ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತರಕಾರಿ ಸ್ವಾವಲಂಬಿ ಸರ್ಕಾರಿ ಶಾಲೆ

Last Updated 14 ಜನವರಿ 2018, 8:53 IST
ಅಕ್ಷರ ಗಾತ್ರ

ಬಹುತೇಕ ಎಲ್ಲ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆ ಜಾರಿಯಲ್ಲಿದೆ. ಅಲ್ಲೆಲ್ಲ ತರಕಾರಿ, ಸೊಪ್ಪು ಕುರಿತ ಆಕ್ಷೇಪಗಳು ಆಗೀಗ ಬರುತ್ತವೆ. ಕೂಡ್ಲಿಗಿ ತಾಲ್ಲೂಕಿನ ಹಿರೇಹೆಗ್ಡಾಳ್‌ ಸರ್ಕಾರಿ ಪ್ರೌಢಶಾಲೆ ಇದಕ್ಕೆ ಪರಿಹಾರ ಕಂಡುಕೊಂಡಿದೆ.ಹೌದು, ಶಿಕ್ಷಕರು, ವಿದ್ಯಾರ್ಥಿಗಳು ಜೊತೆಗೆಯಾಗಿ ಶಾಲಾ ಆವರಣದಲ್ಲೇ ತರಕಾರಿ ಬೆಳೆದು ಬಿಸಿಯೂಟಕ್ಕೆ ಉಪಯೋಗಿಸುತ್ತಿದ್ದಾರೆ.

ಶಾಲಾ ಕೊಠಡಿ ಮತ್ತು ಕಾಂಪೌಂಡ್‌ ನಡುವೆ ಇರುವ 6–7 ಅಡಿ ಜಾಗದಲ್ಲಿ ಮೆಂತೆ, ಪಾಲಕ, ಕೊತ್ತಂಬರಿ, ರಾಜಗಿರಿ ಸೇರಿದತಂತೆ ವಿವಿಧ ಸೊಪ್ಪುಗಳನ್ನು ಬೆಳೆಯಲಾಗಿದೆ. ಶಾಲೆಯ ಹಿಂಭಾಗದಲ್ಲಿ ಸಾಕಷ್ಟು ಖಾಲಿ ಜಾಗವಿದ್ದು, ಅದರಲ್ಲಿ ಸ್ವಲ್ಪ ಜಾಗಕ್ಕೆ ಬೇಲಿ ಹಾಕಿ, ಅಲ್ಲಿ ಟೊಮೆಟೊ, ಗಜ್ಜರಿ,‌ ಬೀಟ್‌ರೋಟ್ ಬೆಳೆಯಲಾಗುತ್ತಿದೆ. ಕಾಂಪೌಂಡ್ ಪಕ್ಕದಲ್ಲಿ ಕಟ್ಟಿಗೆಗಳನ್ನು ನೆಟ್ಟು ಹಿರೇಕಾಯಿ, ಸೋರೆ ಕಾಯಿ, ಹಾಗಲ ಬಳ್ಳಿ ಹಾಕಲಾಗಿದೆ.ನಿಂಬೆ ಗಿಡ ಹಾಗೂ ತೆಂಗಿನ ಗಿಡಗಳನ್ನೂ ನೆಡಲಾಗಿದೆ.

‘ಶಾಲೆಯಲ್ಲಿ 225 ವಿದ್ಯಾರ್ಥಿಗಳಿದ್ದು, ಮಧ್ಯಾಹ್ನದ ಬಿಸಿಯೂಟಕ್ಕೆ ಯಾವುದೇ ರೀತಿಯ ತರಕಾರಿ ಮತ್ತು ಸೊಪ್ಪನ್ನು ಕೊಂಡುಕೊಳ್ಳುತ್ತಿಲ್ಲ. ಆದರೆ ಶಿಕ್ಷಕರ ಮಾರ್ಗದರ್ಶನದಲ್ಲಿ ಕೃಷಿ ಮಾಡುವ ಮೂಲಕ ವಿದ್ಯಾರ್ಥಿಗಳು ತರಕಾರಿ ಬೆಳೆಸುತ್ತಾರೆ’ ಎಂದು ಶಿಕ್ಷಕರು ಹೇಳುತ್ತಾರೆ.

‌‘ತರಕಾರಿ ಹಾಗೂ ಸೊಪ್ಪು ಬೆಳೆಗೆ ವಿದ್ಯಾರ್ಥಿಗಳೇ ಸ್ವ ಇಚ್ಛೆ ಹಾಗೂ ಆಸಕ್ತಿಯಿಂದ ನೀರುಣಿಸುತ್ತಾರೆ. ಕಳೆ ಕೀಳುವುದು, ಸೊಪ್ಪಿನ ಮಡಿಗಳನ್ನು ಮಾಡುವುದು,‌ ಗೊಬ್ಬರ ಹಾಕುವುದು ಸೇರಿದಂತೆ ಪೋಷಣೆಯನ್ನು ಮಾಡುತ್ತಾರೆ. ಇದರಿಂದ ನಿತ್ಯ ತಾಜಾ ತರಕಾರಿ ಬಿಸಿಯೂಟಕ್ಕೆ ಬಳಸಲು ಸಾಧ್ಯವಾಗುತ್ತದೆ. ಜೊತೆಗೆ ಹಣವೂ ಉಳಿತಾಯ ಆಗುತ್ತದೆ’ ಎನ್ನುತ್ತಾರೆ ಶಾಲೆಯ ಮುಖ್ಯ ಶಿಕ್ಷಕ ಪಿ.ಡಿ. ರಂಗಪ್ಪ.

‘ಶಾಲೆಯ ಒಂದು ಕಡೆ ಕಾಂಪೌಂಡ್ ಇದೆ. ಮತ್ತೊಂದು ಕಡೆ ಕೇವಲ ಬೇಲಿ ಇದೆ. ಆದರೂ ಇಲ್ಲಿನ ತರಕಾರಿಯನ್ನು ಯಾರೋಬ್ಬರು ಮುಟ್ಟುವುದಿಲ್ಲ. ನಮ್ಮ ಎಲ್ಲಾ ಕೆಲಸ ಕಾರ್ಯಗಳಿಗೆ ಶಿಕ್ಷಕರ ಮಾರ್ಗದರ್ಶನವಿದೆ. ಪೋಷಕರ ಬೆಂಬಲವೂ ಇದೆ’ ಎಂದು ವಿದ್ಯಾರ್ಥಿಗಳಾದ ಅರ್ಪಿತಾ, ನೀಲಮ್ಮ, ಕಿರಣ್ ಬಾಬು ಹಾಗೂ ದರ್ಶನ್ ಹೇಳುತ್ತಾರೆ. ಈ ಶಾಲೆಯ ಆವರಣದಲ್ಲೇ ಕೊಳವೆ ಬಾವಿ ಕೊರೆಯಲಾಗಿದ್ದು, ಅದರಿಂದ ಕೈತೋಟ ಹಾಗೂ ಬಿಸಿಯೂಟಕ್ಕೆ ನೀರು ಪೂರೈಕೆ ಮಾಡಲಾಗುತ್ತಿದೆ.

ಎ.ಎಂ.ಸೋಮಶೇಖರಯ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT