ಬಿಜೆಪಿಯಿಂದ ಹಿಂದುತ್ವದ ಅಕ್ರಮ ಸಾಗುವಳಿ

7

ಬಿಜೆಪಿಯಿಂದ ಹಿಂದುತ್ವದ ಅಕ್ರಮ ಸಾಗುವಳಿ

Published:
Updated:
ಬಿಜೆಪಿಯಿಂದ ಹಿಂದುತ್ವದ ಅಕ್ರಮ ಸಾಗುವಳಿ

ಕಲಬುರ್ಗಿ: ‘ಹಿಂದೂ ದೇವರುಗಳನ್ನು ಬಿಜೆಪಿಗೆ ಯಾರೂ ಬರೆದುಕೊಟ್ಟಿಲ್ಲ. ಆದರೆ, ಹಿಂದುತ್ವವನ್ನು ಗುತ್ತಿಗೆ ಪಡೆದವರಂತೆ ಅವರು ವರ್ತಿಸುತ್ತಿದ್ದಾರೆ’ ಎಂದು ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ ಟೀಕಿಸಿದರು.

ತಾಲ್ಲೂಕಿನ ಸಿರಗಾಪುರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಅವರು, ‘ಹಿಂದುತ್ವದ ಭೂಮಿಯಲ್ಲಿ ಬಿಜೆಪಿ ನಾಯಕರು ಅಕ್ರಮವಾಗಿ ಸಾಗುವಳಿ ನಡೆಸುತ್ತಿದ್ದಾರೆ. ಎಲ್ಲಿಯೇ ಹೋದರೂ ಹಿಂದುತ್ವದ ಬಗ್ಗೆ ಮಾತನಾಡುತ್ತಾರೆ. ಯಾವುದು ಅವರ ಹಿಂದುತ್ವ?’ ಎಂದು ಅವರು ಪ್ರಶ್ನಿಸಿದರು.

‘ರಾಹುಲ್‌ ಗಾಂಧಿ ದೇವಸ್ಥಾನಗಳಿಗೆ ಭೇಟಿ ನೀಡಿದರೆ ಪ್ರಶ್ನೆ ಮಾಡುತ್ತಾರೆ. ನಾವು ದೇಗುಲಗಳಿಗೆ ಹೋಗಬಾರದಂತೆ. ಬಿಜೆಪಿ ನಾಯಕರಿಗಿಂತಲೂ ಮೊದಲೇ ನಾವು ಶ್ರೀರಾಮನ ಆರಾಧಕರು. ಹಣೆಗೆ ತಿಲಕ ಇಡುತ್ತಿದ್ದೆವು’ ಎಂದು ಹೇಳಿದರು.

‘ನಮ್ಮದು ಸರ್ವರನ್ನೂ ಒಳಗೊಂಡ ಹಿಂದುತ್ವ. ಇದರಲ್ಲಿ ಮುಸ್ಲಿಂ, ಕ್ರಿಶ್ಚಿಯನ್, ಸಿಖ್ಖ್‌ ಸಮುದಾಯದವರು ಬರುತ್ತಾರೆ. ಆದರೆ, ಬಿಜೆಪಿ ಮಾತ್ರ ಸರ್ಕಾರಿ ಜಮೀನಿಗೆ ಅಕ್ರಮವಾಗಿ ಬೇಲಿ ಹಾಕಿಕೊಡಂತೆ ಹಿಂದುತ್ವಕ್ಕೆ ಬೇಲಿ ಹಾಕಿಕೊಂಡಿದೆ’ ಎಂದು ಅವರು ಟೀಕಿಸಿದರು.

‘ಟಿಪ್ಪು ನಮ್ಮವ. ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದ್ದ. ದೇಶಕ್ಕಾಗಿ ತನ್ನಿಬ್ಬರು ಮಕ್ಕಳನ್ನು ಒತ್ತೆ ಇಟ್ಟದ್ದ. ಈ ವಿಷಯ ಗೊತ್ತಲ್ಲದೆ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ’ ಎಂದು ಅವರು ಆಪಾದಿಸಿದರು.

ಸಂಸದ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ‘ಬಿಜೆಪಿ ಜಾತಿ, ಧರ್ಮದ ಆಧಾರದ ಮೇಲೆ ಸಮಾಜವನ್ನು ಒಡೆಯುತ್ತಿದ್ದಾರೆ. ಹಿಂದೂ ಎನಿಸಿಕೊಳ್ಳಲು ಅವರಿಂದ ಪ್ರಮಾಣಪತ್ರ ಪಡೆಯಬೇಕಾದ ಸ್ಥಿತಿ ಇದೆ. ನಾವೆಲ್ಲರೂ ಹಿಂದೂ ಅಲ್ಲವೇ?’ ಎಂದು ಪ್ರಶ್ನಿಸಿದರು.

‘ನೋಟು ರದ್ದತಿ ಬಳಿಕ ಬ್ಯಾಂಕ್‌ಗಳು ದಿವಾಳಿ ಅಂಚಿಗೆ ಬಂದಿವೆ. ಶ್ರೀಮಂತರಿಗೆ ಸಾಲ ನೀಡಿ ಸಂಕಷ್ಟಕ್ಕೆ ಸಿಲುಕಿವೆ. ಅವುಗಳನ್ನು ರಕ್ಷಣೆ ಮಾಡಲೆಂದೇ ₹65 ಸಾವಿರ ಕೋಟಿ ಮೊತ್ತದ ಪೂರಕ ಬಜೆಟ್‌ ಅನ್ನು ವಿತ್ತ ಸಚಿವ ಅರುಣ್‌ ಜೇಟ್ಲಿ ಮಂಡಿಸಿದ್ದಾರೆ’ ಎಂದು ಅವರು ದೂರಿದರು.

ಸಂಸದ ಕೆ.ಎಚ್‌.ಮುನಿಯಪ್ಪ ಮಾತನಾಡಿ, ‘ಬಿಜೆಪಿಗೆ ಗುಜರಾತ್‌ನಲ್ಲಿ 100 ಸ್ಥಾನ ಗೆಲ್ಲಲು ಆಗಲಿಲ್ಲ. ದೇಶದ ವಿವಿಧೆಡೆ ನಡೆದ ಉಪ ಚುನಾವಣೆಗಳಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದೆ. 2019ರ ಲೋಕಸಭಾ ಚುನಾವಣೆಗೆ ಕರ್ನಾಟಕದ ವಿಧಾನಸಭೆ ಚುನಾವಣೆ ಫಲಿತಾಂಶ ದಿಕ್ಸೂಚಿ ಆಗಲಿದೆ’ ಎಂದು ಅಭಿಪ್ರಾಯಪಟ್ಟರು.

ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ಮಾತನಾಡಿ, ‘ರಾಜ್ಯ ಸರ್ಕಾರ ರೈತರು, ಬಡವರಿಗಾಗಿ ಸಾಕಷ್ಟು ಯೋಜನೆ ರೂಪಿಸಿದೆ. ಕಳೆದ ವರ್ಷ 34 ಲಕ್ಷ ಕ್ವಿಂಟಲ್‌ ತೊಗರಿ ಖರೀದಿ ಮಾಡಲಾಗಿತ್ತು. ಈ ವರ್ಷ 16 ಲಕ್ಷ ಕ್ವಿಂಟಲ್‌ ತೊಗರಿ ಖರೀದಿ ಮಾಡಲಾಗುತ್ತಿದೆ. ಈ ಮಿತಿಯನ್ನು ಹೆಚ್ಚಳ ಮಾಡುವಂತೆ ಕೇಂದ್ರ ಸರ್ಕಾರ

ವನ್ನು ಕೋರಲಾಗುವುದು’ ಎಂದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್‌.ಆರ್‌.ಪಾಟೀಲ ಮಾತನಾಡಿ, ‘ಕಾಂಗ್ರೆಸ್‌ ನೇತೃತ್ವದ ರಾಜ್ಯ ಸರ್ಕಾರ ನುಡಿದಂತೆ ನಡೆದಿದೆ. 165 ಭರವಸೆಗಳನ್ನು ಈಡೇರಿಸಿದೆ. ಪರಿಶಿಷ್ಟರು, ಅಲ್ಪಸಂಖ್ಯಾತರಿಗಾಗಿ ಸಾಕಷ್ಟು ಯೋಜನೆಗಳನ್ನು ರೂಪಿಸಿ ಜಾರಿಗೊಳಿಸಿದೆ’ ಎಂದು ತಿಳಿಸಿದರು.

ಸಚಿವರಾದ ಪ್ರಿಯಾಂಕ್‌ ಖರ್ಗೆ, ಶಾಸಕರಾದ ಜಿ.ರಾಮಕೃಷ್ಣ, ಡಾ.ಅಜಯ್‌ ಸಿಂಗ್, ಶರಣಪ್ಪ ಮಟ್ಟೂರ, ಡಾ.ಉಮೇಶ್‌ ಜಾಧವ್, ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಜಗದೇವ ಗುತ್ತೇದಾರ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿನಾಥಪಾಟೀಲ ಸೊಂತ, ಬಿಕೆಡಿಬಿ ನಿರ್ದೇಶಕ ವೈಜನಾಥ ತಡಕಲ್, ಜಿಲ್ಲಾ ಪಂಚಾಯಿತಿ ಸದಸ್ಯೆ ವಿಜಯಲಕ್ಷ್ಮಿ ತಡಕಲ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸಿ.ಎ.ಪಾಟೀಲ, ಮುಖಂಡರಾದ ವಸಂತಕುಮಾರ್, ಜಿ.ಆರ್‌.ವಿಜಯಕುಮಾರ್ ಇದ್ದರು.

ಸಾಕೆ ಸೈಲಜನಾಥ ತ್ರಿಭಾಷಾ ಪದಪುಂಜ

ಎಐಸಿಸಿ ಕಾರ್ಯದರ್ಶಿ ಹಾಗೂ ಪಕ್ಷದ ಕಲಬುರ್ಗಿ ವಿಭಾಗದ ಉಸ್ತುವಾರಿ ಸಾಕೆ ಸೈಲಜನಾಥ ಅವರು ಹಿಂದಿ, ತೆಲುಗು ಹಾಗೂ ಕನ್ನಡ ಮಿಶ್ರಿತ ಭಾಷೆಯಲ್ಲಿ ಮಾತನಾಡಿ ಗಮನ ಸೆಳೆದರು.

‘ಎಲ್ಲರೂ ಒಕ್ಕಡ ಸೇರಿ ಅಮಿತ್‌ ಷಾ ಕಿ, ಮೋದಿ ಕಿ ಬುದ್ಧಿ ಕಲಿಸೋಣ. ವಾಡು ಜೂಟ್‌ ಬೋಲ್‌ ರಹೆ ಹೈ’ ಎಂದ ಅವರು, ‘ದಲಿತರಿಗೆ ಬಿಜೆಪಿ ಕ್ಯಾ ದಿಯಾ ಹೈ, ಕಾಂಗ್ರೆಸ್‌ ಕೋ ಈ ಬಾರಿ ಬೆಂಬಲಿಸಬೇಕು’ ಎಂದು ತಮ್ಮ ಭಾಷಣದುದ್ದಕ್ಕೂ ತ್ರಿಭಾಷೆಗಳ ಪದಪುಂಜಗಳನ್ನು ಬಳಸಿದರು.

* * 

ಕಲಬುರ್ಗಿ ವಿಭಾಗ ಕಾಂಗ್ರೆಸ್‌ನ ಭದ್ರಕೋಟೆ. ಮಲ್ಲಿಕಾರ್ಜುನ ಖರ್ಗೆ, ಧರ್ಮಸಿಂಗ್‌ ಅವರು ಪಕ್ಷ ಕಟ್ಟಲು ಶ್ರಮಿಸಿದ್ದಾರೆ. ಇಲ್ಲಿನ ಅಲ್ಪಸಂಖ್ಯಾತರ ಮತಗಳು ವಿಭಜನೆ ಆಗದಂತೆ ಎಚ್ಚರಿಕೆ ವಹಿಸಬೇಕಿದೆ

ಜಿ.ಪರಮೇಶ್ವರ, ಕೆಪಿಸಿಸಿ ಅಧ್ಯಕ್ಷ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry