ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಾರಿಗೆ ಇಲಾಖೆಯಲ್ಲಿ ಮಹಿಳೆಯರಿಗೆ ಆದ್ಯತೆ’

Last Updated 11 ಜನವರಿ 2018, 8:29 IST
ಅಕ್ಷರ ಗಾತ್ರ

ಗಂಗಾವತಿ: ಸಾರಿಗೆ ಇಲಾಖೆಯಲ್ಲಿ ಮಹಿಳಾ ಉದ್ಯೋಗಿಗಳ ಸಂಖ್ಯೆ ಹೆಚ್ಚಳಕ್ಕೆ ಆದ್ಯತೆ ನೀಡಿದ್ದು, ಅವರಿಗೆ ಉಚಿತ ವಾಹನ ಚಾಲನಾ ತರಬೇತಿ ಮತ್ತು ಪರವಾನಗಿ ನೀಡಲಾಗುತ್ತಿದೆ ಎಂದು ಸಾರಿಗೆ ಸಚಿವ ಎಚ್.ಎಂ.ರೇವಣ್ಣ ಹೇಳಿದರು.

ಶಾಸಕ ಇಕ್ಬಾಲ್ ಅನ್ಸಾರಿ ಅವರ ನಿವಾಸಕ್ಕೆ ಮಂಗಳವಾರ ಭೇಟಿ ನೀಡಿದ್ದ ವೇಳೆ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಚೀನಾ ಮತ್ತು ಯುರೋಪ್‌ ರಾಷ್ಟ್ರಗಳ ಸಾರಿಗೆ ಇಲಾಖೆಯಲ್ಲಿ ವಿಶ್ವದಲ್ಲಿಯೇ ಅತಿ ಹೆಚ್ಚು ಮಹಿಳೆಯರು ಸೇವೆ ಸಲ್ಲಿಸುತ್ತಿದ್ದಾರೆ. ಇದೇ ಮಾದರಿಯಲ್ಲಿ ಮುಂದಿನ ದಿನಗಳಲ್ಲಿ ನಮ್ಮ ರಾಜ್ಯದಲ್ಲಿಯೂ ಬಸ್ ಚಾಲಕ, ನಿರ್ವಾಹಕ ಸೇರಿದಂತೆ ಇತರ ಹುದ್ದೆಗಳಿಗೂ ಮಹಿಳೆಯರನ್ನು ನೇಮಿಸಿಕೊಳ್ಳಲಾಗುವುದು ಎಂದರು.

ರೈತ ಸಾರಥಿ ಯೋಜನೆಯಲ್ಲಿ ಈಗಾಗಲೇ 2.75 ಲಕ್ಷ ರೈತರಿಗೆ ಕಡಿಮೆ ಶುಲ್ಕದಲ್ಲಿ ಟ್ರ್ಯಾಕ್ಟರ್ ಚಾಲನಾ ಪರವಾನಗಿ ನೀಡಲಾಗಿದೆ. ಇದಕ್ಕೆ ರಾಜ್ಯ ಸರ್ಕಾರ ₹2 ಕೋಟಿ ತೆಗೆದಿರಿಸಿದೆ. ರಾಜ್ಯದಲ್ಲಿ ಮಹಾನಗರ, ನಗರ, ಪಟ್ಟಣಗಳಲ್ಲಿ ಮಾಲ್ ಮಾದರಿಯಲ್ಲಿ ವಾಣಿಜ್ಯ ಮಳಿಗೆಗಳೊಂದಿಗೆ ಹೈಟೆಕ್ ಬಸ್ ನಿಲ್ದಾಣ ನಿರ್ಮಿಸಲಾಗುವುದು ಎಂದರು.

ಅಪಘಾತ ತಡೆಗಟ್ಟಲು ನೂತನವಾಗಿ ಅಸ್ತಿತ್ವಕ್ಕೆ ತರಲಾದ ರಸ್ತೆ ಸುರಕ್ಷಾ ಪ್ರಾಧಿಕಾರಕ್ಕೆ ₹200ಕೋಟಿ ಮೀಸಲಿಡಲಾಗಿದೆ. ಸಹಾಯಕ ಮುಖ್ಯ ಕಾರ್ಯ ನಿರ್ವಾಹಕ ಹುದ್ದೆ ಸೃಷ್ಟಿಸಲಾಗಿದೆ. ರಸ್ತೆ ಸುರಕ್ಷಾ ಶಿಕ್ಷಣ ನೀಡಲು ಆದ್ಯತೆ ನೀಡಲಾಗಿದೆ. 1ರಿಂದ 7ನೇ ತರಗತಿ ಮಕ್ಕಳಿಗೆ ಉಚಿತ ಬಸ್‌ ಪಾಸ್ ನೀಡಲಾಗಿದೆ ಎಂದರು.

ಅನ್ಸಾರಿ ಮೂಲ ಕಾಂಗ್ರೆಸ್ಸಿಗ: ಶಾಸಕ ಇಕ್ಬಾಲ್‌ ಅನ್ಸಾರಿ ಮೂಲ ಕಾಂಗ್ರೆಸ್ಸಿಗ. ಕಾರಣಾಂತರಿದಂದ ಅವರು ಬೇರೆ ಪಕ್ಷಕ್ಕೆ ಹೋಗಿದ್ದರು. ಈಗ ಮತ್ತೆ ಪಕ್ಷಕ್ಕೆ ಬರುವುದರಿಂದ ಗಂಗಾವತಿ ಕ್ಷೇತ್ರ ಮಾತ್ರವಲ್ಲ ಇಡೀ ಜಿಲ್ಲೆಯಲ್ಲಿ ಪಕ್ಷ ಬಲಿಷ್ಠವಾಗಲಿದೆ ಎಂದು ಸಾರಿಗೆ ಸಚಿವ ಎಚ್.ಎಂ. ರೇವಣ್ಣ ಹೇಳಿದರು.

ಕೊಪ್ಪಳಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಶಾಸಕ ಇಕ್ಬಾಲ್ ಅನ್ಸಾರಿ ನಿವಾಸಕ್ಕೆ ಭೇಟಿ ನೀಡಿ ಅವರೊಂದಿಗೆ ಮಾತುಕತೆ ನಡೆಸಿದರು.

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಎಲ್ಲಾ ವರ್ಗದ ಜನರಿಗಾಗಿ ಅನೇಕ ಜನಪರ ಯೋಜನೆಗಳನ್ನು ಜಾರಿಗೊಳಿಸಿದೆ. ಭ್ರಷ್ಟಾಚಾರ ರಹಿತ ಆಡಳಿತ ನೀಡಿದೆ ಎಂದು ಹೇಳಿದರು.

ಮಲಗಿರುವ ಬಿಜೆಪಿ ನಾಯಕರನ್ನು ಎಬ್ಬಿಸಲು ಅಮಿತ್‌ ಷಾ ರಾಜ್ಯಕ್ಕೆ ಬರುತ್ತಿದ್ದಾರೆ. ಬಿಜೆಪಿಯವರು ಕೊಲೆ ವಿಷಯದಲ್ಲಿ ಕೀಳು ಮಟ್ಟದ ರಾಜಕೀಯ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ನಗರಸಭೆ ಅಧ್ಯಕ್ಷೆ ಸಣ್ಣ ಹುಲಿಗೆಮ್ಮ, ಉಪಾಧ್ಯಕ್ಷ ಕಮಲಿಬಾಬಾ, ಜಿಲ್ಲಾ ಪಂಚಾಯಿತಿ ಸದಸ್ಯ ಅಮರೇಶ ಗೋನಾಳ, ಪ್ರಮುಖರಾದ ಮನೋಹರ ಸ್ವಾಮಿ ಹಿರೇಮಠ, ನಾಗರಾಜ ನಂದಾಪೂರ, ರಾಜುನಾಯಕ, ಬಸವರಾಜ ಐಲಿ, ಎಸ್.ಬಿ.ಖಾದ್ರಿ, ದೇವಪ್ಪ ಕಾಮದೊಡ್ಡಿ, ಕಾಸೀಂಸಾಬ್ ಗದ್ವಾಲ್, ರುದ್ರೇಶ ಡ್ಯಾಗಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT