ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಲಿಯ ಆನುವಂಶಿಕ ರೂಪಾಂತರ ರಕ್ಷಣೆಯೂ ಆಗಲಿ

ಭಾರತ 'ಹುಲಿಗಳ ನಾಡು' ಎಂದೇ ಹೆಸರುವಾಸಿ. ಹುಲಿಗಳ ಜಾಗತಿಕ ಜನಸಂಖ್ಯೆಯ ಸುಮಾರು ಶೇ 60ರಷ್ಟು ನಮ್ಮ ದೇಶದಲ್ಲೇ ಇವೆ.  ಒಂದು ಕಾಲದಲ್ಲಿ ಏಷ್ಯಾದಾದ್ಯಂತ ಹುಲಿಗಳು ಕಂಡು ಬರುತ್ತಿದ್ದವು. ಈಗ ಜಗತ್ತಿನಾದ್ಯಂತ ಅವುಗಳ ನೆಲೆಯ ಶೇ 93 ಭಾಗ ನಾಶವಾಗಿದೆ. ಅವುಗಳೀಗ ಅಳಿವಿನಂಚಿನಲ್ಲಿರುವ ಪ್ರಭೇದಗಳಾಗಿವೆ ಎಂಬುದು ದುಃಖಕರ. ಸಸ್ಯಾಹಾರಿ ಪ್ರಾಣಿಗಳ ಸಂಖ್ಯೆ ಹೆಚ್ಚಾಗಿ ಸಸ್ಯ ಸಂಪತ್ತು ನಾಶವಾಗುತ್ತಾ ಸಮತೋಲನ ಏರುಪೇರಾಗುವುದನ್ನು ಪರಭಕ್ಷಕ ಪ್ರಾಣಿಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಹುಲಿಗಳು ತಪ್ಪಿಸುತ್ತವೆ. ಪರಿಸರ ವ್ಯವಸ್ಥೆಯ ವೈವಿಧ್ಯ ಹಾಗೂ ಆರೋಗ್ಯವನ್ನು ಕಾಪಾಡುವಲ್ಲಿಯೂ ಇವುಗಳ ಪಾತ್ರ ಪ್ರಮುಖವಾದುದು.

ಬೆಕ್ಕುಗಳ ಜಾತಿಗೆ ಸೇರಿದ ಈ ಅದ್ಭುತ ಪ್ರಾಣಿಗಳನ್ನು ಉಳಿಸಿಕೊಳ್ಳಲು ಸಂರಕ್ಷಣಾ ಕ್ರಮಗಳು ಬೇಕಾದಷ್ಟಿವೆ. ಉದಾಹರಣೆಗೆ, ಈಗಾಗಲೇ ಭಾರತ ದೇಶಾದ್ಯಂತ 50 ಹುಲಿ ಸಂರಕ್ಷಿತ ಅರಣ್ಯಗಳಿವೆ. ಆದರೆ, ಈ ಮೀಸಲು ಅರಣ್ಯಗಳ ಸಣ್ಣಗಾತ್ರದಿಂದ ಮತ್ತು ಪ್ರತಿಯೊಂದು ಹುಲಿ ರಕ್ಷಿತಾರಣ್ಯದಲ್ಲಿ ಕೆಲವೇ ಹುಲಿಗಳಿವೆ. ಹಾಗಾಗಿ ಆಕಸ್ಮಿಕ ಘಟನೆಗಳು ಮತ್ತು ಆಂತರಿಕ ಸಂತಾನೋತ್ಪತ್ತಿಯಿಂದ ಉಂಟಾಗುವ ಸಮಸ್ಯೆಗಳಿಗೆ ಇವು ಈಡಾಗುತ್ತಿವೆ. ರಕ್ತಸಂಬಂಧಿ ಹುಲಿಗಳ ಮಿಲನದಿಂದ ಉಂಟಾಗುವ ಸಂತಾನ ಆರೋಗ್ಯಯುತ ಮತ್ತು ಸಶಕ್ತವಾಗಿರದ ಸಾಧ್ಯತೆಗಳೇ ಹೆಚ್ಚು. ಹೀಗಾಗಿ, ಸಣ್ಣಗಾತ್ರದ ಜನಸಂಖ್ಯೆ ಮತ್ತು ಪ್ರತ್ಯೇಕತೆಯ ಸಂಭಾವ್ಯ ಅಡ್ಡ-ಪರಿಣಾಮವನ್ನು ಸರಿಪಡಿಸಲು, ತಳಿ ಸಂಪರ್ಕ ಹೊಂದಿರುವ ಜನಸಂಖ್ಯೆಯನ್ನು ಗುರುತಿಸುವುದು ಮುಖ್ಯವಾಗುತ್ತದೆ.

ಆದರೆ ನಾವು ಅದನ್ನು ಮಾಡುವುದು ಹೇಗೆ? ರಾಷ್ಟ್ರೀಯ ಜೀವವಿಜ್ಞಾನಗಳ ಕೇಂದ್ರದ (ಎನ್‌ಸಿಬಿಎಸ್‌) ಸಂಶೋಧಕರ ನೇತೃತ್ವದಲ್ಲಿ ನಡೆದ ಇತ್ತೀಚಿನ ಅಧ್ಯಯನದಲ್ಲಿ ಈ ಪ್ರಶ್ನೆಗೆ ಉತ್ತರ ದೊರೆತಿದೆ.

‘ಒಂದು ಸಂರಕ್ಷಣಾ ಕಾರ್ಯಕ್ರಮದ ಯಶಸ್ಸನ್ನು ಇದುವರೆಗೆ ಅದರ ವ್ಯಾಪ್ತಿಯ ಜೀವಿಗಳ ಸಂಖ್ಯೆಯ ಹೆಚ್ಚಳದಿಂದ ಅಳೆಯಲಾಗುತ್ತಿದೆ. ಆದರೆ, ಇದೇ ಏಕೈಕ ಮಾನದಂಡವಾಗಿರಬಾರದು. ಆ ಜೀವಿಯ ತಳಿಯ ರೂಪಾಂತರಗಳನ್ನು ರಕ್ಷಿಸುವುದೂ ಕೂಡ ಅಷ್ಟೇ ಮುಖ್ಯವಾದ ಅಂಶ. ಹಾಗಾಗಿ ನಾವು ಕೇವಲ ಹುಲಿಗಳ ಸಂಖ್ಯೆಯನ್ನಷ್ಟೇ ಅಲ್ಲದೇ, ಅವುಗಳ ಆನುವಂಶಿಕ ರೂಪಾಂತರಗಳನ್ನೂ ಸಹ ರಕ್ಷಿಸಬಯಸುತ್ತೇವೆ’ ಎನ್ನುತ್ತಾರೆ ಎನ್‌ಸಿಬಿಎಸ್‌ನ 'ಪರಿಸರ ವಿಜ್ಞಾನ ಮತ್ತು ವಿಕಸನ' ವಿಭಾಗದ ಡಾ.ಉಮಾ ರಾಮಕೃಷ್ಣನ್. ಇವರು 'ನೇಚರ್' ನಿಯತಕಾಲಿಕದ ವೈಜ್ಞಾನಿಕ ವರದಿಗಳ ವಿಭಾಗದಲ್ಲಿ ಈ ಬಗ್ಗೆ ಪ್ರಕಟವಾದ ಅಧ್ಯಯನದ ಸಹ-ಲೇಖಕರಾಗಿದ್ದಾರೆ. ಭಾರತದಾದ್ಯಂತ ಇರುವ ಹುಲಿಗಳ ಜನಸಂಖ್ಯೆಯ ಆಸಕ್ತಿದಾಯಕ ಆನುವಂಶಿಕ ವಿವರಗಳನ್ನು, ಈ ಅಧ್ಯಯನವು ಬಹಿರಂಗಪಡಿಸಿದೆ. ಭಾರತೀಯ ಹುಲಿಗಳ ಸಂರಕ್ಷಣಾ ತಂತ್ರಗಳನ್ನು ವಿನ್ಯಾಸಗೊಳಿಸಲು ಇದು ಸಹಕಾರಿಯಾಗಿದೆ.

ಹುಲಿಗಳ ವಿವಿಧ ಗುಂಪುಗಳು ತಳಿ ಸಂಪರ್ಕ ಹೊಂದಿವೆಯೇ ಎಂದು ತಿಳಿಯಲು ಹಾಗೂ ಆನುವಂಶಿಕ ಅಂಶಗಳ ಹೋಲಿಕೆಗಾಗಿ ಭಾರತದಾದ್ಯಂತ ಕಾಡು ಹುಲಿಗಳ (ಪ್ಯಾಂಥೆರಾ ಟೈಗ್ರಿಸ್ ಟೈಗ್ರಿಸ್) ಮಾದರಿಗಳನ್ನು ಸಂಶೋಧಕರು ಸಂಗ್ರಹಿಸಿದ್ದಾರೆ. ಅವರು ಭಾರತದ ವಾಯವ್ಯ, ದಕ್ಷಿಣ ಮತ್ತು ಮಧ್ಯ ಭಾಗಗಳಿಗೆ ಅನುಗುಣವಾಗಿ 3 ವಿಭಿನ್ನ ತಳಿ ಗುಂಪುಗಳನ್ನು ಗುರುತಿಸಿದರು. ನಂತರ ಈ ಸಮೂಹಗಳಲ್ಲಿನ ಆನುವಂಶಿಕ ಬದಲಾವಣೆಯನ್ನು ವಿಶ್ಲೇಷಿಸಿದರು.

ರಣಥಂಬೋರ್ ಹುಲಿ ಮೀಸಲು ಪ್ರದೇಶದ ಮಾದರಿಗಳನ್ನು ಹೊಂದಿರುವ ವಾಯುವ್ಯ ಗುಂಪು, ಎಲ್ಲಕ್ಕಿಂತಾ ಕಡಿಮೆ ವಂಶವಾಹಿ ವೈವಿಧ್ಯವನ್ನು ಹೊಂದಿದೆ. ಮಧ್ಯಭಾರತದ ಹುಲಿಗಳ ಗುಂಪು ಹೆಚ್ಚಿನ ವಂಶವಾಹಿ ವೈವಿಧ್ಯವನ್ನು ಹೊಂದಿವೆ ಎಂಬುದನ್ನು ಈ ಅಧ್ಯಯನದ ಫಲಿತಾಂಶಗಳು ತೋರಿಸಿಕೊಟ್ಟಿವೆ. ಸಂಶೋಧಕರ ಪ್ರಕಾರ, ಮಧ್ಯ ಭಾರತದೊಳಗಿನ ಅಂತರ-ಸಂಪರ್ಕಿತ ರಕ್ಷಿತ ಪ್ರದೇಶಗಳು ಈ ಹೆಚ್ಚಿನ ಆನುವಂಶಿಕ ವೈವಿಧ್ಯಕ್ಕೆ ಕಾರಣವಿರಬಹುದು.ಈ ಸಂಶೋಧನೆಯ ಫಲಿತಾಂಶಗಳ ಪ್ರಕಾರ, 'ರಣಥಂಬೋರ್'ನಲ್ಲಿರುವ ಹುಲಿಗಳ ಸಮೂಹದಂತಹ ಸಣ್ಣಗಾತ್ರದ, ತುಲನಾತ್ಮಕವಾಗಿ ಪ್ರತ್ಯೇಕವಾಗಿರುವ ಜನಸಂಖ್ಯೆಯ ಅಳಿವಿನ ಸಂಭವನೀಯತೆ ಹೆಚ್ಚು. ಇಲ್ಲಿ ಹುಲಿಗಳು ಬದುಕುಳಿಯುವುದನ್ನು ಖಾತ್ರಿಪಡಿಸಿಕೊಳ್ಳಲು ಸಂರಕ್ಷಣಾ ಕ್ರಮಗಳು ಅತ್ಯಗತ್ಯವಾಗಿರುತ್ತವೆ.

ಇಂತಹ ಸಂರಕ್ಷಣಾ ಕ್ರಮಗಳಿಗೆ ಡಾ.ಉಮಾ ಅವರು ಕೆಲವು ಶಿಫಾರಸು ಮಾಡುತ್ತಾರೆ. ದೂರದ ಮತ್ತೊಂದು ಗುಂಪಿನ ಹುಲಿಯನ್ನು 'ರಣಥಂಬೋರ್' ಹುಲಿಗಳ ಗುಂಪಿನ ಭಾಗವಾಗಿಸಬೇಕು. ಆಗ ಕಡಿಮೆ ಆನುವಂಶಿಕ ವೈವಿಧ್ಯವನ್ನು ಸರಿದೂಗಿಸಬಹುದು ಎಂಬುದು ಅವರ ಶಿಫಾರಸು. ‘ಆದರೆ, ಅಂತಹ ವರ್ಗಾವಣೆಯಿಂದ, ಯಾವುದೇ ಸ್ಥಳೀಯ ರೂಪಾಂತರಕ್ಕೆ ಅವಶ್ಯವಾದ ಜೀನ್ ನಾಶವಾಗಬಾರದು ಅಥವಾ ರಣಥಂಬೋರ್ ಹುಲಿಗಳಲ್ಲಿ ಇರುವ ನಿರ್ದಿಷ್ಟ ವಿಶಿಷ್ಟ ವಂಶವಾಹಿಗಳು ಇನ್ನಿಲ್ಲವಾಗಬಾರದು. ಇದನ್ನು ದೃಢಪಡಿಸಿಕೊಂಡ ನಂತರವಷ್ಟೇ ಅಂತಹ ಯಾವುದೇ ಹೊಸ ಹುಲಿಯನ್ನು ಈ ಗುಂಪಿಗೆ ಪರಿಚಯಿಸಬೇಕು’ ಎಂದು ಡಾ.ಉಮಾ ಎಚ್ಚರಿಸುತ್ತಾರೆ.

ಅವರ ಪ್ರಕಾರ, ಈ ಪ್ರದೇಶಗಳನ್ನು ನೈಸರ್ಗಿಕ ಕಾರಿಡಾರ್‌ಗಳ ಮೂಲಕ ಇತರ ಹುಲಿ ರಕ್ಷಿತ ಪ್ರದೇಶಗಳ ಜೊತೆ ಸಂಪರ್ಕ ಕಲ್ಪಿಸುವುದು ಅತ್ಯುತ್ತಮ ದೀರ್ಘಾವಧಿ ಪರಿಹಾರ.

ಇಲ್ಲಿಯವರೆಗೂ, ನಮ್ಮ ದೇಶದಲ್ಲಿ ಹುಲಿಗಳ ಚಲನವಲನದ ಮೇಲೆ ನಿಗಾ ಇಡಲು ಬಳಸುವ ತಂತ್ರಗಳು, ಹೆಚ್ಚಾಗಿ ಹುಲಿಗಳ ಸಂಖ್ಯೆಯನ್ನು ಅಂದಾಜು ಮಾಡುವವೇ ಆಗಿವೆ. ಅವುಗಳ ಸಂಖ್ಯೆಯನ್ನು ಅಂದಾಜು ಮಾಡಲು, ಕ್ಯಾಮೆರಾ-ಟ್ರ್ಯಾಪ್ ದತ್ತಾಂಶದಷ್ಟು ಸಮರ್ಥವಾಗಿ ಆನುವಂಶಿಕ ಮಾಹಿತಿಯನ್ನು ಬಳಸಲಾಗದು. ಆದರೆ, ಹುಲಿಗಳ ಸಂಖ್ಯೆಯು ಹೇಗೆ ಆನುವಂಶಿಕ ವೈವಿಧ್ಯವನ್ನು ಹೊಂದಿದೆ ಮತ್ತು ಒಂದು ಭೂಪ್ರದೇಶದಲ್ಲಿ ವಿವಿಧ ಜೀವಿಗಳ ಸಂಖ್ಯೆಯು ಒಂದಕ್ಕೊಂದು ಹೇಗೆ ಬೆಸೆದುಕೊಂಡಿವೆ ಎಂಬುದನ್ನು ನಿರ್ಣಯಿಸುವಲ್ಲಿ ಈ ಆನುವಂಶಿಕ ಮಾಹಿತಿಯು ಪ್ರಮುಖ ಪಾತ್ರ ನಿರ್ವಹಿಸಬಲ್ಲುದು.

ಡಾ.ಉಮಾ ಅವರ ಪ್ರಕಾರ, ತಳಿ ಬದಲಾವಣೆಗಳ ಆಧಾರದ ಮೇಲೆ ಹುಲಿಗಳ ಡೇಟಾಬೇಸ್‌ ಹೊಂದುವುದು ಈ ಸಂರಕ್ಷಣಾ ಕಾರ್ಯದ ಮುಂದಿನ ತಾರ್ಕಿಕ ಹೆಜ್ಜೆ. ಗಡಿಗಳನ್ನು ಮೀರಿ, ವಿವಿಧ ದೇಶಗಳಲ್ಲಿ ಹುಲಿಗಳ ಸಂರಕ್ಷಣೆ ಮಾಡುವುದಕ್ಕೆ ಇದು ಸಹಕಾರಿ ಎನ್ನುತ್ತಾರೆ ಅವರು.

‘ಆನುವಂಶಿಕ ಮಾದರಿಗಳನ್ನು ಗಡಿಗಳ ಆಚೀಚೆ ಹಂಚಿಕೊಳ್ಳಲಾಗುವುದಿಲ್ಲ. ಆದರೆ, ಗಡಿಗಳನ್ನು ಮೀರಿ ಆನುವಂಶಿಕ ಮಾಹಿತಿಯನ್ನು ಹಂಚಿಕೊಳ್ಳಬಹುದು. ಇಂದು 'ಜಾಗತಿಕ ಹುಲಿ ಆನುವಂಶಿಕ ಡೇಟಾಬೇಸ್‌' ರೂಪಿಸಲು ಸಾಧ್ಯವಿದೆ. ಹುಲಿಗಳ ಸಂಖ್ಯೆಯನ್ನು ಮತ್ತೆ ಹೆಚ್ಚಿಸಲು, ಅವುಗಳ ಗುಂಪುಗಳ ನಡುವೆ ಸಂಪರ್ಕ ಕಲ್ಪಿಸಲು ಮತ್ತು ಬೇಟೆಗಾರರಿಂದ, ಕಳ್ಳಸಾಗಣೆದಾರರಿಂದ ವಶಪಡಿಸಿಕೊಂಡ ಹುಲಿಯ ಚರ್ಮ, ದೇಹದ ಇನ್ನಿತರ ಭಾಗಗಳನ್ನು ವಿಂಗಡಿಸಿ, ಅರ್ಥೈಸಿಕೊಳ್ಳುವುದಕ್ಕೂ ಇಂತಹ ಡೇಟಾಬೇಸ್‌ ಅತ್ಯುಪಯುಕ್ತ’ ಎಂದು ಈ ಸಂಶೋಧನೆ ಮತ್ತು ಸಂರಕ್ಷಣಾ ವಿಧಾನಗಳ ಹೊಸ ಆದ್ಯತೆಯ ಮಹತ್ವದ ಬಗ್ಗೆ ವಿವರಿಸುತ್ತಾರೆ.

(ಸಂಶೋಧನಾ ಚಟುವಟಿಕೆಗಳಲ್ಲಿ ತೊಡಗಿರುವ ಒಂದು ಸಾಮಾಜಿಕ ಉದ್ಯಮ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT