ಹಣ ದುರ್ಬಳಕೆಗೆ ಕಡಿವಾಣ

7

ಹಣ ದುರ್ಬಳಕೆಗೆ ಕಡಿವಾಣ

Published:
Updated:
ಹಣ ದುರ್ಬಳಕೆಗೆ ಕಡಿವಾಣ

ಬೆಂಗಳೂರು: ಚುನಾವಣೆಯಲ್ಲಿ ಹಣ ದುರ್ಬಳಕೆಗೆ ಕಡಿವಾಣ ಹಾಕಲಾಗುವುದು ಎಂದು ಕೇಂದ್ರ ಚುನಾವಣಾ ಆಯೋಗದ ಉಪ ಆಯುಕ್ತ ಉಮೇಶ್‌ ಸಿನ್ಹಾ ತಿಳಿಸಿದರು.

ಚುನಾವಣೆ ಸಿದ್ಧತೆ ಬಗ್ಗೆ ರಾಜ್ಯದ ಅಧಿಕಾರಿಗಳ ಜತೆ ಸಭೆಯ ಬಳಿಕ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ ಈ ವಿಷಯ ತಿಳಿಸಿದರು. ಚುನಾವಣೆಯಲ್ಲಿ ಹಣದ ದುರ್ಬಳಕೆ ತಡೆಯಲು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗಿದೆ. ನಗದು ಹಂಚುವುದು, ಕೂಪನ್‌, ಟೋಕನ್‌ ವಿತರಣೆ ಸೇರಿದಂತೆ ಎಲ್ಲ ಬಗೆಯ ಆಮಿಷಗಳನ್ನು ಒಡ್ಡುವುದರ ಮೇಲೆ ಆಯೋಗ ಕಟ್ಟುನಿಟ್ಟಿನ ನಿಗಾ ಇಡಲಿದೆ. ಹಣ ಹಂಚುವುದನ್ನು ಭ್ರಷ್ಟಾಚಾರ ಎಂದೇ ಪರಿಗಣಿಸಿ ಕ್ರಮ ಜರುಗಿಸಲಾಗುವುದು ಎಂದರು.

ಆದಾಯ ತೆರಿಗೆ ಇಲಾಖೆಯ ನೆರವಿನೊಂದಿಗೆ ರಾಜ್ಯದ ಎಲ್ಲ ವಿಮಾನ ನಿಲ್ದಾಣಗಳಲ್ಲಿ ವಿಶೇಷ ಕೇಂದ್ರಗಳನ್ನು ತೆರೆಯಲಾಗುವುದು. ಇವು ವಿಮಾನ ನಿಲ್ದಾಣದ ಮೂಲಕ ನಡೆಯಬಹುದಾದ ಹಣ ಸಾಗಾಣಿಕೆ ಮೇಲೆ ನಿಗಾ ಇಡಲು ಅನುಕೂಲವಾಗಲಿದೆ ಎಂದು ಅವರು ಹೇಳಿದರು.

ಅಕ್ರಮವಾಗಿ ಹಣ ಸಾಗಿಸುವುದರ ಮೇಲೆ ಕಣ್ಣಿಡಲು ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ತಲಾ ಆರು ವಿಶೇಷ ತಂಡಗಳನ್ನು ನಿಯೋಜಿಸಲಾಗುವುದು. ಅಂತರರಾಜ್ಯ ಗಡಿಗಳಲ್ಲಿ ಹಣ ಮತ್ತು ಮದ್ಯದ ತಪಾಸಣೆ ನಡೆಸಲಾಗುವುದು. ಇದಕ್ಕೆ ಆದಾಯ ತೆರಿಗೆ ಮತ್ತು ಅಬಕಾರಿ ಇಲಾಖೆಗಳ ನೆರವು ಪಡೆಯಲಾಗುವುದು. ಎಲ್ಲ ತಪಾಸಣಾ ಕೇಂದ್ರಗಳಲ್ಲೂ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗುವುದು ಎಂದು ತಿಳಿಸಿದರು.

ದಿನಾಂಕ ನಿಗದಿ ಈಗಲೇ ಇಲ್ಲ:  ರಾಜ್ಯದ ಹಬ್ಬ, ಜಾತ್ರೆ, ಪರೀಕ್ಷೆ ದಿನಗಳನ್ನು ನೋಡಿಕೊಂಡು ಚುನಾವಣಾ ದಿನಾಂಕವನ್ನು ನಿಗದಿ ಮಾಡಲಾಗುವುದು. ಈ ಬಗ್ಗೆ ರಾಜ್ಯದ ಅಧಿಕಾರಿಗಳಿಂದ ಮಾಹಿತಿ ಪಡೆಯಲಾಗಿದೆ. ಅದಕ್ಕೂ ಮುನ್ನ ಮುಖ್ಯ ಚುನಾವಣಾ ಆಯುಕ್ತರು ಭೇಟಿ ನೀಡುತ್ತಾರೆ. ಯಾವಾಗ ಮತ್ತು ಎಷ್ಟು ಹಂತಗಳಲ್ಲಿ ಮತದಾನ ನಡೆಸಬೇಕು ಎಂಬುದನ್ನು ಸೂಕ್ತ ಸಮಯದಲ್ಲಿ ಆಯೋಗ ನಿರ್ಧರಿಸುತ್ತದೆ ಎಂದು ಉಮೇಶ್‌ ಸಿನ್ಹಾ ತಿಳಿಸಿದರು.

ನಗರದ ಎರಡು ಬಡಾವಣೆಗಳಲ್ಲಿ ಬಾಂಗ್ಲಾದೇಶದ ಅಕ್ರಮ ವಲಸಿಗರನ್ನು ಮತದಾರರ ಪಟ್ಟಿಗೆ ಸೇರಿಸುತ್ತಿದ್ದಾರೆ ಎಂಬ ದೂರು ಬಂದಿದೆ. ಈ ದೂರಿನ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು. ಅರ್ಹ ವ್ಯಕ್ತಿಯನ್ನು ಮತದಾರರ ಪಟ್ಟಿಯಿಂದ ಕೈಬಿಟ್ಟು ಹೋಗದಂತೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.

ಚುನಾವಣೆ ಪ್ರಕ್ರಿಯೆ ಪೂರ್ಣ ಡಿಜಿಟಲೀಕರಣ

ಬೆಂಗಳೂರು: ಮತದಾರರ ಪಟ್ಟಿಗೆ ಹೆಸರು ಸೇರಿಸುವುದರಿಂದ ಹಿಡಿದು ಮತ ಎಣಿಕೆಯವರೆಗೆ ಎಲ್ಲ ಪ್ರಕ್ರಿಯೆಗಳನ್ನು ಡಿಜಿಟಲೀಕರಣಗೊಳಿಸಲಾಗುವುದು ಎಂದು ಕೇಂದ್ರ ಉಪ ಚುನಾವಣಾ ಆಯುಕ್ತ ಉಮೇಶ್‌ ಸಿನ್ಹಾ ತಿಳಿಸಿದರು.

ಚುನಾವಣಾ ಪೂರ್ವ ಸಿದ್ಧತೆ ಕುರಿತು ಹಿರಿಯ ಅಧಿಕಾರಿಗಳ ಜತೆ ಸಭೆಯ ಬಳಿಕ ಮಾತನಾಡಿದ ಅವರು, ಆಯೋಗದೊಡನೆ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ವ್ಯವಹರಿಸುವಾಗ ಮಾಹಿತಿತಂತ್ರಜ್ಞಾನ ಸಾಧನ ಬಳಸಬೇಕು ಎಂದರು.

ಮಾಹಿತಿ ತಂತ್ರಜ್ಞಾನ ಬಳಕೆ:  ಸಾರ್ವಜನಿಕರು, ಅಭ್ಯರ್ಥಿಗಳು, ರಾಜಕೀಯ ಪಕ್ಷಗಳು ಯಾವುದೇ ಬಗೆಯ ದೂರುಗಳನ್ನು ದಾಖಲಿಸಬಹುದು. ಇವೆಲ್ಲವುಗಳಿಗೆ ನಿಗದಿತ ಕಾಲಮಿತಿಯಲ್ಲಿ ಪರಿಹಾರ ನೀಡಲಾಗುತ್ತದೆ. ಇದಕ್ಕಾಗಿ ಏಕ ಗವಾಕ್ಷಿ ವ್ಯವಸ್ಥೆ ಮಾಡಲಾಗಿದೆ ಎಂದರು.

ದೂರುಗಳು ಮತ್ತು ಅಹವಾಲು ಸಲ್ಲಿಸಲು ಸ್ಥಿರ ದೂರವಾಣಿ, ಮೊಬೈಲ್‌,  ಇಮೇಲ್‌, ವಾಟ್ಸ್‌ಆ್ಯಪ್‌ಗಳನ್ನು ಬಳಸಿಕೊಳ್ಳಲಾಗುತ್ತದೆ. ರಾಜಕೀಯ ಪಕ್ಷಗಳ ರಾಷ್ಟ್ರೀಯ ನಾಯಕರ ಸಮಾವೇಶ, ರ‍್ಯಾಲಿ, ರೋಡ್‌ ಶೋಗಳ ಆಯೋಜನೆಗೆ ಅನುಮತಿ, ಪ್ರಚಾರಕ್ಕೆ ಹೆಲಿಕಾಪ್ಟರ್‌ ಸೇರಿದಂತೆ ಎಲ್ಲ ಬಗೆಯ ವಾಹನ ಬಳಕೆಗೆ ಅನುಮತಿ ಪಡೆಯಲು ಈ ಎಲೆಕ್ಟ್ರಾನಿಕ್‌ ಸಾಧನಗಳನ್ನು ಬಳಸಿಕೊಳ್ಳಬಹುದು. ಅನುಮತಿಗಾಗಿ ಯಾವುದೇ ಸಮಯದಲ್ಲಾದರೂ ವಿವರಗಳೊಂದಿಗೆ ಮನವಿ ಸಲ್ಲಿಸಬಹುದಾಗಿದೆ. ಸಮಾವೇಶ, ರ‍್ಯಾಲಿ, ರೋಡ್‌ ಶೋಗಳಿಗೆ ಯಾರು ಮೊದಲು ಅನುಮತಿ ಕೇಳುತ್ತಾರೋ ಅವರಿಗೆ ನೀಡಲಾಗುತ್ತದೆ.  ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಸೇರಿದಂತೆ ಯಾವುದೇ ದೂರುಗಳನ್ನು ಸಲ್ಲಿಸಬಹುದು.ಇವುಗಳಿಗೆ ತಕ್ಷಣವೇ ಪರಿಹಾರ ನೀಡುತ್ತೇವೆ ಎಂದರು.

ಇಟಿಪಿಬಿ ವ್ಯವಸ್ಥೆ: ಈ ಬಾರಿ ಅಂಚೆ ಮತವನ್ನು ‘ಎಲೆಕ್ಟ್ರಾನಿಕಲಿ ಟ್ರಾನ್ಸ್‌ಮಿಟೆಡ್‌ ಪೋಸ್ಟಲ್‌ ಬ್ಯಾಲೆಟ್’ ವ್ಯವಸ್ಥೆ ಮೂಲಕ ಕಳುಹಿಸಬಹುದು. ಕರ್ನಾಟಕದಲ್ಲಿ ಈ ರೀತಿ ಮತದಾರರ ಸಂಖ್ಯೆ 25,000. ಅವರು ದೇಶ–ವಿದೇಶಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಮತ್ತೊಬ್ಬ ಉಪ ಚುನಾವಣಾ ಆಯುಕ್ತ ಸಂದೀಪ್‌ ಸಕ್ಸೇನಾ ತಿಳಿಸಿದರು.

ಡಿಜಿಟಲ್‌ ಮ್ಯಾಪಿಂಗ್‌: ಯಾವುದೇ ಒಬ್ಬ ಮತದಾರ ಮತಗಟ್ಟೆಗೆ ತೆರಳಿ, ಮತದಾನ ಮಾಡುವ ಮೊದಲು, ತಾನು ಮತದಾನ ಮಾಡುವ ಮತಗಟ್ಟೆ ಹೇಗಿದೆ. ಅಲ್ಲಿ ಯಾವ ವ್ಯವಸ್ಥೆಗಳು ಲಭ್ಯ ಇವೆ. ಅಂಗವಿಕಲರಿಗೆ ಗಾಲಿ ಕುರ್ಚಿ ಇದೆಯೇ ಹೀಗೆ ಹಲವು ವಿವರಗಳನ್ನು ಮನೆಯಲ್ಲಿ ಕುಳಿತು ವೀಕ್ಷಿಸಬಹುದು. ಇದಕ್ಕಾಗಿ ಜಿಐಎಸ್‌ ವೇದಿಕೆ (ಜಿಯಾಗ್ರಾಫಿಕ್‌ ಇನ್‌ಫರ್ಮೇಷನ್‌ ಸಿಸ್ಟಮ್‌) ಸೃಷ್ಟಿಸಲಾಗಿದೆ. ಈ ರೀತಿಯ ಹಲವು ಅಪ್ಲಿಕೇಷನ್‌ಗಳನ್ನು ಚುನಾವಣಾ ವ್ಯವಸ್ಥೆ ಆಧುನೀಕರಣಕ್ಕೆ ಬಳಸಲಾಗಿದೆ ಎಂದರು. ‘No voters to be left behind’ ಎಂಬುದು ಈ ಚುನಾವಣೆಯ ಘೋಷವಾಕ್ಯ ಎಂದೂ ಅವರು ತಿಳಿಸಿದರು.

ಮಾಹಿತಿಗಾಗಿ ಆ್ಯಪ್‌:

ಮತದಾರರ ಪಟ್ಟಿಯಲ್ಲಿ ಹೆಸರು ಇದೆಯೆ ಎಂಬ ಬಗ್ಗೆ ತಿಳಿದುಕೊಳ್ಳಲು ವಿಶೇಷ ಆ್ಯಪ್‌ ಸಿದ್ಧಪಡಿಸಲಾಗಿದೆ. ಮತದಾರರು ಪಟ್ಟಿಯಲ್ಲಿ ಹೆಸರು ಇದೆಯೆ ಎಂಬುದನ್ನು ಖಚಿತಪಡಿಸಲು, ಕ್ಷೇತ್ರ, ಮತಗಟ್ಟೆ ವಿವರ ಪಡೆಯಲು 9731979899 ಸಂಖ್ಯೆಗೆ KAEPIC < >ಆವರಣದೊಳಗೆ ಮತದಾರರ ಗುರುತಿನ ಚೀಟಿ ಸಂಖ್ಯೆ ಸೇರಿಸಿ ಎಸ್‌ಎಂಎಸ್‌ ಕಳುಹಿಸಬೇಕು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry