ಸಂಕ್ರಾಂತಿ ರೈತರಿಗೆ ಸುಗ್ಗಿಯ ಹಿಗ್ಗು ತರಲಿ

7
ಭೀಮಾನದಿಯಲ್ಲಿ ಪುಣ್ಯಸ್ನಾನ ಮಾಡಿ ನಾಡಿನ ಒಳಿತಿಗೆ ಪ್ರಾರ್ಥಿಸಿದ ಗಂಗಾಧರಶ್ರೀ

ಸಂಕ್ರಾಂತಿ ರೈತರಿಗೆ ಸುಗ್ಗಿಯ ಹಿಗ್ಗು ತರಲಿ

Published:
Updated:

ಯಾದಗಿರಿ: ‘ಸಂಕ್ರಾಂತಿ ಸಮೃದ್ಧಿಯ ಸಂಕೇತದ ಹಬ್ಬವಾಗಿದೆ. ಈ ವರ್ಷದ ಸಂಕ್ರಾಂತಿ ರೈತರಿಗೆ ಸುಗ್ಗಿಯ ಹಿಗ್ಗು ತರಲಿ’ ಎಂದು ಅಬ್ಬೆತುಮಕೂರಿನ ಪೀಠಾಧಿಪತಿ ಗಂಗಾಧರ ಶಿವಾಚಾರ್ಯರು ಶುಭ ಹಾರೈಸಿದರು.

ಶ್ರೀಮಠದ ವತಿಯಿಂದ ಅಬ್ಬೆ ತುಮಕೂರಿನ ಸೀಮಾಂತರದ ಭೀಮಾ ನದಿಯ ತಟದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಹೊಳಿ ಜಾತ್ರೆಯಲ್ಲಿ ಅವರು ಆಶೀರ್ವಚನ ನೀಡಿದರು.

‘ರೈತರು ಸದೃಢವಾಗಿದ್ದರೆ ನಾಡು, ಸಮಾಜ ಸುಖಿಯಾಗಿರುತ್ತದೆ. ರೈತರ ಬದುಕಿನ ಬೆಳಕಾಗಿ ಈ ಹಬ್ಬ ಸಂಭ್ರಮವನ್ನು ತರುವಂತಾಗಲಿ. ರೈತರು ಉತ್ತಿ ಬಿತ್ತಿ ಬೆಳೆದ ಫಸಲನ್ನು ರಾಶಿ ಮಾಡಿಕೊಳ್ಳುವ ಸಂದರ್ಭದಲ್ಲಿ ಬರುವ ಸಂಕ್ರಾಂತಿ ವಿಶೇಷ ಮಹತ್ವವನ್ನು ಪಡೆದಿದೆ’ ಎಂದರು.

‘ಸಂಕ್ರಾಂತಿ ಉತ್ತರಾಯಣದ ಪುಣ್ಯಕಾಲವಾಗಿದೆ. ಸೂರ್ಯ ಮಕರ ರಾಶಿಯನ್ನು ಪ್ರವೇಶಿಸುವ ಪರ್ವ ಕಾಲವಾಗಿದೆ. ಇಂತಹ ವಿಶೇಷ ದಿನದಂದು ನದಿಗಳಿಗೆ ತೆರಳಿ ಪುಣ್ಯ ಸ್ನಾನ ಮಾಡುವುದರಿಂದ ಜೀವನದಲ್ಲಿ ಒಳ್ಳೆಯ ಫಲ ಪ್ರಾಪ್ತಿಯಾಗುತ್ತದೆ. ಇದೇ ಸಂದರ್ಭದಲ್ಲಿ ಎಳ್ಳು ದಾನ ಮಾಡುವುದರಿಂದಲೂ ಪುಣ್ಯ ಸಿಗುತ್ತದೆ ಎಂಬ ನಂಬಿಕೆಯಿಂದ ಜನರು ಎಳ್ಳನ್ನು ಪರಸ್ಪರ ಕೊಡುಕೊಳ್ಳುವ ಪರಂಪರೆ ನಮ್ಮಲ್ಲಿದೆ’ ಎಂದು ಹೇಳಿದರು.

ಇದಕ್ಕೂ ಮುನ್ನಾ ಶಿವಾಚಾರ್ಯರು ಅಪಾರ ಭಕ್ತ ವೃಂದದೊಂದಿಗೆ ಅಬ್ಬೆತುಮಕೂರಿನ ಶ್ರೀಮಠದಿಂದ ಸೀಮಾಂತರದ ಭೀಮಾನದಿಯ ವರೆಗೆ ವಿವಿಧ ಮಂಗಲ ವಾದ್ಯಗಳು ಮತ್ತು ಸುಮಂಗಲೆಯರ ಕಳಸ ಮೆರವಣಿಗೆಯೊಂದಿಗೆ ತೆರಳಿದರು. ಹೂವಿನಿಂದ ಅಲಂಕೃತಗೊಂಡಿದ್ದ ತೆಪ್ಪದಲ್ಲಿ ಭೀಮಾನದಿಯ ಮಧ್ಯಭಾಗಕ್ಕೆ ತೆರಳಿ ಪುಣ್ಯ ಸ್ನಾನ ಮಾಡಿ ನಾಡಿಗೆ ಒಳಿತಾಗಲಿ ಎಂದು ಪ್ರಾರ್ಥಿಸಿ ಗಂಗಾದೇವಿಗೆ ವಿಶೇಷ ಪೂಜೆ ನೆರವೇರಿಸಿದರು.

ನಂತರ ಹೊಳಿ ಜಾತ್ರೆಗೆ ಬಂದಿದ್ದ ಎಲ್ಲ ಭಕ್ತರು ಬಿಳಿಜೋಳದ ರೊಟ್ಟಿ, ಸಜ್ಜಿ ರೊಟ್ಟಿ, ಶೇಂಗಾ ಹೋಳಿಗೆ, ಕರಿಗಡಬು, ಪುಂಡಿಪಲ್ಯ, ಹಿಂಡಿಪಲ್ಯ, ಎಣ್ಣೆಬದನೆಕಾಯಿ, ಶೇಂಗಾ ಹಿಂಡಿ, ಬಜ್ಜಿ, ಭರ್ತಾ, ಚಿತ್ರಾನ್ನ. ಹೀಗೆ ವಿವಿಧ ಬಗೆಯ ಸಂಕ್ರಾಂತಿಯ ಭಕ್ಷ್ಯಭೋಜನ ಸವಿದರು.

ಚೆನ್ನಪ್ಪಗೌಡ ಮೋಸಂಬಿ, ನರಸನಗೌಡ ರಾಯಚೂರ, ವಿಶ್ವನಾಥ ಶಿರವಾರ, ಡಾ.ಸುಭಾಶ್ಚಂದ್ರ ಕೌಲಗಿ, ಹನುಮಾನ ಸೇಠ, ಬಸವರಾಜ ರಾಜಾಪೂರ, ಎಸ್.ಎನ್.ಮಿಂಚನಾಳ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry