ಕಸ ಸಾಗಿಸುವ ಟ್ರ್ಯಾಕ್ಟರ್‌ನಲ್ಲಿ ಪತ್ರಕರ್ತನ ಶವ!

7

ಕಸ ಸಾಗಿಸುವ ಟ್ರ್ಯಾಕ್ಟರ್‌ನಲ್ಲಿ ಪತ್ರಕರ್ತನ ಶವ!

Published:
Updated:
ಕಸ ಸಾಗಿಸುವ ಟ್ರ್ಯಾಕ್ಟರ್‌ನಲ್ಲಿ ಪತ್ರಕರ್ತನ ಶವ!

ಹಾನಗಲ್ (ಹಾವೇರಿ ಜಿಲ್ಲೆ): ಬೈಕ್‌ ಅಪಘಾತದಲ್ಲಿ ಭಾನುವಾರ ಮೃತಪಟ್ಟ ಸುದ್ದಿ ಟಿವಿ ವರದಿಗಾರ ಮೌನೇಶ ಪೋತರಾಜ್‌ (29) ಶವವನ್ನು, ಕಸ ಒಯ್ಯುವ ಟ್ರ್ಯಾಕ್ಟರ್‌ನಲ್ಲಿ ಆಸ್ಪತ್ರೆಗೆ ಸಾಗಿಸಿದ ಪೊಲೀಸರ ಕ್ರಮಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಮೌನೇಶ, ಉತ್ತರ ಕನ್ನಡ ಜಿಲ್ಲೆ ಶಿರಸಿಯಿಂದ ಗದಗ ಜಿಲ್ಲೆಯ ಶಿರಹಟ್ಟಿ ತಾಲ್ಲೂಕಿನ ಛಬ್ಬಿ ಗ್ರಾಮಕ್ಕೆ ಶನಿವಾರ ತಡರಾತ್ರಿ ಬೈಕಿನಲ್ಲಿ ತೆರಳುತ್ತಿದ್ದರು. ಈ ವೇಳೆ ಇಲ್ಲಿಗೆ ಸಮೀಪದ ಗುಂಡೂರ ಕ್ರಾಸ್ ಬಳಿಯ ತಿರುವಿನಲ್ಲಿ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದು ಮೃತಪಟ್ಟಿದ್ದಾರೆ. ಈ ವಿಷಯವು ಭಾನುವಾರ ನಸುಕಿನಲ್ಲಿ ತಿಳಿದು ಬಂದಿದೆ. ಸ್ಥಳದಲ್ಲಿ ಮಹಜರು ನಡೆಸಿದ ಪೊಲೀಸರು, ಬಳಿಕ ಶವವನ್ನು ಕಸ ಸಾಗಿಸುವ ಟ್ರ್ಯಾಕ್ಟರ್‌ಗೆ ಹಾಕಿ ಪಟ್ಟಣದಲ್ಲಿನ ಶವಾಗಾರಕ್ಕೆ ಸಾಗಿಸಿದ್ದರು.

ವಿಷಯ ತಿಳಿಯುತ್ತಿದ್ದಂತೆಯೇ ಆಕ್ರೋಶ ವ್ಯಕ್ತಪಡಿಸಿದ ಪತ್ರಕರ್ತರು, ‘ಪತ್ರಕರ್ತರ ವಿಷಯದಲ್ಲಿ ಹೀಗೆ ನಡೆದುಕೊಂಡ ಪೊಲೀಸರು, ಇನ್ನು ಸಾರ್ವಜನಿಕರೊಂದಿಗೆ ಹೇಗೆಲ್ಲ ವರ್ತಿಸಬಹುದು?’ ಎಂದು ಕಿಡಿ ಕಾರಿದರು. ಬೆಳಿಗ್ಗೆಯಷ್ಟೇ, ಖಾನಾಪುರ ಬಳಿ ಕಾರು ಅಪಘಾತದಲ್ಲಿ ಪತ್ರಕರ್ತ ವೀರೇಶ ಹಿರೇಮಠ ಮೃತಪಟ್ಟ ಸುದ್ದಿಯನ್ನು ತಿಳಿದು ಆಘಾತಗೊಂಡಿದ್ದ ಅವರು, ಹಿಂದಿನಿಂದಲೇ ಬಂದ ಮೌನೇಶ ಸಾವಿನ ಸುದ್ದಿ ಹಾಗೂ ಶವ ಸಾಗಿಸಿದ ರೀತಿಯಿಂದ ಮತ್ತಷ್ಟು ನೋವುಂಡರು. ಪೊಲೀಸರ ವರ್ತನೆಯನ್ನು ಖಂಡಿಸಿ ಪತ್ರಕರ್ತರ ವಾಟ್ಸ್‌ಆ್ಯಪ್‌ ಗ್ರೂಪ್‌ಗಳಲ್ಲಿ ಸಂದೇಶಗಳು ಹಬ್ಬಿದವು.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಪುರಸಭೆ ಮುಖ್ಯಾಧಿಕಾರಿ ಎಚ್‌.ಎನ್‌.ಬಜಕ್ಕನವರ, ‘ಪುರಸಭೆ ಸಿಬ್ಬಂದಿಗೆ ಅರಿವಿಲ್ಲದ ಕಾರಣ ಅಚಾತುರ್ಯ ನಡೆದಿದೆ’ ಎಂದು ವಿಷಾದ ವ್ಯಕ್ತಪಡಿಸಿದರು.

‘ಮಕರ ಸಂಕ್ರಾಂತಿಯ ಕಾರಣ ಯಾವುದೇ ವಾಹನಗಳು ಸಿಗಲಿಲ್ಲ. ಅಲ್ಲದೇ, ಮೃತದೇಹವನ್ನು ಕೊಂಡೊಯ್ಯಲು ಆ್ಯಂಬುಲೆನ್ಸ್‌ಗಳೂ ಬರಲಿಲ್ಲ. ಹೀಗಾಗಿ, ಸಮೀಪದಲ್ಲೇ ಲಭ್ಯವಿದ್ದ ಟ್ರ್ಯಾಕ್ಟರ್ ಬಳಸಲಾಗಿದೆ. ಇದರ ಹೊರತು ಯಾವುದೇ ದುರುದ್ದೇಶ ಇರಲಿಲ್ಲ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ಪರಶುರಾಂ ತಿಳಿಸಿದರು.

‘ತುರ್ತು ಸಂದರ್ಭ ಹಾಗೂ ಕ್ಲುಪ್ತ ಸಮಯಕ್ಕೆ ಪರ್ಯಾಯ ವ್ಯವಸ್ಥೆ ದೊರೆಯದ ಕಾರಣ ಪೊಲೀಸರು ಈ ರೀತಿ ಮಾಡಿದ್ದಾರೆ. ತ್ಯಾಜ್ಯ ವಿಲೇವಾರಿ ವಾಹನ ಬಳಸಿದ ಬಗ್ಗೆ ವಿಷಾದವಿದೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry