ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಡಿಎಚ್‌ಐನಲ್ಲಿ ಸರ್ಕಾರಿ ಕೆಲಸಕ್ಕೆ ಅವಕಾಶವಿದೆಯೇ?’

Last Updated 14 ಜನವರಿ 2018, 19:30 IST
ಅಕ್ಷರ ಗಾತ್ರ

1. ನಾನು 2016– 17ರಲ್ಲಿ ಎಸ್‌ಎಸ್‌ಎಲ್‌ಸಿ ಮುಗಿಸಿದ್ದೇನೆ. ನಂತರ ಪ್ಯಾರಾ ಮೆಡಿಕಲ್ ಸೈನ್ಸ್‌ನಲ್ಲಿ ಡಿಎಚ್‌ಐ ಮಾಡಿದ್ದೇನೆ. ಆದರೆ ನನಗೆ ಇದರ ಬಗ್ಗೆ ಮಾಹಿತಿ ಇಲ್ಲ. ಇದರಿಂದ ಏನೇನು ಕೆಲಸ ಸಿಗುತ್ತದೆ. ಹಾಗೂ ಸರ್ಕಾರಿ ನೌಕರಿ ಪಡೆಯಬೇಕಾದರೆ ಎಷ್ಟು ಅಂಕ ಪಡೆಯಬೇಕು?
–ಮಂಜು, ಊರು ಬೇಡ

ಮಂಜು, ಯಾವುದೇ ಕೋರ್ಸ್‌ ಆಯ್ಕೆ ಮಾಡುವಾಗ, ಕೋರ್ಸ್‌ ಬಗ್ಗೆ ಮಾಹಿತಿ, ಎಲ್ಲೆಲ್ಲಿ ಕೋರ್ಸ್‌ ಇದೆ, ಕೆಲಸಕ್ಕೆ ಎಲ್ಲಿ ಅರ್ಜಿ ಸಲ್ಲಿಸಬೇಕು - ಈ ರೀತಿಯ ವಿವರಗಳನ್ನು ಪ್ರತಿಯೊಬ್ಬ ವಿದ್ಯಾರ್ಥಿಯೂ ಸಂಗ್ರಹಿಸಬೇಕು. ನೀವು ಪಾಸುಮಾಡಿದ ಮೇಲೆ, ಈ ಪ್ರಶ್ನೆಯನ್ನು ಕೇಳುತ್ತಿದ್ದೀರಿ.

ಡಿಎಚ್‌ಐ (DHI) ಡಿಪ್ಲೊಮ ಇನ್‌ ಹೆಲ್ತ್‌ ಇನ್ಸ್‌ಪೆಕ್ಟರ್‌ ಕೋರ್ಸ್‌ ಮಾಡಿದ್ದೀರಿ. ಈ ಕ್ಷೇತ್ರದಲ್ಲಿ ಡಿಪ್ಲೊಮ ಪಡೆದವರು ಪರಿಸರ ಹೆಲ್ತ್‌ ಆಫೀಸರ್‌, ಪಬ್ಲಿಕ್‌ ಹೆಲ್ತ್‌ ಇನ್ಸ್‌ಪೆಕ್ಟರ್‌ ಆಗಿ ಕೆಲಸ ಮಾಡುತ್ತಾರೆ. ಇವರ ಜವಾಬ್ದಾರಿ ಏನೆಂದರೆ, ಪಬ್ಲಿಕ್‌ ಹೆಲ್ತ್‌ ರಕ್ಷಣೆ, ರಕ್ಷಣೆಯ ನಿಯಮಗಳನ್ನು ನಿರೂಪಿಸುವ ಹೊಣೆಯನ್ನು ಹೊರುವ ಕಾರ್ಯದಲ್ಲಿ ಕೆಲಸ ಮಾಡುವುದು, ಆರೋಗ್ ರಕ್ಷಣೆ, ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವುದು, ಇದರ ಬಗ್ಗೆ ಜನರಲ್ಲಿ ಜ್ಞಾನ ಮತ್ತು ಜಾಗೃತಿಕ್ರಮಗಳನ್ನು ಕೈಗೊಳ್ಳುವುದು ಸೇರುತ್ತದೆ.

ಆಹಾರದ ಸ್ವಚ್ಛತೆ, ಹೋಟೆಲ್‌ಗಳು, ದರ್ಶಿನಿಗಳು, ಚಿಪ್ಸ್‌ ಮಾಡುವ ಕೇಂದ್ರಗಳು – ಇನ್ನೂ ಅನೇಕ ಸಂಬಂಧಪಟ್ಟ ಸ್ಥಳಗಳಲ್ಲಿ ಸ್ವಚ್ಛತೆ ಇದೆಯೇ? – ಎನ್ನುವುದನ್ನು ನಿರ್ಧರಿಸುತ್ತಾರೆ. ಪಾರ್ಲರ್‌ಗಳು, ಟ್ಯಾಟೂ ಸೆಂಟರ್‌ಗಳು, ಇಲ್ಲಿ ಎಷ್ಟರ ಮಟ್ಟಿನ ಶುದ್ಧತೆ ಇದೆ ಎನ್ನುವುದನ್ನು ನೋಡಿ, ಕ್ರಮವನ್ನು ತೆಗೆದುಕೊಳ್ಳುತ್ತಾರೆ. ನಾಯಿ ಕಚ್ಚುವುದು, ಹಾವು ಕಚ್ಚುವುದು, ದುರ್ವಾಸನೆಗಳನ್ನು ತಡೆಗಟ್ಟುವುದು, ಕಸ–ಕಸದಿಂದ ಉಂಟಾಗುವ ಸೋಂಕು ರೋಗಗಳು – ಇವನ್ನು ತಡೆಗಟ್ಟುವುದು ಇವರ ಕೆಲಸ.

ಸ್ವಿಮಿಂಗ್‌ ಪೂಲ್‌ಗಳ ಸ್ವಚ್ಛತೆ, ಡೇ ಕೇರ್‌ ಸೆಂಟರ್‌ಗಳನ್ನು ಭೇಟಿ ಮಾಡಿ, ಅಲ್ಲಿನ ಪರಿಸ್ಥಿತಿಯ ಪರಿಶೀಲನೆ – ಇವೂ ಸೇರುತ್ತವೆ.

ಡಿಎಚ್‌ಐ ಮಾಡಿರುವವರಿಗೆ ಪ್ರೈವೇಟ್‌ ಮತ್ತು ಪಬ್ಲಿಕ್‌ ಸೆಕ್ಟರ್‌ ಸಂಸ್ಥೆಗಳಲ್ಲಿ ಉದ್ಯೋಗಾವಕಾಶವಿದೆ. ಕರ್ನಾಟಕ ಲೋಕ ಸೇವಾ ಆಯೋಗ (Karnataka Public Service Commission – KPSC) ಇವರೂ ಕೆಲಸಕ್ಕೆ ಕರೆ ನೀಡುತ್ತಾರೆ. ಈ ಪರೀಕ್ಷೆಯಲ್ಲಿ ಉತ್ತೀರ್ಣರಾದರೆ ಸರ್ಕಾರಿ ನೌಕರಿ ಸಿಗುತ್ತದೆ. ಮಾರ್ಕ್ಸ್‌ ಪ್ರಶ್ನೆಯಲ್ಲಿ ಪ್ರವೇಶಪರೀಕ್ಷೆಗಳನ್ನು ಪಾಸು ಮಾಡಬೇಕು.

ಪದವಿ ಮತ್ತು ಸ್ನಾತಕೋತ್ತರ ಪದವಿಯನ್ನು ಪಡೆದವರಿಗೆ ಉನ್ನತವಾದ ಕೆಲಸ ಸಿಗುವುದು ಖಚಿತ.

2. ನಾನು ಅಂತಿಮ ವರ್ಷದ ಬಿಎ ಓದುತ್ತಿದ್ದೇನೆ. ಮುಂದೆ ಎಲ್‌ಎಲ್‌ಬಿ ಮಾಡಬೇಕೆಂದುಕೊಂಡಿದ್ದೇನೆ. ಕನ್ನಡ ಮಾಧ್ಯಮದಲ್ಲಿ ಎಲ್‌ಎಲ್‌ಬಿ ಮಾಡಬಹುದೇ? ‘ಎಜುಕೇಷನ್ ಲೋನ್’ ಸಿಗುವುದೇ? ದೂರಶಿಕ್ಷಣದಲ್ಲಿ ಎಲ್‌ಎಲ್‌ಬಿ ಮಾಡಬಹುದೇ?
–ಮದನ್‌, ಹಾಸನ

ಕನ್ನಡ ಮಾಧ್ಯಮದಲ್ಲಿ ಎಲ್‌ಎಲ್‌ಬಿ ಮಾಡಲು ಸಾಧ್ಯವಿಲ್ಲ. ಎಲ್ಲ ಪುಸ್ತಕಗಳೂ ಆಂಗ್ಲಭಾಷೆಯಲ್ಲಿದೆ. ಕೆಲವು ಕಾನೂನು ಪುಸ್ತಕಗಳು ಕನ್ನಡದಲ್ಲೂ ಇವೆ. ಆದರೆ ಕೋರ್ಸ್‌ಗಳು ಕನ್ನಡದಲ್ಲಿ ಇಲ್ಲ. ನೀವೇಕೆ ದೂರಶಿಕ್ಷಣ ಕೋರ್ಸ್‌ನ್ನು ಆರಿಸುತ್ತಿದ್ದೀರಿ? ದೂರಶಿಕ್ಷಣದ ಮೂಲಕ ಕೋರ್ಸ್‌ಗಳು ಇವೆ. ಆದರೆ, ಈ ಪದವಿಯನ್ನು ಪಡೆದವರು ‘ಬಾರ್‌ ಕೌನ್ಸಿಲ್‌ ಆಫ್‌ ಇಂಡಿಯಾ’ದಲ್ಲಿ ದಾಖಲಾಗಲು ಅವಕಾಶವಿಲ್ಲ. ಇಲ್ಲಿ ದಾಖಲಾಗದಿದ್ದರೆ ನೀವು ಕೋರ್ಟ್‌ನಲ್ಲಿ ಪ್ರಾಕ್ಟೀಸ್‌ ಮಾಡಲು ಸಾಧ್ಯವಿಲ್ಲ.

ನನ್ನ ಸಲಹೆ, ಮಾನ್ಯತೆಯನ್ನು ಪಡೆದಿರುವ ಕಾಲೇಜಿಗೆ ಸೇರಿ ಕೋರ್ಸ್‌ ಮಾಡುವುದು ಉತ್ತಮ.

ಕರ್ನಾಟಕದಲ್ಲಿ ಎಲ್‌ಎಲ್‌ಬಿ ಕೋರ್ಸ್‌ ಇರುವ ಕೆಲವು ಕಾಲೇಜುಗಳು:
1. Anjuman Law College (Affiliated to Karnataka University)
Bijapur - 586101
2. B.G.V.S. Law College
Sadashivgad
Karwara – 581352
3. ASNS's Mahatma Gandhi ji law college
(Affiliated to Gulbarga University), Sankeshwar - 591313
4. Basavashree College of Law
(Affiliated to Bangalore University), Bangalore - 563101
5. Bheema Sena Rao National College of Law
(Affiliated to Kuvempu University), Shimoga - 577201 ಮತ್ತು ಇನ್ನೂ ಅನೇಕ...
ಶಿಕ್ಷಣ ವ್ಯರ್ಥವಾಗಬಾರದು. ಸರಿಯಾಗಿ ಯೋಚಿಸಿ ನಿರ್ಧರಿಸಿದರೆ, ವೃತ್ತಿಯಲ್ಲಿ ಸಂತೋಷವಾಗಿರುತ್ತೀರಿ. ವಿದ್ಯಾರ್ಥಿಗಳಿಗೆ ಹಲವಾರು ರೀತಿಯ ಬ್ಯಾಂಕ್‌ ಲೋನ್‌ಗಳಿವೆ. ಹೆಚ್ಚಿನ ವಿವರವನ್ನು ನೀವು ವ್ಯವಹರಿಸುವ ಬ್ಯಾಂಕ್‌ನಿಂದ ಪಡೆದರೆ ಉತ್ತಮ.

3. ನಾನು ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಫೇಲಾಗಿ ನಂತರ ಮರುಪರೀಕ್ಷೆಯಲ್ಲಿ ಪಾಸಾದೆ. ಆದ್ದರಿಂದ ಒಂದು ವರ್ಷ ಹಾಳಾಯಿತು. ಮತ್ತೆ ನಂತರ ಡಿಪ್ಲೊಮ ಪ್ರವೇಶ ಪಡೆದು (ಮೆಕ್ಯಾನಿಕಲ್‌) ಮೂರು ವರ್ಷದಲ್ಲಿ ಮುಗಿಸಿದೆ. ಆದರೆ ಸಿಇಟಿಯಲ್ಲಿ ರ‍್ಯಾಂಕ್‌ ಸಿಗಲಿಲ್ಲ. ಇದರಿಂದ ಮತ್ತೆ ಒಂದು ವರ್ಷ ಹಾಳಾಗಿದೆ. ಈಗ ನನ್ನ ವಯಸ್ಸು 23 ಮತ್ತು ಮನೆಯಲ್ಲಿ ಮುಂದಿನ ವರ್ಷ ಎಂಜಿನಿಯರಿಂಗ್‌ ಮಾಡು ಎನ್ನುತ್ತಾರೆ. ಆದರೆ ಎಂಜಿನಿಯರಿಂಗ್‌ ಮುಗಿಯಬೇಕಾದರೆ ಮೂರು ವರ್ಷ ಬೇಕು. ಆದರೆ ಆಗಲಿಲ್ಲ ಎಂದರೆ ಆಗ ಏನು ಮಾಡಬೇಕೆಂದು ತಿಳಿಯುತ್ತಿಲ್ಲ!
–ಇಶಾನ ಕೆ. ಬೆಳಗಾವಿ

ಪ್ರಪಂಚದಲ್ಲಿ ಎಲ್ಲ ರೀತಿಯ ವಿದ್ಯಾರ್ಹತೆಗೂ ಮನ್ನಣೆಯಿದೆ; ಅಗತ್ಯವೂ ಇದೆ. ಶಾಲಾ, ಕಾಲೇಜ್‌ಗಳು ಪ್ರಾಧ್ಯಾಪಕರಿಲ್ಲದೆ ನಡೆಯುತ್ತದೆಯೇ? ಸ್ವಚ್ಛತೆಗೆ ಹೆಲ್ಪರ್‌ಗಳಿಲ್ಲದೆ ನಡೆಯುತ್ತದೆಯೇ? ಕಾಯಿಲೆ ಬಂದಾಗ ಡಾಕ್ಟರ್‌ಗಳು, ನರ್ಸ್‌ಗಳು, ಲ್ಯಾಬೊರೇಟರಿ ಇಲ್ಲದೇ ಚಿಕಿತ್ಸೆ ನಡೆಯುತ್ತದೆಯೇ?

ಪ್ರತಿಯೊಬ್ಬರೂ ತಮ್ಮ ಅರ್ಹತೆ, ಆಸಕ್ತಿಯ ಮೇಲೆ ಕೋರ್ಸ್‌ಗಳನ್ನು ಆರಿಸಿ. ಎಂಜಿನಿಯರಿಂಗ್‌ ಒಂದೇ ಶಿಕ್ಷಣವಲ್ಲ; ಅರ್ಹತೆ ಇರುವವರು ಅದಕ್ಕೆ ಹೋಗಲಿ. ನಿಮ್ಮ ಪ್ರಶ್ನೆಯಿಂದ ಅದು ನಿಮಗೆ ತಕ್ಕ ಕೋರ್ಸ್‌ ಅಲ್ಲ ಅಂತ ಖಚಿತವಾಗಿದೆ. ನಿಮಗೀಗ 23 ವರ್ಷ. ಇದಕ್ಕಿಂತ ಮುಂಚೆ ಜಾಗೃತರಾಗಬೇಕಿತ್ತು. ಓಪನ್‌ ಯೂನಿರ್ವಸಿಟಿ ಕೋರ್ಸ್‌ನ್ನು ನಿಮ್ಮ ಅಭಿರುಚಿಗೆ ತಕ್ಕಂತೆ ಆರಿಸಿ ಓದಿ. . ಕಂಪ್ಯೂಟರ್‌ ಲ್ಯಾಂಗ್ವೇಜ್‌, ಫಾರಿನ್‌ ಲ್ಯಾಂಗ್ವೇಜ್‌ ಕಲಿಯಬಲ್ಲಿರಿ ಎಂಬ ವಿಶ್ವಾಸವಿದ್ದರೆ ಅದನ್ನು ಕಲಿಯಿರಿ. ರಿಟೇಲ್‌ ಸ್ಟೋರ್ಸ್‌ಗಳಲ್ಲಿ 2ನೇ ಪಿಯುಸಿ ಮುಗಿಸಿದವರಿಗೆ ಕೆಲಸಗಳಿವೆ. ಅದನ್ನು ಪ್ರಯತ್ನಿಸಿ. ಮನಸ್ಸಿದ್ದರೆ ಮಾರ್ಗ, ಮಾನಸಿಕವಾಗಿ ಕುಗ್ಗುವುದಕ್ಕೆ ಅವಕಾಶ ಕೊಡಬಾರದು.

4. ನಾನು ಪ್ರಥಮ ವರ್ಷದ (2017–18) ಬಿಎಸ್ಸಿಯಲ್ಲಿ ಸಿಬಿಎಸ್‌ಸಿ (ಇಎಸ್‌: ಪರಿಸರ ಅಧ್ಯಯನ) ತೆಗೆದುಕೊಂಡು ವ್ಯಾಸಂಗ ಮಾಡುತ್ತಿರುವೆ. ಮೂರು ವರ್ಷ ಮುಗಿದ ಮೇಲೆ ಉದ್ಯೋಗದ ಬಗ್ಗೆ ಯೋಚಿಸುತ್ತಿರುವೆ. ನಾನು ಬಿಎಡ್‌ ವ್ಯಾಸಂಗ ಮಾಡಬಹುದೆ? ಹೈಸ್ಕೂಲ್ ಶಿಕ್ಷಕನಾಗಬಹುದೆ? ಪದವಿಯ ನಂತರ ಯಾವ ರೀತಿಯ ಉದ್ಯೋಗ ಸಿಗಬಹುದು. ನನಗೆ ಸರ್ಕಾರಿ ಉದ್ಯೋಗ ಪಡೆಯಬೇಕೆಂಬ ಆಸೆ, ಛಲ ಇದೆ. ದ್ವಿತೀಯ ಪಿಯುಸಿಯಲ್ಲಿ ಶೇ 55 ಅಂಕ ತೆಗೆದುಕೊಂಡಿರುವೆ. ನಾನು ಸದೃಢವಾಗಿರುವೆ. ಉನ್ನತ ವ್ಯಾಸಂಗ ಮಾಡುವುದಾದರೆ ಯಾವ ವಿಷಯದಲ್ಲಿ (ಸಿಬಿಎಸ್‌ಸಿ) ಮಾಡಬೇಕು ತಿಳಿಸಿ.
–ವಿದ್ಯಾಭೂಷಣ. ಆರ್‌., ಶಿವಮೊಗ್ಗ

ಪರಿಸರ ಅಧ್ಯಯನವನ್ನು ನೀವು ಆಯ್ಕೆ ಮಾಡಿದ್ದೀರಿ. ಪರಿಸರ ಅಧ್ಯಯನ ವಿಜ್ಞಾನವಿಷಯದ ಕವಲುಗಳನ್ನು ಹೊಂದಿದೆ (ಇಂಟರ್‌ ಡಿಸೆಪ್ಲನರಿ ಕೋರ್ಸ್‌); ಇಕಾಲಜಿ, ಜೀವಶಾಸ್ತ್ರ, ಭೌತಶಾಸ್ತ್ರ, ರಸಾಯನಶಾಸ್ತ್ರ, ಖನಿಜಶಾಸ್ತ್ರ – ಹೀಗೆ ವಿಜ್ಞಾನದ ಬೆರಕೆಯನ್ನು ಪರಿಸರ ಅಧ್ಯಯನದಲ್ಲಿ ವ್ಯಾಸಂಗ ಮಾಡುವಿರಿ. ಪರಿಸರದಿಂದ ಉಂಟಾಗುವ ಸಮಸ್ಯೆಗಳನ್ನು ಯಾವ ರೀತಿ ಎದುರಿಸಬೇಕು, ಸಮಸ್ಯೆ ಯಾವ ಕಾರಣಕ್ಕಾಗಿ ಆರಂಭವಾಯಿತು, ಪರಿಹಾರವೇನು ಇದನ್ನೆಲ್ಲ ಕಂಡುಹಿಡಿಯುವುದೇ ಪರಿಸರ–ವಿಜ್ಞಾನಿಯ ಕೆಲಸ. ಈ ಕೋರ್ಸ್‌ನಲ್ಲಿ ಸ್ನಾತಕೋತ್ತರ, ಪಿಎಚ್‌ಡಿ ಪದವಿಗಳನ್ನೂ ಪಡೆಯಬಹುದು. ಭಾರತದಲ್ಲೇ ಅಲ್ಲದೆ 16 ವರ್ಷದ ಅಧ್ಯಯನ (10+2+3 ಸಾಲದು) ಮಾಡಿದಲ್ಲಿ ಹೊರದೇಶಗಳಲ್ಲಿ ಇರುವ ಉನ್ನತ ವಿಶ್ವವಿದ್ಯಾಲಯಗಳಲ್ಲಿ ವ್ಯಾಸಂಗ ಮಾಡಬಹುದು. ಪರಿಸರ ಅಧ್ಯಯನದಲ್ಲಿ ಬಿಎಸ್ಸಿ, ಎಂಸ್ಸಿ, ಪಿಎಚ್‌ಡಿ, ಎಂಜಿನಿಯರಿಂಗ್‌, ಮ್ಯಾನೇಜ್‌ಮೆಂಟ್‌ ಕೋರ್ಸ್‌ ಸಹಿತ ಇದೆ. ಪರಿಸರ ಅಧ್ಯಯನ ಯಾವುದರಲ್ಲಿ ಮಾಡುತ್ತೀರೋ ಅದರಲ್ಲಿ ಉದ್ಯೋಗ ಅವಕಾಶವನ್ನು ಹುಡುಕಬೇಕು.

ಕೆಲವು ವೆಬ್‌ಸೈಟ್‌ಗಳು:
1. www.ecojobs.com
2. www.indeed.om / Environmental Jobs.html
3. www.naukari.com/ environmental - engineering jobs
4. www.timesjobs.com / jobkill / environmental - jobs
5. www.bls.Gov / environmental scientists.htm
ಇನ್ನೂ ಅನೇಕ.....

ಪರಿಸರ ಅಧ್ಯಯನದಲ್ಲಿ ಪ್ರಾಧ್ಯಾಪಕರಾಗಲೂ ಅವಕಾಶವಿದೆ.

ನಿಮ್ಮ ವಿದ್ಯಾಭ್ಯಾಸದ ಬಗ್ಗೆ ಪ್ರಶ್ನೆಗಳಿವೆಯೇ? ನಮಗೆ ಕಳುಹಿಸಿ...
ವಿದ್ಯಾರ್ಥಿಗಳೇ, ವಿದ್ಯಾಭ್ಯಾಸದ ಬಗ್ಗೆ ನಿಮ್ಮಲ್ಲಿ ಸಾಕಷ್ಟು ಸಂದೇಹಗಳು–ಪ್ರಶ್ನೆಗಳು ಇರಬಹುದು. ಕೋರ್ಸ್‌ಗಳ ವಿವರಗಳು, ಬೇಕಾದ ಅರ್ಹತೆ, ಆಯ್ಕೆಗೆ ಬೇಕಾಗಿರುವ ಸಿದ್ಧತೆ, ವೃತ್ತಿಶಿಕ್ಷಣದ ವಿವರಗಳು, ಲಭ್ಯವಿರುವ ವಿದ್ಯಾರ್ಥಿವೇತನಗಳು – ಹೀಗೆ ನಿಮ್ಮ ಶಿಕ್ಷಣವನ್ನು ಕುರಿತಾದ ಎಲ್ಲ ಪ್ರಶ್ನೆಗಳಿಗೂ ನೀವು ‘ಶಿಕ್ಷಣ’ ಪುರವಣಿಯಲ್ಲಿ ಉತ್ತರವನ್ನು ಪಡೆಯಬಹುದು. ವೃತ್ತಿಶಿಕ್ಷಣ ಸಲಹೆಗಾರರಾದ ಅನ್ನಪೂರ್ಣ ಮೂರ್ತಿ ನಿಮ್ಮ ಸಂಶಯಗಳನ್ನು ನಿವಾರಿಸುತ್ತಾರೆ.
ನಮ್ಮ ವಿಳಾಸ: ಸಂಪಾದಕರು, ‘ಶಿಕ್ಷಣ ಪುರವಣಿ’, ಪ್ರಜಾವಾಣಿ, ನಂ. 75, ಮಹಾತ್ಮ ಗಾಂಧಿ ರಸ್ತೆ, ಬೆಂಗಳೂರು – 560001
ಇಮೇಲ್‌: shikshana@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT