‘ಪುಣ್ಯಸ್ನಾನ ಮಾಡಿ ಶಿವಪಾರ್ವತಿ ದರ್ಶನ

7

‘ಪುಣ್ಯಸ್ನಾನ ಮಾಡಿ ಶಿವಪಾರ್ವತಿ ದರ್ಶನ

Published:
Updated:
‘ಪುಣ್ಯಸ್ನಾನ ಮಾಡಿ ಶಿವಪಾರ್ವತಿ ದರ್ಶನ

ಬೈಲಹೊಂಗಲ (ಸುಕ್ಷೇತ್ರ ಸೊಗಲ): ಸವದತ್ತಿ ತಾಲ್ಲೂಕಿನ ದಕ್ಷಿಣ ಕಾಶಿ ಎಂದೇ ಹೆಸರಾದ ಸುಕ್ಷೇತ್ರ ಸೊಗಲ ಸೋಮೇಶ್ವರ ದೇವಾಲಯದಲ್ಲಿ ಮಕರ ಸಂಕ್ರಾಂತಿ  ಅಂಗವಾಗಿ ಭಾನು ವಾರ  ಸಾವಿರಾರು ಭಕ್ತರು ಪುಣ್ಯಸ್ನಾನ ಮಾಡಿ ಶಿವ ಪಾರ್ವತಿ ದರ್ಶನ ಪಡೆದರು.

ಭಕ್ತ ಜನರಿಂದ ಸಂಗಮವಾಗಿದ್ದ ದೇವಸ್ಥಾನದಲ್ಲಿ ಹಬ್ಬದ ಸಡಗರ, ಸಂಭ್ರಮ. ದೇವಾಲಯದ ಅಂಗಳದಲ್ಲಿ ಸಂಕ್ರಾಂತಿ ಶುಭ ಗಳಿಗೆಯಲ್ಲಿ ಪುಣ್ಯಸ್ನಾನ, ಪೂಜೆ, ಪ್ರಾರ್ಥನೆಗಳು ಇಡೀ ದಿನ ನಡೆದವು.

ಗೋವಾ, ಮಹಾರಾಷ್ಟ್ರ, ಕರ್ನಾಟಕದ ವಿವಿಧ ಭಾಗದಿಂದ ಆಗಮಿಸಿದ್ದ ಭಕ್ತರು, ಸೊಗಲದ ವಿಶಾಲ ಬೆಟ್ಟದಲ್ಲಿ ಕುಳಿತು ಎಳ್ಳು ಹಚ್ಚಿದ ಸಜ್ಜಿ ರೊಟ್ಟಿ, ವಿವಿಧ ಚಟ್ನಿ, ಕಾಯಿ ಪಲ್ಲೆ, ಮೊಸರನ್ನ, ಸಿಹಿ ಮಾದಲಿ ಒಳಗೊಂಡ ಭೂರಿ ಭೋಜನ ಸವಿದು ತೃಪ್ತಿ ಹೊಂದಿದರು. ‘‌

ನಾವು ನೀವು ಎಳ್ಳು ಬೆಲ್ಲದಂಗ ಇರೋಣ’ ಎಂದು ಸಿಹಿ ಹಂಚಿಕೊಂಡರು. ನಲಿಯುವ ನವಿಲು, ಪಶು ಪಕ್ಷಿಗಳ ನೋಡಿ ಆನಂದಿಸಿದರು. ಕುಟುಂಬದ ಸದಸ್ಯರು ಒಟ್ಟಿಗೆ ಕುಳಿತು ಊಟ ಮಾಡುವ ದೃಶ್ಯ ಎಲ್ಲೆಡೆ ಕಂಡಿತು.

ಸಾವಿರಾರು ವಾಹನಗಳು, ಚಕ್ಕಡಿಗಳು, ಎಲ್ಲಿ ನೋಡಿದರಲ್ಲಿ ಜನಸಾಗರದಿಂದ ಸೊಗಲ ಕ್ಷೇತ್ರ ಕಿಕ್ಕಿರಿದಿತ್ತು. ದೈವ, ದೇವರ ಜತೆಗೆ ಜನರನ್ನು ಸೆಳೆಯುತ್ತಿರುವ ಸುಂದರ ಜಲಪಾತಗಳು, ಪ್ರಕೃತಿ ಸೌಂದರ್ಯ, ಅಂದವಾದ ಗುಡ್ಡ ಬೆಟ್ಟಗಳು, ಜಲಪಾತಗಳು ಆಕರ್ಷಣೀಯವಾಗಿ ಗೋಚರಿಸಿದವು. ಅಪರೂಪದ ಪವಿತ್ರ ಸ್ಥಳ ಸಾಕ್ಷಾತ್ ಪರಶಿವನ ಆವಾಸದ ಸೊಗಲ ಕ್ಷೇತ್ರದ ಪ್ರಾಚೀನ ದೇವಾಲಯ, ಜಿಂಕೆ ವನ, ಹುಲಿ ಗವಿ ಇತರ ದೇವಾಲಯಗಳಿಗೆ ಭಕ್ತರು ಭೇಟಿ ನೀಡಿ ಆನಂದಿಸಿದರು.

ಸಂಜೆ ನಡೆದ ತೆಪ್ಪದ ರಥೋತ್ಸವಕ್ಕೆ ಸೊಗಲದ ಮೋಹನಾನಂದ ಸ್ವಾಮೀಜಿ, ಹೊಸೂರ ಗುರು ಮಡಿವಾಳೇಶ್ವರಮಠದ ಗಂಗಾಧರ ಸ್ವಾಮೀಜಿ, ಮೂರುಸಾವಿರಮಠದ ಪ್ರಭುನೀಲಕಂಠ ಸ್ವಾಮೀಜಿ ಚಾಲನೆ ನೀಡಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕೌಜಲಗಿ, ಟ್ರಸ್ಟ್ ಕಮೀಟಿ ಅಧ್ಯಕ್ಷ ಡಿ.ವಿ. ಸಂಗಣ್ಣವರ, ಉಪಾಧ್ಯಕ್ಷ ಪ್ರಕಾಶ ಬಾಳೇಕುಂದರಗಿ, ಕ್ಷೇತ್ರದ ಧರ್ಮದರ್ಶಿ ಈರಯ್ಯಾ ಪೂಜೇರಿ, ಬಾಬು ಮೂಗಬಸವ, ಈರಯ್ಯಾ ಗುಡದೂರ, ಬಸಲಿಂಗಪ್ಪ ನಾಗನೂರ, ಪುಂಡಲೀಕ ಕುದರಿ, ಗುರುಸ್ವಾಮಿ ಹೊಸಪೇಟಿಮಠ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry