ಎತ್ತಿನ ಗಿಡ್ಡ, ಮುತ್ತಿನ ಚೆಂಡು...

7

ಎತ್ತಿನ ಗಿಡ್ಡ, ಮುತ್ತಿನ ಚೆಂಡು...

Published:
Updated:
ಎತ್ತಿನ ಗಿಡ್ಡ, ಮುತ್ತಿನ ಚೆಂಡು...

‘ಹೆಂಗೆಗ್ಗೋರೆ ತೆಂಗಿನ ಬುರ್ರೆ, ಬಾಳೆಪಟ್ಟೆ, ಬಂಕಾಪುರಿ ಎತ್ತಿನ ಗಿಡ್ಡ ಮುತ್ತಿನ ಚೆಂಡು, ನಾಳೆ ಬರೋ ಗಂಡು ಕಾಟಿಮರಾಯನಿಗೆ ಪಾವಕ್ಕಿ ಪಡಿಅಕ್ಕಿ ಹಿಡಿ ಕಿಲೋ ಹಿಡಿ ಕಿಲೋ...’

ಎತ್ತರದ ದನಿಯಲ್ಲಿ ಈ ಹಾಡು ಹೇಳುತ್ತಾ, ಯುವಕರ ಗುಂಪು ಗ್ರಾಮದ ಬೀದಿಗಳಲ್ಲಿ ಹೆಜ್ಜೆ ಹಾಕುತ್ತಾ ಹೊರಟರೆ ಸಂಕ್ರಾಂತಿಯ ಚೆಲುವಿನ ಚಿತ್ತಾರ ಗರಿಗೆದರಿತು ಎಂದೇ ಅರ್ಥ. ಈ ಹಾಡನ್ನು ಪದಶಃ ಹಿಡಿದು ಅರ್ಥ ಮಾಡುವುದು ಕಷ್ಟ. ಆದರೆ ಬಹುಕಾಲದಿಂದ ಬೆಂಗಳೂರು ಉತ್ತರ ತಾಲ್ಲೂಕಿನ ಹಳ್ಳಿಗಳಲ್ಲಿ ಚಾಲ್ತಿಯಲ್ಲಿರುವ ಸಂಕ್ರಾಂತಿ ಹಾಡು ಇದು.

ಕೈಲಿ ತುಂಬೆಗಿಡ ಹಿಡಿದು, ಪ್ರತಿಮನೆಯ ಮೇಲೆ ತುಂಬೆಗಿಡವನ್ನು ಎಸೆಯುತ್ತಾ ಮನೆಗೆ ಶುಭವಾಗಲಿ ಎಂದು ಹಾರೈಸುತ್ತಾ ಹೊರಡುವ ಈ ಯುವಕರ ಗುಂಪು ಹರ್ಷದ ಬಾಳಿಗೆ ಮುನ್ನುಡಿ ಬರೆಯುತ್ತದೆ. ಹಾಡಿನ ಸಂಭ್ರಮ ಸತತ ಮೂರು ದಿನ ಇರುತ್ತದೆ. ಗ್ರಾಮದ ಪ್ರತಿಮನೆಯು ತುಂಬೆಗಿಡದ ನಿರೀಕ್ಷೆಯಲ್ಲಿರುತ್ತದೆ. ಎಳೇ ಮಕ್ಕಳು ಹಾಡಿಗೆ ಹೆಜ್ಜೆ ಹಾಕುತ್ತಾ ಸಾಗಿದಾಗ ಸಂಭ್ರಮದ ವಾತಾವರಣವೊಂದು ಹಳ್ಳಿಗಳಲ್ಲಿ ತೆರೆದುಕೊಳ್ಳುತ್ತದೆ.

ಹೆಸರಘಟ್ಟ ಹೋಬಳಿಯ ಅನೇಕ ಹಳ್ಳಿಗಳಲ್ಲಿ ಮಕರ ಸಂಕ್ರಮಣಕ್ಕೆ ಮೂರು ದಿನಗಳು ಇರುವಾಗಲೇ ಇಂಥ ಆಚರಣೆ ಆರಂಭವಾಗುವುದು ವಾಡಿಕೆ.

ನೆಲದಲ್ಲಿ ಬಿತ್ತಿದ ಫಸಲು ಸಮೃದ್ಧ ಫಲ ನೀಡಿದಾಗ ಇಂತಹ ಆಚರಣೆಗಳ ಖುಷಿಯೂ ಹೆಚ್ಚು. ಸಂಕ್ರಾಂತಿ ಹಬ್ಬಕ್ಕೆ ಮೂರು ದಿನಗಳ ಮುಂಚೆ ತಳವಾರದ ಸಮುದಾಯದವರು ಕಾಟಿಮರಾಯನ ಪೂಜೆಯ ದಿನವನ್ನು ಗ್ರಾಮದಲ್ಲಿ ಸಾರುತ್ತಾರೆ. ನಂತರ ಗ್ರಾಮದಲ್ಲಿರುವ ಕಾಟಿಮರಾಯನ ಮೂರ್ತಿಯನ್ನು ಸುಣ್ಣ ಮತ್ತು ಬಣ್ಣಗಳಿಂದ ಚೆಂದವಾಗಿ ಅಲಂಕಾರ ಮಾಡಲಾಗುತ್ತದೆ. ಸಾಮಾನ್ಯವಾಗಿ ಕಾಟಿಮರಾಯನನ್ನು ಜೇಡಿಮಣ್ಣು ಮತ್ತು ಕೆಂಪುಮಣ್ಣಿನಿಂದ ಅಂದವಾಗಿ ತಿದ್ದುತ್ತಾರೆ.

ಕಾಟಿಮರಾಯನ್ನು ಪೂಜಿಸುವ ಪೂಜಾರಿಯು ಹಬ್ಬದ ಮೂರು ದಿನಗಳ ಮುಂಚೆ ಗ್ರಾಮದ ಎಲ್ಲ ಮನೆಗಳಿಂದ ಅಕ್ಕಿಯನ್ನು ಸಂಗ್ರಹ ಮಾಡುತ್ತಾರೆ. ಈ ಅಕ್ಕಿಯಿಂದ ಮಾಡಿದ ಅನ್ನವನ್ನು ಸಂಕ್ರಾಂತಿಯ ದಿನ ದೇವರಿಗೆ ಎಡೆ ಮಾಡಲಾಗುತ್ತದೆ. ಮಹಾಮಂಗಳಾರತಿಯಾದ ಮೇಲೆ ಅನ್ನವನ್ನು ಒಂದು ತುತ್ತಿನಂತೆ ಪ್ರತಿಮನೆಯವರು ಪಡೆದು ದನಗಳು ಕಟ್ಟುವ ಗೊಂದಿಗೆ ಹಾಕುತ್ತಾರೆ. ಇದರಿಂದ ದನಗಳು ಅರೋಗ್ಯವಾಗಿ ಇರುತ್ತವೆ ಎನ್ನುವ ನಂಬಿಕೆ ಜನರದು.

ಹಸುಗಳು ಇಲ್ಲದ ಮನೆಯವರು ಈ ಬೇಯಿಸಿದ ಅನ್ನವನ್ನು ತಮ್ಮ ಮನೆಗಳ ಮೇಲೆ ಎರಚಿಕೊಳ್ಳುತ್ತಾರೆ. ಹೀಗೆ ಮಾಡಿದರೆ ಮನೆಗೆ ಶ್ರೇಯಸ್ಸು ಎನ್ನುವ ನಂಬಿಕೆ ಗ್ರಾಮದಲ್ಲಿದೆ. ಪ್ರಸಾದ ಹಂಚಿದ ನಂತರ ಪೂಜಾರಿಯು ಗ್ರಾಮದ ಹೊರಗೆ ಹುಲ್ಲು ಹಾಸಿ ಅದಕ್ಕೆ ಬೆಂಕಿ ಹಾಕುತ್ತಾನೆ. ಇದೇ ಹೊತ್ತಿಗೆ ಸರಿಯಾಗಿ ಯುವಕರ ತಂಡ ಪಂಜು ಹಿಡಿದುಕೊಂಡು ಪಕ್ಕದ ಗ್ರಾಮದ ಗಡಿಗೆ ಬೆಂಕಿ ಹಚ್ಚಲು ಸಜ್ಜಾಗುತ್ತದೆ.

‘ಪ್ರತಿಗ್ರಾಮದವರು ತಮ್ಮ ಗಡಿಯ ಭಾಗದಲ್ಲಿ ನಿಂತು ಬೇರೆ ಗ್ರಾಮದ ಗಡಿಯ ಭಾಗಕ್ಕೆ ಬೆಂಕಿ ಹಚ್ಚುವುದು ಸಂಪ್ರದಾಯ. ಬೆಂಕಿ ಹಚ್ಚದಂತೆ ಆ ಗ್ರಾಮದವರು ಕಾವಲು ಕಾಯುತ್ತಾರೆ. ಅವರ ಕಣ್ಣು ತಪ್ಪಿಸಿ ಬೆಂಕಿ ಹಚ್ಚುವ ಪ್ರಯತ್ನ ಸಾಗುತ್ತಲೇ ಇರುತ್ತದೆ. ಗ್ರಾಮದಲ್ಲಿರುವ ಒಗ್ಗಟ್ಟನ್ನು ಈ ಕ್ರೀಡೆಯಿಂದ ಕಾಣಬಹುದಿತ್ತು. ಇಡೀ ರಾತ್ರಿ ನಮ್ಮ ಗ್ರಾಮದ ಗಡಿಗೆ ಬೆಂಕಿ ಹಚ್ಚದಂತೆ ಕಾಯುತ್ತಿದ್ದೆವು’ ಎಂದು ಹುರುಳಿಚಿಕ್ಕನಹಳ್ಳಿ ಗ್ರಾಮದ ನಿವಾಸಿ ಹನುಮಯ್ಯ ತಮ್ಮ ಬಾಲ್ಯದ ಸಂಕ್ರಾಂತಿ ದಿನಗಳನ್ನು ಮೆಲುಕು ಹಾಕಿದರು.

ಗ್ರಾಮದ ಹೊರಗೆ ಹಾಕಿದ ಹುಲ್ಲಿಗೆ ಬೆಂಕಿಯನ್ನು ಹಚ್ಚಿ ಎತ್ತುಗಳನ್ನು ಗ್ರಾಮದವರು ಬೆದರಿಸಿಕೊಂಡು ಬರುತ್ತಾರೆ. ಈ ಸಂಭ್ರಮ ನಡೆಯುವಾಗಲೇ ಪಂಜು ಹಿಡಿದ ಯುವಕರ ತಂಡ ಬೇರೆ ಗ್ರಾಮದ ಗಡಿಗಳಿಗೆ ಬೆಂಕಿ ಹಚ್ಚಿ ಬರುತ್ತದೆ.

‘ಮಕರ ಸಂಕ್ರಾಂತಿ ಹಬ್ಬಕ್ಕೆ ಒಂದು ವಾರ ಮುಂಚೆಯೇ ಇಡೀ ಹಳ್ಳಿಯಲ್ಲಿ ಒಂದು ಸಂಭ್ರಮದ ವಾತಾವರಣ ಮನೆ ಮಾಡುತ್ತಿತ್ತು. ಈಗ ಆ ವಾತಾವರಣ ಇಲ್ಲ’ ಎಂದು ಬೇಸರಿಸಿಕೊಂಡರು ತೊರೆನಾಗಚಂದ್ರ ಗ್ರಾಮದ ನಿವಾಸಿ ಬಸವರಾಜು.

ಅವರ ಮಾತನ್ನು ಅಣಕಿಸುವಂತೆ ಯುವಕರು ಸಂಕ್ರಾಂತಿ ಹಾಡು ಹೇಳುತ್ತಾ ಓಡುತ್ತಿದ್ದರು, ಯುವತಿಯರು ಮನೆ ಮುಂದೆ ನೀರೆರಚುತ್ತಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry