ಭ್ರಷ್ಟಾಚಾರ, ಸರ್ಕಾರಿ ಯೋಜನೆಗಳ ಮೇಲೆ ಲೋಕಾಯುಕ್ತ ನಿಗಾ: ನ್ಯಾ.ವಿಶ್ವನಾಥ ಶೆಟ್ಟಿ

7

ಭ್ರಷ್ಟಾಚಾರ, ಸರ್ಕಾರಿ ಯೋಜನೆಗಳ ಮೇಲೆ ಲೋಕಾಯುಕ್ತ ನಿಗಾ: ನ್ಯಾ.ವಿಶ್ವನಾಥ ಶೆಟ್ಟಿ

Published:
Updated:

ಗದಗ: ‘ಲಂಚ ಪ್ರಕರಣಗಳಲ್ಲದೆ ಸರ್ಕಾರದ ಯೋಜನೆಗಳು ಸಮರ್ಪಕವಾಗಿ ಕಾರ್ಯರೂಪಕ್ಕೆ ಬರುತ್ತಿವೆಯೋ ಅಥವಾ ಇಲ್ಲವೋ ಎಂಬುದನ್ನೂ ಲೋಕಾಯುಕ್ತ ಸಂಸ್ಥೆ ಪರಿಶೀಲಿಸುತ್ತದೆ’ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಪಿ. ವಿಶ್ವನಾಥ ಶೆಟ್ಟಿ ಹೇಳಿದರು. ಬುಧವಾರ ನಗರದಲ್ಲಿ ಜಿಲ್ಲೆಯ ವಿವಿಧ ಇಲಾಖೆಗಳ ಮುಖ್ಯಸ್ಥರ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಇಂದಿರಾ ಕ್ಯಾಂಟೀನ್‌ನಲ್ಲಿ ಆಹಾರದ ಗುಣಮಟ್ಟದ ಕುರಿತು ಗ್ರಾಹಕರೊಬ್ಬರು ದೂರು ನೀಡಿದ್ದರು. ಲೋಕಾಯುಕ್ತ ಸಿಬ್ಬಂದಿ ಪರಿಶೀಲನೆ ನಡೆಸಿ, ಗುಣಮಟ್ಟ ಚೆನ್ನಾಗಿದೆ ಎಂದು ವರದಿ ನೀಡಿದ್ದಾರೆ. ಇದನ್ನು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಆಯುಕ್ತರಿಗೆ ಕಳುಹಿಸಲಾಗಿದೆ. ಕ್ಯಾಂಟೀನ್‌ ಮಾತ್ರವಲ್ಲ, ಸರ್ಕಾರದ ಎಲ್ಲ ಯೋಜನೆ

ಗಳ ಅನುಷ್ಠಾನ ಮತ್ತು ಅದು ಅರ್ಹ ಫಲಾನುಭವಿಗಳಿಗೆ ತಲುಪುತ್ತಿವೆಯೇ ಎಂಬ ಕುರಿತು ಲೋಕಾಯುಕ್ತ ನಿರಂತರ ನಿಗಾ ವಹಿಸುತ್ತಿದೆ’ ಎಂದರು.

‘ಲೋಕಾಯುಕ್ತ ಎಂದರೆ ಕೇವಲ ಸರ್ಕಾರಿ ಅಧಿಕಾರಿಗಳ ಮೇಲೆ ದಾಳಿ ನಡೆಸುವವರು ಎನ್ನುವ ಭಯದ ವಾತಾವರಣ ಇದೆ. ಇದನ್ನು ಹೋಗಲಾಡಿಸಿ, ಅಧಿಕಾರಿ ವರ್ಗವನ್ನು ವಿಶ್ವಾಸಕ್ಕೆ ತೆಗೆದುಕೊಂಡು ಭ್ರಷ್ಟಾಚಾರ ರಹಿತ ವ್ಯವಸ್ಥೆ ಜಾರಿಗೆ ತರುವ ಆಶಯ ಇದೆ’ ಎಂದರು.

‘ಭ್ರಷ್ಟಾಚಾರ ನಿಗ್ರಹ ದಳ ಅಸ್ತಿತ್ವಕ್ಕೆ ಬಂದ ನಂತರ, ಲೋಕಾಯುಕ್ತ ದುರ್ಬಲಗೊಂಡಿದೆ ಎಂಬುದು ಕೆಲವು ಜನರ ಅಭಿಪ್ರಾಯವಾಗಿದೆ. ಆದರೆ, ಲೋಕಾಯುಕ್ತ ಸಂಸ್ಥೆಗೆ ಸಾರ್ವಜನಿಕರಿಂದ ಬರುವ ಅಹವಾಲುಗಳ ಸಂಖ್ಯೆ ಹೆಚ್ಚಿದೆ’ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಮನೋಜ್‌ ಜೈನ್‌, ಸಿಇಒ ಮಂಜುನಾಥ ಚವ್ಹಾಣ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry