಅದರಲ್ಲೂ ಬಡವರ ಮಕ್ಕಳಿಗೆ ಶಿಕ್ಷಣ ಸಿಗಬೇಕು ಎಂಬುವುದು ಅವರ ಆಶಯಯಾಗಿತ್ತು.

ಆದರೆ ಅದು ಸುಲಭದ್ದಾಗಿರಲಿಲ್ಲ. ಕಾರಣ ಆ ಕಾಲದಲ್ಲಿ ಶಿಕ್ಷಣ ಸುಲಭವಾಗಿ ಸಿಗುತ್ತಿರಲಿಲ್ಲ. ಹೀಗಾಗಿ ಅವರು ಒಂದು ಶಿಕ್ಷಣ ಸಂಸ್ಥೆಯನ್ನೇ ಕಟ್ಟಲು ತೀರ್ಮಾನಿಸಿ ಅದಕ್ಕಾಗಿ ತಮ್ಮ ಶಿರಸಂಗಿಯ ದೇಸಗತಿ ಮನೆತನದ ಎಲ್ಲ ಆಸ್ತಿಯನ್ನೇ ದಾನ ಮಾಡಿ ದಾನಶೂರ ಎನಿಸಿದರು. ಆ ಸಂಸ್ಥೆಯೇ ಇಂದು ಹೆಮ್ಮರವಾಗಿ ಬೆಳೆದು ಲಕ್ಷಾಂತರ ಮಕ್ಕಳಿಗೆ ವಿದ್ಯಾದಾನ ಮಾಡುವ ಕೆಎಲ್‌ಇ ಸಂಸ್ಥೆ ಆಗಿದೆ.

ಶಿಗ್ಲಿಯಲ್ಲಿನ ಕುಡುವಕ್ಕಲಿಗೇರ ಸಮಾಜ ಬಾಂಧವರು ಶಿರಸಂಗಿ ಲಿಂಗರಾಜ ದೇಸಾಯಿಯವರ ವಿವಿದೋದ್ಧೇಶಗಳ ಸಹಕಾರಿ ಸಂಘ ಕಟ್ಟಿಕೊಂಡು ಅದರಡಿಯಲ್ಲಿ ಪ್ರತಿ ವರ್ಷ ಜ.10ರಂದು ಲಿಂಗರಾಜ ಜಯಂತಿ ಮಾಡುತ್ತಿದ್ದಾರೆ. ಸದ್ಯ ಸಂಘ ಶಿಗ್ಲಿಯ ಗ್ರಾಮ ಪಂಚಾಯ್ತಿಯಲ್ಲಿ ಆರು ಗುಂಟೆ ಜಾಗೆ ಖರೀದಿಸಿದ್ದು, ಅಲ್ಲಿ ಲಿಂಗರಾಜರ ಸ್ಮರಣಾರ್ಥ ಒಂದು ಭವನ ನಿರ್ಮಿಸುವ ಯೋಜನೆ ಹಾಕಿಕೊಂಡಿದೆ. ಆದರೆ ಅದಕ್ಕೆ ಆರ್ಥಿಕ ತೊಂದರೆ ಎದುರಾಗಿದೆ. ಸರ್ಕಾರ ಮತ್ತು ಕೆಎಲ್‌ಇ ಸಂಸ್ಥೆ ಲಿಂಗರಾಜರ ಹೆಸರನ್ನು ಚಿರಸ್ಥಾಯಿಯಾಗಿ ಉಳಿಯುವಂತೆ ಮಾಡಬೇಕಾದ ಜವಾಬ್ದಾರಿ ನಿರ್ವಹಿಸಬೇಕಿದೆ ಎನ್ನುತ್ತಾರೆ ಗ್ರಾಮಸ್ಥರು.

‘ನಮ್ಮ ಸಮಾಜದವರಾದ ಲಿಂಗರಾಜರ ಹೆಸರಿನಲ್ಲಿ ಶಿಗ್ಲಿಯಲ್ಲಿ ಒಂದು ಸಂಸ್ಥೆ ಕಟ್ಟುವಂತೆ ನಾವೂ ಭಾಳ ಸಲಾ ಮನವಿ ಕೊಟ್ಟೇವಿ. ಆದರೆ ಅದಕ್ಕ ಸರಿಯಾದ ಸ್ಪಂದನೆ ಸಿಕ್ಕಿಲ್ಲ’ ಎಂದು ಸಹಕಾರಿ ಸಂಘದ ಖಜಾಂಚಿ ಶಂಕ್ರಣ್ಣ ದೇಸಾಯಿ ನೋವಿನಿಂದ ಹೇಳುತ್ತಾರೆ.

ಲಿಂಗರಾಜರನ್ನು ಮರೆತ ಕೆಎಲ್‌ಇ

ಕೆಎಲ್‌ಇ ಸಂಸ್ಥೆ ಬೆಳೆಯಲು ಆಸ್ತಿಯನ್ನು ದಾನ ಮಾಡಿದ ಲಿಂಗರಾಜರನ್ನೇ ಇಂದು ಕೆಎಲ್‌ಇ ಮರೆತಿದೆ. ಕಾರಣ ಇಂದಿಗೂ ಅವರು ಜನಿಸಿದ ಶಿಗ್ಲಿಯಲ್ಲಿ ಯಾವುದೇ ಹೇಳಿಕೊಳ್ಳುವಂತ ಕಾರ್ಯಕ್ರಮ ಮಾಡಿಲ್ಲ.

ಲಿಂಗರಾಜರು ಜನಿಸಿದ ಮನೆ ಇಂದು ಹಾಳು ಕೊಂಪೆಯಾಗಿದ್ದು ಅಲ್ಲಿ ಹಾವು ಚೇಳುಗಳು ವಾಸಿಸುವಂತಾಗಿದ್ದು ದುರ್ದೈವವೇ ಸರಿ. ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಯನ್ನು ಬಿಟ್ಟುಕೊಟ್ಟ ಲಿಂಗರಾಜರ ನೆನಪಿಗಾಗಿ ಅವರ ಜನ್ಮ ಸ್ಥಳದಲ್ಲಿ ಈಗಾಗಲೇ ಒಂದು ದೊಡ್ಡ ಸಂಸ್ಥೆಯನ್ನು ಕೆಎಲ್‌ಇ ಸ್ಥಾಪಿಸಬೇಕಿತ್ತು. ಆದರೆ ಅದು ಇತ್ತ ಗಮನ ಹರಿಸಿಲ್ಲ. ‘ಲಿಂಗರಾಜರು ಮಾಡಿದ ತ್ಯಾಗಕ್ಕಾದರೂ ಕೆಎಲ್‌ಇ ಶಿಗ್ಲಿಯಲ್ಲಿ ಒಂದು ಶಿಕ್ಷಣ ಸಂಸ್ಥೆ ಕಟ್ಟಬೇಕಾಗಿತ್ತು’ ಎಂದು ಶಿಗ್ಲಿ ನಿವಾಸಿ ಸೋಮಣ್ಣ ಡಾಣಗಲ್‌ ಹೇಳುತ್ತಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry