ಸಿದ್ದರಾಮಯ್ಯ ಸವಾಲಿಗೆ ಅಮಿತ್ ಷಾ ಜವಾಬು

7
ಹೊಳಲ್ಕೆರೆ ಪರಿವರ್ತನಾ ಯಾತ್ರೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಿಂದ ಟೀಕಾಪ್ರಹಾರ

ಸಿದ್ದರಾಮಯ್ಯ ಸವಾಲಿಗೆ ಅಮಿತ್ ಷಾ ಜವಾಬು

Published:
Updated:
ಸಿದ್ದರಾಮಯ್ಯ ಸವಾಲಿಗೆ ಅಮಿತ್ ಷಾ ಜವಾಬು

ಹೊಳಲ್ಕೆರೆ: ‘ಕರ್ನಾಟಕದ ವಿವಿಧ ಯೋಜನೆಗಳಿಗಾಗಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇದುವರೆಗೆ ಒಟ್ಟು ಮೂರು ಲಕ್ಷ ಕೋಟಿ ರೂಪಾಯಿ ಕೊಟ್ಟಿದೆ. ಅದರೆ ಅದು ಸಿದ್ದರಾಮಯ್ಯ ಅವರ ಭ್ರಷ್ಟ ಆಡಳಿತದಿಂದಾಗಿ ಹಳ್ಳಿಗಳಿಗೆ ತಲುಪಿಲ್ಲ’ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಟೀಕಿಸಿದರು.

ಪಟ್ಟಣದಲ್ಲಿ ಬುಧವಾರ ಬಿಜೆಪಿ ಪರಿವರ್ತನಾ ಯಾತ್ರೆ ಉದ್ಘಾಟಿಸಿ ಅವರು ಮಾತನಾಡಿದರು. 'ಕೇಂದ್ರ ಸರ್ಕಾರ ತಮ್ಮ ರಾಜ್ಯಕ್ಕೆ ಏನು ಕೊಟ್ಟಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಲೆಕ್ಕ ಕೇಳಿದ್ದರು. ಏನೆಲ್ಲ ಕೊಟ್ಟಿದ್ದೇವೆ ಎನ್ನುವ ಲೆಕ್ಕ ಕೊಡಲೆಂದೇ ನಾನು ಇಲ್ಲಿದ್ದೇನೆ' ಎನ್ನುತ್ತಾ, ಕೇಂದ್ರ ಸರ್ಕಾರ ನೀಡಿರುವ ಅನುದಾನದ ಲೆಕ್ಕ  ಒಪ್ಪಿಸಿದರು.

ಮೋದಿ ಸರ್ಕಾರವು 14ನೇ ಹಣಕಾಸು ಆಯೋಗದಲ್ಲಿ ರಾಜ್ಯಕ್ಕೆ ₹ 2,19,506 ಕೋಟಿ ಅನುದಾನ ಕೊಟ್ಟಿದೆ. ಕಾಂಗ್ರೆಸ್‍ನ ಸೋನಿಯಾ ಗಾಂಧಿ, ಮನಮೋಹನ್ ಸಿಂಗ್ ಕಾಲದಲ್ಲಿ  13ನೇ ಹಣಕಾಸು ಆಯೋಗದಲ್ಲಿ ಈ ಮೊತ್ತ ಬರೀ ₹ 88,583 ಕೋಟಿ ಇತ್ತು ಎಂದು ವಿವರ ನೀಡಿದರು.

ಉಜ್ವಲ, ಮುದ್ರಾ ಯೋಜನೆ, ಸ್ವಚ್ಛ ಭಾರತ ಅಭಿಯಾನ ಮೊದಲಾದವುಗಳಿಗೆ ಕೊಟ್ಟ ಹಣದ ಲೆಕ್ಕವನ್ನು ಪಟ್ಟಿ ಮಾಡುತ್ತಾ, ಅದರ ಬಹುಪಾಲನ್ನು ಕಾಂಗ್ರೆಸಿಗರು ನುಂಗಿದ್ದಾರೆ ಎಂದು ಷಾ ಆರೋಪಿಸಿದರು.

'ಸರ್ಕಾರ ಇರುವುದು ಜನರಿಗಾಗಿ. ಆದರೆ ಇಲ್ಲಿನ ಸರ್ಕಾರ ಕಾಂಗ್ರೆಸ್‍ಗಾಗಿ ಇದೆ ಎನ್ನುವಂತೆ ವರ್ತಿಸಿದೆ. ಯೋಜನೆಗಳು ಜನರನ್ನು ತಲುಪಿಲ್ಲ. ಹಾಗಾದರೆ ಎಲ್ಲಿ ಹೋಯಿತು ಎಂಬ ಉತ್ತರ ಬೇಕೆ? ಹತ್ತಿರದ ಕಾಂಗ್ರೆಸ್‍ ನಾಯಕರ ಮನೆಗೆ ಹೋಗಿ ನೋಡಿ. ಐದು ವರ್ಷಗಳ ಹಿಂದೆ ಶೀಟಿನ ಮನೆಯಲ್ಲಿದ್ದವರು, ಈಗ ಬಹು ಅಂತಸ್ತಿನ ಮನೆಗಳನ್ನು ಕಟ್ಟಿಕೊಂಡು, ಕಾರಿನಲ್ಲಿ ಓಡಾಡತೊಡಗಿದ್ದಾರೆ' ಎಂದು ಲೇವಡಿ ಮಾಡಿದರು.

'ಎಂಆರ್‍ಐ ಸ್ಕ್ಯಾನಿಂಗ್ ಗುತ್ತಿಗೆ ವ್ಯವಹಾರವನ್ನು ಮಗನಿಗೆ ಕೊಡಲು ಹೋದವರು ಮುಖ್ಯಮಂತ್ರಿ ಸಿದ್ದರಾಮಯ್ಯ. ಬಿಡಿಎ ಮುಖಾಂತರ ಸಂಬಂಧಿಕರಿಗೆ ₹ 2,500 ಕೋಟಿ ಬೆಲೆಯ ಭೂಮಿ ಮಂಜೂರು ಮಾಡಿಸಿದ್ದಾರೆ. ಮಲಪ್ರಭಾ ಯೋಜನೆಯಲ್ಲಿ ₹ 900 ಕೋಟಿ ಅವ್ಯವಹಾರ ನಡೆದಿದೆ. ಬೆಂಗಳೂರು ಉಕ್ಕಿನ ಸೇತುವೆ ಯೋಜನೆಗಾಗಿ ₹ 100 ಕೋಟಿ ಲಂಚ ಕೇಳಿದ್ದರು. 1,800 ಕೆರೆಗಳ ಡಿನೋಟಿಫಿಕೇಷನ್.... ಹೀಗೆ ಸಿದ್ದರಾಮಯ್ಯ ಅವರ ಆಪ್ತ ಗೋವಿಂದರಾಜ್ ಅವರ ಡೈರಿ

ಯಲ್ಲಿರುವ ಹಗರಣಗಳ ಪಟ್ಟಿಯನ್ನು ಓದುತ್ತಾ ಹೋದರೆ ಭಗವದ್ಗೀತೆಯ ಅಧ್ಯಾಯಗಳನ್ನು ಓದಲು ಬೇಕಾದಷ್ಟು ಸಮಯ ಬೇಕಾಗುತ್ತದೆ' ಎಂದು ವ್ಯಂಗ್ಯವಾಡಿದರು.

ಅಮಿತ್ ಷಾ ಮಾಡಿದ ಹಿಂದಿ ಭಾಷಣವನ್ನು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ಕನ್ನಡಕ್ಕೆ ಅನುವಾದಿಸಿದರು.

‘ಜೈಲಿಗೆ ಹೋದವರು ಜೈಲಿಗೆ ಹೋದವರನ್ನು ಸಿಎಂ ಮಾಡಲು ಹೊರಟಿದ್ದಾರೆ...’

ಚಿತ್ರದುರ್ಗ: ‘ಜೈಲಿಗೆ ಹೋದವರು, ಜೈಲಿಗೆ ಹೋದ ಮತ್ತೊಬ್ಬರನ್ನು ಮುಖ್ಯಮಂತ್ರಿ ಮಾಡಲು ಹೊರಟಿದ್ದಾರೆ’ ಎಂದು ಕೆಪಿಸಿಸಿ ಚುನಾವಣಾ ಪ್ರಣಾಳಿಕೆ ಸಮಿತಿ ಅಧ್ಯಕ್ಷ ಎಂ. ವೀರಪ್ಪ ಮೊಯಿಲಿ, ಬಿಜೆಪಿಯ ಅಮಿತ್ ಷಾ ಮತ್ತು ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದರು.

ಇಲ್ಲಿ ಬುಧವಾರ ನಡೆದ ನಾಲ್ಕು ಜಿಲ್ಲೆಗಳ ಪ್ರಣಾಳಿಕೆ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ‘ಅಮಿತ್ ಷಾ, ಯಡಿಯೂರಪ್ಪ ಇಬ್ಬರ ಮೇಲೂ ಪ್ರಕರಣಗಳಿವೆ. ಅವರು ಜಾಮೀನಿನ ಮೇಲೆ ಹೊರಗಿದ್ದಾರೆ. ಯಾವಾಗ ಬೇಕಾದರೂ ಜೈಲಿಗೆ ಹೋಗಬಹುದು. ಇಂಥ ಅಮಿತ್ ಷಾ, ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡಲು ಹೊರಟಿದ್ದಾರೆ. ಕರ್ನಾಟಕದ ಜನ ಸುಸಂಸ್ಕೃತರು, ವಿಚಾರವಂತರು. ಇಂಥವರನ್ನು ಆಯ್ಕೆ ಮಾಡುವುದಿಲ್ಲ ಎಂಬ ವಿಶ್ವಾಸವಿದೆ' ಎಂದರು.

'ಗುಜರಾತ್ ಮತ್ತು ಕರ್ನಾಟಕದಲ್ಲಿ ಬಿಜೆಪಿ ಆಡಳಿತವಿದ್ದಾಗಲೇ ಈ ಇಬ್ಬರು ನಾಯಕರು ಜೈಲಿಗೆ ಹೋಗಿದ್ದು. ಅವರನ್ನು ಜೈಲಿಗೆ ಕಳಿಸಿದ್ದು ಅವರ ಪಕ್ಷದವರೇ. ಹಾಗಾಗಿ ತಮ್ಮ ನಾಯಕರನ್ನು ಜೈಲಿಗೆ ಕಳುಹಿಸುವುದಿಲ್ಲ ಎಂದು ಈ ಪರಿವರ್ತನಾ ಯಾತ್ರೆ ಮೂಲಕ ಆ ಪಕ್ಷದವರು ಗ್ಯಾರಂಟಿ ಕೊಡಬೇಕು' ಎಂದು ವ್ಯಂಗ್ಯವಾಡಿದರು. ಬಿಜೆಪಿಯನ್ನು ಟೀಕಿಸುತ್ತಲೇ ಜೆಡಿಎಸ್‌ ಜತೆಗಿನ ಹಳೆಯ ಸಖ್ಯವನ್ನು ವಿಶ್ಲೇಷಿಸಿದ ಮೊಯಿಲಿ, ‘ಜೆಡಿಎಸ್‍ನವರದ್ದು ಒಂಥರಾ ಕೋಮುವಾದಿ ಜಾತ್ಯತೀತ ತತ್ವ’ ಎಂದರು.

‘ಹಿಂದುಳಿದ ವರ್ಗದವರ ಸಂವಿಧಾನ ಬೇಡವೆಂದ ಸಿದ್ದರಾಮಯ್ಯ’

ಅಹಿಂದ ಉದ್ಧಾರದ ಜಪ ಮಾಡುತ್ತಾ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ, ಹಿಂದುಳಿದ ವರ್ಗದವರ ಸಂವಿಧಾನ ರಚನೆಯ ಪ್ರಸ್ತಾವ ಬಂದಾಗ, ದೆಹಲಿಯಲ್ಲಿ ಅದನ್ನು ವಿರೋಧಿಸಿ ಮತ ಹಾಕಿದ್ದರು. ಅವರದ್ದು ಮತಬ್ಯಾಂಕ್ ರಾಜಕಾರಣ ಎಂದು ಕುಟುಕಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry