ಉತ್ಸಾಹ ಹೆಚ್ಚಿಸಿದ ವ್ಯಾಘ್ರ ದರ್ಶನ

7
ಬಂಡೀಪುರ, ಬಿಆರ್‌ಟಿಯಲ್ಲಿ ಕಾಣಿಸಿಕೊಂಡ 8 ಹುಲಿಗಳು

ಉತ್ಸಾಹ ಹೆಚ್ಚಿಸಿದ ವ್ಯಾಘ್ರ ದರ್ಶನ

Published:
Updated:
ಉತ್ಸಾಹ ಹೆಚ್ಚಿಸಿದ ವ್ಯಾಘ್ರ ದರ್ಶನ

ಗುಂಡ್ಲುಪೇಟೆ: ಬೆಳ್ಳಂಬೆಳಗ್ಗೆ ಕೊರೆಯುವ ಚಳಿಯಲ್ಲಿ ಕಾಡಿನೊಳಗೆ ಹೊಕ್ಕು ತಮ್ಮ ಅಸ್ತಿತ್ವವನ್ನು ಹುಡುಕಲು ಬರುತ್ತಿರುವ ಸ್ವಯಂಸೇವಕರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಹುಲಿರಾಯನ ಕುಟುಂಬಕ್ಕೆ ಪ್ರೀತಿ ಮೂಡಿದಂತಿದೆ!

ಹುಲಿ ಗಣತಿಯ ಮೊದಲ ದಿನ, ಹುಲಿರಾಯನ ದರ್ಶನವಾಗದೆ ಬೇಸರಪಟ್ಟುಕೊಂಡಿದ್ದ ಗಣತಿದಾರರಿಗೆ ಮಂಗಳವಾರ ಬಂಡೀಪುರದಲ್ಲಿ ಆರು ಹುಲಿಗಳು ಕಾಣಿಸಿಕೊಂಡು ಪುಳಕಹುಟ್ಟಿಸಿದ್ದವು. ಬುಧವಾರ ಸಹ ಬಂಡೀಪುರದಲ್ಲಿ ಆರು ಹುಲಿಗಳು ತಮ್ಮ ಇರುವಿಕೆಯನ್ನು ತೋರ್ಪಡಿಸಿಕೊಂಡಿವೆ. ಇತ್ತ ಬಿಆರ್‌ಟಿಯಲ್ಲಿ ಎರಡು ದಿನ ಹುಲಿಗಳ ಜಾಡು ಕಂಡುಹಿಡಿಯುವಲ್ಲಿ ಸೋತಿದ್ದ ಗಣತಿದಾರರಿಗೆ, ಬುಧವಾರ ಎರಡು ಹುಲಿಗಳು ಕಾಣಿಸಿಕೊಂಡು ಉತ್ಸಾಹ ಮೂಡಿಸಿವೆ.

ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ಹೆಚ್ಚು ಹುಲಿಗಳಿವೆ ಎಂಬುದಕ್ಕೆ ಇಂಬು ನೀಡುವಂತೆ ಆರು ಹುಲಿಗಳು ಕಾಣಿಸಿಕೊಂಡವು.

ಕುಂದುಕೆರೆ ವಲಯದ ಕೊಂಗಹಳ್ಳಿ ಬೆಟ್ಟ, ಚಿಕ್ಕಹುಲಿ ಮಂಟಿ ಬೀಟ್‌, ಬಂಡೀಪುರದ ಕಡಮತ್ತೂರು ಕಟ್ಟೆ, ಮದ್ದೂರು ವಲಯದ ಚಿರತೆ ಕಾಡು ಬೀಟ್, ಮೊಳೆಯೂರು ಮತ್ತು ಎನ್.ಬೇಗೂರು ವಲಯದಲ್ಲಿ ತಲಾ ಒಂದು ಹುಲಿ ಕಾಣಿಸಿಕೊಂಡಿವೆ.

‘ಮೂಲೆಹೊಳೆ ಮತ್ತು ಮೊಳೆಯೂರು ವಲಯದಲ್ಲಿ 2 ಚಿರತೆ, ಗುಂಡ್ರೆ ವಲಯದಲ್ಲಿ 3 ಸೀಳುನಾಯಿ, ಮದ್ದೂರಿನಲ್ಲಿ 10 ಕಾಡೆಮ್ಮೆಗಳು ಮತ್ತು ವಿವಿಧ ವಲಯಗಳಲ್ಲಿ 70ಕ್ಕೂ ಹೆಚ್ಚು ಆನೆಗಳು ಕಾಣಿಸಿಕೊಂಡಿವೆ’ ಎಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅಂಬಾಡಿ ಮಾಧವ್ ‘ಪ್ರಜಾವಾಣಿ’ಗೆ ತಿಳಿಸಿದರು.

ಅಲ್ಲದೆ ಗೋಪಾಲಸ್ವಾಮಿ ಬೆಟ್ಟ ವಲಯ, ಹೆಡಿಯಾಲ ವಲಯ, ನುಗು ಮತ್ತು ಓಂಕಾರ ವಲಯಗಳಲ್ಲಿ ಹುಲಿಗಳ ನೇರ ದರ್ಶನವಾಗದಿದ್ದರೂ ಅವುಗಳ ಗುರುತು ಪತ್ತೆಯಾಗಿವೆ. ಕಾಡೆಮ್ಮೆ, ಕರಡಿಗಳು ಎದುರಾಗಿವೆ.

ದಿನಚರಿಯಂತೆ ಬೆಳಿಗ್ಗೆ 6ಕ್ಕೆ ಗಣತಿ ಶುರು ಮಾಡಿದ ಇಲಾಖೆ ಸಿಬ್ಬಂದಿ ಮತ್ತು ಗಣತಿದಾರರಿಗೆ ಮೂರನೆ ದಿನ ಸತತ ಆರು ಹುಲಿಗಳು ಕಾಣಿಸಿಕೊಂಡಿರುವುದು ಸಂತಸ ಉಂಟು ಮಾಡಿದೆ. ನಮಗೂ ಗಣತಿ ಯಲ್ಲಿ ಭಾಗವಹಿಸುತ್ತಿರುವುದಕ್ಕೆ ಹೆಮ್ಮೆ ಎನಿಸುತ್ತಿದೆ. ಗಣತಿ ಆರಂಭವಾಗಿದ್ದ ದಿನದಿಂದ ಬುಧವಾರದವರೆಗೆ 3 ದಿನ ಪ್ರತಿನಿತ್ಯ 5 ಕಿ.ಮೀ. ವ್ಯಾಪ್ತಿಯಲ್ಲಿ ಜಿಗ್‌ಜಾಗ್ ಮಾದರಿಯಲ್ಲಿ ಅರಣ್ಯವನ್ನು ಸುತ್ತಿ ಗಣತಿ ಮಾಡಿದ್ದೆವು. ಗುರುವಾರ ಟ್ರಾಂಜಾಕ್ಟ್ ಲೈನ್‌ನಲ್ಲಿ ನೇರವಾಗಿ ಗಣತಿ ಮಾಡಬೇಕು’ ಎಂದು ವಲಯ ಅರಣ್ಯಾಧಿಕಾರಿಯೊಬ್ಬರು ತಿಳಿಸಿದರು.

ಬಿಆರ್‌ಟಿ: ಹುಲಿ ಮರಿಗಳ ದರ್ಶನ

ಯಳಂದೂರು:
ತಾಲ್ಲೂಕಿನ ಬಿಳಿಗಿರಿರಂಗನಬೆಟ್ಟದ ಮೂಲಿಕಿ ಕಾಡಿನ ಬಳಿ ಗಣತಿದಾರರಿಗೆ ಬುಧವಾರ ಹುಲಿ ಕುಟುಂಬ ದರ್ಶನ ನೀಡಿದೆ.

ಮುಂಜಾನೆ ಎರಡು ಮರಿ ಮತ್ತು ಒಂದು ಹುಲಿ ಹಾದು ಹೋಗುವುದು ಕಂಡಿದ್ದಾಗಿ ಗಣತಿದಾರರೊಬ್ಬರು ತಿಳಿಸಿದರು.

ಅವು ವೇಗವಾಗಿ ಹೋಗಿದ್ದರಿಂದ ಛಾಯಾಗ್ರಹಣ ಮಾಡಲು ಸಾಧ್ಯವಾಗಿಲ್ಲ. ಆದರೆ, ಅವುಗಳನ್ನು ಕಂಡು ಖುಷಿಯಾಯಿತು ಎಂದು ಸಿಬ್ಬಂದಿ ತಿಳಿಸಿದರು.

‘ಬಿ.ಆರ್. ಹಿಲ್ಸ್‌ ಮತ್ತು ಕೆ.ಗುಡಿ ವಲಯದಲ್ಲಿ ಒಂದೊಂದು ಹುಲಿಗಳು ಕಾಣಿಸಿಕೊಂಡಿವೆ. ಉಳಿದಂತೆ ಕೆಲವೆಡೆ ಅವುಗಳ ಹೆಜ್ಜೆ, ಹಿಕ್ಕೆ ಮತ್ತಿತರ ಪ್ರಾಣಿಗಳ ಗುರುತುಗಳು ಸಿಕ್ಕಿವೆ’ ಎಂದು ಬಿಆರ್‌ಟಿ ಅರಣ್ಯ ಸಂರಕ್ಷಣಾಧಿಕಾರಿ ಡಾ. ಪಿ. ಶಂಕರ್‌ ತಿಳಿಸಿದರು.

ಮಂಗಳವಾರ ಸಂಜೆ ಬಿ.ಆರ್. ಹಿಲ್ಸ್‌ ಬಳಿ ಅರಣ್ಯ ವೀಕ್ಷಕರೊಬ್ಬರಿಗೆ ಒಂದು ಹುಲಿ ಕಾಣಿಸಿಕೊಂಡಿತ್ತು. ಗಣತಿಯ ಸಮಯವಲ್ಲದಿದ್ದರಿಂದ ಅದನ್ನು ಪರಿಗಣನೆಗೆ ತೆಗೆದುಕೊಳ್ಳಲಿಲ್ಲ ಎಂದು ಹೇಳಿದರು.

ಗುರುವಾರದಿಂದ ಟ್ರಾಂಜಾಕ್ಟ್‌ ಲೈನ್‌ನಲ್ಲಿ ಗಣತಿ ನಡೆಯಲಿದೆ. ಪ್ರತಿ ಬೀಟ್‌ನಲ್ಲಿ 2 ಕಿ.ಮೀ. ವ್ಯಾಪ್ತಿಯಲ್ಲಿ ಸಿಗುವ ಎಲ್ಲ ಬಗೆಯ ಪ್ರಾಣಿಗಳ ಪ್ರತಿ ಗುರುತುಗಳನ್ನು ದಾಖಲಿಸಲಾಗುತ್ತದೆ. ಇದುವರೆಗೆ ಸಾಂಬಾರ್‌, ಜಿಂಕೆಯಂತಹ ಪ್ರಾಣಿಗಳು ಕಂಡುಬಂದರೂ ಅವುಗಳ ಮಾಹಿತಿ ಸಂಗ್ರಹಿಸುತ್ತಿರಲಿಲ್ಲ. ಈಗ ಅವುಗಳನ್ನು ಸಹ ದಾಖಲು ಮಾಡಿಕೊಳ್ಳಲಾಗುತ್ತದೆ ಎಂದು ವಿವರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry