ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೆರಿನ್‌ ಸಾಕುತಂದೆ ವಿರುದ್ಧ ಕೊಲೆ ಆರೋಪ

Last Updated 13 ಜನವರಿ 2018, 19:30 IST
ಅಕ್ಷರ ಗಾತ್ರ

ಹ್ಯೂಸ್ಟನ್‌ : ಭಾರತ ಸಂಜಾತ ಬಾಲಕಿ ಶೆರಿನ್‌ ಮ್ಯಾಥ್ಯೂಸ್‌ ನಿಗೂಢವಾಗಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ಸಾಕುತಂದೆ ವೆಸ್ಲಿ ಮ್ಯಾಥ್ಯೂಸ್‌ ವಿರುದ್ಧ ಕೊಲೆ ಆರೋಪ ದಾಖಲು ಮಾಡಲಾಗಿದೆ.

ಬಾಲಕಿಯ ಸಾಕುತಾಯಿ ಸಿನಿ ಮ್ಯಾಥ್ಯೂಸ್‌ ವಿರುದ್ಧ ಮಗುವನ್ನು ಸರಿಯಾಗಿ ನೋಡಿಕೊಳ್ಳದ ಆರೋಪ ಹೊರಿಸಲಾಗಿದೆ. ಈ ಆರೋಪ ಸಾಬೀತಾದರೆ, ಎರಡರಿಂದ ಇಪ್ಪತ್ತು ವರ್ಷಗಳ ಕಾಲ ಜೈಲು ಶಿಕ್ಷೆ ಹಾಗೂ ಸುಮಾರು ₹ 6,36,000 (10,000 ಅಮೆರಿಕನ್‌ ಡಾಲರ್‌) ದಂಡ ವಿಧಿಸಬಹುದಾಗಿದೆ. ವೆಸ್ಲಿ ವಿರುದ್ಧ ಮಗು ಕೈಬಿಟ್ಟ ಹಾಗೂ ಸಾಕ್ಷ್ಯ ನಾಶದ ಆರೋಪಗಳನ್ನು ದಾಖಲಿಸಲಾಗಿದೆ.

‘ಪ್ರಕರಣದ ವಿವರಗಳನ್ನು ಈಗ ಬಹಿರಂಗಪಡಿಸುವುದಿಲ್ಲ. ಆದರೆ, ಬಾಲಕಿಯ ಶವ ಪರೀಕ್ಷೆ ವರದಿಯ ಆಧಾರದ ಮೇಲೆ ಕೊಲೆ ಆರೋಪದ ಅಡಿ ಈ ಪ್ರಕರಣದ ವಿಚಾರಣೆ ನಡೆಸುವುದು ಸೂಕ್ತ ಎಂದು ನಿರ್ಧರಿಸಲಾಗಿದೆ’ ಎಂದು ಡಲ್ಲಾಸ್‌ನ ಜಿಲ್ಲಾ ಅಟಾರ್ನಿ ಫೇತ್‌ ಜಾನ್ಸನ್‌ ಹೇಳಿದ್ದಾರೆ.

‘ದಂಪತಿ ವಿಚಾರಣೆ ಎದುರಿಸಲಿದೆ. ನಿಗೂಢವಾಗಿ ಸಾವನ್ನಪ್ಪಿದ ಬಾಲಕಿಯನ್ನು ಭಾರತ ಮರೆತಿಲ್ಲ’ ಎಂದು ಭಾರತದ ಕಾನ್ಸಲ್‌ ಜನರಲ್‌ ಅನುಪಮ್‌ ರೆ ಹೇಳಿದ್ದಾರೆ.

ಒಂದು ವೇಳೆ, ಈ ಪ್ರಕರಣಗಳಲ್ಲಿ ದಂಪತಿ ಜೈಲುಪಾಲಾದರೆ, ನಾಲ್ಕು ವರ್ಷದ ಅವರ ಸ್ವಂತ ಮಗಳ ಭವಿಷ್ಯ ಅತಂತ್ರವಾಗುವ ಸಾಧ್ಯತೆ ಇದೆ. ಈ ಬಗ್ಗೆ ಮಕ್ಕಳ ರಕ್ಷಣಾ ಸೇವಾ ಸಂಸ್ಥೆ (ಸಿಪಿಎಸ್‌) ವಿಚಾರಣೆ ನಡೆಸಲಿದೆ. ಕಳೆದ ಅಕ್ಟೋಬರ್‌ 7ರಂದು ಕಾಣೆಯಾಗಿದ್ದ ಶೆರಿನ್‌ ಮೃತದೇಹವು ದಂಪತಿ ಮನೆಗೆ ಸಮೀಪದ ಸುರಂಗದಲ್ಲಿ ಅದೇ ತಿಂಗಳ 22ರಂದು ಪತ್ತೆಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT