ಒವೈಸಿ ಜತೆ ಕಾಂಗ್ರೆಸ್‌ ರಾಜಕೀಯ ಒಪ್ಪಂದ– ಆರೋಪ

7

ಒವೈಸಿ ಜತೆ ಕಾಂಗ್ರೆಸ್‌ ರಾಜಕೀಯ ಒಪ್ಪಂದ– ಆರೋಪ

Published:
Updated:

ತುಮಕೂರು: ‘ದೇಶದಾದ್ಯಂತ ನೆಲಕಚ್ಚುತ್ತಿರುವ ಕಾಂಗ್ರೆಸ್‌ಗೆ ಕರ್ನಾಟಕದಲ್ಲಿಯೂ ಸೋಲಿನ ಭೀತಿ ಎದುರಾಗಿದೆ. ಹೀಗಾಗಿ ದೇಶದ್ರೋಹಿ ಹೇಳಿಕೆ ನೀಡುವ ಒವೈಸಿಯನ್ನು ಬೆಂಗಳೂರಿಗೆ ಕರೆಸಿಕೊಂಡು ಅವರ ಜತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್‌ ಅವರು ರಾಜಕೀಯ ಹೊಂದಾಣಿಕೆ ಮಾಡಿಕೊಂಡಿದ್ದಾರೆ’ ಎಂದು ಸಂಸದೆ ಶೋಭಾ ಕರಂದ್ಲಾಜೆ ಆರೋಪಿಸಿದರು.

ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಉಗ್ರಗಾಮಿ ಎಂಬ ಮುಖ್ಯಮಂತ್ರಿಯವರ ಹೇಳಿಕೆಯನ್ನು ಖಂಡಿಸಿ ‘ನಾವು ಬಿಜೆಪಿ, ನಾವು ಆರ್‌ಎಸ್‌ಎಸ್‌– ತಕ್ಷಣ ನಮ್ಮನ್ನು ಬಂಧಿಸಿ ಜೈಲಲ್ಲಿಡಿ’ ಎನ್ನುವ ಘೋಷಣೆಯೊಂದಿಗೆ ನಗರದ ಜಿಲ್ಲಾ ಕಾಂಗ್ರಸ್‌ ಸಮಿತಿ ಕಚೇರಿ ಶುಕ್ರವಾರ ಎದುರು ನಡೆದ ಜೈಲ್‌ ಭರೋ ಹೋರಾಟದಲ್ಲಿ ಅವರು ಮಾತನಾಡಿದರು.

‘ವೋಟ್‌ಬ್ಯಾಂಕ್‌ ರಾಜಕಾರಣ ಮತ್ತು ಕುರ್ಚಿಯ ಆಸೆಯಿಂದಾಗಿ ಮುಖ್ಯಮಂತ್ರಿ ಹಿಂದೂಗಳ ಹತ್ಯೆ ಮಾಡುತ್ತಿರುವ ಪಿಎಫ್ಐ ಮತ್ತು ಎಸ್‌ಡಿಪಿಐಗೆ ಬೆಂಬಲ ನೀಡುತ್ತಿದ್ದಾರೆ. ಈ ಸಂಘಟನೆಗಳ ಜತೆ ರಾಜಕೀಯ ಹೊಂದಾಣಿಕೆ ಮಾಡಿಕೊಳ್ಳುವ ಉದ್ದೇಶದಿಂದ ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಸಂಘಟನೆಗಳು ಉಗ್ರಗಾಮಿ ಸಂಘಟನೆಗಳು ಎನ್ನುವ ಹೇಳಿಕೆ ನೀಡುತ್ತಾ, ದೇಶವನ್ನೇ ಬಲಿಕೊಡುವ ರೀತಿಯಲ್ಲಿ ಮಾತನಾಡುತ್ತಿದ್ದಾರೆ’ ಎಂದು ಆರೋಪಿಸಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಜ್ಯೋತಿ ಗಣೇಶ್‌ ಮಾತನಾಡಿ, ‘ಕಾಂಗ್ರೆಸ್‌ ಸರ್ಕಾರಕ್ಕೆ ಭಯೋತ್ಪಾದಕರನ್ನು, ಹಿಂದೂ ಕಾರ್ಯಕರ್ತರನ್ನು ಹತ್ಯೆ ಮಾಡುತ್ತಿರುವವರನ್ನು ಬಂಧಿಸಲು ತಾಕತ್ತಿಲ್ಲ. ಹೀಗಾಗಿ ದೇಶಭಕ್ತ, ಹಿಂದೂಪರ ಸಂಘಟನೆಗಳನ್ನು ಉಗ್ರಗಾಮಿಗಳು ಎಂದು ಹೇಳಿಕೊಂಡು ತಿರುಗುತ್ತಿದ್ದಾರೆ’ ಎಂದರು.

ಪ್ರತಿಭಟನಾಕಾರರು ಕಾಂಗ್ರೆಸ್‌ ಕಚೇರಿಗೆ ಮುತ್ತಿಗೆ ಹಾಕಲು ಪ್ರಯತ್ನಿಸಿದಾಗ ಪೊಲೀಸರು ಅವರನ್ನು ತಡೆದು, ಬಂಧಿಸಿದರು. ನೂರಾರು ಪ್ರತಿಭಟನಾಕಾರರು ಮತ್ತು ಪೊಲೀಸರು ನಡುವೆ ನೂಕುನುಗ್ಗಲು ನಡೆದು ಕೆಲಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು.

ಕಾಂಗ್ರೆಸ್‌ ಕಚೇರಿ ಎದುರು ಹೈಡ್ರಾಮಾ:ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್‌ ಕಚೇರಿಗೆ ಮುತ್ತಿಗೆ ಹಾಕುವುದನ್ನು ತಡೆಯಲು ಕಾಂಗ್ರೆಸ್‌ ಕಾರ್ಯಕರ್ತರು ಕಾಂಗ್ರೆಸ್‌ ಕಚೇರಿಯಲ್ಲಿ ಜಮಾಯಿಸಿದ್ದರು. ಇದರಿಂದ ಪರಿಸ್ಥಿತಿ ಬಿಗುವಿನಿಂದ ಕೂಡಿತ್ತು.

ಪೊಲೀಸರು ಕಾಂಗ್ರೆಸ್ ಕಚೇರಿ ಆವರಣದ ಮುಂದೆ ಬ್ಯಾರಿಕೇಡ್‌ಗಳನ್ನು ಇಟ್ಟು ಕಾಂಗ್ರೆಸ್ ಕಾರ್ಯಕರ್ತರು ಈಚೆ ಬರದಂತೆ ತಡೆದರು.  ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ರಾಮಕೃಷ್ಣ, ಜಿಲ್ಲಾ ಯುವ ಕಾಂಗ್ರೆಸ್‌ ಅಧ್ಯಕ್ಷ ಆರ್‌.ರಾಜೇಂದ್ರ, ವಕ್ತಾರ ರಾಜೇಶ್‌ ದೊಡ್ಮನೆ, ಮುಖಂಡ ಟಿ.ಬಿ.ಮಲ್ಲೇಶ್‌ ಮುಂತಾದ ಪದಾಧಿಕಾರಿಗಳು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry