ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತ್ರೈಮಾಸಿಕ ಅಭಿಯಾನ ನಡೆಸಿ

Last Updated 12 ಜನವರಿ 2018, 9:03 IST
ಅಕ್ಷರ ಗಾತ್ರ

ಬೆಳಗಾವಿ: ಗಡಿ ಜಿಲ್ಲೆಯಾಗಿರುವ ಬೆಳಗಾವಿಯಲ್ಲಿ ಕನ್ನಡಕ್ಕೆ ಪ್ರಥಮ ಆದ್ಯತೆ ನೀಡಬೇಕು. ಅಂಗಡಿಗಳು ಹಾಗೂ ಕಚೇರಿಗಳ ನಾಮಫಲಕಗಳನ್ನು ಕನ್ನಡದಲ್ಲಿಯೇ ಬರೆಸಬೇಕು. ಪ್ರತಿ ಮೂರು ತಿಂಗಳಿಗೊಮ್ಮೆ ಅಭಿಯಾನ ನಡೆಸಿ, ಪರಿಶೀಲಿಸಬೇಕು ಎಂದು ಜಿಲ್ಲಾಧಿಕಾರಿ ಎಸ್‌. ಜಿಯಾವುಲ್ಲಾ ಅವರು ಕಾರ್ಮಿಕ ಇಲಾಖೆ ಹಾಗೂ ಸ್ಥಳೀಯ ಆಡಳಿತ ಸಂಸ್ಥೆಗಳ ಅಧಿಕಾರಿಗಳಿಗೆ ಸೂಚಿಸಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಗುರುವಾರ ಕನ್ನಡ ಅನುಷ್ಠಾನ ಸಭೆಯ ನಡೆಸಿದ ಅವರು, ವಿಶೇಷವಾಗಿ ಬೆಳಗಾವಿ, ನಿಪ್ಪಾಣಿ ಹಾಗೂ ಖಾನಾಪುರ ಸೇರಿದಂತೆ ಗಡಿಭಾಗದ ಪಟ್ಟಣಗಳಲ್ಲಿ ನಾಮಫಲಕಗಳಲ್ಲಿ ಕನ್ನಡ ಕಾಣೆಯಾಗಿರುತ್ತದೆ. ರಾಜ್ಯ ಸರ್ಕಾರದ ನಿರ್ದೇಶನದಂತೆ ಅಂಗಡಿಗಳು ಹಾಗೂ ಕಚೇರಿಗಳ ನಾಮಫಲಕ ಗಳಲ್ಲಿ ಶೇ 75ರಷ್ಟು ಭಾಗ ಕನ್ನಡ ಭಾಷೆಯಲ್ಲಿರಬೇಕು. ಇನ್ನುಳಿದ ಭಾಗದಲ್ಲಿ ಮಾಲೀಕರು ಬಯಸುವ ಭಾಷೆಗಳಲ್ಲಿ ಬರೆಸಿಕೊಳ್ಳಬಹುದಾಗಿದೆ ಎಂದರು. ನಾಮಫಲಕಗಳಲ್ಲಿ ಕನ್ನಡವನ್ನು ನಿರ್ಲಕ್ಷಿಸಲಾಗಿದ್ದರೆ, ಅಂತಹ ಅಂಗಡಿಗಳ ಮಾಲೀಕರ ವಿರುದ್ಧ ಕ್ರಮಕೈಗೊಳ್ಳಿ. ದಂಡ ಹಾಕಿ ಎಂದು ಹೇಳಿದರು.

ಬ್ಯಾಂಕ್‌ ಅಧಿಕಾರಿಗಳಿಗೆ ಸೂಚನೆ: ಜಿಲ್ಲೆಯ ಹಲವು ಬ್ಯಾಂಕ್‌ಗಳಲ್ಲಿ ಕನ್ನಡ ಭಾಷೆ ಬಾರದ ಹಲವು ಜನ ಅಧಿಕಾರಿಗಳಿದ್ದಾರೆ. ಇವರೊಂದಿಗೆ ಸಂವಹನ ನಡೆಸಲು ಜನರಿಗೆ ತೊಂದರೆಯಾಗುತ್ತಿದೆ. ಇದಲ್ಲದೇ, ಬ್ಯಾಂಕಿನ ವಹಿವಾಟಿನಲ್ಲಿ ಇಂಗ್ಲಿಷ್‌ ಅಥವಾ ಹಿಂದಿಯನ್ನು ಮಾತ್ರ ಬಳಸಲಾಗುತ್ತಿದೆ. ಸ್ಥಳೀಯ ಭಾಷೆಯಾದ ಕನ್ನಡವನ್ನು ಬಳಸುವಂತೆ ಸೂಚಿಸಬೇಕೆಂದು ಸಮಿತಿಯ ಸದಸ್ಯ ಸಿದ್ಧನಗೌಡ ಪಾಟೀಲ ಒತ್ತಾಯಿಸಿದರು.

ಇದಕ್ಕೆ ಸ್ಪಂದಿಸಿದ ಎಸ್‌.ಜಿಯಾವುಲ್ಲಾ ಅವರು, ಕನ್ನಡ ಬಾರದ ಹಾಗೂ ಹೊರರಾಜ್ಯಗಳಿಂದ ಬಂದಂತಹ ಅಧಿಕಾರಿಗಳಿಗೆ ಕನ್ನಡ ತರಬೇತಿ ಕೊಡಿಸಲು ಬ್ಯಾಂಕ್‌ಗಳಿಂದಲೇ ವ್ಯವಸ್ಥೆ ಮಾಡಿಸಿ ಎಂದು ಲೀಡ್‌ ಬ್ಯಾಂಕ್‌ ಮ್ಯಾನೇಜರ್‌ ನಾಗರಾಜ ಅವರಿಗೆ ಸೂಚನೆ ನೀಡಿದರು.

ಮಹಾನಗರ ಪಾಲಿಕೆ ಆಯುಕ್ತ ಶಶಿಧರ ಕುರೇರ ಮಾತನಾಡಿ, ‘ನಗರ ವ್ಯಾಪ್ತಿಯಲ್ಲಿ ಹಲವು ಬಾರಿ ಅಭಿಯಾನ ಹಮ್ಮಿಕೊಂಡು ಕನ್ನಡದಲ್ಲಿ ನಾಮಫಲಕ ಬರೆಸಲು ಕ್ರಮಕೈಗೊಳ್ಳಲಾಗಿದೆ. ಕನ್ನಡದಲ್ಲಿ ನಾಮಫಲಕ ಬರೆಸದ ಅಂಗಡಿ ಮಾಲೀಕರಿಗೆ ₹ 2.5 ಲಕ್ಷವರೆಗೆ ದಂಡ ವಿಧಿಸಿದ್ದೇವೆ’ ಎಂದು ತಿಳಿಸಿದರು.

ಅಧಿಕಾರಿಗಳಿಗೆ ಸೂಚನೆ: ರಾಜ್ಯದ ಆಡಳಿತ ಭಾಷೆಯಾಗಿರುವ ಕನ್ನಡದ ಲ್ಲಿಯೇ ಎಲ್ಲ ಸರ್ಕಾರಿ ಅಧಿಕಾರಿಗಳು ಪತ್ರ ವ್ಯವಹಾರ ನಡೆಸಬೇಕು. ಗ್ರಾಮ ಪಂಚಾಯ್ತಿಗಳ ನಡಾವಳಿ ಹಾಗೂ ದಾಖಲೆಗಳನ್ನು ಕನ್ನಡದಲ್ಲಿಯೇ ದಾಖಲಿಸಬೇಕು. ಕೇಂದ್ರ ಸರ್ಕಾರದ ಜೊತೆ ವ್ಯವಹರಿಸುವಾಗ ಮಾತ್ರ ಇಂಗ್ಲಿಷ್‌ ಅಥವಾ ಹಿಂದಿ ಬಳಸಿ, ಇನ್ನುಳಿದಂತೆ ಕನ್ನಡವೇ ನಮ್ಮ ಆಡಳಿತ ಭಾಷೆಯಾಗಿರಲಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT