‘ಸುಪ್ರೀಂ’ ಬಿಕ್ಕಟ್ಟು ಶೀಘ್ರ ಶಮನ

7

‘ಸುಪ್ರೀಂ’ ಬಿಕ್ಕಟ್ಟು ಶೀಘ್ರ ಶಮನ

Published:
Updated:
‘ಸುಪ್ರೀಂ’ ಬಿಕ್ಕಟ್ಟು ಶೀಘ್ರ ಶಮನ

ನವದೆಹಲಿ: ನಾಲ್ವರು ಹಿರಿಯ ನ್ಯಾಯಮೂರ್ತಿಗಳು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ದೀಪಕ್‌ ಮಿಶ್ರಾ ಅವರ ಕಾರ್ಯನಿರ್ವಹಣೆಯ ಬಗ್ಗೆ ಸಾರ್ವಜನಿಕವಾಗಿ ಅಸಮಾಧಾನ ವ್ಯಕ್ತಪಡಿಸಿದ್ದರಿಂದ ಉಂಟಾಗಿರುವ ಬಿಕ್ಕಟ್ಟು ಶೀಘ್ರ ಪರಿಹಾರವಾಗಲಿದೆ ಎಂದು ಭಾರತೀಯ ವಕೀಲರ ಪರಿಷತ್‌ನ (ಬಿಸಿಐ) ಅಧ್ಯಕ್ಷ ಮನನ್‌ ಕೆ. ಮಿಶ್ರಾ ಹೇಳಿದ್ದಾರೆ.

ಬಿಕ್ಕಟ್ಟು ಶಮನಕ್ಕಾಗಿ ಏಳು ಸದಸ್ಯರ ನಿಯೋಗವನ್ನು ಬಿಸಿಐ ರಚಿಸಿತ್ತು. ಈ ನಿಯೋಗವು ಸಿಜೆಐ ಮಿಶ್ರಾ ಅವರನ್ನು ಭಾನುವಾರ ಭೇಟಿಯಾಗಿದೆ. ಹಾಗೆಯೇ ಅವರ ವಿರುದ್ಧ ಅತೃಪ್ತಿ ವ್ಯಕ್ತಪಡಿಸಿರುವ ನ್ಯಾಯಮೂರ್ತಿಗಳಾದ ಜೆ. ಚಲಮೇಶ್ವರ್‌, ಮದನ್‌ ಲೋಕೂರ್‌ ಮತ್ತು ಕುರಿಯನ್‌ ಜೋಸೆಫ್‌ ಅವರನ್ನು ಭೇಟಿಯಾಗಿದೆ. ರಂಜನ್‌ ಗೊಗೋಯ್‌ ದೆಹಲಿಯಲ್ಲಿ ಇಲ್ಲ. ಹಾಗಾಗಿ ನಿಯೋಗ ಅವರನ್ನು ಭೇಟಿಯಾಗಿಲ್ಲ.

ಸುಪ್ರೀಂ ಕೋರ್ಟ್‌ನಲ್ಲಿ ಯಾವುದೇ ಬಿಕ್ಕಟ್ಟು ಇಲ್ಲ, ಇರುವ ಸಮಸ್ಯೆ ಶೀಘ್ರ ಪರಿಹಾರವಾಗಲಿದೆ ಎಂದು ನಿಯೋಗವು ಭೇಟಿಯಾದ ನ್ಯಾಯಮೂರ್ತಿಗಳು ಭರವಸೆ ನೀಡಿದ್ದಾರೆ ಎಂದು ಮನನ್‌ ಹೇಳಿದ್ದಾರೆ.

ಸಿಜೆಐಗೆ ಪತ್ರ: ವಿಚಾರಣೆಗೆ ಬಾಕಿ ಇರುವ ಪ್ರಕರಣಗಳು ಸೇರಿ ಮಹತ್ವದ ಪ್ರಕರಣಗಳ ವಿಚಾರಣೆಯನ್ನು ನ್ಯಾಯಾಲಯದ ಹಿರಿಯ ಐವರು ನ್ಯಾಯಮೂರ್ತಿಗಳ ಪೀಠಕ್ಕೆ ವಹಿಸಬೇಕು ಎಂದು ನಾಲ್ವರು ನಿವೃತ್ತ ನ್ಯಾಯಮೂರ್ತಿಗಳು ಹೇಳಿದ್ದಾರೆ.

‘ಸುಪ್ರೀಂ ಕೋರ್ಟ್‌ ಪಾರದರ್ಶಕವಾಗಿದೆ ಎಂಬ ಭರವಸೆಯನ್ನು ಜನರಲ್ಲಿ ಮೂಡಿಸುವುದು ಮುಖ್ಯ. ಮುಖ್ಯವಾದ ಪ್ರಕರಣಗಳಲ್ಲಿ ನಿರ್ದಿಷ್ಟ ಫಲಿತಾಂಶ ಬರುವಂತೆ ನೋಡಿಕೊಳ್ಳಲು ಪ್ರಕರಣಗಳನ್ನು ಹಂಚಿಕೆ ಮಾಡುವ ಅಧಿಕಾರವನ್ನು ಮುಖ್ಯ ನ್ಯಾಯಮೂರ್ತಿ ದುರ್ಬಳಕೆ ಮಾಡದಂತೆ ಎಚ್ಚರ ವಹಿಸಬೇಕು’ ಎಂದು ಈ ನಿವೃತ್ತ ನ್ಯಾಯಮೂರ್ತಿಗಳು ಹೇಳಿದ್ದಾರೆ.

ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾಗೆ ಬರೆದ ಬಹಿರಂಗ ಪತ್ರವನ್ನು ವಕೀಲ ಪ್ರಶಾಂತ್‌ ಭೂಷಣ್‌ ಮಾಧ್ಯಮಕ್ಕೆ ನೀಡಿದ್ದಾರೆ. ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಪಿ.ಬಿ. ಸಾವಂತ್‌, ದೆಹಲಿ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎ.ಪಿ. ಶಾ, ಮದ್ರಾಸ್‌ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಕೆ. ಚಂದ್ರು ಮತ್ತು ಬಾಂಬೆ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಚ್‌. ಸುರೇಶ್‌ ಈ ಪತ್ರಕ್ಕೆ ಸಹಿ ಮಾಡಿದ್ದಾರೆ.

ಕಿರಿಯ ನ್ಯಾಯಮೂರ್ತಿಗಳಿರುವ ಆಯ್ದ ಪೀಠಗಳಿಗೆ ಪ್ರಕರಣಗಳನ್ನು ಮನಸೋ ಇಚ್ಛೆ ಹಂಚಿಕೆ ಮಾಡಲಾಗುತ್ತಿದೆ ಎಂದು ಸುಪ್ರೀಂ ಕೋರ್ಟ್‌ನ ನಾಲ್ವರು ಹಿರಿಯ ನ್ಯಾಯಮೂರ್ತಿಗಳು ಎತ್ತಿರುವ ಪ್ರಶ್ನೆಗೆ ಸ್ಪಷ್ಟ ನಿಯಮಗಳನ್ನು ರೂಪಿಸುವ ಮೂಲಕ ಉತ್ತರ ಕಂಡುಕೊಳ್ಳಬೇಕು. ನ್ಯಾಯಮೂರ್ತಿಗಳಿಗೆ ಪ್ರಕರಣಗಳ ಹಂಚಿಕೆ  ತರ್ಕಬದ್ಧವಾಗಿ, ನ್ಯಾಯಯುತವಾಗಿ ಮತ್ತು ಪಾರದರ್ಶಕವಾಗಿ ಇರಬೇಕು ಎಂದು ಈ ಪತ್ರದಲ್ಲಿ ಅವರು ಒತ್ತಾಯಿಸಿದ್ದಾರೆ.

ಸುಪ್ರೀಂ ಕೋರ್ಟ್‌ನ ವಕೀಲರ ಪರಿಷತ್ತು ಶನಿವಾರ ಸಭೆ ಸೇರಿ ಇಂತಹುದೇ ನಿರ್ಣಯ ಕೈಗೊಂಡಿತ್ತು. ಬಾಕಿ ಇರುವುದೂ ಸೇರಿ ಸಾರ್ವಜನಿಕ ಹಿತಾಸಕ್ತಿಯ ಎಲ್ಲ ಅರ್ಜಿಗಳನ್ನು ಐವರು ಹಿರಿಯ ನ್ಯಾಯಮೂರ್ತಿಗಳ ಪೀಠ ವಿಚಾರಣೆ ನಡೆಸಬೇಕು ಎಂದು ಪರಿಷತ್‌ ಸಲಹೆ ನೀಡಿತ್ತು.

ಭಾನುವಾರ ಭಾರಿ ಚಟುವಟಿಕೆ: ಸುಪ್ರೀಂ ಕೋರ್ಟ್‌ನ ನಾಲ್ವರು ಹಿರಿಯ ನ್ಯಾಯಮೂರ್ತಿಗಳ ಪ್ರತಿರೋಧಕ್ಕೆ ಸಂಬಂಧಿಸಿ ಭಾನುವಾರ ಭಾರಿ ಚಟುವಟಿಕೆಗಳು ನಡೆದಿವೆ. ನಾಲ್ವರು ನ್ಯಾಯಮೂರ್ತಿಗಳ ಪರವಾಗಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ್ದ ಜೆ. ಚಲಮೇಶ್ವರ್‌ ಅವರನ್ನು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾದ ಎಸ್‌.ಎ. ಬೊಬ್ಡೆ ಮತ್ತು ಎಲ್‌. ನಾಗೇಶ್ವರ ರಾವ್‌ ಭೇಟಿಯಾದರು.

ಭಾನುವಾರ ಭಾರಿ ಚಟುವಟಿಕೆ

ಸುಪ್ರೀಂ ಕೋರ್ಟ್‌ನ ನಾಲ್ವರು ಹಿರಿಯ ನ್ಯಾಯಮೂರ್ತಿಗಳ ಪ್ರತಿರೋಧಕ್ಕೆ ಸಂಬಂಧಿಸಿ ಭಾನುವಾರ ಭಾರಿ ಚಟುವಟಿಕೆಗಳು ನಡೆದಿವೆ. ನಾಲ್ವರು ನ್ಯಾಯಮೂರ್ತಿಗಳ ಪರವಾಗಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ್ದ ಜೆ. ಚಲಮೇಶ್ವರ್‌ ಅವರನ್ನು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾದ ಎಸ್‌.ಎ. ಬೊಬ್ಡೆ ಮತ್ತು ಎಲ್‌. ನಾಗೇಶ್ವರ ರಾವ್‌ ಭೇಟಿಯಾದರು.

ಸು‍ಪ್ರೀಂ ಕೋರ್ಟ್‌ ವಕೀಲರ ಪರಿಷತ್‌ ಏಳು ಸದಸ್ಯರ ನಿಯೋಗವು ನ್ಯಾಯಮೂರ್ತಿ ಅರುಣ್‌ ಮಿಶ್ರಾ ಅವರನ್ನು ಭಾನುವಾರ ಭೇಟಿಯಾಗಿ ಸರ್ವೋಚ್ಚ ನ್ಯಾಯಾಲಯದಲ್ಲಿ ಸೃಷ್ಟಿಯಾಗಿರುವ ಬಿಕ್ಕಟ್ಟಿನ ಬಗ್ಗೆ ಚರ್ಚಿಸಿತು.

ಸೊಹ್ರಾಬುದ್ದೀನ್‌ ಎನ್‌ಕೌಂಟರ್‌ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ಸಿಬಿಐ ವಿಶೇಷ ನ್ಯಾಯಾಧೀಶ ಬಿ.ಎಚ್‌. ಲೋಯ ಅವರ ಸಾವಿನ ಬಗೆಗಿನ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ಅವರು ಅರುಣ್‌ ಮಿಶ್ರಾ ಅವರಿಗೆ ವಹಿಸಿದ್ದರು.

ಸುಪ್ರೀಂ ಕೋರ್ಟ್‌ನ ಹಿರಿಯ ನ್ಯಾಯಮೂರ್ತಿಗಳಾದ ಜೆ. ಚಲಮೇಶ್ವರ್‌, ರಂಜನ್‌ ಗೊಗೋಯ್‌, ಎಂ.ಬಿ. ಲೋಕೂರ್‌ ಮತ್ತು ಕುರಿಯನ್‌ ಜೋಸೆಫ್‌ ಅವರು ಶುಕ್ರವಾರ ಮಾಧ್ಯಮಗೋಷ್ಠಿ ನಡೆಸಿ, ವಿಚಾರಣೆಗೆ ಪ್ರಕರಣಗಳನ್ನು  ಹಂಚಿಕೆ ಮಾಡುವಲ್ಲಿ ಪಾರದರ್ಶಕತೆ ಇಲ್ಲ ಎಂದು ಆರೋಪಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry