ಗಮನಸೆಳೆದ ತರಾವರಿ ಯಂತ್ರಗಳು

7

ಗಮನಸೆಳೆದ ತರಾವರಿ ಯಂತ್ರಗಳು

Published:
Updated:

ಹಿರೀಸಾವೆ: ಕೃಷಿ ಮತ್ತು ತೋಟಗಾರಿಕೆಯಲ್ಲಿ ರೈತರು ಬಳಸುವ ವಿವಿಧ ಯಂತ್ರಗಳು ಮತ್ತು ಪರಿಕರಗಳನ್ನು ಕೃಷಿ ಮೇಳದಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. ರೈತರು ಸದುಪಯೋಗ ಮಾಡಿಕೊಳ್ಳಬೇಕು ಎಂದು ಶಾಸಕ ಸಿ.ಎನ್‌. ಬಾಲಕೃಷ್ಣ ಮಂಗಳವಾರ ಹೇಳಿದರು.

ಹೋಬಳಿಯ ಬೂಕನಬೆಟ್ಟದ ರಂಗನಾಥಸ್ವಾಮಿಯ 87ನೇ ರಾಸು ಜಾತ್ರೆಯಲ್ಲಿ ತಾಲ್ಲೂಕು ಆಡಳಿತ ಮಂಗಳವಾರ ಏರ್ಪಡಿಸಿದ್ದ ಕೃಷಿ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರಾಗಿ, ಭತ್ತದ ಕಟಾವು ಯಂತ್ರಗಳು, ಅಡಿಕೆ ಮತ್ತಿತರ ತೋಟಗಾರಿಕೆ ಬೆಳೆಗಳ ನಡುವೆ ಉಳುಮೆ ಮಾಡುವ ಯಂತ್ರಗಳು ಮತ್ತು ಕಳೆ ಕೀಳುವ ಯಂತ್ರಗಳು ಸೇರಿದಂತೆ ಕೃಷಿಯಲ್ಲಿ ಬಳಸುವ ವಿವಿಧ ಪರಿಕರಗಳನ್ನು ಅಧಿಕಾರಿಗಳು ಖಾಸಗಿ ಕಂಪನಿಗಳಿಂದ ತರಿಸಿ, ಪ್ರದರ್ಶನ ಮಾಡಿದ್ದಾರೆ. ಈ ಯಂತ್ರಗಳನ್ನು ರೈತರು ಕೊಳ್ಳಲು ಸರ್ಕಾರ ಸಹಾಯ ಧನ ನಿಡಲಿದೆ. ರೈತರು ಅಧಿಕಾರಿಗಳು ಮತ್ತು ಕಂಪನಿಯವರಿಂದ ಸೂಕ್ತ ಮಾಹಿತಿ ಪಡೆಯಬೇಕು ಎಂದು ಸಲಹೆ ಮಾಡಿದರು.

ತಹಶೀಲ್ದಾರ್ ಸೋಮಶೇಖರ್ ಮಾತನಾಡಿ, ಜಾತ್ರೆ ಆರಂಭಕ್ಕೂ ಎರಡು ದಿನ ಮೊದಲೆ ಉತ್ತಮ ರಾಸುಗಳು ಬಂದಿವೆ. ಕುಡಿಯುವ ನೀರು, ಪಶುಗಳ, ಜನರ ಚಿಕಿತ್ಸೆ ಸೇರಿದಂತೆ ಅಗತ್ಯ ಇರುವ ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದು ಹೇಳಿದರು.

ತರಾವರಿ ಉಪಕರಣಗಳು: ಕೃಷಿ ಮೇಳದಲ್ಲಿ ಆರೋಗ್ಯ, ಪಶುಪಾಲನಾ, ಕೃಷಿ, ತೋಟಗಾರಿಕೆ, ರೇಷ್ಮೆ, ಸಮಾಜ ಕಲ್ಯಾಣ ಮತ್ತು ಮಹಿಳಾ ಮತ್ತು ಶಿಶು ಅಭಿವೃದ್ಧಿ ಇಲಾಖೆಗಳು ಹಾಗೂ ವಿವಿಧ ಸ್ತ್ರೀಶಕ್ತಿ ಸ್ವಸಹಾಯ ಸಂಘಗಳು ಭಾಗವಹಿಸಿವೆ.

ನ್ನರಾಯಪಟ್ಟಣ ತಾಲ್ಲೂಕಿನ ಉದಯಪುರದ ಸ್ವಸ್ತಿಕ್‌ ಎಂಟರ್‌ ಪ್ರೈಸಸ್‌ನವರ ಬಹುಪಯೋಗಿ ಉಪಕರಣ ಮತ್ತು ಮಾದಲಗೆರೆಯ ನಂಜೇಗೌಡರು ತಂದಿರುವ ರಾಗಿ ಕಟಾವು ಯಂತ್ರ, ವಿವಿಧ ಕಂಪನಿಗಳ ರೋಟರ್ ಟ್ರಿಲ್ಲರ್‌ಗಳು, ಔಷಧಿ ಸಿಂಪಡಣೆಯ ಯಂತ್ರಗಳು, ತುಂತುರು ನೀರಾವರಿಯಲ್ಲಿ ಬಳಸುವ ಪರಿಕರಗಳು ರೈತರನ್ನು ಹೆಚ್ಚು ಆಕರ್ಷಿಸಿದವು. ಮಹಿಳಾ ಸ್ವಸಹಾಯ ಸಂಘದ ಸದಸ್ಯರು ತಯಾರಿಸಿರುವ ವಿವಿಧ ಉತ್ಪನ್ನಗಳು ಮೇಳದಲ್ಲಿ ಪ್ರದರ್ಶನ ಮತ್ತು ಮಾರಾಟ ಮಾಡಲಾಯಿತು.

ಉಪ ತಹಶೀಲ್ದಾರ್ ಮೋಹನಕುಮಾರ್, ಹಿರೀಸಾವೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹೇಶ್, ಸದಸ್ಯ ಬೋರಣ್ಣ, ಎಪಿಎಂಸಿ ಉಪಾಧ್ಯಕ್ಷ ಅಮಾಸೇಗೌಡ, ಹೇಮಾವತಿ ಸಹಕಾರ ಸಕ್ಕರೆ ಕಾರ್ಖಾನೆಯ ನಿರ್ದೇಶಕ ತೋಟಿ ಜಯರಾಮ್‌, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಗುರುಸಿದ್ದಪ್ಪ, ಕೃಷಿ ಅಧಿಕಾರಿ ರಮೇಶಕುಮಾರ್, ಸಿಡಿಪಿಒ ಧರಣೇಶ್‌, ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯ ನಿರ್ದೇಶಕ ಸತೀಶ್‌, ತೋಟಗಾರಿಕೆ ಅಧಿಕಾರಿ ಭಾನುಪ್ರಕಾಶ್, ಪಶುವೈದ್ಯ ಸುಬ್ರಹ್ಮಣ್ಯ ಇದ್ದರು.

* * 

ಜಾತ್ರೆಯಲ್ಲಿರುವ ಉತ್ತಮ ಎತ್ತುಗಳಿಗೆ ಎಪಿಎಂಸಿಯಿಂದ ಪ್ರಥಮ ₹ 10,000, ದ್ವಿತೀಯ ₹ 7,500, ತೃತೀಯ ₹ 5,000 ಬಹುಮಾನಗಳನ್ನು ನೀಡಲಾಗುವುದು ಸಿ.ಎನ್.ಬಾಲಕೃಷ್ಣ ಶಾಸಕ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry