ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾಮಿ ವಿವೇಕಾನಂದರ ಸಂದೇಶ ಅಮರ

Last Updated 13 ಜನವರಿ 2018, 9:12 IST
ಅಕ್ಷರ ಗಾತ್ರ

ಕಾರವಾರ: ಸ್ವಾಮಿ ವಿವೇಕಾನಂದರು ಮಾಡಿದ 15 ವರ್ಷದ ಬೋಧನೆಗಳಲ್ಲಿ ಸಾವಿರಾರು ವರ್ಷಗಳಿಗೆ ದಾರಿ ತೋರುವ ಪಾಠಗಳಿವೆ. ಅವರ ಸಂದೇಶಗಳು ಅಮರ’ ಎಂದು ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜಿನ ಹಿರಿಯ ಸಂಸ್ಕೃತ ಪ್ರಾಧ್ಯಾಪಕ ಡಾ. ವೆಂಕಟೇಶ್ ಗಿರಿ ಅಭಿಪ್ರಾಯಪಟ್ಟರು.

 ಸ್ವಾಮಿ ವಿವೇಕಾನಂದರ ಜಯಂತ್ಯುತ್ಸವ ಅಂಗವಾಗಿ ಇಲ್ಲಿನ ಮಾರುತಿ ಮಂಗಲ ಕಾರ್ಯಾಲಯದಲ್ಲಿ ಶುಕ್ರವಾರ ಆಯೋಜಿಸಿದ್ದ ಯುವ ಸಪ್ತಾಹ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.

‘‌ದೇಶ ನಿರ್ಮಾಣ ಹಾಗೂ ಪ್ರಪಂಚ ಪರ್ಯಟನೆ ವಿವೇಕಾನಂದರ ಧ್ಯೇಯವಾಗಿತ್ತು. ವಿದೇಶಗಳಲ್ಲಿರುವ ಉತ್ತಮ ಅಂಶಗಳನ್ನು ನಮ್ಮ ದೇಶಕ್ಕೆ ತಂದು ಯುವಕರಿಗೆ ಮಾರ್ಗದರ್ಶನ ಮಾಡಲು ಬಯಸಿದ್ದರು. ಅವರ ಕನಸು ನನಸು ಮಾಡುವುದು ಯುವ ಜನರ ಕರ್ತವ್ಯ. ಅವರು ನೀಡಿದ ಸಂದೇಶಗಳನ್ನು ಅರ್ಥೈಸಿಕೊಂಡು ನಡೆದರೆ ಭಾರತವು ವಿಶ್ವದ ಗುರುವಾಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‌ಶಾಸಕ ಸತೀಶ ಕೃಷ್ಣಾ ಸೈಲ್ ಮಾತನಾಡಿ, ‘ನಾವು ಸ್ವಾಮಿ ವಿವೇಕಾನಂದರ ಆದರ್ಶದ ಮಾರ್ಗದಲ್ಲಿ ಎಲ್ಲರೂ ನಡೆಯಬೇಕು. ಅವರು ಮಾಡಿದ 'ಏಳಿ ಎದ್ದೇಳಿ, ಗುರಿ ಮುಟ್ಟುವ ತನಕ ನಿಲ್ಲದಿರಿ' ಘೋಷಣೆಯೇ ಎಲ್ಲ ಮಕ್ಕಳಿಗೆ ತಮ್ಮ ಭವಿಷ್ಯ ರೂಪಿಸಿಕೊಳ್ಳಲು ಸ್ಫೂರ್ತಿ ನೀಡುತ್ತದೆ’ ಎಂದರು.

ಹಿರಿಯ ಸಿವಿಲ್ ನ್ಯಾಯಾಧೀಶ ಟಿ.ಗೋವಿಂದಯ್ಯ ಮಾತನಾಡಿ, ‘ಇಂದಿನ ಸ್ಪರ್ಧಾ ಪ್ರಪಂಚದಲ್ಲಿ ಗುರಿ ಮುಟ್ಟಲು ಸಾಕಷ್ಟು ಪರಿಶ್ರಮ ಪಡಬೇಕು. ನಮ್ಮ ಕಾಯಕವನ್ನು ಇಷ್ಟಪಟ್ಟು ಮಾಡಬೇಕು. ಆಗ ಜೀವನದಲ್ಲಿ ಯಶಸ್ಸು ಒಲಿಯುತ್ತದೆ’ ಎಂದು ಹೇಳಿದರು.

ಈಚಿನ ದಿನಗಳಲ್ಲಿ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುವುದು ಹೆಚ್ಚುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ ಅವರು, ‘ನಮಗೆ ಬೇಸರವಾದಾಗ, ಜೀವನದಲ್ಲಿ ಸಣ್ಣಪುಟ್ಟ ವಿಚಾರಗಳಿಗೆ ಖಿನ್ನರಾದಾಗ ಪ್ರಪಂಚ ವಿಶಾಲವಾಗಿದೆ, ಮುಂದೆಯೂ ಅವಕಾಶಗಳಿವೆ ಎಂದು ಮನಸ್ಸು ಗಟ್ಟಿ ಮಾಡಿಕೊಳ್ಳಬೇಕು. ಸತತ ಅಭ್ಯಾಸ ಮಾಡಿ ಗುರಿ ತಲುಪಬೇಕು. ಅದನ್ನು ಬಿಟ್ಟು ಆತ್ಮಹತ್ಯೆಯ ದಾರಿ ತುಳಿಯುವುದು ಸರಿಯಲ್ಲ’ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ನುಡಿದರು.

ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜಿನ ಪ್ರಾಂಶುಪಾಲರಾದ ಕಲ್ಪನಾ ಕೇರ್ವಾಡಿಕರ್ ಮಾತನಾಡಿ, ‘ಭಾರತದ ಬಗ್ಗೆ ತಿಳಿಯಲು ಮೊದಲು ಸ್ವಾಮಿ ವಿವೇಕಾನಂದರನ್ನು ಅರಿತುಕೊಳ್ಳಿ ಎಂದು ರವೀಂದ್ರನಾಥ ಟ್ಯಾಗೋರ್ ಹೇಳಿದ್ದರು. ಅವರ ಬಗ್ಗೆ ತಿಳಿದಷ್ಟೂ ಕಡಿಮೆ. ನವ ಭಾರತದ ನಿರ್ಮಾಣದಲ್ಲಿ ಯುವಕರ ಪಾತ್ರ ಬಹುಮುಖ್ಯ’ ಎಂದರು.

ರಾಮಕೃಷ್ಣ ಆಶ್ರಮದ ಭವಿಷ್ಯಾನಂದ ಸ್ವಾಮೀಜಿ ಉಪಸ್ಥಿತರಿದ್ದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಜಿ.ಗಾಯತ್ರಿ ಸ್ವಾಗತಿಸಿದರು. ವೇದಿಕೆ ಸಮಾರಂಭಕ್ಕೂ ಮೊದಲು ತಾಲ್ಲೂಕು ಕ್ರೀಡಾಂಗಣದಿಂದ ಮಾರುತಿ ಮಂಗಲ ಕಾರ್ಯಾಲಯದವರೆಗೆ ವಿವಿಧ ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳು ಜಾಥಾ ನಡೆಸಿಕೊಟ್ಟರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಲ್.ಚಂದ್ರಶೇಖರ ನಾಯಕ ಹಾಜರಿದ್ದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಾರವಾರ ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜು, ಬಾಡ ಶಿವಾಜಿ ಪದವಿ ಕಾಲೇಜು, ಸರ್ಕಾರಿ ಐಟಿಐ ಕಾಲೇಜು, ಸೇಂಟ್ ಜೋಸೆಫ್ ಪಿಯು ಕಾಲೇಜು, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ವಿವಿಧ ಸಂಘ  ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಈ ಸಮಾರಂಭ ಆಯೋಜಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT