‘ರಾಜು ಕನ್ನಡ ಮೀಡಿಯಂ’ ತೆರೆಗೆ ಸಿದ್ಧ

7

‘ರಾಜು ಕನ್ನಡ ಮೀಡಿಯಂ’ ತೆರೆಗೆ ಸಿದ್ಧ

Published:
Updated:
‘ರಾಜು ಕನ್ನಡ ಮೀಡಿಯಂ’ ತೆರೆಗೆ ಸಿದ್ಧ

ಸುದೀಪ್ ಅಭಿನಯದ ‘ರಾಜು ಕನ್ನಡ ಮೀಡಿಯಂ’ ಚಿತ್ರದಲ್ಲಿ ರಷ್ಯನ್ ಬೆಡಗಿ ಏಂಜಲಿನಾ ನಟಿಸಿದ್ದಾರೆ ಎಂದು ತಿಳಿಸಿದ್ದ ಚಿತ್ರತಂಡ, ಇನ್ನೊಂದಷ್ಟು ಮಾಹಿತಿ ನೀಡಲು ಸುದ್ದಿಗೋಷ್ಠಿ ಕರೆದಿತ್ತು.

ನಾಯಕ ನಟ ಗುರುನಂದನ್, ನಾಯಕಿ ಆಶಿಕಾ ಅಲ್ಲಿದ್ದರು. ಆದರೆ ಸುದೀಪ್‌ ಮಾತ್ರ ಕಾಣಿಸಲಿಲ್ಲ. ಅಲ್ಲದೆ, ಚಿತ್ರತಂಡ ಸುದೀಪ್ ಅವರ ಪಾತ್ರದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಇದುವರೆಗೂ ಬಿಟ್ಟುಕೊಟ್ಟಿಲ್ಲ!

ಮಾತಿಗೆ ಮುನ್ನುಡಿ ಬರೆದ ಗುರುನಂದನ್, ‘ಹೊಸ ವರ್ಷದ ಮೊದಲ ತಿಂಗಳಿನಲ್ಲೇ ಸಿನಿಮಾ ಬಿಡುಗಡೆ ಆಗುತ್ತಿದೆ. ನಮ್ಮ ಪ್ರಯತ್ನದ ಬಗ್ಗೆ ಜನ ತೀರ್ಮಾನ ಕೊಡುವ ದಿನ ಬರುತ್ತಿದೆ’ ಎಂದು ಒಂದಷ್ಟು ಖುಷಿ ಮತ್ತು ಒಂದಷ್ಟು ನಿರೀಕ್ಷೆಗಳೊಂದಿಗೆ ಹೇಳಿದರು.

ಗುರುನಂದನ್ ಅವರು ಈ ಸಿನಿಮಾದಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿದ ವಿದ್ಯಾರ್ಥಿಯ ಪಾತ್ರ ನಿರ್ವಹಿಸಿದ್ದಾರೆ. ಆತ ಮಧ್ಯಮ ವರ್ಗದ ಮಲೆನಾಡಿನ ಹುಡುಗನೂ ಹೌದು. ಆತ ಬೆಂಗಳೂರಿಗೆ ಬಂದು, ನಗರದ ಇಂಗ್ಲಿಷ್‌ಮಯ ವಾತಾವರಣದಲ್ಲಿ ಅನುಭವಿಸುವ ಕಷ್ಟಗಳು, ಅವೆಲ್ಲವನ್ನೂ ಮೆಟ್ಟಿನಿಂತು ಜೀವನದಲ್ಲಿ ಮೇಲೆ ಬರುವುದು ಈ ಚಿತ್ರದ ಕಥಾಹಂದರ.

ಸಿನಿಮಾದ ಮಧ್ಯಂತರ ಅವಧಿಯ ನಂತರ ಸುದೀಪ್ ಅವರು ತೆರೆಯ ಮೇಲೆ ಕಾಣಿಸಿಕೊಳ್ಳುತ್ತಾರೆ. ನಂತರ ಅವರು ಸಿನಿಮಾದ ಕೊನೆಯ ತನಕವೂ ಇರುತ್ತಾರೆ. ಸುದೀಪ್‌ ಮಾತುಗಳಿಂದ ಸ್ಫೂರ್ತಿ ಪಡೆದು, ನಾಯಕ ನಟ ಜೀವನದಲ್ಲಿ ಮುಂದೆ ಬರುತ್ತಾನಂತೆ. ಇದು ಸುದೀಪ್‌ ಪಾತ್ರದ ಬಗ್ಗೆ ಈವರೆಗೆ ಸಿಕ್ಕಿರುವ ಮಾಹಿತಿ.

ಸಿನಿಮಾಕ್ಕೆ ಹಾಡುಗಳನ್ನು ಬರೆದಿರುವ ಹೃದಯಶಿವ ಅವರೂ ಸುದ್ದಿಗೋಷ್ಠಿಯಲ್ಲಿ ಇದ್ದರು. ‘ಕೊಡೆಯೊಂದರ ಅಡಿಯಲ್ಲಿ...’ ಹಾಡು ಸಿನಿಮಾಕ್ಕಾಗಿ ಬರೆದಿಲ್ಲ‌. ಅದು‌ ತಾವು ಬರೆದ ಒಂದು ಕವಿತೆ. ಅದನ್ನು ಸಿನಿತಂಡ ಬಳಸಿಕೊಂಡಿತು. ಅದು ಜನರನ್ನು ತಲುಪಿದೆ‌ ಎಂದು ಖುಷಿಯಿಂದ ಹೇಳಿಕೊಂಡರು ಹೃದಯಶಿವ.

ನಾಯಕಿ ಆಶಿಕಾ ಅವರದ್ದು ಸಿನಿಮಾದಲ್ಲಿ ಮಲೆನಾಡಿನ ಹಳ್ಳಿಯ ಹುಡುಗಿ ಪಾತ್ರ. ‘ಇಷ್ಟು ದಿನ ಸಿಟಿ ಹುಡುಗಿಯಾಗಿ ಕಾಣಿಸಿಕೊಂಡಿದ್ದೇನೆ. ಇದರಲ್ಲಿ ಬೇರೆ ರೀತಿ ಕಾಣಿಸಿಕೊಂಡಿದ್ದೇನೆ. ಬಹಳ ಮುಖ್ಯ ಪಾತ್ರ ನನಗೆ ಸಿಕ್ಕಿರುವುದು’ ಎಂದರು ಆಶಿಕಾ.

ಈ ಸಿನಿಮಾದಲ್ಲಿ ತಾವು ಅಭಿನಯಿಸುವ ಬಗ್ಗೆ ಸುದೀಪ್ ಅವರು ಆರಂಭದಲ್ಲಿ ಖಚಿತವಾಗಿ ಏನೂ ಹೇಳಿರಲಿಲ್ಲವಂತೆ. ಆದರೆ, ನಿರ್ದೇಶಕ ನರೇಶ್ ಅವರಿಂದ ಕಥೆಯನ್ನು ಕೇಳಿದ ತಕ್ಷಣ, ಅಭಿನಯಿಸಲು ಒಪ್ಪಿಕೊಂಡರಂತೆ.

ಸಿನಿಮಾವನ್ನು ಒಟ್ಟು 13 ದೇಶಗಳಲ್ಲಿ ಬಿಡುಗಡೆ ಮಾಡಲು ನಿರ್ಮಾಪಕ ಸುರೇಶ್ ಸಿದ್ಧತೆ ನಡೆಸಿದ್ದಾರೆ. ‘ಹಾಸ್ಯ ಎಂಬುದು ಸಿನಿಮಾ ಕಥೆಯ ಭಾಗವಾಗಿ ಮಾತ್ರ ಬರುತ್ತದೆ’ ಎಂದರು ಸುರೇಶ್.

ರಾಜ್ಯದ ಇನ್ನೂರು ಚಿತ್ರಮಂದಿರದಲ್ಲಿ ಸಿನಿಮಾ ತೆರೆಗೆ ಬರಲಿದೆಯಂತೆ. ‘ಕನ್ನಡ ಮಾಧ್ಯಮದಲ್ಲಿ ಓದಿದ ಬಹಳ ಜನ ಈಗ ವಿದೇಶಗಳಲ್ಲಿ ದೊಡ್ಡ ಸ್ಥಾನಗಳಲ್ಲಿ ಇದ್ದಾರೆ. ಹಾಗಾಗಿ ವಿದೇಶಗಳಲ್ಲಿ ಇರುವವರು ನಮ್ಮ ಸಿನಿಮಾದ ಟೈಟಲ್ ಮತ್ತು ಕಥೆಯ ಕಾರಣಕ್ಕಾಗಿಯೇ ಕುತೂಹಲ ತೋರಿಸಿದ್ದಾರೆ’ ಎಂದೂ ಸುರೇಶ್ ಖುಷಿಯಿಂದ ಹೇಳಿಕೊಂಡರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry