ಗೆಲುವಿನ ಹಳಿ ಮೇಲೆ ಶ್ರೀಮುರಳಿ ಸವಾರಿ

7

ಗೆಲುವಿನ ಹಳಿ ಮೇಲೆ ಶ್ರೀಮುರಳಿ ಸವಾರಿ

Published:
Updated:
ಗೆಲುವಿನ ಹಳಿ ಮೇಲೆ ಶ್ರೀಮುರಳಿ ಸವಾರಿ

* ‘ಮಫ್ತಿ’ ಗೆಲುವಿನ ಖುಷಿ ಬಗ್ಗೆ ಹೇಳಿ.

‘ಮಫ್ತಿ’ ಚಿತ್ರ ಆರಂಭದ ವೇಳೆ ಮನಸ್ಸಿನ ಮೂಲೆಯಲ್ಲಿ ಸಣ್ಣ ಆತಂಕ ಇದ್ದಿದ್ದು ನಿಜ. ಜನರಿಗೆ ಈ ಚಿತ್ರ ಇಷ್ಟವಾಗಲಿದೆಯೇ? ಎಂಬ ಅಳುಕು ಕಾಡಿದ್ದು ಸುಳ್ಳಲ್ಲ. ಆದರೆ, ಜನರು ಇಷ್ಟಪಟ್ಟ ಪರಿ ಖುಷಿ ನೀಡಿದೆ. ಶಿವರಾಜ್‌ಕುಮಾರ್‌ ಅವರೊಟ್ಟಿಗೆ ಕೆಲಸ ಮಾಡಿದ ಅನುಭವ ನನ್ನ ಬದುಕಿನ ಪ್ರಮುಖ ಘಟ್ಟಗಳಲ್ಲೊಂದು. ಅದನ್ನು ಮರೆಯಲು ಸಾಧ್ಯವಿಲ್ಲ. ನಿರ್ದೇಶಕ ನರ್ತನ್ ನನ್ನ ಹಿಂದಿನ ಸಿನಿಮಾಗಳಲ್ಲಿ ಕೆಲಸ ಮಾಡಿದ್ದರು. ಅವರೊಟ್ಟಿಗೆ ಕೆಲಸ ಮಾಡುವ ಒಲವಿತ್ತು. ಅದು ‘ಮಫ್ತಿ’ಯಲ್ಲಿ ಈಡೇರಿತು.

* ಮುಂದಿನ ಚಿತ್ರಗಳಲ್ಲೂ ರಗಡ್‌ ಲುಕ್‌ ವರಸೆ ಮುಂದುವರಿಯಲಿದೆಯೇ?

ಚಿತ್ರದ ಸ್ಕ್ರಿಪ್ಟ್‌ ಮೇಲೆ ಇದು ಆಧರಿಸಿದೆ. ಅಂತಹ ಕಥೆ ಬಂದರೆ ಚಿತ್ರ ಮಾಡಲು ನಾನು ಸಿದ್ಧ. ಆದರೆ, ಇಂತಹ ಲುಕ್‌ನಿಂದ ಹೊರಬರುವ ತವಕ ನನ್ನಲ್ಲಿದೆ. ಹೊಸ ಚಿತ್ರ ನಿರ್ಮಾಣದ ಸಿದ್ಧತೆ ನಡೆಯುತ್ತಿದೆ. ‘ಮಫ್ತಿ’ಯಲ್ಲಿ ಕೆಲಸ ಮಾಡಿದ ತಂಡವೇ ಇಲ್ಲಿಯೂ ಇದೆ. ಸದ್ಯದಲ್ಲಿಯೇ ಈ ಬಗ್ಗೆ ಎಲ್ಲವನ್ನೂ ಹೇಳುತ್ತೇನೆ.

* ಹೊಸ ಚಿತ್ರ ಕೌಟುಂಬಿಕ ಆಧಾರಿತವೇ? ನಿಮ್ಮ ಹೊಸ ಇಮೇಜ್‌ ಪ್ರೇಕ್ಷಕ ಪ್ರಭುವಿಗೆ ಇಷ್ಟವಾಗಲಿದೆಯೇ?

ಯಾವುದೇ ಭಾಷೆ, ಧರ್ಮದ ಹಂಗಿಲ್ಲದೆ ಜನರು ಸಿನಿಮಾ ನೋಡುತ್ತಾರೆ. ಅದೇ ಸಿನಿಮಾಕ್ಕಿರುವ ಅದ್ಭುತ ಶಕ್ತಿ. ಜನರು ವಿವಿಧ ಭಾಷೆಯ ಚಿತ್ರಗಳನ್ನು ನೋಡುತ್ತಾರೆ. ಈ ಪಟ್ಟಿಯಲ್ಲಿ ವಿದೇಶಿ ಚಿತ್ರಗಳು ಇರುತ್ತವೆ. ಇಂಗ್ಲಿಷ್‌ ಅರ್ಥವಾಗದಿದ್ದರೂ ಆ ಭಾಷೆಯ ಚಿತ್ರ ನೋಡುತ್ತೇವೆ. ಕನ್ನಡದ ಚಿತ್ರಗಳನ್ನೂ ಎಲ್ಲ ಭಾಷೆಯ ಜನರು ನೋಡುವಂತಾಗಬೇಕು ಎನ್ನುವುದೇ ನನ್ನಾಸೆ. ಆ ಮಾದರಿಯಲ್ಲಿ ಸಿನಿಮಾ ಮಾಡುವ ಇರಾದೆ ನನ್ನದು.

* ಅಣ್ಣ ವಿಜಯ್‌ ರಾಘವೇಂದ್ರ ಅವರೊಟ್ಟಿಗೆ ಸಿನಿಮಾದಲ್ಲಿ ನಟಿಸುವುದು ಯಾವಾಗ?

ಅಣ್ಣ ಅವನದ್ದೇ ಕೆಲಸದಲ್ಲಿ ಬ್ಯುಸಿ. ಮೊದಲಿಗೆ ಇಬ್ಬರ ಕಾಂಬಿನೇಷನ್‌ಗೆ ಒಪ್ಪಿಗೆಯಾಗುವಂತಹ ಕಥೆ ಬೇಕು. ಆಗ ಮಾತ್ರ ಸಿನಿಮಾ ಸಾಧ್ಯ. ಒಳ್ಳೆಯ ಕಥೆ ಸಿಕ್ಕಿದರೆ ಒಟ್ಟಾಗಿ ನಟಿಸುತ್ತೇವೆ. ಶೀಘ್ರವೇ, ಅಂತಹ ಸಂದರ್ಭ ಒದಗಿಬರುವ ಸಾಧ್ಯತೆಯೂ ಇದೆ.

* ರಿಮೇಕ್‌ ಚಿತ್ರ ಮಾಡುವ ಉದ್ದೇಶ ಇದೆಯೇ?

ರಿಮೇಕ್‌ ಚಿತ್ರಗಳಲ್ಲಿ ನಟಿಸಲು ನನಗಿಷ್ಟವಿಲ್ಲ. ತೆಲುಗು ಅಥವಾ ತಮಿಳಿನ ಚಿತ್ರವನ್ನು ರಿಮೇಕ್‌ ಮಾಡಿದರೆ ಆ ಚಿತ್ರ ನೋಡಿದ ಪ್ರೇಕ್ಷಕರು ನನ್ನ ಸಿನಿಮಾ ನೋಡಲ್ಲ. ಹಾಗಾಗಿ, ‍ಫ್ರೆಶ್‌ ಸಿನಿಮಾಗಳಿಗೆ ನನ್ನ ಮೊದಲ ಆದ್ಯತೆ.

* ‘ಮಫ್ತಿ’ ನೋಡಿದ ತಕ್ಷಣ ತಂದೆಯವರ ಪ್ರತಿಕ್ರಿಯೆ ಹೇಗಿತ್ತು?

ಚಿತ್ರಮಂದಿರದಿಂದ ಹೊರಬಂದ ತಕ್ಷಣವೇ ಅಪ್ಪ ಅತ್ತು ಬಿಟ್ರು. ನೀನು ಬರೀ ಒರಟು ಮಾತಗಳನ್ನಾಡುತ್ತೀಯ ಅಂದುಕೊಂಡಿದ್ದೆ; ಆ ಮಾತುಗಳಲ್ಲೂ ಒಂದು ಸತ್ವವಿದೆ ಎಂದು ತೋರಿಸಿಕೊಟ್ಟಿದ್ದೀಯ ಅಂದ್ರು. ಅಪ್ಪನನ್ನು ಕಂಡ್ರೆ ಈಗಲೂ ಭಯ. ಮನೆಗೆ ತಡವಾಗಿ ಬಂದ್ರೆ ಅಥವಾ ತಡವಾಗಿ ನಿದ್ದೆ ಮಾಡಿದ್ರೆ ಈಗಲೂ ಬೈತಾರೆ.

* ನೀವು ಕೂಡ ವರ್ಷಕ್ಕೊಂದು ಸಿನಿಮಾ ಮಾಡಿದ್ರೆ ಚಿತ್ರಮಂದಿರ ನಡೆಸುವವರ ಪಾಡೇನು?

ವರ್ಷಕ್ಕೆ ಹಲವು ಚಿತ್ರಗಳನ್ನು ಮಾಡೋದು ಹೇಗೆ ಎಂಬುದೇ ನನಗೂ ಗೊತ್ತಾಗುತ್ತಿಲ್ಲ. ಆದರೆ, ನಾನು ಈ ತಪ್ಪು ತಿದ್ದಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ. ಎಲ್ಲ ನಟರು ತಿದ್ದಿಕೊಳ್ಳುತ್ತಿದ್ದಾರೆ. ಈ ವರ್ಷದ ಅಕ್ಟೋಬರ್‌ ಅಥವಾ ನವೆಂಬರ್‌ನಲ್ಲಿ ಜನರ ಮುಂದೆ ಬರಲು ಸಿದ್ಧತೆ ನಡೆಸಿದ್ದೇನೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry