ನಾಲ್ಕನೆಯ ದಿನ ಹುಲಿಗಳ ಗೈರು

7

ನಾಲ್ಕನೆಯ ದಿನ ಹುಲಿಗಳ ಗೈರು

Published:
Updated:
ನಾಲ್ಕನೆಯ ದಿನ ಹುಲಿಗಳ ಗೈರು

ಗುಂಡ್ಲುಪೇಟೆ: ಬಂಡೀಪುರ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಎನ್.ಬೇಗೂರು ವಲಯ ಹೊರತು ಪಡಿಸಿ ಗುರುವಾರ ಯಾವ ವಲಯದಲ್ಲಿಯೂ ಹುಲಿರಾಯನ ದರ್ಶನವಾಗಲಿಲ್ಲ. ದಿನನಿತ್ಯದಂತೆ ಹುಲಿ ಹೆಜ್ಜೆ, ಹಿಕ್ಕೆಗಳು ಪತ್ತೆಯಾಗಿವೆ. ಅಲ್ಲಲ್ಲಿ ಕಾಣಿಸಿಕೊಂಡ ಕಾಡುಪ್ರಾಣಿಗಳು ಗಣತಿದಾರರ ಬೇಸರ ನೀಗಿಸಿದವು.

ಕುಂದಕರೆವಲಯದಲ್ಲಿ 3, ಮೂಲೆಹೊಳೆ 4, ಎ.ಎಂ.ಗುಡಿ 9 ಮತ್ತು ಗುಂಡ್ರೆ ವಲಯದಲ್ಲಿ 1 ಸೇರಿ ಒಟ್ಟು 17 ಸೀಳುನಾಯಿಗಳು ಕಾಣಿಸಿಕೊಂಡಿವೆ. ಕುಂದಕರೆ ವಲಯದಲ್ಲಿ 20, ಜಿ.ಎಸ್.ಬೆಟ್ಟ ಮತ್ತು ಓಂಕಾರದಲ್ಲಿ ತಲಾ 8 ಕಾಡೆಮ್ಮೆಗಳು ಪ್ರತ್ಯಕ್ಷವಾದವು. ಹೆಚ್ಚಾಗಿ ಆನೆಗಳು ಎಲ್ಲ ವಲಯಗಳಲ್ಲಿ ಕಾಣಿಸಿಕೊಂಡಿವೆ.

ಕಳೆದ ಮೂರು ದಿನಗಳ ಕಾಡಿನಲ್ಲಿ 5 ಕಿ.ಮೀ. ಜಿಗ್‌ಜಾಗ್ ಮಾದರಿಯಲ್ಲಿ ಸಂಚಾರ ಮಾಡಿ ಹುಲಿ ಮತ್ತು ಇತರೆ ಮಾಂಸಾಹಾರಿ ಪ್ರಾಣಿಗಳ ಗುರುತುಗಳನ್ನು ಪತ್ತೆ ಮಾಡಲಾಗುತ್ತಿತ್ತು. ಗುರುವಾರದಿಂದ ಕಾಡಿನಲ್ಲಿ 2 ಕಿ.ಮೀ. ವ್ಯಾಪ್ತಿಯಲ್ಲಿ ನಿರ್ಮಿಸಿರುವ ಟ್ರಾನ್ಸೆಕ್ಟ್ ಲೈನ್‌ನಲ್ಲಿ ಸಾಗುತ್ತ ಸಿಗುವ ಎಲ್ಲ ಪ್ರಾಣಿಗಳ ಗುರುತು, ಬೆಳೆದಿರುವ ಗಿಡಗಳನ್ನು ದಾಖಲಿಸಲಾಗುತ್ತಿದೆ. ಗಣತಿಯ ಕೊನೆಯ ಎರಡು ದಿನ ಸಹ ಇದೇ ರೀತಿ ಕಾರ್ಯ ಮುಂದುವರಿಸಲಾಗುತ್ತದೆ ಎಂದು ವಲಯ ಅರಣ್ಯಾಧಿಕಾರಿ ನವೀನ್‌ ಕುಮಾರ್ ತಿಳಿಸಿದರು.

ಹುಲಿ ಹೆಜ್ಜೆ, ಸೀಳುನಾಯಿ, ಆನೆ, ಕಾಡೆಮ್ಮೆಗಳು ಹೆಚ್ಚಾಗಿ ಕಾಣಿಸಿಕೊಂಡವು. ಮೊದಲ ಮೂರು ದಿನಗಳು ಗಣತಿಯ ವ್ಯಾಪ್ತಿ ಮತ್ತು ಸಂಚಾರ ಹೆಚ್ಚಿತ್ತು. ಹೀಗಾಗಿ ಹೆಚ್ಚು ಪ್ರಾಣಿಗಳು ಕಾಣಿಸುತ್ತಿದ್ದವು. ಈಗ ಒಂದೇ ಲೈನ್‌ನಲ್ಲಿ ಸಾಗಬೇಕಿರುವುದರಿಂದ ಮತ್ತು ಕೇವಲ 2 ಕಿ.ಮೀ. ಪರಿಧಿ ಇರುವುದರಿಂದ ಪ್ರಾಣಿಗಳು ಹೆಚ್ಚಾಗಿ ಕಾಣಿಸಲಾರವು ಎಂದು ಅಧಿಕಾರಿಗಳು ತಿಳಿಸಿದರು.

ವ್ಯಾಘ್ರನ ಸುಳಿವಿಲ್ಲ!

ಯಳಂದೂರು ವರದಿ: ಬುಧವಾರ ಎರಡು ಹುಲಿ ಮತ್ತು ಒಂದು ಮರಿ ಹುಲಿ ಕಾಣಿಸಿಕೊಂಡಿದ್ದರಿಂದ ಬಿಆರ್‌ಟಿಯಲ್ಲಿ ಗಣತಿದಾರರ ಉತ್ಸಾಹ ಇಮ್ಮಡಿಸಿತ್ತು. ಅದೇ ಹುಮ್ಮಸ್ಸಿನೊಂದಿಗೆ ಗುರುವಾರ ಅರಣ್ಯದೊಳಗೆ ಕಾಲಿಟ್ಟವರಿಗೆ ಹುಲಿರಾಯ ದರ್ಶನ ಭಾಗ್ಯ ನೀಡಲಿಲ್ಲ.

ಕಡಿದಾದ ಬೆಟ್ಟದ ದಾರಿಯಲ್ಲಿ ಸಾಗಿದ ಸ್ವಯಂಸೇವಕರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಸಸ್ಯಾಹಾರಿ ಪ್ರಾಣಿಗಳ ಮಾಹಿತಿ ಕಲೆಹಾಕುವುದರಲ್ಲಿ ಮಗ್ನರಾದರೂ, ಅವರ ಕಿವಿ ಹುಲಿ ಘರ್ಜನೆಯ ಸದ್ದು ಆಲಿಸಲು ಕಾದಿದ್ದವು. ಆದರೆ, ಗಣತಿಕಾರ್ಯ ಮುಗಿಯುವವರೆಗೂ ಅವರಿಗೆ ಹುಲಿರಾಯ ತನ್ನ ಇರುವಿಕೆಯ ಸುಳಿವು ನೀಡಲಿಲ್ಲ. ಇದರಿಂದ ನಿರಾಶೆಯಿಂದಲೇ ತಮ್ಮ ಶಿಬಿರಗಳಿಗೆ ಮರಳಬೇಕಾಯಿತು.

ಉಳಿದಂತೆ, ಜಿಂಕೆ, ಸಾಂಬಾರ್‌ ಮುಂತಾದ ಪ್ರಾಣಿಗಳ ಹಿಂಡು ಮತ್ತು ವೈವಿಧ್ಯಮಯ ಪಕ್ಷಿಗಳು ಅವರಿಗೆ ಮುದ ನೀಡಿದವು. ಕೆ. ಗುಡಿ ವಲಯದಲ್ಲಿ ಕಾಣಿಸಿಕೊಂಡ ಬೃಹತ್‌ ಹೆಬ್ಬಾವು ಸ್ವಯಂಸೇವಕರಲ್ಲಿ ಅಚ್ಚರಿ ಮೂಡಿಸಿದವು. ಯಳಂದೂರು, ಕೆ. ಗುಡಿ, ಚಾಮರಾಜನಗರ, ಪುಣಜನೂರು, ಬೈಲೂರು ಹಾಗೂ ಕೊಳ್ಳೇಗಾಲ ವಿಭಾಗಗಳೂ ಬಿಳಿಗಿರಿರಂಗನ ಪ್ರದೇಶ ಸರಹದ್ದಿನಲ್ಲಿ ಇವೆ.

‘ಹಿಂದಿನ ಗಣತಿ ಮಾಹಿತಿ ಮೇರೆಗೆ ಇಲ್ಲಿ 60ಕ್ಕೂ ಹೆಚ್ಚು ಹುಲಿಗಳಿವೆ ಎಂದು ಅಂದಾಜಿಸಲಾಗಿದೆ. ಆದರೆ, ಇವುಗಳ ಸಂತತಿ ಹೆಚ್ಚಿಲ್ಲ. ದಟ್ಟ ಕಾಡು, ಹಳ್ಳಕೊಳ್ಳ ಪ್ರದೇಶಗಳಲ್ಲಿ ಹೆಚ್ಚಾಗಿ ಹುಲಿಯ ಇರುವಿಕೆ ಗುರುತಿಸಲಾಗಿದೆ’ ಎಂದು ಕೆ. ಗುಡಿ ವಲಯದ ಆರ್ಎಫ್ಒ ನಾಗೇಂದ್ರನಾಯಕ ತಿಳಿಸಿದರು.

4ನೇ ದಿನದಿಂದ ಸಸ್ಯಾಹಾರಿ ಪ್ರಾಣಿಗಳ ಗಣತಿ ಮಾಡಲಾಗುತ್ತಿದೆ. ಹಿಕ್ಕೆ, ಲದ್ದಿಗಳ ‘ಮಾಹಿತಿ ಸಂಗ್ರಹಿಸಿ ಇವುಗಳ ಆವಾಸ ಗುರುತಿಸಲಾಗುತ್ತಿದೆ’ ಎಂದು ಯಳಂದೂರು ವಲಯದ ಎಸಿಎಫ್ ನಾಗರಾಜು, ಆರ್ಎಫ್ಒ ಮಹಾದೇವಯ್ಯ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ನಿಗದಿತ 2 ಕಿ.ಮೀ. ಟ್ರಾನ್ಸೆಕ್ಟ್‌ ಲೈನ್‌ನಲ್ಲಿ ಗಣತಿ ಆರಂಭಿಸಲಾಗಿದೆ. ಉಳಿದೆರಡು ದಿನವೂ ಇದೇ ರೀತಿ ಮಾಹಿತಿಗಳನ್ನು ಸಂಗ್ರಹಿಸಲಾಗುವುದು’ ಎಂದು ಬಿಆರ್‌ಟಿಯ ಅರಣ್ಯ ಸಂರಕ್ಷಣಾಧಿಕಾರಿ ಡಾ. ಪಿ. ಶಂಕರ್‌ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry