ರಸ್ತೆಬದಿ ಅಂಗಡಿಗಳ ತೆರವು

7
ಮಲೆಮಹದೇಶ್ವರ ಬೆಟ್ಟದಲ್ಲಿ ವ್ಯಾಪಾರಿಗಳ ಆಕ್ರೋಶ

ರಸ್ತೆಬದಿ ಅಂಗಡಿಗಳ ತೆರವು

Published:
Updated:
ರಸ್ತೆಬದಿ ಅಂಗಡಿಗಳ ತೆರವು

ಮಲೆ ಮಹದೇಶ್ವರ ಬೆಟ್ಟ:‌ ಇಲ್ಲಿನ ಮಹದೇಶ್ವರ ಸ್ವಾಮಿ ದೇವಸ್ಥಾನದ ಸಮೀಪ, ಬೀದಿಬದಿ ಅಂಗಡಿಗಳನ್ನು ಯಾವುದೇ ಮುನ್ಸೂಚನೆ ಇಲ್ಲದೆ ತೆರವುಗೊಳಿಸಲಾಗುತ್ತಿದೆ ಎಂದು ಆರೋಪಿಸಿ ಭಾನುವಾರ ಬೀದಿಬದಿ ವ್ಯಾಪಾರಿಗಳು ದೇವಸ್ಥಾನದ ಸಿಬ್ಬಂದಿ ಗಳೊಡನೆ ವಾಗ್ವಾದ ನಡೆಸಿದರು.

ಈ ವೇಳೆ ಮಹಿಳೆಯೊಬ್ಬರು ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ಪ್ರಹಸನವೂ ನಡೆಯಿತು.

‘ಬೆಟ್ಟದಲ್ಲಿ ಸುಮಾರು 50 ವರ್ಷಗಳಿಂದಲೂ ಬೀದಿಬದಿಯಲ್ಲಿ ವ್ಯಾಪಾರ ನಡೆಸುತ್ತಿದ್ದೇವೆ. ಅದೇ ನಮ್ಮ ಜೀವನಕ್ಕೆ ಆಧಾರವಾಗಿದೆ. ಆದರೆ, ಈಗ ಪರ್ಯಾಯ ವ್ಯವಸ್ಥೆ ಕಲ್ಪಿಸದೇ ತೆರವು ಗೊಳಿಸುತ್ತಿರುವುದರಿಂದ ನಮಗೆ ಧಿಕ್ಕು ತೋಚದಂತಾಗಿದೆ’ ಎಂದು ವ್ಯಾಪಾರಿಗಳು ಅಳಲು ತೋಡಿಕೊಂಡರು.

‘ಡಿ.20 ಮತ್ತು 21 ರಂದು ಅಹೋರಾತ್ರಿ ಧರಣಿಯನ್ನು ನಡೆಸಿದಾಗ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎ.ಜೆ.ರೂಪಾ ವಾರದಲ್ಲಿ ನಾಲ್ಕು ದಿನ (ಭಾನುವಾರದಿಂದ ಮಂಗಳವಾರದ ವರೆಗೂ) ಹಾಗೂ ಪ್ರತಿ ಅಮಾವಾಸ್ಯೆ ಸಂದರ್ಭದಲ್ಲಿ ನಾಲ್ಕುದಿನ, ಹುಣ್ಣಿಮೆಯ ವೇಳೆ ಮೂರು ದಿನ ಬೀದಿ ಬದಿಯಲ್ಲಿ ವ್ಯಾಪಾರ ಮಾಡಲು ಅವಕಾಶ ಕಲ್ಪಿಸುವುದಾಗಿ ಭರವಸೆ ನೀಡಿದ್ದರು. ಬಳಿಕ ಪ್ರತಿಭಟನೆ ಹಿಂಪಡೆದಿದ್ದವು. ಆದರೆ, ಈಗ ದಿಢೀರನೆ ಅಂಗಡಿಗಳನ್ನು ತೆರವುಗೊಳಿಸಲು ಮುಂದಾಗಿದ್ದಾರೆ. ದೇವಸ್ಥಾನದ ಭದ್ರತಾ ಸಿಬ್ಬಂದಿ ವ್ಯಾಪಾರಿ ಮಹಿಳೆಯರ ಮೇಲೆ ದೌರ್ಜನ್ಯವನ್ನೂ ಎಸಗಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಮುಖ್ಯಮಂತ್ರಿ ಸಿದ್ದರಾಮುಯ್ಯ ಅವರು ಬೀದಿ ಬದಿ ವ್ಯಾಪಾರಿಗಳನ್ನು ಕಡೆಗಣಿಸಿದ್ದಾರೆ. ಅಂತೆಯೇ ದೇವಸ್ಥಾನದ ಆಡಳಿತವೂ ಸಹ ನಿರ್ಲಕ್ಷ್ಯ ಮಾಡುತ್ತಿದ್ದು, ಇಲ್ಲಿನ ಭದ್ರತಾ ಸಿಬ್ಬಂದಿ ಗೂಂಡಾಗಳಂತೆ ಮಹಿಳೆಯರೊಂದಿಗೆ ವರ್ತಿಸಿದ್ದಾರೆ. ಇಲ್ಲಿನ ವ್ಯಾಪಾರಿಗಳು ಆತ್ಮಹತ್ಯೆ ಮಾಡಿಕೊಂಡರೆ ಪ್ರಾಧಿಕಾರ ಹಾಗೂ ಜನಪ್ರತಿನಿಧಿಗಳೆ ನೇರಹೊಣೆಯಾಗುತ್ತಾರೆ’ ಎಂದು ಬಿ.ಗೋವಿಂದ ಹಾಗೂ ಮುತ್ತಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಪೊಲೀಸ್ ಇನ್‌ಸ್ಪೆಕ್ಟರ್‌ ಷಣ್ಮುಗವರ್ಮಾ ಸ್ಥಳಕ್ಕೆ ಬಂದು ಪ್ರತಿಭಟನಾಕಾರರ ಮನವೊಲಿಸಿ, ಬೀದಿ ಬದಿಯಲ್ಲಿ ಇದ್ದ ಅಂಗಡಿಗಳನ್ನು ಎರಡು ದಿನಗಳ ಮಟ್ಟಿಗೆ ತೆರವುಗೊಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry