ಪಾಕ್‌ ಮೇಲೆ ಒತ್ತಡ ಹೇರಲು ಸೇನಾ ತಂತ್ರ ಬದಲು: ರಾವತ್‌

7

ಪಾಕ್‌ ಮೇಲೆ ಒತ್ತಡ ಹೇರಲು ಸೇನಾ ತಂತ್ರ ಬದಲು: ರಾವತ್‌

Published:
Updated:
ಪಾಕ್‌ ಮೇಲೆ ಒತ್ತಡ ಹೇರಲು ಸೇನಾ ತಂತ್ರ ಬದಲು: ರಾವತ್‌

ನವದೆಹಲಿ‌: ಗಡಿಯಾಚೆಯಿಂದ ಭಯೋತ್ಪಾದನೆಗೆ ಉತ್ತೇಜನ ನೀಡುವುದನ್ನು ನಿಲ್ಲಿಸುವ ಸಲುವಾಗಿ ಹೊಸ ರೀತಿಯ ಸೇನಾ ಕಾರ್ಯಾಚರಣೆಗಳ ಮೂಲಕ ಪಾಕಿಸ್ತಾನದ ಮೇಲೆ ಒತ್ತಡ ಉಂಟು ಮಾಡಬೇಕು ಎಂದು ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅಭಿಪ್ರಾಯಪಟ್ಟಿದ್ದಾರೆ.

ಇಲ್ಲಿ ನಡೆದ ಪತ್ರಿಕಾಗೋಷ್ಠಿಯೊಂದರಲ್ಲಿ ಅವರು ಈ ಮಾತು ಹೇಳಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆಯನ್ನು ತೊಡೆದು ಹಾಕಿ, ಶಾಂತಿ ನೆಲೆಸುವಂತೆ ಮಾಡಲು ಸರ್ಕಾರ ಮತ್ತು ಸೇನೆ ಎರಡೂ ಒಟ್ಟೊಟ್ಟಿಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.

‘ರಾಜಕೀಯ ಕ್ರಮಗಳು ಮತ್ತು ಸೇನಾ ಕಾರ್ಯಾಚರಣೆಗಳು ಏಕಕಾಲದಲ್ಲಿ ಆಗಬೇಕು. ಕೆಲವು ತಿಂಗಳ ಹಿಂದಷ್ಟೇ ಜಮ್ಮು ಮತ್ತು ಕಾಶ್ಮೀರ ವಿವಾದದ ಸಂಧಾನಕರನಾಗಿ ಗುಪ್ತಚರ ಇಲಾಖೆಯ ನಿವೃತ್ತ ಅಧಿಕಾರಿ ದಿನೇಶ್ವರ್ ಶರ್ಮಾ ಅವರನ್ನು ಸರ್ಕಾರ ನೇಮಿಸಿದೆ. ಅಲ್ಲಿನ ಜನರ ಎದುರು ಸರ್ಕಾರದ ಪ್ರತಿನಿಧಿಯಾಗಿ ಅವರು ನಿಂತಿದ್ದಾರೆ. ಜನರ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುವುದು, ರಾಜಕೀಯ ಮಟ್ಟದಲ್ಲಿ ತೆಗೆದುಕೊಳ್ಳಬಹುದಾದ ಕ್ರಮಗಳ ಬಗ್ಗೆ ಸರ್ಕಾರದ ಗಮನ ಸೆಳೆಯುವ ಕೆಲಸವನ್ನು ಅವರು ಮಾಡುತ್ತಾರೆ. ಅದೇ ಸಂದರ್ಭದಲ್ಲಿ ಭಯೋತ್ಪಾದನೆಯನ್ನು ಹತ್ತಿಕ್ಕುವ ಕೆಲಸವನ್ನು ಸೇನೆ ಮಾಡಬೇಕು’ ಎಂದು ಅವರು ವಿವರಿಸಿದ್ದಾರೆ.

‘ಪಾಕಿಸ್ತಾನದ ಮೇಲೆ ಒತ್ತಡ ಹೇರಲು ನಮಗೆ ಬಹಳಷ್ಟು ಅವಕಾಶಗಳಿವೆ. ಭಯೋತ್ಪಾದನೆ ವಿರುದ್ಧ ಹೊಸ–ಹೊಸ ತಂತ್ರಗಳು, ವಿಭಿನ್ನ ರೀತಿಯ ಕಾರ್ಯಾಚರಣೆಗಳನ್ನು ನಡೆಸಿ ಅವರಿಗೆ ಆಘಾತ ನೀಡುತ್ತಿರಬೇಕು. ಆಗ ಅವರ ಮೇಲೆ ಒತ್ತಡ ಹೆಚ್ಚಿಸಲು ಸಾಧ್ಯವಾಗುತ್ತದೆ. ನಾನು ಅಧಿಕಾರ ವಹಿಸಿಕೊಂಡ ನಂತರ ಇಂತಹ ತಂತ್ರಗಳನ್ನು ಅನುಸರಿಸಲು ಆರಂಭಿಸಿದ್ದೇವೆ’ ಎಂದು ಅವರು ಹೇಳಿಕೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry