ಮಾದಪ್ಪನ ದರ್ಶನ ಪಡೆದ ಸಿ.ಎಂ

7

ಮಾದಪ್ಪನ ದರ್ಶನ ಪಡೆದ ಸಿ.ಎಂ

Published:
Updated:
ಮಾದಪ್ಪನ ದರ್ಶನ ಪಡೆದ ಸಿ.ಎಂ

ಮಲೆಮಹದೇಶ್ವರ ಬೆಟ್ಟ: ಮಲೆ ಮಹದೇಶ್ವರ ಬೆಟ್ಟದಲ್ಲಿ ಬುಧವಾರ ವಾಸ್ತವ್ಯ ಹೂಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ವಿವಿಧ ಕಾಮಗಾರಿಗಳನ್ನು ಉದ್ಘಾಟಿಸಿದರು. ಬಳಿಕ ಮಲೆಮಹದೇಶ್ವರ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಸಭೆ ನಡೆಸಿದರು.

ಬೆಳಿಗ್ಗೆ 8 ಗಂಟೆಗೆ ಮಲೆಮಹದೇಶ್ವರ ಸನ್ನಿಧಿಗೆ ಭೇಟಿ ನೀಡಿ ಮಾದಪ್ಪನ ದರ್ಶನ ಪಡೆದರು. ನಂತರ, ಪ್ರಾಧಿಕಾರ ವತಿಯಿಂದ ನಡೆದಿರುವ ಅಂತರಗಂಗೆ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದರು. ದೇವಸ್ಥಾನದ ಮುಂಭಾಗದ ರಂಗಮಂದಿರ ಬಳಿ ನಿರ್ಮಿಸಿರುವ ಶಾಶ್ವತ ನೆರಳಿನ ಕಾಮಗಾರಿ ಪರಿಶೀಲಿಸಿದರು.

ವರ್ಷವಿಡೀ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಇಲ್ಲಿಗೆ ಬರುತ್ತಾರೆ. ಪ್ರತಿ ಜಾತ್ರೆ ಸಂದರ್ಭದಲ್ಲಿ ಭಕ್ತರಿಗೆ ನೆರಳಿನ ವ್ಯವಸ್ಥೆ ಕಲ್ಪಿಸಲು ಹಾಕುತ್ತಿದ್ದ ಶಾಮಿಯಾನ, ಮಳೆ, ಗಾಳಿಗೆ ಅನೇಕ ಬಾರಿ ಕಿತ್ತುಹೋಗಿದ್ದವು. ಇದರಿಂದ ಭಕ್ತರು ಮಳೆಯಲ್ಲಿಯೇ ನಿಲ್ಲುವಂತಾಗುತ್ತಿತ್ತು. ಹೀಗಾಗಿ, ಜನರಿಗೆ ಅನುಕೂಲ ಕಲ್ಪಿಸಲು ₹5 ಕೋಟಿ ವೆಚ್ಚದಲ್ಲಿ ಶಾಶ್ವತ ನೆರಳಿನ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದರು.

ಭಕ್ತರಿಗೆ ಅಗತ್ಯ ಮೂಲ ಸೌಕರ್ಯ ಗಳನ್ನು ಸಮರ್ಪಕವಾಗಿ ಒದಗಿಸಬೇಕು ಎಂದು ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚಿಸಿದರು. ಬಳಿಕ, ಬೆಟ್ಟದಲ್ಲಿ ನಿರ್ಮಾಣವಾಗಿರುವ ಕನಕ ಸಮುದಾಯ ಭವನವನ್ನು ಉದ್ಘಾಟಿಸಿದರು.

ಜಿಲ್ಲಾ ಉಸ್ತುವಾರಿ ಸಚಿವೆ ಡಾ.ಎಂ.ಸಿ ಮೋಹನಕುಮಾರಿ, ಶಾಸಕರಾದ ಆರ್. ನರೇಂದ್ರ, ಪುಟ್ಟರಂಗಶೆಟ್ಟಿ, ಎಸ್. ಜಯಣ್ಣ, ಪ್ರಾಧಿಕಾರದ ಕಾರ್ಯದರ್ಶಿ ಎಂ.ಜೆ. ರೂಪಾ, ಜಿ.ಪಂ. ಸಿಇಒ ಡಾ.ಕೆ. ಹರೀಶ್‌ಕುಮಾರ್, ಉಪವಿಭಾಗಾ ಧಿಕಾರಿ ಬಿ. ಫೌಜಿಯಾ ತರನ್ನುಮ್‌, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದರ್‌ ಕುಮಾರ್ ಮೀನಾ ಇದ್ದರು.

ಯೂ ಟರ್ನ್‌ ಹೊಡೆದ ಸಿ.ಎಂ

‘ಆರ್‌ಎಸ್‌ಎಸ್‌, ಬಜರಂಗದಳದವರೇ ಉಗ್ರಗಾಮಿಗಳು’ ಎಂದು ಬುಧವಾರ ಚಾಮರಾಜನಗರದಲ್ಲಿ ಹೇಳಿಕೆ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ತಾವು ಆ ರೀತಿ ಹೇಳಿಲ್ಲ ಎಂದು ಗುರುವಾರ ವರಸೆ ಬದಲಿಸಿದರು. ‘ನಾನು ಬಿಜೆಪಿಯವರನ್ನು ಉಗ್ರಗಾಮಿಗಳು ಎಂದು ಹೇಳಿಲ್ಲ. ಬಿಜೆಪಿಯವರು ಉಗ್ರವಾದಿಗಳು ಎಂದಿರುವುದು’ ಎಂದು ಸ್ಪಷ್ಟೀಕರಣ ನೀಡಿದರು.

ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದರೆ ರಾಜಕೀಯ ನಿವೃತ್ತಿ ಘೋಷಣೆ ಮಾಡುವುದಾಗಿ ಹೇಳಿದ್ದ ಬಿಜೆಪಿಯ ವಿ. ಸೋಮಣ್ಣ, ಈ ಬಾರಿಯೂ ಅದನ್ನೇ ಹೇಳಿದ್ದಾರೆ. ಅವರು ನಿವೃತ್ತಿ ಹೊಂದುವುದು ಬೇಡ. ರಾಜಕೀಯದಲ್ಲಿಯೇ ಇದ್ದು ಕಾಂಗ್ರೆಸ್ ಗೆಲ್ಲುವುದನ್ನು ಅವರು ನೋಡಬೇಕು ಎಂದು ಲೇವಡಿ ಮಾಡಿದರು.

ಸರ್ಕಾರದ ಹಣದಲ್ಲಿ ಸಿ.ಎಂ ಸಮಾವೇಶ ಮಾಡುತ್ತಿದ್ದಾರೆ ಎಂಬ ಜೆಡಿಎಸ್‌ ವರಿಷ್ಠ ಎಚ್.ಡಿ. ದೇವೇಗೌಡ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ‘ನಾನು ಸರ್ಕಾರದ ಹಣದಲ್ಲಿ ಸಾಧನೆಯ ಪ್ರಚಾರ ಮಾಡುತ್ತಿಲ್ಲ. ಚುನಾವಣಾ ಪ್ರಚಾರ ಮಾರ್ಚ್‌ನಿಂದ ಪ್ರಾರಂಭ ಮಾಡುತ್ತೇನೆ. ನಾಲ್ಕೂವರೆ ವರ್ಷದ ಸರ್ಕಾರದ ಸಾಧನೆ ತಿಳಿಸಲು ಹಾಗೂ ಶಂಕುಸ್ಥಾಪನೆಗಳನ್ನು ನೆರವೇರಿಸಲು ಮಾತ್ರ ಇಲ್ಲಿಗೆ ಬಂದಿದ್ದೇನೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry