ಶಿರಾಡಿ-ಅಡ್ಡಹೊಳೆ: ಶಂಕಿತ ನಕ್ಸಲ್ ತಂಡ ಪ್ರತ್ಯಕ್ಷ

7

ಶಿರಾಡಿ-ಅಡ್ಡಹೊಳೆ: ಶಂಕಿತ ನಕ್ಸಲ್ ತಂಡ ಪ್ರತ್ಯಕ್ಷ

Published:
Updated:

ಉಪ್ಪಿನಂಗಡಿ: ‘ಪಶ್ಚಿಮ ಘಟ್ಟದ ತಪ್ಪಲಿನಲ್ಲಿರುವ ಶಿರಾಡಿ ಗ್ರಾಮದ ಅಡ್ಡಹೊಳೆ ಅರಣ್ಯದ ಅಂಚಿನಲ್ಲಿರುವ ಮಿತ್ತಮಜಲು ಎಂಬಲ್ಲಿ ಭಾನುವಾರ ಸಂಜೆ ನಕ್ಸಲ್ ತಂಡವೊಂದು ಪ್ರತ್ಯಕ್ಷವಾಗಿದೆ’ ಎಂಬ ಮಾಹಿತಿ ಲಭಿಸಿದೆ.

‘ಭಾನುವಾರ ಸಂಜೆ 6-30ರ ಹೊತ್ತಿಗೆ ಕಾಡಿನಿಂದ 3 ಮಂದಿ ಗಂಡಸರು ಮತ್ತು ಒಬ್ಬಾಕೆ ಹೆಂಗಸು ಸೇರಿದಂತೆ 4 ಮಂದಿ ಇದ್ದ ಶಂಕಿತ ನಕ್ಸಲ್ ತಂಡ ಲೀಲಾ ಎಂಬವರ ಮನೆಗೆ ಬಂದಿದೆ. ಅಲ್ಲಿ ‘ನಮಗೆ ಹಸಿವಾಗುತ್ತಿದೆ. ದೋಸೆ ಮಾಡಿಕೊಡಿ ಎಂದು ಕೇಳಿ ಮಾಡಿಸಿಕೊಂಡು ತಿಂದಿದ್ದಾರೆ’ ಎಂದು ಸ್ಥಳೀಯರು ತಿಳಿಸಿದ್ದಾರೆ.

ತಂಡದಲ್ಲಿದ್ದವರು ಕೋವಿಗಳನ್ನು ಹೊಂದಿದ್ದು ಮನೆಯ ಹತ್ತಿರ ಬಂದವರೇ ‘ನಾವು ಕಾಡಿನಲ್ಲಿರುವ ನಕ್ಸಲರು, ನಮ್ಮ ಮೊಬೈಲ್ ಮತ್ತು ಲ್ಯಾಪ್‍ಟಾಪ್‍ಗ

ಳನ್ನು ಚಾರ್ಜ್ ಮಾಡಿಕೊಡಬೇಕೆಂದು ಕೇಳಿಕೊಂಡಿದ್ದಾರೆ’ ಎಂದು ಮಾಹಿತಿ ಲಭಿಸಿದೆ.

ಇಲ್ಲಿ ಲೀಲಾ, ಮೋಹನ್, ಸುರೇಶ್ ಎಂಬುವರ ಒಟ್ಟು ಮೂರು ಮನೆಗಳು ಮಾತ್ರ ಇದ್ದು, ಮೋಹನ್ ಮತ್ತು ಸುರೇಶ್ ಮನೆಗೂ ಈ ತಂಡ ಹೋಗಿದೆ, ಅಲ್ಲಿಯೂ ಅಕ್ಕಿ ಮತ್ತಿತರ ಅಡುಗೆ ಸಾಮಗ್ರಿಗಳನ್ನು ಕೇಳಿ ಪಡೆದುಕೊಂಡಿದೆ.

‘ತಂಡದ ಸದಸ್ಯರು ಮಲ‌ಯಾಳಂ, ತಮಿಳು, ತುಳು ಭಾಷೆಗಳಲ್ಲಿಮಾತನಾಡುತ್ತಿದ್ದರು. ಈ ಮೂರೂ ಮನೆಗಳಿಂದ ಅಕ್ಕಿ, ಸಕ್ಕರೆ, ತರಕಾರಿ, ನೀರುಳ್ಳಿ ಮುಂತಾದ ಅಗತ್ಯದ ಸಾಮಗ್ರಿಗಳನ್ನು ಕೇಳಿ ಪಡೆದು ರಾತ್ರಿಯೇ ಮರಳಿ ಕಾಡಿನತ್ತ ಪಯಣ ಬೆಳೆಸಿದ್ದಾರೆ’ ಅನ್ನುವ ಮಾಹಿತಿ ತಿಳಿದು ಬಂದಿದೆ.

ಪೊಲೀಸ್ ಭೇಟಿ: ಶಿರಾಡಿ ಗ್ರಾಮದ ಅಡ್ಡಹೊಳೆ ಪ್ರದೇಶಕ್ಕೆ ನಕ್ಸಲ್ ತಂಡ ಭೇಟಿ ನೀಡಿದೆ ಎಂದು ಸುದ್ದಿ ಹರಡುತ್ತಲೇ ಉಪ್ಪಿನಂಗಡಿ ಪೊಲೀಸ್ ಅಧಿಕಾರಿಗಳ ತಂಡ ಅಲ್ಲಿಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕುತ್ತಿದೆ.

ಬೇಟೆಗಾರರ ತಂಡ?

‘ಐದು ವರ್ಷಗಳ ಹಿಂದೆ ಶಿಬಾಜೆ, ಶಿರಾಡಿ ಗ್ರಾಮಗಳಲ್ಲಿ ಕಂಡು ಬಂದಿದ್ದ ನಕ್ಸಲ್ ತಂಡ ಮತ್ತೆ ಈ ಕಡೆ ಬಂದಿರುವ ಮಾಹಿತಿಗಳು ಇರಲಿಲ್ಲ. ಇದೀಗ ಹಠತ್ತಾನೆ ನಕ್ಸಲರು ಬಂದಿದ್ದಾರೆ ಎನ್ನುವುದು ನಂಬಲು ಅಸಾಧ್ಯ. ಸದ್ಯದ ಪರಿಸ್ಥಿತಿಯಲ್ಲಿ ಕುದುರೆಮುಖ ಹೊರತು ಪಡಿಸಿ ಈ ಭಾಗಕ್ಕೆ ನಕ್ಸಲ್ ತಂಡ ಬರುವ ಸಾಧ್ಯತೆ ಕಡಿಮೆ ಇದೆ. ಈ ಸಮಯದಲ್ಲಿ ನಕ್ಸಲರು ಕಾರ್ಯಾಚರಣೆಗೆ ಇಳಿಯುವ ಸಾಧ್ಯತೆಯೂ ಕಡಿಮೆ. ಈ ಪ್ರದೇಶದಲ್ಲಿ ಬಹಳಷ್ಟು ಬೇಟೆಗಾರರ ತಂಡ ಕಾರ್ಯಾಚರಿಸುತ್ತಿರುತ್ತದೆ, ಬೇಟೆಗೆ ಹೋದವರು ಈ ರೀತಿಯಾಗಿ ಪ್ರಚಾರ ಹಬ್ಬಿಸಿರುವ ಸಾದ್ಯತೆಯೂ ಇದೆ’ ಎಂದು ಹೇಳಲಾಗುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry