175 ಕ್ಷೇತ್ರಗಳಲ್ಲಿ ರಾಜ್ಯ ರೈತ ಸಂಘ ಸ್ಪರ್ಧೆ

7
ರೈತರ ಸಮಾವೇಶದಲ್ಲಿ ‘ಒಂದು ನೋಟು, ಒಂದು ಓಟು ಕೊಡಿ’ ಮತಯಾಚನೆಗೆ ಚಾಲನೆ

175 ಕ್ಷೇತ್ರಗಳಲ್ಲಿ ರಾಜ್ಯ ರೈತ ಸಂಘ ಸ್ಪರ್ಧೆ

Published:
Updated:
175 ಕ್ಷೇತ್ರಗಳಲ್ಲಿ ರಾಜ್ಯ ರೈತ ಸಂಘ ಸ್ಪರ್ಧೆ

ಗುಡಿಬಂಡೆ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರೈತ ಸಂಘವು ನಗರ ಪ್ರದೇಶ ಹೊರತುಪಡಿಸಿ 175 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯ ಘಟಕದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದರು.

ಪಟ್ಟಣದಲ್ಲಿ ನಡೆದ ರೈತ ಸಂಘದ ತಾಲ್ಲೂಕು ಸಮಾವೇಶದಲ್ಲಿ ಮಾತನಾಡಿದ ಅವರು, ‘ನೋಟು ಕೊಡಿ, ಓಟು ಕೊಡಿ’ ಎಂಬ ಘೋಷಣೆಯಿಂದ ತಾಲ್ಲೂಕಿನ ಕರಿಗಾನತಮ್ಮನಹಳ್ಳಿ ಗ್ರಾಮದಿಂದ ಪ್ರಚಾರ ಆರಂಭಿಸಲಾಗುವುದು. ಚುನಾವಣೆಯಲ್ಲಿ ಸಂಘವು ಜನರಿಂದಲೇ ಹಣ ಮತ್ತು ಮತವನ್ನು ಯಾಚಿಸುತ್ತದೆ. ಬೂತ್‌ ಮಟ್ಟದಲ್ಲಿ ಸಂಘದಿಂದ 25 ಕಾರ್ಯಕರ್ತರು ಕೆಲಸ ಮಾಡುವರು. ರೈತರಿಗೆ ವಂಚನೆ ಮಾಡುತ್ತಿರುವ ರಾಜಕೀಯ ಪಕ್ಷಗಳಿಗೆ ತಕ್ಕ ಪಾಠ ಕಲಿಸಲಾಗುವುದು ಎಂದು ಭರವಸೆ ನೀಡಿದರು.

‘ನೋಟು ಮತ್ತು ಮದ್ಯ ನೀಡಿ ಮತ ಪಡೆಯಲು ರಾಜ್ಯದಲ್ಲಿ ವಿವಿಧ ಪಕ್ಷಗಳು ಮತಯಾಚನೆಯ ರಾಜಕೀಯ ಮಾಡುತ್ತಿವೆ. ರೈತರು ಇಂಥ ಆಮಿಷಗಳಿಂದ ದೂರವಿದ್ದು, ತಮ್ಮ ಭವಿಷ್ಯಕ್ಕೆ ಬೆಂಬಲವಾಗಿ ನಿಲ್ಲುವವರಿಗೆ ಬೆಂಬಲ ನೀಡಬೇಕು ಎಂದು ಹೇಳಿದರು.

‘ಒಂದೆಡೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಧನಾ ಸಂಭ್ರಮ ಮಾಡಿದರೆ, ಮತ್ತೊಂದೆಡೆ ಬಿಜೆಪಿಯ ಬಿ.ಎಸ್.ಯಡಿಯೂರಪ್ಪ ಪರಿವರ್ತನಾ ಯಾತ್ರೆ ಕೈಗೊಂಡಿದ್ದಾರೆ. ಇಬ್ಬರೂ ಜನರಿಗೆ ಮಂಕು ಬೂದಿ ಹಾಕುತ್ತಿದ್ದಾರೆ. ಸಭೆಗಳಲ್ಲಿ ಆರೋಪ ಮತ್ತು ಪ್ರತ್ಯಾರೋಪ ಮಾಡಿಕೊಳ್ಳುತ್ತಿದ್ದಾರೆ ವಿನಾ ರೈತರ ಸಮಸ್ಯೆಗಳ ಪರಿಹಾರದ ಬಗ್ಗೆ ಮಾತನಾಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದೇಶಕ್ಕೆ ಅನ್ನ ನೀಡುವ ರೈತರು, ರೈತರ ಮಕ್ಕಳು, ಗಡಿಯಲ್ಲಿ ದೇಶ ಕಾಯುತ್ತಿರುವ ಸೈನಿಕರು ನಿಜವಾದ ಶ್ರಮಜೀವಿಗಳು. ಯಾವುದೇ ಶ್ರಮ ಪಡದೇ ರಾಜಕೀಯ ಪಕ್ಷಗಳ ಮುಖಂಡರು, ಕಾರ್ಪೊರೇಟ್‌ ಕಂಪನಿಗಳ ಮಾಲೀಕರು ದೇಶ ಲೂಟಿ ಮಾಡುತ್ತಿದ್ದಾರೆ. ದೇಶಕ್ಕೆ ದ್ರೋಹ ಮಾಡುತ್ತಿರುವವರಿಗೆ ಯಾಕೇ ಮತ ಹಾಕಬೇಕು ಎಂಬುದರ ಬಗ್ಗೆ ಚಿಂತನೆ ಮಾಡಬೇಕು ಎಂದು ಹೇಳಿದರು.

ಸರ್ಕಾರಕ್ಕೆ ರೈತರು ವಿವಿಧ ರೀತಿಯಲ್ಲಿ ಶೇ 75ರಷ್ಟು ತೆರಿಗೆ ನೀಡುತ್ತಿದ್ದಾರೆ. ಸರ್ಕಾರಕ್ಕೆ ನೀಡುವವನೂ, ಖರೀದಿ ಮಾಡುವವನೂ ರೈತರೇ ಆಗಿದ್ದಾರೆ. ಅವರನ್ನು ಕೀಳಾಗಿ ನೋಡುವುದು ಸರಿಯಲ್ಲ ಎಂದರು.

ಸರ್ಕಾರದ ಪ್ರಕಾರ ಎಕರೆ ರಾಗಿ ಬೆಳೆ ನಿರ್ವಹಣೆಗೆ ₹ 3,145 ವೆಚ್ಚ ತಗಲುತ್ತದೆ. ಕ್ವಿಂಟಲ್ ರಾಗಿ ಉತ್ಪಾದನೆಗೆ ₹ 3 ಸಾವಿರ ಎಂದು ಹೇಳುತ್ತದೆ. ಆದರೆ ರೈತರ ಬೆಳೆಗೆ ಸರ್ಕಾರ ₹ 2300 ಬೆಂಬಲ ಬೆಲೆ ನಿಗದಿಪಡಿಸಿದೆ. ಇಲ್ಲಿಯೂ ಕ್ವಿಂಟಲ್‌ಗೆ ₹ 800 ನಷ್ಟವಾಗುತ್ತಿದೆ ಎಂದು ಆರೋಪಿಸಿದರು.

ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಭಕ್ತರಹಳ್ಳಿ ಬೈರೆಗೌಡ ಮಾತನಾಡಿ, ರೈತರು ಅನೇಕ ಕಷ್ಟಗಳನ್ನು ಅನುಭವಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಈ ವರ್ಷ 28 ರೈತರು ಸಾಲದ ಶೂಲಕ್ಕೆ ಬಲಿಯಾಗಿದ್ದಾರೆ. ರೈತರ ಸಮಸ್ಯೆ ಪರಿಹಾರಕ್ಕಾಗಿ ಕೃಷಿ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.

ಎತ್ತಿನಹೊಳೆ, ಕೆ.ಸಿ.ವ್ಯಾಲಿ ತಾವು ಜಾರಿಗೆ ತರುವುದಾಗಿ ರಾಜಕೀಯ ಪಕ್ಷಗಳು ಹೇಳುತ್ತವೆ. ಆದರೆ ಅದರ ಹಿಂದೆ ರೈತ ಸಂಘಟನೆಗಳ ಹೋರಾಟದ ಶ್ರಮ ಇದೆ ಎಂದರು.

ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಎಚ್.ಪಿ.ರಾಮನಾಥ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖಂಡರಾದ ಸತ್ಯಪ್ಪ, ಸತ್ಯಪ್ಪ, ಲಕ್ಷ್ಮಣರೆಡ್ಡಿ, ನರಸಿಂಹರೆಡ್ಡಿ, ರಾಮಾಂಜಿನಪ್ಪ, ರಮಣರೆಡ್ಡಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry