ಸಾಧನಾ ಸಮಾವೇಶಕ್ಕೆ ಅಧಿಕಾರಿಗಳ ದುರ್ಬಳಕೆ: ಸಿ.ಎಂ ವಿರುದ್ಧ ಎಚ್‌.ಡಿ. ದೇವೇಗೌಡ ಟೀಕೆ

7

ಸಾಧನಾ ಸಮಾವೇಶಕ್ಕೆ ಅಧಿಕಾರಿಗಳ ದುರ್ಬಳಕೆ: ಸಿ.ಎಂ ವಿರುದ್ಧ ಎಚ್‌.ಡಿ. ದೇವೇಗೌಡ ಟೀಕೆ

Published:
Updated:
ಸಾಧನಾ ಸಮಾವೇಶಕ್ಕೆ ಅಧಿಕಾರಿಗಳ ದುರ್ಬಳಕೆ: ಸಿ.ಎಂ ವಿರುದ್ಧ ಎಚ್‌.ಡಿ. ದೇವೇಗೌಡ ಟೀಕೆ

ಬೇಲೂರು: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರ್ಕಾರಿ ಅಧಿಕಾರಿಗಳು ಮತ್ತು ನೌಕರರನ್ನು ದುರ್ಬಳಕೆ ಮಾಡಿಕೊಂಡು ಸಾಧನಾ ಸಮಾವೇಶ ನಡೆಸುತ್ತಿದ್ದಾರೆ. ಒಬ್ಬ ವ್ಯಕ್ತಿಯ ಪ್ರಚಾರಕ್ಕಾಗಿ ಸರ್ಕಾರದ ಹಣ ಬಳಕೆ ಮಾಡಲಾಗುತ್ತಿದೆ’ ಎಂದು ಸಂಸದ ಎಚ್‌.ಡಿ.ದೇವೇಗೌಡ ಆರೋಪಿಸಿದರು.

ಇಲ್ಲಿನ ಒಕ್ಕಲಿಗರ ಸಮುದಾಯ ಭವನದಲ್ಲಿ ಬುಧವಾರ ಏರ್ಪಡಿಸಿದ್ದ ಜೆಡಿಎಸ್‌ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ‘ಸಾಧನಾ ಸಮಾವೇಶಕ್ಕೆ ಜಿಲ್ಲಾಧಿಕಾರಿ ಸೇರಿದಂತೆ ತಾಲ್ಲೂಕಿನ ಎಲ್ಲಾ ಅಧಿಕಾರಿಗಳು ಬರಲೇ ಬೇಕು ಎಂದು ಕಡ್ಡಾಯ ಮಾಡಿದ್ದಾರೆ. ಸರ್ಕಾರಿ ಹಣದಲ್ಲಿ ಪಕ್ಷದ ಪ್ರಚಾರ ನಡೆಸುತ್ತಿದ್ದಾರೆ. ತಮ್ಮ ಅಧಿಕಾರದ ಅವಧಿ ಮುಗಿಯುವ ಸಂದರ್ಭದಲ್ಲಿ ಪ್ರತಿ ತಾಲ್ಲೂಕಿನಲ್ಲಿ ಸಾವಿರಾರು ಕೋಟಿ ರೂಪಾಯಿ ಕಾಮಗಾರಿಗಳಿಗೆ ಶಿಲಾನ್ಯಾಸ ಮಾಡುತ್ತಿದ್ದಾರೆ. ಇವರ ಮಾತುಗಳನ್ನು ನಂಬಲು ಜನರು ದಡ್ಡರಲ್ಲ. ಜನರಿಗೆ ವಂಚನೆ ಮಾಡಲು ಸಾಧ್ಯವಿಲ್ಲ. ಸರ್ಕಾರದ ಸಾಧನೆಗಳ ಪ್ರಚಾರಕ್ಕೆ ಮಾಧ್ಯಮಗಳಿಗೆ ಜಾಹೀರಾತು ನೀಡಲು ₹ 650 ಕೋಟಿ ವೆಚ್ಚ ಮಾಡುವ ಮೂಲಕ ಬೊಕ್ಕಸದ ಹಣವನ್ನು ದುಂದು ವೆಚ್ಚ ಮಾಡುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ರಾಜ್ಯದಲ್ಲಿ ಜೆಡಿಎಸ್ ಎಲ್ಲಿದೆ? ಎಂದು ಸಿದ್ದರಾಮಯ್ಯ ಹೇಳುತ್ತಾರೆ. ಇವರ ಮಾತಿಗೆ ನಾಡಿನ ಜನ ಉತ್ತರ ಕೊಡುತ್ತಾರೆ. ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡುವ ಆಸೆ ನನಗಿದೆ. ಆದರೆ , ಸಿದ್ದರಾಮಯ್ಯ ಅವರು ತಮ್ಮ ಮಗ ತೀರಿಹೋದ ತಕ್ಷಣ ಕ್ಷೇತ್ರದ ಉಸ್ತುವಾರಿ ನೋಡಿಕೊಳ್ಳಲು ಮತ್ತೊಬ್ಬ ಮಗನನ್ನು ನೇಮಸಿದ್ದು ಮರೆತು ಹೋಯಿತೇ’ ಎಂದು ಪ್ರಶ್ನಿಸಿದರು.

ಶಾಸಕ ಎಚ್‌.ಡಿ.ರೇವಣ್ಣ ‘ಜೆಡಿಎಸ್ ಹೋರಾಟದ ಪರಿಣಾಮ ಸರ್ಕಾರ ಎತ್ತಿನಹೊಳೆ ಯೋಜನೆ ಮೂಲಕ ಬೇಲೂರು ತಾಲ್ಲೂಕಿಗೆ ನೀರು ಹರಿಸಲು ಮಂಜೂರಾತಿ ನೀಡಿತು. ಚುನಾವಣೆ ಬಂತು ಎನ್ನುವ ಕಾರಣಕ್ಕೆ ಸರ್ಕಾರ ಆದೇಶ ಹೊರಡಿಸಿದೆ. ಜಮೀನು ಕಳೆದುಕೊಳ್ಳುವ ರೈತರಿಗೆ ಇಲ್ಲಿಯವರೆಗೆ ಪರಿಹಾರ ನೀಡಿಲ್ಲ’ ಎಂದು ಹೇಳಿದರು.

ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್‌.ಲಿಂಗೇಶ್‌, ತಾಲ್ಲೂಕು ಘಟಕದ ಅಧ್ಯಕ್ಷ ತೊ.ಚ.ಅನಂತಸುಬ್ಬರಾಯ, ಎಚ್‌ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಸತೀಶ್‌, ಉಪಾಧ್ಯಕ್ಷ ಎಂ.ಎ.ನಾಗರಾಜ್‌, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಪಿ.ಎಸ್‌.ಹರೀಶ್‌, ಪುರಸಭೆ ಅಧ್ಯಕ್ಷೆ ಭಾರತಿ ಅರುಣ್‌ ಕುಮಾರ್‌, ಜಿಲ್ಲಾ ಪಂಚಾಯಿತಿ ಸದಸ್ಯರಾದ ಲತಾ ಮಂಜೇಶ್ವರಿ, ರತ್ನಮ್ಮ ಐಸಾಮಿಗೌಡ, ಲತಾ ದಿಲೀಪ್‌, ಮುಖಂಡರಾದ ಬಿ.ಸಿ.ಮಂಜುನಾಥ್‌, ಬಿ.ಡಿ.ಚಂದ್ರೇಗೌಡ, ರಾಜಶೇಖರ್, ಜಿ.ಟಿ.ಇಂದಿರಾ, ಸಿ.ಎಚ್‌.ಮಹೇಶ್‌ ಇದ್ದರು.

ಪ್ರಾಣ ಕಳೆದುಕೊಳ್ಳುತ್ತಿರುವ ಅಮಾಯಕರು

ಬೇಲೂರು:
‘ಕಾಂಗ್ರೆಸ್ ಮತ್ತು ಬಿಜೆಪಿ ಸಂಘರ್ಷದಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅನೇಕ ಅಮಾಯಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ’ ಎಂದು ಎಚ್‌.ಡಿ.ದೇವೇಗೌಡ ಆರೋಪಿಸಿದರು.

ಎರಡು ರಾಷ್ಟ್ರೀಯ ಪಕ್ಷಗಳ ಪೈಪೋಟಿಯಿಂದ ಮಂಗಳೂರಿನಲ್ಲಿ ಇಬ್ಬರ ಹತ್ಯೆಯಾಗಿದೆ. ಬಷೀರ್ ಅಂತಹ ಅಮಾಯಕ ವ್ಯಕ್ತಿ ಬಲಿಯಾಗಿದ್ದೇ ಸಿದ್ದರಾಮಯ್ಯ ಅವರ 4.5 ವರ್ಷದ ಸಾಧನೆಯಾಗಿದೆ ಎಂದು ಟೀಕಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಯಾರ ಜೊತೆಯೂ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

*

ಕಿಂಗ್‌ ಮೇಕರ್‌ ಆಗಲು ಹೊರಟಿಲ್ಲ. ಜೆಡಿಎಸ್‌ ಈ ಬಾರಿ 120 ಸ್ಥಾನಗಳಲ್ಲಿ ಜಯಗಳಿಸಿ ಅಧಿಕಾರಕ್ಕೆ ಬರಲಿದೆ.

–ಎಚ್‌.ಡಿ.ದೇವೇಗೌಡ, ಸಂಸದ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry