‘ದೇಶಕ್ಕೆ ಮಾಡಿದ ಅವಮಾನ’

7

‘ದೇಶಕ್ಕೆ ಮಾಡಿದ ಅವಮಾನ’

Published:
Updated:

ನವದೆಹಲಿ: ‘ಆರ್‌ಎಸ್‌ಎಸ್‌ ಮತ್ತು ಬಿಜೆಪಿಗಳು ಭಯೋತ್ಪಾದಕ ಸಂಘಟನೆಗಳು’ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಯು ದೇಶಕ್ಕೆ ಮಾಡಿದ ಅವಮಾನ. ಈ ಹೇಳಿಕೆಯು ದೇಶವಿರೋಧಿಗಳಿಗೆ ಕುಮ್ಮಕ್ಕು ನೀಡುವಂತಹದ್ದು ಎಂದು ಸಂಸದ ಪ್ರಹ್ಲಾದ ಜೋಶಿ ಆರೋಪಿಸಿದರು.

ಗುರುವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಈ ಹೇಳಿಕೆಯು ಅವರ ದೇಶಭಕ್ತಿಯನ್ನೇ ಪ್ರಶ್ನಿಸುವಂತಿದೆ ಎಂದರು.

‘ಪಾಕಿಸ್ತಾನವು ಭಯೋತ್ಪಾದಕ ಕೃತ್ಯಗಳಲ್ಲಿ ತೊಡಗಿದೆ ಎಂದು ಭಾರತವು ಜಾಗತಿಕವಾಗಿ ಪ್ರತಿಪಾದಿಸುತ್ತಿದೆ. ಈ ವಾದಕ್ಕೆ ಬಹುತೇಕ ದೇಶಗಳಿಂದ ಮನ್ನಣೆ ದೊರೆತಿದೆ. ಆದರೆ, ಸಿದ್ದರಾಮಯ್ಯ ಅವರು ಬಿಜೆಪಿ, ಆರ್‌ಎಸ್‌ಎಸ್‌ ಕುರಿತು ಹಗುರವಾಗಿ ಪ್ರತಿಕ್ರಿಯಿಸಿರುವುದು ಪಾಕಿಸ್ತಾನಕ್ಕೆ ನೆರವು ನೀಡುವಂತಿದೆ’ ಎಂದು ಟೀಕಿಸಿದರು.

‘ಪಿಎಫ್ಐ, ಎಸ್‌ಡಿಪಿಐ ಸಂಘಟನೆಗಳನ್ನು ನಿಷೇಧಿಸುವುದಿಲ್ಲ’ ಎಂದು ಸಿದ್ದರಾಮಯ್ಯ ನೇರವಾಗಿ ಹೇಳಿದ್ದಾರೆ. ರುದ್ರೇಶ್‌ ಹತ್ಯೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಸಲ್ಲಿಸಿರುವ ದೋಷಾರೋಪ ಪಟ್ಟಿಯಲ್ಲಿ ಪಿಎಫ್ಐ ಪಾತ್ರದ ಉಲ್ಲೇಖವಿದೆ. ಕಾಂಗ್ರೆಸ್‌ ಮುಖಂಡ, ಕೇರಳದ ಕೆ.ಸಿ. ವೇಣುಗೋಪಾಲ್ ಅವರು ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ವಹಿಸಿಕೊಂಡ ನಂತರ ಕರ್ನಾಟಕದಲ್ಲೂ ಕೇರಳ ಮಾದರಿಯನ್ನು ಅನುಸರಿಸುತ್ತಿದ್ದಾರೆ ಎಂದು ದೂರಿದರು.

ಈ ಹಿಂದೆ ಕೇಂದ್ರದ ಗೃಹ ಸಚಿವರಾಗಿದ್ದ ಪಿ. ಚಿದಂಬರಂ ಅವರೂ ವೋಟ್‌ ಬ್ಯಾಂಕ್ ರಾಜಕೀಯಕ್ಕಾಗಿ ‘ಹಿಂದೂ, ಕೇಸರಿ ಭಯೋತ್ಪಾದನೆ’ ಎಂಬ ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದರು. ನಂತರ ಆ ಹೇಳಿಕೆ ಹಿಂದೆ ಪಡೆದಿದ್ದರು. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಸಿದ್ದರಾಮಯ್ಯ ಹೇಳಿಕೆಗೆ ಕೂಡಲೇ ಸ್ಪಷ್ಟನೆ ನೀಡಬೇಕು ಎಂದು ಜೋಶಿ ಆಗ್ರಹಿಸಿದರು.

ತಾಕತ್ತಿದ್ದರೆ ನಿಷೇಧಿಸಲಿ: ಮುತಾಲಿಕ್‌

ಚಿಕ್ಕಮಗಳೂರು: ‘ರಾಜ್ಯ ಸರ್ಕಾರಕ್ಕೆ ತಾಕತ್ತಿದ್ದರೆ ಆರ್‌ಎಸ್‌ಎಸ್‌, ಶ್ರೀರಾಮಸೇನೆ, ಬಜರಂಗದಳ ಸಂಘಟನೆಗಳನ್ನು ನಿಷೇಧಿಸಲಿ’ ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್‌ ಮುತಾಲಿಕ್‌ ಸವಾಲು ಹಾಕಿದರು.

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪಿಎಫ್‌ಐ ಸಂಘಟನೆ ರಾಜ್ಯದ 21 ಜಿಲ್ಲೆಗಳಲ್ಲಿ ಚಟುವಟಿಕೆ ಹೊಂದಿದೆ. ಕರ್ನಾಟಕದಲ್ಲಿ ನಡೆದಿರುವ ಸರಣಿ ಕೊಲೆಗಳ ಏಳು ಪ್ರಕರಣಗಳಲ್ಲಿ ಈ ಸಂಘಟನೆಯ ಹೆಸರು ಇದೆ. ಪಿಎಫ್‌ಐ ಸಂಘಟನೆ ನಿಷೇಧ ಮಾಡಬೇಕೇ ಹೊರತು ಬಜರಂಗದಳ, ಶ್ರೀರಾಮಸೇನೆಯನ್ನಲ್ಲ. ದೇಶಭಕ್ತ ಸಂಘಟನೆಗಳ ಬಗ್ಗೆ ಅಪಪ್ರಚಾರ ಮಾಡುವುದನ್ನು ನಿಲ್ಲಿಸಬೇಕು. ಪಿಎಫ್‌ಐ ಜತೆ ನಮ್ಮ ಸಂಘಟನೆಗಳನ್ನು ಹೋಲಿಕೆ ಮಾಡುವುದೇ ಮೂರ್ಖತನ’ ಎಂದರು.

ಹೇಳಿಕೆಗೆ ಬದ್ಧ: ದಿನೇಶ್‌ ಗುಂಡೂರಾವ್‌

ಬೆಂಗಳೂರು: ‘ಆರ್‌ಎಸ್‌ಎಸ್‌, ಬಿಜೆಪಿ, ಬಜರಂಗ ದಳದವರೂ ಜಿಹಾದಿಗಳು ಎಂದು ನೀಡಿರುವ ಹೇಳಿಕೆಗೆ ನಾನು ಬದ್ಧ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್ ಪುನರುಚ್ಚರಿಸಿದರು.

ಕೆಪಿಸಿಸಿ ಕಚೇರಿಯಲ್ಲಿ  ಗುರುವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಿಜೆಪಿ, ಬಜರಂಗದಳ, ಆರ್‌ಎಸ್‌ಎಸ್‌, ವಿಶ್ವ ಹಿಂದೂ ಪರಿಷತ್‌ ಕಾರ್ಯಕರ್ತರು ಭಯದ ವಾತಾವರಣ ಸೃಷ್ಟಿಸುತ್ತಿದ್ದಾರೆ. ಇವರಿಗೆ ಏನೆಂದು ಕರೆಯಬೇಕು’ ಎಂದು ಪ್ರಶ್ನಿಸಿದರು.

‘ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಮುಂದೈತೆ ಮಾರಿಹಬ್ಬ ಎನ್ನುತ್ತಾರೆ. ಶೋಭಾ ಕರಂದ್ಲಾಜೆ ಕೋಮು ಕಿಚ್ಚು ಹಚ್ಚುತ್ತಾರೆ. ಇವರನ್ನು ಉಗ್ರರು, ಜಿಹಾದಿಗಳು ಎಂದು ಕರೆಯುವುದರಲ್ಲಿ ತಪ್ಪಿಲ್ಲ’ ಎಂದು ಅಭಿಪ್ರಾಯಪಟ್ಟರು. ‘ಪಿಎಫ್ಐ ಸಂಘಟನೆಯನ್ನು ನಿಷೇಧ ಮಾಡುವುದು ಕೇಂದ್ರಕ್ಕೆ ಸೇರಿದ್ದು. ಬಿಜೆಪಿಯವರು ಪ್ರಧಾನಿ ಮುಂದೆ ಧರಣಿ ನಡೆಸಿ ನಿಷೇಧ ಮಾಡಿಸಿಕೊಳ್ಳಲಿ’ ಎಂದು ಸವಾಲು ಹಾಕಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry