ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಾನವ–ವನ್ಯಜೀವಿ ಸಂಘರ್ಷ ತಡೆಗೆ ದೀರ್ಘ ಯೋಜನೆ ಇಲ್ಲ’

Last Updated 14 ಜನವರಿ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಮಾನವ–ವನ್ಯಜೀವಿ ಸಂಘರ್ಷದಿಂದ ಹೆಚ್ಚು ತೊಂದರೆಗೆ ಒಳಗಾಗುವವರು ಸಾಮಾನ್ಯ ಜನರು. ಇದನ್ನು ತಡೆಯುವುದಕ್ಕೆ ಯಾವುದೇ ದೀರ್ಘಕಾಲೀನ ಯೋಜನೆಗಳಿಲ್ಲ’ ಎಂದು ವನ್ಯಜೀವಿ ಸಂರಕ್ಷಕ ಸಂಜಯ್‌ ಗುಬ್ಬಿ ಹೇಳಿದರು.

ಇಲ್ಲಿ ಭಾನುವಾರ ಏರ್ಪಡಿಸಿದ್ದ ‘ಸೆಕೆಂಡ್‌ ನೇಚರ್‌’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಂಜಯ್‌ ಗುಬ್ಬಿ ಅವರೇ ಈ ಕೃತಿಯ ಲೇಖಕ. 

‘ಮಾನವ ಕೃಷಿ ಮಾಡಲು ಆರಂಭಿಸಿದ ದಿನಗಳಿಂದಲೂ ಮನುಷ್ಯ–ವನ್ಯಪ್ರಾಣಿ ನಡುವೆ ಸಂಘರ್ಷ ನಡೆಯುತ್ತಲೇ ಇದೆ. ಇದು ಹೊಸದೇನಲ್ಲ. ಇದನ್ನು ಸಂಪೂರ್ಣವಾಗಿ ತಪ್ಪಿಸಲು ಆಗುವುದಿಲ್ಲ. ಮಾಧ್ಯಮಗಳಲ್ಲಿ ಇತ್ತೀಚೆಗೆ ಈ ಬಗ್ಗೆ ಹೆಚ್ಚಾಗಿ ವರದಿ ಆಗುತ್ತಿರುವುದರಿಂದ ಈ ಸಮಸ್ಯೆ ಗಂಭೀರವಾಗಿದೆ ಎಂಬಂತೆ ಕಾಣಿಸುತ್ತದೆ’ ಎಂದರು.

‘ರಾಜಕಾರಣಿಗಳು ವೈಜ್ಞಾನಿಕವಾಗಿ ಕೆಲಸ ಮಾಡುತ್ತಿಲ್ಲ ಎಂದು ವಿಜ್ಞಾನಿಗಳು ದೂರುತ್ತಾರೆ. ಆದರೆ, ವಿಜ್ಞಾನಿಗಳು ಮತ್ತು ಸಂಶೋಧಕರು ನೀತಿಗಳನ್ನು ವೈಜ್ಞಾನಿಕವಾಗಿ ರೂಪಿಸುವ ಬಗ್ಗೆ ರಾಜಕಾರಣಿಗಳ ಜೊತೆ ಚರ್ಚಿಸುವುದೇ ಇಲ್ಲ. ಅನೇಕರಿಗೆ ಅವರ ಕ್ಷೇತ್ರದ ಶಾಸಕ ಯಾರು ಎಂಬುದೇ ತಿಳಿದಿರುವುದಿಲ್ಲ’ ಎಂದು ಹೇಳಿದರು.

‘ಅರಣ್ಯ ರಕ್ಷಕ ಸಿಬ್ಬಂದಿಯೂ ಸೇರಿದಂತೆ ಇಲಾಖೆಯ ಎಲ್ಲಾ ಸಿಬ್ಬಂದಿಗೆ ವೇತನ ಹೆಚ್ಚಿಸಬೇಕು’ ಎಂದು ಅವರು ಸಲಹೆ ನೀಡಿದರು.

‘ಈಗಿನ ಮಕ್ಕಳಿಗೆ ಪಠ್ಯದಲ್ಲಿ ವನ್ಯಜೀವಿ ಸಂರಕ್ಷಣೆ ಬಗ್ಗೆ ತಿಳಿಸುವ ಅಂಶಗಳಿಲ್ಲ. ಶಾಲೆ, ಪಠ್ಯದಿಂದಾಚೆಗೆ ಮಕ್ಕಳೇ ಅದನ್ನು ಕಂಡುಕೊಳ್ಳಬೇಕು, ಅನುಭವ ಪಡೆಯಬೇಕು. ಚಿಕ್ಕಂದಿನಿಂದ ಪ್ರಾಣಿಗಳ ಸಂರಕ್ಷಣೆಯ ಬಗ್ಗೆ ಒಲವು ಹೊಂದಿದ್ದರಿಂದ ಈ ಕ್ಷೇತ್ರದಲ್ಲಿ ಇಷ್ಟು ಕೆಲಸ ಮಾಡಲು ಸಾಧ್ಯವಾಯಿತು’ ಎಂದು ತಿಳಿಸಿದರು.

ಪ್ರಕೃತಿಯ ಬಗ್ಗೆ ನನಗೇನು ಗೊತ್ತಿಲ್ಲ ಎನ್ನುವ ಸೆಲೆಬ್ರಿಟಿಗಳಿಗೆ ನಾನು ಹೇಳುವುದಿಷ್ಟೇ.. ಪ್ರಕೃತಿಯನ್ನು ತಿಳಿಯುವುದು, ಅರ್ಥ ಮಾಡಿಕೊಳ್ಳುವುದು ವೃತ್ತಿಯಲ್ಲ, ಅದೊಂದು ಪ್ರಜ್ಞೆ
–ಪ್ರಕಾಶ ರೈ, ನಟ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT