ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಲಿನ ಕೋಟ್ಯಂತರ ಮೊತ್ತದ ಪ್ರೋತ್ಸಾಹ ಧನ ವಾಪಸು

ಆಧಾರ್‌ ಜೋಡಣೆಗೆ ಅಸಹಕಾರ ತೋರುತ್ತಿರುವ ರಾಷ್ಟ್ರೀಯ ಬ್ಯಾಂಕುಗಳು– ಕೆಎಂಎಫ್ ಆರೋಪ
Last Updated 10 ಜನವರಿ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ಸರ್ಕಾರ ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನವಾಗಿ ಬಿಡುಗಡೆ ಮಾಡಿದ ಕೋಟ್ಯಂತರ ಹಣ, ಆಧಾರ್‌ ಜೋಡಣೆಯಾಗದ ಕಾರಣ ಉಳಿತಾಯ ಖಾತೆಗಳಿಗೆ ಜಮೆ ಆಗದೆ ವಾಪ‍ಸ್‌ ಬಂದಿದೆ.

ಫಲಾನುಭವಿಗಳ ಖಾತೆಗೆ ಆಧಾರ್‌ ಜೋಡಿಸಲು ರಾಷ್ಟ್ರೀಯ ಬ್ಯಾಂಕುಗಳು ಹಿಂಜರಿಯುತ್ತಿವೆ ಎಂದು ಕರ್ನಾಟಕ ಹಾಲು ಉತ್ಪಾದಕರ ಮಹಾ ಮಂಡಳ (ಕೆಎಂಎಫ್‌) ಆರೋಪ ಮಾಡಿದೆ.

2016ರ ಆಗಸ್ಟ್‌ನಿಂದ 2017ರ ಸೆಪ್ಟೆಂಬರ್‌ವರೆಗೆ ಬೆಂಗಳೂರು ಡೇರಿಯ (ಬೆಂಗಳೂರು ಗ್ರಾಮಾಂತರ, ನಗರ ಮತ್ತು ರಾಮನಗರ ಜಿಲ್ಲೆ) 1.20 ಲಕ್ಷ ಫಲಾನುಭವಿಗಳಿಗೆ ₹ 279.36 ಕೋಟಿ ಪ್ರೋತ್ಸಾಹ ಧನ ಬಿಡುಗಡೆ ಆಗಿದೆ. ಬ್ಯಾಂಕ್‌ ಖಾತೆಗೆ ಆಧಾರ್‌ ಲಿಂಕ್‌ ಇಲ್ಲದ ಕಾರಣಕ್ಕೆ ಈ ಮೊತ್ತದಲ್ಲಿ ₹ 4.50 ಕೋಟಿ ವಾಪಸು ಬಂದಿದೆ.

ಆಧಾರ್‌ ಜೋಡಿಸಿದ ಫಲಾನುಭವಿಗಳ ಖಾತೆಗೆ ಮಾತ್ರ ಪ್ರತಿ ಲೀಟರ್‌ ಹಾಲಿಗೆ ತಲಾ ₹ 5ರಂತೆ ಸರ್ಕಾರ ಬಿಡುಗಡೆ ಮಾಡಿದ ಹಣ ತಲುಪುತ್ತಿದೆ. ಆದರೆ, ರಾಜ್ಯದಾದ್ಯಂತ 70 ಸಾವಿರಕ್ಕೂ ಹೆಚ್ಚು ಹಾಲು ಉತ್ಪಾದಕರು ಆಧಾರ್‌ ಸಂಖ್ಯೆಯನ್ನು ಇನ್ನೂ ಬ್ಯಾಂಕು ಖಾತೆಗೆ ಜೋಡಿಸಿಲ್ಲ.

ಎಸ್‌ಬಿಐ, ಕೆನರಾ, ಸಿಂಡಿಕೇಟ್‌ ಸೇರಿದಂತೆ ವಿವಿಧ ರಾಷ್ಟ್ರೀಯ ಬ್ಯಾಂಕುಗಳು ಆಧಾರ್‌ ಜೋಡಿಸಲು ತೋರಿಸುತ್ತಿರುವ ನಿರ್ಲಕ್ಷದ ಬಗ್ಗೆ ಸಂಪೂರ್ಣ ಮಾಹಿತಿಯೊಂದಿಗೆ ಪಶು ಸಂಗೋಪನಾ ಇಲಾಖೆ ಆಯುಕ್ತರಿಗೆ ಕೆಎಂಎಫ್‌ ಪತ್ರ ಬರೆದಿದೆ.

ರಾಜ್ಯದಲ್ಲಿರುವ 14 ಹಾಲು ಉತ್ಪಾದಕರ ಒಕ್ಕೂಟಗಳಲ್ಲಿ 8.97 ಲಕ್ಷ ಸದಸ್ಯರಿದ್ದಾರೆ. ಈ ಪೈಕಿ, ಶೇ 10ರಷ್ಟು ಸದಸ್ಯರು ಬ್ಯಾಂಕು ಅಧಿಕಾರಿಗಳ ಅಸಹಕಾರದಿಂದ ಆಧಾರ್‌ ಜೋಡಿಸಿಕೊಳ್ಳಲು ಸಾಧ್ಯ ಆಗಿಲ್ಲ. ಈ ವಿಷಯವನ್ನು ರಾಜ್ಯಮಟ್ಟದ ಬ್ಯಾಂಕರ್ಸ್‌ ಸಮಿತಿ (ಎಸ್‌ಎಲ್‌ಬಿಸಿ) ಗಮನಕ್ಕೆ ತರಬೇಕು ಮತ್ತು ಸೂಕ್ತ ನಿರ್ದೇಶನ ನೀಡಬೇಕು ಎಂದು ಪತ್ರದಲ್ಲಿ ಕೋರಲಾಗಿದೆ.

‘ಪ್ರಜಾವಾಣಿ’ ಜೊತೆ ಮಾತನಾಡಿದ ಕೆಎಂಎಫ್‌ ಜಂಟಿ ನಿರ್ದೇಶಕ ಡಾ. ಸುಬ್ರಾಯ ಭಟ್, 2016ರ ಆಗಸ್ಟ್‌ನಿಂದ ಫಲಾನುಭವಿಗಳ ಆಧಾರ್‌ ಸಂಖ್ಯೆ ಜೋಡಣೆಯಾಗಿರುವ ಬ್ಯಾಂಕು ಖಾತೆಗಳಿಗೆ ಆಯಾ ಒಕ್ಕೂಟಗಳ ಮೂಲಕ ಪ್ರೋತ್ಸಾಹ ಧನ ಜಮೆ ಆಗುತ್ತಿದೆ. ಅಕ್ಟೋಬರ್‌ ತಿಂಗಳ ₹ 106.76 ಕೋಟಿಯನ್ನು ಇತ್ತೀಚೆಗೆ ಸರ್ಕಾರ ಬಿಡುಗಡೆ ಮಾಡಿದೆ ಎಂದರು.

ಪ್ರೋತ್ಸಾಹ ಧನ ನೇರವಾಗಿ ರೈತರಿಗೆ ತಲುಪಬೇಕು ಎಂಬ ಕಾರಣಕ್ಕೆ ಫಲಾನುಭವಿ ನೀಡಿದ ಆಧಾರ್‌ ಜೋಡಣೆ ಮಾಡಿದ ಖಾತೆಗೆ ಜಮೆ ಮಾಡಲಾಗುತ್ತಿದೆ. ಇನ್ನಷ್ಟು ಪಾರದರ್ಶಕವಾಗಿ ಹಣ ತಲುಪಿಸಬೇಕು ಎಂಬ ಕಾರಣಕ್ಕೆ ಮುಂದಿನ ತಿಂಗಳಿನಿಂದ ಆಧಾರ್‌ ಸಂಖ್ಯೆ, ಬ್ಯಾಂಕು ಖಾತೆ ಮತ್ತು ಫಲಾನುಭವಿ ಹೆಸರು ಈ ಮೂರೂ ಹೊಂದಾಣಿಕೆಯಾದರೆ ಮಾತ್ರ  ಜಮೆ ಆಗಲಿದೆ ಎಂದು ವಿವರಿಸಿದರು.

***

ಏರ್‌ಟೆಲ್‌ ಪೇಮೆಂಟ್ಸ್‌ ಬ್ಯಾಂಕ್‌ ಅವಾಂತರ: 
ಈ ಮಧ್ಯೆ, ಕಳೆದ ಮಾರ್ಚ್‌ ಮತ್ತು ಏಪ್ರಿಲ್‌ನಿಂದ ಪ್ರೋತ್ಸಾಹಕ ಧನ ಫಲಾನುಭವಿಗಳ ಅರಿವಿಗೆ ಬಾರದೆ ಏರ್‌ಟೆಲ್‌ ಪೇಮೆಂಟ್ಸ್‌ ಬ್ಯಾಂಕ್‌ ಖಾತೆಗೆ ಜಮೆ ಆಗುತ್ತಿರುವುದು ಕೆಎಂಎಫ್‌ ಗಮನಕ್ಕೆ ಬಂದಿದೆ.

ಅದರಲ್ಲೂ ಬೆಂಗಳೂರು ಹಾಲು ಒಕ್ಕೂಟದಲ್ಲಿ ಅತಿ ಹೆಚ್ಚು ಹಣ ಈ ಬ್ಯಾಂಕಿನ ಖಾತೆಗೆ ಜಮೆ ಆಗಿದ್ದರಿಂದ ಫಲಾನುಭವಿಗಳು ಕಂಗಾಲಾಗಿದ್ದಾರೆ. ಶಿವಮೊಗ್ಗ, ಹಾಸನ ಮತ್ತು ದಕ್ಷಿಣ ಕನ್ನಡ ಹಾಲು ಒಕ್ಕೂಟಗಳ ಸದಸ್ಯರ ಹಣವೂ ಈ ಖಾತೆಗಳಿಗೆ ಹೋಗಿದೆ.

ಈ ವಿಷಯ ಗೊತ್ತಾಗುತ್ತಿದ್ದಂತೆ ಬೆಂಗಳೂರು ಒಕ್ಕೂಟ ತನ್ನ ಸದಸ್ಯರಿಗೆ ಪ್ರೋತ್ಸಾಹ ಹಣ ಬಿಡುಗಡೆಯನ್ನು ಸ್ಥಗಿತಗೊಳಿಸಿತ್ತು. ಮೇ ತಿಂಗಳಲ್ಲಿ 2,339 (₹ 42.46 ಲಕ್ಷ) ಮತ್ತು ಜೂನ್‌ನಲ್ಲಿ 2,878 (₹ 58.12 ಲಕ್ಷ), ಜುಲೈನಲ್ಲಿ 3,569 (₹ 72.44 ಲಕ್ಷ) ಫಲಾನುಭವಿಗಳ ಹಣ ಏರ್‌ಟೆಲ್‌ ಪೇಮೆಂಟ್ಸ್‌ ಬ್ಯಾಂಕ್‌ಗೆ ಜಮೆ ಆಗದಂತೆ ತಡೆದಿತ್ತು.

ಸುಪ್ರೀಂ ಕೋರ್ಟ್ ತೀರ್ಪಿನ ಅನ್ವಯ ಭಾರತೀಯ ರಿಸರ್ವ್‌ ಬ್ಯಾಂಕು, ರಾಷ್ಟ್ರೀಯ ಪೇಮೆಂಟ್ಸ್‌ ಕಾರ್ಪರೇಷನ್‌ ಆಫ್‌ ಇಂಡಿಯಾ (ಎನ್‌ಪಿಸಿಐ) ಸದಸ್ಯತ್ವದಿಂದ ಏರ್‌ಟೆಲ್‌ ಪೇಮೆಂಟ್ಸ್‌ ಬ್ಯಾಂಕಿನ ಸದಸ್ಯತ್ವ ರದ್ದುಪಡಿಸಿದ ಬಳಿಕ, ಹಣ ಬಿಡುಗಡೆ ಮಾಡಲಾಗಿದೆ ಎಂದು ಬೆಂಗಳೂರು ಡೇರಿ ಉಪ ವ್ಯವಸ್ಥಾಪಕ ಬದ್ರೀನಾಥ್‌ ಮತ್ತು ರುದ್ರೇಶ್‌ ಮಾಹಿತಿ ನೀಡಿದರು.

‘ಫಲಾನುಭವಿ ಯಾವ ಖಾತೆಗೆ ಹಿಂದೆ ಆಧಾರ್‌ ಲಿಂಕ್‌ ಆಗಿತ್ತೋ ಅದಕ್ಕೆ ಏರ್‌ಟೆಲ್‌ ಪೇಮೆಂಟ್ಸ್‌ ಬ್ಯಾಂಕ್‌ ಹಣ ಹಿಂದಿರುಗಿಸುತ್ತಿದೆ. ಫಲಾನುಭವಿಗಳು ಈ ಬ್ಯಾಂಕಿನ ಫ್ರಾಂಚೈಸಿಗೆ ತೆರಳಿಯೂ ಹಣ ವಾಪಸು ಪಡೆದುಕೊಳ್ಳಬಹುದು. ಶೇ 80ರಷ್ಟು ಫಲಾನುಭವಿಗಳಿಗೆ ಹಣ ಮರಳಿ ಸಿಕ್ಕಿದೆ. ಈ ಅವಾಂತರದ ಬಗ್ಗೆ ಚೆನ್ನೈನಲ್ಲಿರುವ ಎನ್‌ಪಿಸಿಐ ಅಧಿಕಾರಿಗಳಿಗೂ ತಿಳಿಸಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT