ನಗರಘಟ್ಟದ ಕೀರ್ತಿ ಹೆಚ್ಚಿಸಿದ ಕೀರ್ತಿರಾಜ್

7
ಮೊಲ, ನಾಟಿಕೋಳಿ, ಕುರಿ ಸಾಕಾಣಿಕೆ; ಹೆಬ್ಬೇವು, ಶ್ರೀಗಂಧ, ವೆನಿಲ್ಲಾ ಬೆಳೆದ ಯುವ ರೈತ

ನಗರಘಟ್ಟದ ಕೀರ್ತಿ ಹೆಚ್ಚಿಸಿದ ಕೀರ್ತಿರಾಜ್

Published:
Updated:
ನಗರಘಟ್ಟದ ಕೀರ್ತಿ ಹೆಚ್ಚಿಸಿದ ಕೀರ್ತಿರಾಜ್

ಹೊಳಲ್ಕೆರೆ: ವಿದ್ಯಾವಂತರು ಇಂದು ಕೃಷಿಯಲ್ಲಿ ಆಸಕ್ತಿ ತೋರುವುದು ವಿರಳ. ಎಸ್ಸೆಸ್ಸೆಲ್ಸಿ, ಪಿಯುಸಿ ಓದಿದರೂ, ಕೆಲಸ ಹುಡುಕಿಕೊಂಡು ಬೆಂಗಳೂರಿನ ಕಡೆ ಮುಖ ಮಾಡುತ್ತಾರೆ. ಆದರೆ, ಇಲ್ಲೊಬ್ಬರು ಸಿವಿಲ್‌ ವಿಭಾಗದಲ್ಲಿ ಡಿಪ್ಲೊಮಾ ಮುಗಿಸಿದ್ದರೂ ನಗರಕ್ಕೆ ವಲಸೆ ಹೋಗದೆ, ಇರುವ ಒಂದಿಷ್ಟು ಜಮೀನಿನಲ್ಲಿ ವೈವಿಧ್ಯಮಯ ಕೃಷಿ ಮಾಡುವ ಮೂಲಕ ‘ಕೃಷಿಯಲ್ಲೂ ಲಾಭವಿದೆ’ ಎಂಬುದನ್ನು ಸಾಬೀತು ಪಡಿಸಿದ್ದಾರೆ.

ಹೊಳಲ್ಕೆರೆ ತಾಲ್ಲೂಕಿನ ನಗರಘಟ್ಟದ ಕೀರ್ತಿರಾಜ್ ಈ ಸಾಧನೆ ಮಾಡಿದ ಯುವಕ. ಕೀರ್ತಿರಾಜ್ ಅವರ ತಂದೆ ನಾಗರಾಜಪ್ಪ ಶಿಕಾರಿಪುರದ ಹೈಸ್ಕೂಲ್‌ನಲ್ಲಿ ಗುಮಾಸ್ತರಾಗಿದ್ದಾರೆ. ಇವರು ಮಗನಿಗೆ ನಗರದಲ್ಲಿ ಕೆಲಸಕ್ಕೆ ಸೇರಿಸಲು ಇಚ್ಛಿಸಿದ್ದರು. ಆದರೆ, ‘ನಾನು ನಗರಕ್ಕೆ ಹೋಗುವುದಿಲ್ಲ. ನಮ್ಮ ಊರಿನಲ್ಲಿಯೇ ಕೃಷಿ ಮಾಡುತ್ತೇನೆ’ ಎಂದು ಕೀರ್ತಿರಾಜ್‌ ನಿರ್ಧರಿಸಿ, ಕೃಷಿ ಕಾಯಕದಲ್ಲಿ ತೊಡಗಿಕೊಂಡರು.

ಕೀರ್ತಿರಾಜ್‌ಗೆ ಮೂರು ಎಕರೆ ಜಮೀನು ಇದೆ. ಒಂದೂವರೆ ಎಕರೆಯಲ್ಲಿ ಅಡಿಕೆ, ಹೆಬ್ಬೇವು ಬೆಳೆದಿದ್ದಾರೆ. ಗ್ರಾಮದ ಪಕ್ಕದಲ್ಲೇ 12 ಗುಂಟೆ ಜಾಗವಿದ್ದು, ಅದರಲ್ಲಿ ಮೊಲ, ನಾಟಿಕೋಳಿ, ಕುರಿಗಳನ್ನು ಸಾಕಿದ್ದಾರೆ.

ನಾಟಿಕೋಳಿಯಿಂದ ಅಧಿಕ ಲಾಭ: ₹ 2.5 ಲಕ್ಷ ವೆಚ್ಚದಲ್ಲಿ ಶೆಡ್‌ ನಿರ್ಮಿಸಿ, ಒಂದು ಸಾವಿರ ನಾಟಿಕೋಳಿ ಸಾಕಿದ್ದಾರೆ. ‘ಬೆಂಗಳೂರಿನಿಂದ ₹ 36ಕ್ಕೆ ಒಂದರಂತೆ ಕೋಳಿ ಮರಿ ತರಿಸುತ್ತೇನೆ. ಮೂರುವರೆ ತಿಂಗಳು ಸಾಕಿದರೆ ಒಂದೂವರೆ ಕೆ.ಜಿ. ಬರುತ್ತದೆ. ಪ್ರತಿ ಕೆ.ಜಿಗೆ ₹ 200 ಬೆಲೆ ಇದ್ದು, ಒಂದು ಕೋಳಿಗೆ ₹ 300 ಸಿಗುತ್ತದೆ. ಮೆಕ್ಕೆಜೋಳ, ಸೋಯಾಬಿನ್‌ ಮತ್ತು ಪೋಷಕಾಂಶಗಳನ್ನು ಸೇರಿಸಿ ನಾವೇ ಕೋಳಿ ಆಹಾರವನ್ನು ಸಿದ್ಧಪಡಿಸುತ್ತೇವೆ. ಒಂದು ಕೋಳಿ ಸಾಕಲು ₹ 160 ವೆಚ್ಚವಾಗುತ್ತದೆ’ ಎಂದು ಕೀರ್ತಿರಾಜ್ ತಿಳಿಸಿದರು.

‘ಈಗ ನಾಟಿಕೋಳಿಗೆ ಹೆಚ್ಚು ಬೇಡಿಕೆ ಇದೆ. ಚಿತ್ರದುರ್ಗ, ದಾವಣಗೆರೆ, ಭದ್ರಾವತಿ, ಶಿವಮೊಗ್ಗದ ವ್ಯಾಪಾರಿಗಳು ನಮ್ಮ ಫಾರ್ಮ್‌ಗೇ ಬಂದು ಖರೀದಿಸುತ್ತಾರೆ. ಈಗಾಗಲೇ ಮೂರು ಬ್ಯಾಚ್ ಕೋಳಿ ಮಾರಾಟ ಮಾಡಿದ್ದೇನೆ. ಪ್ರತಿ ಬ್ಯಾಚ್‌ನಿಂದ ₹ 1 ಲಕ್ಷ ಲಾಭ ಸಿಕ್ಕಿದೆ. ತಿಂಗಳಿಗೆ ಎರಡು ಲೋಡ್ ಕೋಳಿಗೊಬ್ಬರ ಸಿಗುತ್ತಿದೆ. ನಮ್ಮ ತೋಟಕ್ಕೇ ಅದನ್ನು ಬಳಸುತ್ತಿದ್ದೇವೆ. ನಾಟಿಕೋಳಿಯಲ್ಲಿ ಗಿರಿರಾಜ, ಕಾವೇರಿ, ಕಬೀರ್, ಅಶಿಲ್ ತಳಿಗಳಿದ್ದು, ನಮ್ಮ ಭಾಗದಲ್ಲಿ ಕಾವೇರಿ ತಳಿಗೆ ಹೆಚ್ಚು ಬೇಡಿಕೆ ಇದೆ’ ಎನ್ನುತ್ತಾರೆ ಅವರು.

ಮೊಲದಿಂದಲೂ ಆದಾಯ: ಫಾರ್ಮ್‌ನಲ್ಲಿ ರಷ್ಯನ್ ಗ್ರೇಸ್ ಹಾಗೂ ನ್ಯೂಜಿಲೆಂಡ್ ವೈಟ್ ತಳಿಯ 50 ಮೊಲಗಳನ್ನು ಸಾಕಿದ್ದಾರೆ. ‘ಕೇರಳದಿಂದ ₹ 2 ಸಾವಿರಕ್ಕೆ ಒಂದರಂತೆ ಗಂಡು ಮತ್ತು ಹೆಣ್ಣು ಮೊಲಗಳನ್ನು ತಂದಿದ್ದೆ. ಅವು ಮರಿ ಹಾಕಿದ್ದು ನಮ್ಮಲ್ಲಿ ಐದು ಯೂನಿಟ್‌ಗಳಿವೆ. ಮಾರುಕಟ್ಟೆಯಲ್ಲಿ ಒಂದು ಯುನಿಟ್‌ಗೆ ₹ 20 ಸಾವಿರ ಬೆಲೆ ಇದೆ. ಮೊಲಗಳಿಗೆ ಬೆಳಿಗ್ಗೆ ಕೈಹಿಂಡಿ, ಸಂಜೆ ಹಸಿ ಹುಲ್ಲು ಕೊಡುತ್ತೇನೆ. ಕುಡಿಯುವ ನೀರಿಗೆ ನಿಪ್ಪಲ್ ವ್ಯವಸ್ಥೆ ಮಾಡಿದ್ದೇನೆ. ಮೊಲದ ಗೊಬ್ಬರವೂ ಹೆಚ್ಚು ಫಲವತ್ತಾಗಿರುತ್ತದೆ. ಈಗ ಪ್ರತಿ ಕೆ.ಜಿ. ಮೊಲಕ್ಕೆ ₹ 300 ಬೆಲೆ ಇದೆ. ಇದರಿಂದಲೂ ಹೆಚ್ಚು ಲಾಭ ಬರುತ್ತಿದೆ’ ಎನ್ನುತ್ತಾರೆ ಕೀರ್ತಿರಾಜ್‌

‘ಫಾರ್ಮ್‌ನಲ್ಲಿ 20 ನಾಟಿ ಕುರಿಗಳನ್ನು ಸಾಕಿದ್ದೇನೆ. ಕುರಿಗಳಿಗೆ ಇಲ್ಲಿಯೇ ಮೇವು ಬೆಳೆದಿದ್ದೇನೆ. ರಾಗಿ ಹುಲ್ಲು, ಶೆಂಗಾ ಹೊಟ್ಟು ಕೊಡುತ್ತೇನೆ. ₹ 4,000ಕ್ಕೆ ಒಂದರಂತೆ ಕುರಿ ಮರಿ ತಂದು, ಆರು ತಿಂಗಳು ಸಾಕಿದರೆ ₹ 9,000ದಿಂದ 10 ಸಾವಿರಕ್ಕೆ ಮಾರಾಟ ಮಾಡಬಹುದು. ಇಲ್ಲಿ 200 ಅಡಿಕೆ ಮರಗಳಿದ್ದು, ಅದಕ್ಕೆ ವೆನಿಲ್ಲಾ ಬಳ್ಳಿ ಹಬ್ಬಿಸಿದ್ದೇನೆ. 120 ಗಂಧದ ಮರಗಳನ್ನೂ ಬೆಳೆಸಿದ್ದೇನೆ. ಮಿಶ್ರಕೃಷಿ ಮಾಡಿದರೆ ಒಂದಿಲ್ಲೊಂದು ಬೆಳೆಗೆ ಹೆಚ್ಚು ಬೆಲೆ ಸಿಕ್ಕೇ ಸಿಗುತ್ತದೆ’ ಎಂಬುದು ಕೀರ್ತಿರಾಜ್‌ ಅವರ ಲೆಕ್ಕಾಚಾರ.

‘ವಿದ್ಯಾವಂತರು ಕೃಷಿಯನ್ನು ನಿರ್ಲಕ್ಷ್ಯ ಮಾಡುತ್ತಿರುವುದು ಆತಂಕದ ಬೆಳವಣಿಗೆ. ಕೆಲಸ ಹುಡುಕಿ ದೂರದ ನಗರಗಳಿಗೆ ಹೋಗಿ ಸಿಗುವ ನಾಲ್ಕೈದು ಸಾವಿರ ರೂಪಾಯಿಗೆ ಅವರಿವರ ಮುಂದೆ ಕೈಕಟ್ಟಿ ನಿಲ್ಲಬೇಕು. ಅದರ ಬದಲು ತಮ್ಮದೇ ಜಮೀನಿನಲ್ಲಿ ಸಮಗ್ರ ಕೃಷಿ ಮಾಡಿ, ಹೆಚ್ಚು ಹಣ ಗಳಿಸಿ ಹೆಮ್ಮೆಯಿಂದ ಬದುಕಬಹುದು. ತಂಗಿ ಅಪೂರ್ವ, ಚಿಕ್ಕಪ್ಪ ಸುರೇಶ್, ಕಬೇಂದ್ರಪ್ಪ ಅವರೂ ನನನಗೆ ನೆರವಾಗುತ್ತಾರೆ. ತಂದೆ ವಾರಕ್ಕೊಮ್ಮೆ ಬಂದು ಮಾರ್ಗದರ್ಶನ ನೀಡುತ್ತಾರೆ’ ಎನ್ನುತ್ತಾರೆ ಕೀರ್ತಿರಾಜ್.

ಕೀರ್ತಿರಾಜ್‌ ಅವರ ಮೊಬೈಲ್‌: 8217234554

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry