ಹಿಂದೂ ಧರ್ಮದ ತತ್ವವೇ ಸಹಿಷ್ಣುತೆ: ದೇವೇಗೌಡ

7

ಹಿಂದೂ ಧರ್ಮದ ತತ್ವವೇ ಸಹಿಷ್ಣುತೆ: ದೇವೇಗೌಡ

Published:
Updated:

ಬೆಂಗಳೂರು:‘ ಹಿಂದು ಧರ್ಮದ ತತ್ವವೇ ಸಹಿಷ್ಣುತೆ’ ಎಂದು ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ ಹೇಳಿದ್ದಾರೆ.

ಸೋಮವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿ, ‘ಬೇರೆ ಧರ್ಮದವರನ್ನು ಸಹಿಸಿಕೊಳ್ಳದ ನೀವು ಯಾವ ರೀತಿಯ ಹಿಂದುಗಳು’ ಎಂದು ಪರೋಕ್ಷವಾಗಿ ಬಿಜೆಪಿ ನಾಯಕರನ್ನು ತರಾಟೆಗೆ ತೆಗೆದುಕೊಂಡರು.

‘ನಾನು ಶೃಂಗೇರಿಯಲ್ಲಿ ಅತಿರುದ್ರ ಮಹಾಯಾಗ ಮಾಡಿಸಿದೆ. ಅದು ಮಾಡಿದ್ದು ಶತ್ರು ನಾಶಕ್ಕೆ ಅಲ್ಲ. ಶತ್ರು ನಾಶಕ್ಕೆ ಯಾರೂ ಅತಿರುದ್ರ ಮಾಡಿಸುವುದಿಲ್ಲ. ಶತ್ರು ನಾಶಕ್ಕೆ ಸಹಸ್ರ ಚಂಡಿಹೋಮ ಮಾಡಿಸುತ್ತಾರೆ. ಯಾರೋ ಒಬ್ಬರು ಕೊಲ್ಲೂರಿನಲ್ಲಿ ಮಾಡಿಸಿದ್ದಾರಲ್ಲ. ರುದ್ರವನ್ನು ಮಾಡಿಸುವುದು ದೇಶದ ಕಲ್ಯಾಣಕ್ಕೆ. ಸರ್ವ ಜನರು ಸುಖವಾಗಿರಲಿ ಎಂದೇ ಪ್ರಾರ್ಥಿಸಲಾಗುತ್ತದೆ’ ಎಂದರು.

‘ಹಿಂದಿನ ಶೃಂಗೇರಿ ಗುರುಗಳಿಗೆ ಹೈದರಾಬಾದ್‌ ನಿಜಾಮರು ವಜ್ರದ ಕಿರೀಟ ಸಮರ್ಪಿಸಿದ್ದರು. ಅದನ್ನು ದಸರಾ ಸಂದರ್ಭದಲ್ಲಿ ಗುರುಗಳ ತಲೆ ಮೇಲೆ ಇಡುತ್ತಾರೆ. ಗುರುಗಳಲ್ಲಿ ಅಂತಹ ಶಕ್ತಿ ಇತ್ತು. ಸಕಲರ ಮನಸ್ಸು ಗೆದ್ದ ಕಾರಣಕ್ಕಾಗಿ ಭಕ್ತಿ ಮತ್ತು ಗೌರವದಿಂದ ಕಿರೀಟ ಸಮರ್ಪಿಸಿದ್ದಾರೆಯೇ ಹೊರತು ಬೇರೆ ಕಾರಣಕ್ಕಲ್ಲ. ಶೃಂಗೇರಿ ಆಚಾರ್ಯರು ಯಾವುದೇ ವಿವಾದಗಳಿಗೆ ಹೋದವರಲ್ಲ. ಪ್ರತಿ ನಿತ್ಯ ಚಂದ್ರಮೌಳಿಗೆ ಪೂಜೆ ಮಾಡುತ್ತಾರೆ. ಹಿಂದುತ್ವದ ವಿಚಾರದಲ್ಲಿ ಬಡಿದಾಡುತ್ತಿರುವ ಎರಡೂ ಪಕ್ಷಗಳು ಇದನ್ನು ತಿಳಿದುಕೊಳ್ಳಬೇಕು’ ಎಂದು ದೇವೇಗೌಡ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry