ಬಿಎಫ್‌ಸಿಗೆ ಮತ್ತೊಂದು ಸವಾಲು

7
ಇಂಡಿಯನ್‌ ಸೂಪರ್‌ ಲೀಗ್‌: ಇಂದು ಡೈನಾಮೋಸ್‌ ವಿರುದ್ಧ ಪೈಪೋಟಿ

ಬಿಎಫ್‌ಸಿಗೆ ಮತ್ತೊಂದು ಸವಾಲು

Published:
Updated:
ಬಿಎಫ್‌ಸಿಗೆ ಮತ್ತೊಂದು ಸವಾಲು

ನವದೆಹಲಿ: ತವರಿನಲ್ಲಿ ನಡೆದಿದ್ದ ತನ್ನ ಹಿಂದಿನ ಹಣಾಹಣಿಯಲ್ಲಿ ಎಟಿಕೆ ವಿರುದ್ಧ ಗೆದ್ದು ಪಾಯಿಂಟ್ಸ್‌ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿರುವ ಬೆಂಗಳೂರು ಫುಟ್‌ಬಾಲ್‌ ಕ್ಲಬ್‌ (ಬಿಎಫ್‌ಸಿ) ತಂಡ ಇಂಡಿಯನ್‌ ಸೂಪರ್‌ ಲೀಗ್‌ನಲ್ಲಿ (ಐಎಸ್‌ಎಲ್‌) ಮತ್ತೊಂದು ಹೋರಾಟಕ್ಕೆ ಸಜ್ಜಾಗಿದೆ.

ಜವಾಹರಲಾಲ್‌ ನೆಹರು ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯದಲ್ಲಿ ಬಿಎಫ್‌ಸಿ ಆತಿಥೇಯ ಡೆಲ್ಲಿ ಡೈನಾಮೋಸ್‌ ವಿರುದ್ಧ ಸೆಣಸಲಿದೆ.

ಡೈನಾಮೋಸ್‌ ಈ ಬಾರಿ ‍ಆಡಿರುವ 9 ಪಂದ್ಯಗಳಲ್ಲಿ ಒಂದರಲ್ಲಷ್ಟೇ ಗೆದ್ದಿದೆ. ಏಳು ಪಂದ್ಯಗಳಲ್ಲಿ ಸೋತಿರುವ ತಂಡ ಪಟ್ಟಿಯಲ್ಲಿ ಕೊನೆಯ ಸ್ಥಾನ ಹೊಂದಿದೆ. ಆದರೆ ಸುನಿಲ್‌ ಚೆಟ್ರಿ ಪಡೆ ಚೊಚ್ಚಲ ಟೂರ್ನಿಯಲ್ಲಿ ಅಮೋಘ ಸಾಮರ್ಥ್ಯ ತೋರುತ್ತಿದೆ. ಹೀಗಾಗಿ ಭಾನುವಾರದ ಹೋರಾಟದಲ್ಲೂ ಬಿಎಫ್‌ಸಿ ಗೆಲ್ಲುವ ನೆಚ್ಚಿನ ತಂಡವಾಗಿ ಕಣಕ್ಕಿಳಿಯಲಿದೆ.

ಎಟಿಕೆ ಎದುರಿನ ಪಂದ್ಯದಲ್ಲಿ ಏಕೈಕ ಗೋಲು ಗಳಿಸಿ ತಂಡಕ್ಕೆ ಜಯದ ಸಿಹಿ ಉಣ ಬಡಿಸಿದ್ದ ನಾಯಕ ಚೆಟ್ರಿ ಈ ಪಂದ್ಯದಲ್ಲೂ ಮೋಡಿ ಮಾಡಲು ಉತ್ಸುಕರಾಗಿದ್ದಾರೆ.

ಮುಂಚೂಣಿ ವಿಭಾಗದ ಆಟಗಾರ ಮಿಕು ಮತ್ತು ಉದಾಂತ್‌ ಸಿಂಗ್‌ ಕುಮಾಮ ಕೂಡ ಡೈನಾಮೋಸ್‌ ರಕ್ಷಣಾ ಕೋಟೆಯನ್ನು ಸರಾಗವಾಗಿ ಭೇದಿಸಬಲ್ಲರು. ಈ ಬಾರಿಯ ಲೀಗ್‌ನಲ್ಲಿ ವೆನೆಜುವೆಲಾದ ಮಿಕು ಎಂಟು ಗೋಲು ಗಳಿಸಿದ್ದಾರೆ. ಇದು ಅವರ ಸಾಮರ್ಥ್ಯಕ್ಕೆ ಹಿಡಿದ ಕೈಗನ್ನಡಿ.

ಮಿಡ್‌ಫೀಲ್ಡರ್‌ಗಳಾದ ಎಡು ಗಾರ್ಸಿಯಾ, ಎರಿಕ್‌ ಪಾರ್ಟಲು, ಡಿಮಾಸ್‌ ಡೆಲ್‌ಗಾಡೊ, ಲೆನ್ನಿ ರಾಡ್ರಿ‌ಗಸ್‌ ಅವರು ಹಿಂದಿನ ಪಂದ್ಯಗಳಲ್ಲಿ ಮಿಂಚಿದ್ದರು. ಅಮೋಘ ಲಯದಲ್ಲಿರುವ ಇವರು ಡೈನಾಮೋಸ್‌ ವಿರುದ್ಧವೂ ಬಿಎಫ್‌ಸಿಗೆ ಗೋಲಿನ ಕಾಣಿಕೆ ನೀಡಲು ಕಾಯುತ್ತಿದ್ದಾರೆ.

ಜುನಾನ್‌, ಹರ್ಮನ್‌ಜ್ಯೋತ್‌ ಸಿಂಗ್‌ ಖಾಬ್ರಾ, ರಾಹುಲ್‌ ಬೆಕೆ, ಜಾನ್‌ ಜಾನ್ಸನ್‌ ಮತ್ತು ನಿಶುಕುಮಾರ್‌ ಅವರನ್ನು ಹೊಂದಿರುವ ಬೆಂಗಳೂರಿನ ತಂಡ ರಕ್ಷಣಾ ವಿಭಾಗದಲ್ಲೂ ಬಲಿಷ್ಠವಾಗಿದೆ. ಅನುಭವಿ ಗೋಲ್‌ಕೀಪರ್‌ ಗುರುಪ್ರೀತ್ ಸಿಂಗ್‌ ಸಂಧು ಎದುರಾಳಿಗಳ ಗೋಲುಗಳಿಕೆಯ ಪ್ರಯತ್ನಗಳನ್ನು ವಿಫಲಗೊಳಿಸಿ ತಂಡದ ಗೆಲುವನ್ನು ಸುಲಭವಾಗಿಸುವ ವಿಶ್ವಾಸ ಹೊಂದಿದ್ದಾರೆ. ಗುರುಪ್ರೀತ್‌ ಹಿಂದಿನ ಪಂದ್ಯದಲ್ಲಿ ಅಮೋಘ ಸಾಮರ್ಥ್ಯ ತೋರಿದ್ದರು.

ವಿಶ್ವಾಸದಲ್ಲಿ ಡೆಲ್ಲಿ:ತವರಿನ ಅಭಿಮಾನಿಗಳ ಬೆಂಬಲದೊಂದಿಗೆ ಕಣಕ್ಕಿಳಿಯಲಿರುವ ಡೈನಾಮೋಸ್‌ ಕೂಡ ಗೆಲುವಿನ ಸಿಹಿ ಸವಿಯುವ ಕನಸು ಕಾಣುತ್ತಿದೆ. ಮಿಗುಯೆಲ್‌ ಏಂಜೆಲ್‌ ಪೋರ್ಚುಗಲ್‌ ಮಾರ್ಗದರ್ಶನದಲ್ಲಿ ತರಬೇತುಗೊಂಡಿರುವ ಈ ತಂಡದ ನಾಕೌಟ್‌ ಪ್ರವೇಶದ ಹಾದಿ ಬಹುತೇಕ ಮುಚ್ಚಿದೆ. ಈ ತಂಡದಲ್ಲೂ ಪ್ರತಿಭಾನ್ವಿತ ಆಟಗಾರರಿದ್ದಾರೆ. ಆದರೆ ಯಾರೂ ಕೂಡ ಉತ್ತಮ ಲಯದಲ್ಲಿಲ್ಲ. ಇದು ತಂಡಕ್ಕೆ ಮುಳುವಾಗಿ ಪರಿಣಮಿಸಿದೆ. ಆಟಗಾರರು ಹಿಂದಿನ ನಿರಾಸೆ ಮರೆತು ಶ್ರೇಷ್ಠ ಸಾಮರ್ಥ್ಯ ತೋರಿದರೆ ಡೈನಾಮೋಸ್‌ಗೆ ಬಲಿಷ್ಠ ಬಿಎಫ್‌ಸಿ ತಂಡವನ್ನು ಸೋಲಿಸುವುದು ಕಷ್ಟವಾಗಲಾರದರು.

***

ನಮ್ಮ ತಂಡದಲ್ಲಿ ಬಲಿಷ್ಠ ಆಟಗಾರರಿದ್ದಾರೆ. ನಾಯಕ ಚೆಟ್ರಿ ಸೇರಿದಂತೆ ಎಲ್ಲರೂ ಚೆನ್ನಾಗಿ ಆಡುತ್ತಿದ್ದಾರೆ. ಹೀಗಾಗಿ ಯಶಸ್ಸಿನ ಹಾದಿಯಲ್ಲಿ ಹೆಜ್ಜೆ ಇಡಲು ಸಾಧ್ಯವಾಗುತ್ತಿದೆ.

ಅಲ್ಬರ್ಟ್‌ ರೋಕಾ

ಬಿಎಫ್‌ಸಿ ಕೋಚ್‌

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry