ಸಂಡೂರು: ಈರುಳ್ಳಿ ಕೃಷಿ ಆರಂಭ

7

ಸಂಡೂರು: ಈರುಳ್ಳಿ ಕೃಷಿ ಆರಂಭ

Published:
Updated:

ಸಂಡೂರು: ‘ಬಳ್ಳಾರಿ ರೆಡ್‌’ ಎಂದೇ ಹೆಸರಾದ ಮಧ್ಯಮ ಗಾತ್ರದ ಈರುಳ್ಳಿ ಕೃಷಿ ತಾಲ್ಲೂಕಿನ ಹಿಂಗಾರು ಹಂಗಾಮಿನಲ್ಲಿ ಭರದಿಂದ ಸಾಗಿದೆ. ತಾಲ್ಲೂಕಿನ ಸಂಡೂರು, ಭುಜಂಗನಗರ, ಲಕ್ಷ್ಮೀಪುರ, ತಾರಾನಗರ, ಕೃಷ್ಣಾನಗರ, ಅಂಕಮ್ಮನಹಾಳ್, ಸುಶೀಲಾನಗರ, ದೌಲತ್‌ಪುರದಲ್ಲಿ ನಾಟಿ ಕಾರ್ಯ ನಡೆದಿದೆ. ಕೆಲವರು ಈರುಳ್ಳಿ ಕೃಷಿಗೆ ಹೊಲಗಳನ್ನು ಸಿದ್ಧಗೊಳಿಸುತ್ತಿದ್ದಾರೆ. ಮೂರುವರೆ ತಿಂಗಳ ಅವಧಿಯ ಈರುಳ್ಳಿ ಬೆಳೆಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇದೆ.

ಈ ಪ್ರದೇಶಗಳಲ್ಲಿ ಮಳೆಕೊರತೆ ಕಾರಣ ಹಾಗೂ ಸಂಡೂರು, ತೋರಣಗಲ್ಲು ಭಾಗದಲ್ಲಿ ಬಹುತೇಕ ಕೆರೆಗಳು ಬತ್ತಿರುವುದರಿಂದ ಅಂತರ್ಜಲವೂ ಕಡಿಮೆಯಾಗಿದೆ. ಆದರೆ ಸದ್ಯಕ್ಕೆ ನೀರಿನ ತೊಂದರೆ ಇಲ್ಲದ್ದರಿಂದ ರೈತರು ಹಲವೆಡೆ ಹನಿ ನೀರಾವರಿ ಹಾಗೂ ತುಂತುರು ನೀರಾವರಿ ವ್ಯವಸ್ಥೆಯಲ್ಲಿ ಈರುಳ್ಳಿ ಕೃಷಿ ನಡೆಸಿದ್ದಾರೆ.

‘ನಮ್ಮ ಗ್ರಾಮದ ಸುತ್ತಮುತ್ತ ಪ್ರತಿ ವರ್ಷ ಸುಮಾರು 800 ಎಕರೆ ಪ್ರದೇಶದಲ್ಲಿ ಈರುಳ್ಳಿ ಬೆಳೆಯಲಾಗುತ್ತಿತ್ತು. ಈ ಬಾರಿ ಕೇವಲ 150–200 ಎಕರೆ ಪ್ರದೇಶದಲ್ಲಿ ನಾಟಿ ಮಾಡಲಾಗಿದೆ’ ಎಂದು ಭುಜಂಗನಗರ ಗ್ರಾಮದ ರೈತರಾದ ಸುಬ್ರಮಣಿ ಹಾಗೂ ಮೇಟಿ ಚಂದ್ರಶೇಖರ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ತಾಲ್ಲೂಕಿನಲ್ಲಿ 450 ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ನಾಟಿಯಾಗಿದೆ. ಇನ್ನೂ ಕೆಲವೆಡೆ ನಾಟಿ ಕಾರ್ಯ ನಡೆದಿದೆ’ ಎಂದು ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಮಕ್ಬುಲ್ ಹುಸೇನ್ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry