ಪರವಾನಗಿ ರಹಿತ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಕಡಿತ ಆದೇಶ ಹಿಂಪಡೆಯಿರಿ

7

ಪರವಾನಗಿ ರಹಿತ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಕಡಿತ ಆದೇಶ ಹಿಂಪಡೆಯಿರಿ

Published:
Updated:

ಚಿಕ್ಕನಾಯಕನಹಳ್ಳಿ: ಪರವಾನಗಿ ಇಲ್ಲದ ರೈತರ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸುವ ಸರ್ಕಾರದ ಆದೇಶವನ್ನು ಕೂಡಲೇ ಹಿಂಪಡೆಯಬೇಕು ಎಂದು ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ಒತ್ತಾಯಿಸಿದರು.

ರಾಜ್ಯ ಸರ್ಕಾರ 2011ರಲ್ಲಿ ಅಂತರ್ಜಲ ಅಧಿನಿಯಮದಂತೆ ಕೊಳವೆ ಬಾವಿ ಕೊರೆಸುವ ಮುನ್ನ ರೈತರು, ಇಲಾಖೆಗಳು ಹಾಗೂ ಸಾರ್ವಜನಿಕರು ಜಿಲ್ಲಾ ಸಮಿತಿಯ ಅನುಮೋದನೆ ಪಡೆಯಬೇಕು. ನೋಂದಣಿ ಮಾಡಿದ ಕೊಳವೆ ಬಾವಿಗಳಿಗೆ ಮಾತ್ರ ವಿದ್ಯುತ್ ಸಂಪರ್ಕ ಕಲ್ಪಿಸಬೇಕು. ನೋಂದಣಿ ಇಲ್ಲದೆ ಚಾಲ್ತಿಯಲ್ಲಿರುವ ಕೊಳವೆ ಬಾವಿಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸಲು ಜ.3ರಂದು ಸರ್ಕಾರ ಆದೇಶ ಹೊರಡಿಸಿದೆ. ಈ ಆದೇಶ ರೈತ ವಿರೋಧಿಯಾಗಿದ್ದು, ಕೂಡಲೇ ಆದೇಶ ಹಿಂಪಡೆಯಬೇಕು. ಇಲ್ಲವಾದರೆ ರೈತರ ಪರ ಬೀದಿಗಿಳಿದು ಹೋರಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ, ಕೊರಟಗೆರೆ, ಮಧುಗಿರಿ, ತಾಲ್ಲೂಕನ್ನು ಸೇರಿಸಿ ಆದೇಶ ಹೊರಡಿಸಿದೆ. ಸರ್ಕಾರ ವಿದ್ಯುತ್ ಪರಿವರ್ತಕಗಳನ್ನು ಸಮರ್ಪಕವಾಗಿ ಸರಬರಾಜು ಮಾಡದೇ ಇಂತಹ ಆದೇಶ ಹೊರಡಿಸಿರುವುದು ಅವೈಜ್ಞಾನಿಕ ಎಂದರು.

ಗಂಗಕಲ್ಯಾಣ ಸೇರಿದಂತೆ ನೂತನವಾಗಿ ಕೊರೆಸಿದ ಕೊಳವೆ ಬಾವಿಗಳಿಗೂ ಈ ಆದೇಶ ಅನ್ವಯವಾಗಲಿದೆ. ಸರ್ಕಾರ ಹೊಸ ವಿದ್ಯುತ್ ಪರಿವರ್ತಕಗಳನ್ನು ಸರಬರಾಜು ಮಾಡದೆ ಹಳೇ ಟಿ.ಸಿ.ಗಳನ್ನು ರಿಪೇರಿ ಮಾಡಿ ರೈತರಿಗೆ ನೀಡುತ್ತಿದೆ. ಇದರಿಂದ ವಿದ್ಯುತ್ ಪರಿವರ್ತಕಗಳು ಪದೇ ಪದೇ ಸುಟ್ಟ ಹೋಗುತ್ತಿದ್ದು, ರೈತರಿಗೆ ನಷ್ಟ ಸಂಭವಿಸುತ್ತಿದೆ ಎಂದರು.

ಬೆಸ್ಕಾಂ ಇಲಾಖೆ ಅಧಿಕಾರಿಗಳು ಲಂಚ ಪಡೆದು ನಿಯಮ ಬಾಹೀರವಾಗಿ ಪರಿವರ್ತಕಗಳನ್ನು ಒದಗಿಸುತ್ತಿದ್ದಾರೆ. ಪದೇ ಪದೇ ಸುಟ್ಟು ಹೋಗುವ ಪರಿವರ್ತಕಗಳನ್ನು ಬದಲಾಯಿಸಲು ರೈತರು ಮತ್ತೆ ಮತ್ತೆ ಅಧಿಕಾರಿಗಳ ಬಳಿ ಗೋಗರೆಯುವಂತಾಗಿದೆ ಎಂದು ಆರೋಪಿಸಿದರು.

ತಾಲ್ಲೂಕು ಬಿಜೆಪಿ ಘಟಕದ ಅಧ್ಯಕ್ಷ ಎಚ್.ಆರ್.ಶಶಿಧರ್, ಕಾರ್ಯದರ್ಶಿ ನಿರಂಜನ್, ಜಿಲ್ಲಾ ಘಟಕದ ಉಪಾಧ್ಯಕ್ಷ ಶಂಕರಲಿಂಗಪ್ಪ, ಎಪಿಎಂಸಿ ಸದಸ್ಯ ಶಿವರಾಜ್, ಪಿ.ಎಲ್.ಡಿ.ಬ್ಯಾಂಕ್ ನಿರ್ದೇಶಕ ಸಣ್ಣಯ್ಯ ಉಪಸ್ಥಿತಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry