ಸುಗ್ಗಿ ಸಂಕ್ರಾಂತಿ ಖರೀದಿ ಸಂಭ್ರಮ

7

ಸುಗ್ಗಿ ಸಂಕ್ರಾಂತಿ ಖರೀದಿ ಸಂಭ್ರಮ

Published:
Updated:
ಸುಗ್ಗಿ ಸಂಕ್ರಾಂತಿ ಖರೀದಿ ಸಂಭ್ರಮ

ರಾಮನಗರ: ಮಕರ ಸಂಕ್ರಾಂತಿ ಹಬ್ಬದ ಅಂಗವಾಗಿ ನಗರದ ವಿವಿಧೆಡೆ ಎಳ್ಳು, ಬೆಲ್ಲ, ಕಬ್ಬಿನ ಜಲ್ಲೆ, ಗೆಣಸಿನ ವ್ಯಾಪಾರವು ಶನಿವಾರ ನಡೆಯಿತು. ಅಧಿಕೃತವಾಗಿ ಸೋಮವಾರ ಸಂಕ್ರಾಂತಿ ಹಬ್ಬ. ಆದರೆ ಅಂದು ಬಸವಣ್ಣನ ದಿನವಾದ್ದರಿಂದ ಹಸು–ಎತ್ತುಗಳನ್ನು ಕಿಚ್ಚು ಹಾಯಿಸುವುದು ಸರಿಯಲ್ಲ ಎಂಬ ಕಾರಣಕ್ಕೆ ಕೆಲವರು ಭಾನುವಾರವೇ ಹಬ್ಬ ಆಚರಿಸಲು ನಿರ್ಧರಿಸಿದ್ದಾರೆ. ಹೀಗಾಗಿ ಹಬ್ಬದ ಖರೀದಿಯು ಕೊಂಚ ಮುಂಗಡವಾಗಿಯೇ ಆರಂಭಗೊಂಡಿತು.

ಮುಂಜಾನೆಯಿಂದಲೇ ಗ್ರಾಹಕರು ಎಪಿಎಂಸಿ ಮಾರುಕಟ್ಟೆ, ಹಳೆ ಬಸ್ ನಿಲ್ದಾಣ ಹಾಗೂ ನಗರದ ಪ್ರಮುಖ ರಸ್ತೆ ಬದಿಗಳಲ್ಲಿ ಕಬ್ಬಿನ ಜಲ್ಲೆ, ಕಡಲೆಕಾಯಿ, ಅವರೆಕಾಯಿ, ಗೆಣಸು, ಹೂ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದರು.

ಹಬ್ಬದ ಮುನ್ನಾ ದಿನವಾದ ಶನಿವಾರ ಅವರೆಕಾಯಿಗೆ ಹೆಚ್ಚು ಬೇಡಿಕೆ ಇರಲಿಲ್ಲ. ಒಂದು ಕೆ.ಜಿ ಅವರೆಕಾಯಿ ₹25 ರಿಂದ 30 ರವರೆಗೆ ಮಾರಾಟವಾಗುತ್ತಿತ್ತು. ಒಂದು ಜತೆ ಕಬ್ಬಿನ ಜಲ್ಲೆ ₹100, ಗೆಣಸು ಕೆ.ಜಿಗೆ ₹25, ಕಡಲೆಕಾಯಿ ಒಂದು ಸೇರಿಗೆ ₹40ಕ್ಕೆ ಮಾರಾಟವಾಯಿತು.

ಎಳ್ಳು, ಬೆಲ್ಲ, ಸಕ್ಕರೆ ಅಚ್ಚು ಸೇರಿದಂತೆ ವಿವಿಧ ಪದಾರ್ಥಗಳ ಬೆಲೆ ಹೆಚ್ಚಾಗಿರುವುದಕ್ಕೆ ಗ್ರಾಹಕರು ಅಸಮಾಧಾನದಿಂದಲೇ ವ್ಯಾಪಾರ ಮುಂದುವರಿಸಿದ್ದರು. ರೈತರು ತಮ್ಮ ರಾಸುಗಳನ್ನು ಸಿಂಗರಿಸಲು ಬೇಕಾದ ವಸ್ತುಗಳನ್ನು ಖರೀದಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಸಿದ್ಧ ಸರಕು: ‘ಎಳ್ಳು, ಬೆಲ್ಲದ ಅಚ್ಚು, ಒಂದು ತುಂಡು ಕಬ್ಬನ್ನು ಪ್ರತಿ ಮನೆಗೂ ಹೋಗಿ ಹೆಣ್ಣು ಮಕ್ಕಳು ಬೀರುತ್ತಾರೆ. ಮೊದಲಾದರೆ ಎಳ್ಳು, ಬೆಲ್ಲ ಎಲ್ಲವನ್ನೂ ಬೆರೆಸಿ ನಾವೇ ಸಿದ್ಧಪಡಿಸಿಕೊಳ್ಳುತ್ತಿದ್ದೆವು, ಆದರೆ ಇಂದು ಇವೆಲ್ಲಾ ರೆಡಿಮೆಡ್‌ ಪ್ಯಾಕೆಟ್‌ಗಳಲ್ಲಿ ದೊರೆಯುತ್ತಿವೆ. ಯಾರಿಗೂ ಸಮಯ ಇದ್ದಂತೆ ಇಲ್ಲ’ ಎಂದು ಗ್ರಾಹಕಿ ಸುಂದರಮ್ಮ ತಿಳಿಸಿದರು.

ರಾಸುಗಳ ಸಿಂಗಾರಕ್ಕೂ ನಿರಾಸಕ್ತಿ: ‘ಕಳೆದ ಹತ್ತು ವರ್ಷಗಳಿಂದ ಹಸುಗಳನ್ನು ಸಿಂಗರಿಸುವ ವಸ್ತುಗಳನ್ನು ಮಾರಾಟ ಮಾಡುತ್ತಿದ್ದೇವೆ. ವರ್ಷದಿಂದ ವರ್ಷಕ್ಕೆ ಮೂಗಿನ ದಾರ, ಹಗ್ಗ, ಪೀಪಿ, ಕರಿಹುರಿ, ಕತ್ತಿನ ಹುರಿ, ಪ್ಲಾಸ್ಟಿಕ್ ಹಾರಗಳು, ಕತ್ತಿನ ಗಂಟೆ, ಕುಚ್ಚು, ಕಳಸ, ನೀಲಿ, ಹಸಿವಿನ ಹಗ್ಗ, ಕತ್ತಿನ ಹುರಿ... ಇವುಗಳನ್ನು ಕೊಂಡುಕೊಳ್ಳುವವರು ಕಡಿಮೆಯಾಗುತ್ತಿದ್ದಾರೆ’ ಎಂದು ಇಲ್ಲಿನ ಕುಮಾರ್‌ ಹಾರ್ಡ್‌ವೇರ್‌ನ ಮಾಲೀಕ ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು.

‘ಹಿಂದೆಲ್ಲ ಹಸುವಿನ ಹಗ್ಗ, ಕರಿಹುರಿ, ಚಿಲಕಗಳನ್ನು ರೈತರು ತಪ್ಪದೇ ಕೊಂಡು ಹೋಗುತ್ತಿದ್ದರು. ಇಂದು ಹೈನುಗಾರಿಕೆ ಬೆಳೆದಿದ್ದರೂ ರಾಸುಗಳ ಮೇಲಿನ ಕಾಳಜಿ ಕಡಿಮೆ ಆಗುತ್ತಿದೆ. ಇಂದು ಹಸುಗಳು ಹಾಲು ಕೊಡುವ ಯಂತ್ರಗಳಾಗಿವೆ’ ಎಂದು ಅಭಿಷೇಕ್‌ ಬೇಸರ ವ್ಯಕ್ತಪಡಿಸಿದರು.

ಸುಗ್ಗಿಯ ಹಬ್ಬ: ‘ಸಂಕ್ರಾಂತಿ ಹಬ್ಬ ಸುಗ್ಗಿಯ ಹಬ್ಬವೆಂದೇ ಪ್ರತೀತಿ. ಗ್ರಾಮೀಣ ಭಾಗಗಳಲ್ಲಿ ಬೆಳೆಗಳು ಕಟಾವು ಆದ ನಂತರ ಈ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸುತ್ತಾರೆ. ಸಂಕ್ರಾಂತಿ ಹಬ್ಬದ ನಂತರ ಸೂರ್ಯ ತನ್ನ ಪಥವನ್ನು ಬದಲಾಯಿಸುತ್ತಾನೆ. ನಾಳೆಗೆ ಧನುರ್ಮಾಸ ಕೊನೆಯಾಗಲಿದೆ. ಈ ಹಬ್ಬದಂದು ಹೆಣ್ಣು ಮಕ್ಕಳು ಸ್ನಾನ ಮಡಿಗಳಿಂದ ದೇವರನ್ನು ಪೂಜಿಸಿ ನಂತರ ಮನೆಮನೆಗಳಿಗೆ ತೆರಳಿ ಎಳ್ಳು-ಬೆಲ್ಲ, ಕಬ್ಬಿನ ಜಲ್ಲೆ ಹಂಚುವ ಪದ್ಧತಿ ಇಂದಿಗೂ ಇದೆ’ ಎಂದು ಹಿರಿಯರಾದ ಪರಮಶಿವಯ್ಯ ತಿಳಿಸಿದರು.

ಮಾರುಕಟ್ಟೆಗೆ ಬಂತು ಪಟ್ಲು ಕಬ್ಬು

ಚನ್ನಪಟ್ಟಣ ತಾಲ್ಲೂಕಿನ ಪಟ್ಲು ಗ್ರಾಮದಲ್ಲಿ ಕಳೆದ ಕೆಲವು ದಿನಗಳಿಂದಲೇ ಸಂಕ್ರಾಂತಿ ಸಂಭ್ರಮ ಮನೆ ಮಾಡಿದ್ದು, ಸದ್ಯ ಹಬ್ಬದ ಕಬ್ಬಿನ ಕಟಾವು ಕಾರ್ಯ ಅಂತಿಮ ಹಂತಕ್ಕೆ ತಲುಪಿದೆ. ಈ ಭಾಗದಲ್ಲಿ ಸಂಕ್ರಾಂತಿಗೆಂದೇ ವಿಶೇಷವಾದ ಕರಿ ಕಬ್ಬನ್ನು ಬೆಳೆಯಲಾಗುತ್ತಿದೆ. ದಶಕದಿಂದ ಈ ಗ್ರಾಮ ಹಾಗೂ ಸುತ್ತಲಿನವರು ಇದನ್ನೇ ಪ್ರಮುಖ ಬೆಳೆಯನ್ನಾಗಿ ಮಾಡಿಕೊಂಡಿದ್ದಾರೆ. ಹಬ್ಬಕ್ಕೆ ಕೆಲವೇ ದಿನಗಳ ಮುನ್ನ ಕಬ್ಬಿನ ಕಟಾವು ಆರಂಭಗೊಂಡು ಹಬ್ಬದೊಂದಿಗೇ ಮುಕ್ತಾಯವಾಗುತ್ತದೆ. ಈ ವರ್ಷ ಈಗಾಗಲೇ ಇಲ್ಲಿನ ಕಬ್ಬು ಬೆಂಗಳೂರು, ಮಂಡ್ಯ, ಹಾಸನ ಮಾತ್ರವಲ್ಲದೆ ತಮಿಳುನಾಡಿನ ಗಡಿಭಾಗಗಳಿಗೂ ಸಾಗಣೆ ಆಗಿದೆ. ಇದೀಗ ರಾಮನಗರ ಮಾರುಕಟ್ಟೆಗೂ ಕರಿ ಕಬ್ಬು ಲಗ್ಗೆ ಇಟ್ಟಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry