ವಿಫಲ ಕೊಳವೆ ಬಾವಿ ಮುಚ್ಚಲು ಜಿಲ್ಲಾಧಿಕಾರಿ ಸೂಚನೆ

7

ವಿಫಲ ಕೊಳವೆ ಬಾವಿ ಮುಚ್ಚಲು ಜಿಲ್ಲಾಧಿಕಾರಿ ಸೂಚನೆ

Published:
Updated:

ಚಿಕ್ಕಮಗಳೂರು: ಜಿಲ್ಲೆಯಲ್ಲಿ ವಿಫಲವಾಗಿರುವ ಕೊಳವೆ ಬಾವಿಗಳನ್ನು ಮುಚ್ಚಬೇಕು ಎಂದು ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ ಸೂಚಿಸಿದ್ದಾರೆ. ಸುಪ್ರೀಂ ಕೋರ್ಟ್ ಆದೇಶದಂತೆ ತೆರೆದ ಕೊಳವೆ ಬಾವಿಗಳಲ್ಲಿ ಸಂಭವಿಸಬಹುದಾದ ದುರಂತ ತಪ್ಪಿಸುವ ಉದ್ದೇಶದಿಂದ ಮುಂಜಾಗ್ರತಾ ಕ್ರಮವಾಗಿ ಬಾವಿಗಳನ್ನು ಮುಚ್ಚಬೇಕು. ಇಲ್ಲವಾದಲ್ಲಿ ಸಂಬಂಧಪಟ್ಟ ಜಮೀನು ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ಎಚ್ಚರಿಸಿದ್ದಾರೆ.

ಜಿಲ್ಲೆಯಲ್ಲಿ ಕಡೂರು ತಾಲ್ಲೂಕು ಹೊರತುಪಡಿಸಿ ಬೇರೆ ತಾಲ್ಲೂಕುಗಳಲ್ಲಿ ಕೊಳವೆ ಬಾವಿ ಕೊರೆಯಲು ಗ್ರಾಮಾಂತರ ಮಟ್ಟದಲ್ಲಿ ಆಯಾ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಅನುಮತಿ ಹಾಗೂ ನಗರ,ಪಟ್ಟಣ ಪ್ರದೇಶಗಳಲ್ಲಿ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಯ ಸಂಬಂಧಪಟ್ಟ ವಾರ್ಡ್‌ನ ಕಿರಿಯ ಎಂಜಿನಿಯರ್‌ ಅವರಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕು ಎಂದು ತಿಳಿಸಿದ್ದಾರೆ.

ಕಡೂರನ್ನು ಅಂತರ್ಜಲ ಹೆಚ್ಚು ಬಳಕೆ ಮಾಡುವ ತಾಲ್ಲೂಕು ಎಂದು ರಾಜ್ಯ ಸರ್ಕಾರ ಸರ್ಕಾರದಿಂದ ಅಧಿಸೂಚನೆ ಹೊರಡಿಸಿದ್ದು, ಅದರಿಂದ ಕಡೂರು ಪಟ್ಟಣ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಕೊಳವೆ ಬಾವಿ ಕೊರೆಯಲು ಹಿರಿಯ ಭೂವಿಜ್ಞಾನಿಗಳಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕು ಎಂದು ಸೂಚಿಸಿದ್ದಾರೆ.

ಗ್ರಾಮಗಳ ವ್ಯಾಪ್ತಿಯಲ್ಲಿ ತೆರೆದ, ನಿರುಪಯುಕ್ತ ಕೊಳವೆ ಬಾವಿಗಳು ಕಂಡುಬಂದಲ್ಲಿ ಜಿಲ್ಲಾಧಿಕಾರಿ ಕಚೇರಿಯ ಸಹಾಯವಾಣಿ 08262–238950 ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾಂಗ್ರೆಸ್ಸಿಗರದ್ದು ಬೂಟಾಟಿಕೆ ಹಿಂದುತ್ವ: ಈಶ್ವರಪ್ಪ

ಕಡೂರು: ಮಂಗಳೂರು ಗಲಭೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬೇಜವಾಬ್ದಾರಿ ಹೇಳಿಕೆ ನೀಡುತ್ತಿರುವುದು ಬೂಟಾಟಿಕೆ ಹಿಂದುತ್ವದ ಸಂಕೇತ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ ಅಭಿಪ್ರಾಯಪಟ್ಟರು.

ಬಿಜೆಪಿ ಮುಖಂಡ ಕೆ.ಎಚ್.ಶಂಕರ್ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ದಿನೇ ದಿನೇ ಹದಗೆಡುತ್ತಿದ್ದು, ಮುಖ್ಯಮಂತ್ರಿಗಳಿಗೆ ಹಿಂದೂಗಳ ಕೊಲೆ ಮಾಡಿದವರನ್ನು ಹಿಡಿಯಿರಿ ಎಂದರೆ ಕೋಮುವಾದಗಳನ್ನು ಮಟ್ಟಹಾಕುತ್ತೇವೆ ಎಂದು ಹೇಳುತ್ತಾರೆ. ಹಿಂದೂ ಕಾರ್ಯಕರ್ತರ ಸರಣಿ ಹತ್ಯೆ ನಡೆದರೂ ಅವರಿಗೆ ಸಾಂತ್ವನ ಹೇಳಲು ಹೋಗದ ಮುಖ್ಯಮಂತ್ರಿ  ಅಲ್ಪಸಂಖ್ಯಾತ ಮುಸ್ಲಿಮರ ಹತ್ಯೆಯಾದರೆ ಅವರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿ ಬರುತ್ತಿರುವ ಅವರ ಇಬ್ಬಗೆಯ ನೀತಿಯನ್ನು ತೋರಿಸುತ್ತದೆ’ಎಂದರು.

‘ರಾಜ್ಯ ಬಿಜೆಪಿಯಲ್ಲಿ ಯಾವುದೇ ಗೊಂದಲಗಳಿಲ್ಲ. ಪ್ರಸ್ತುತ ನಡೆಯುತ್ತಿರುವ ಪರಿವರ್ತನಾ ಯಾತ್ರೆಯಲ್ಲಿ ಪಕ್ಷದ ಎಲ್ಲ ಮುಖಂಡರು ಒಟ್ಟಾಗಿ ಭಾಗವಹಿಸುತ್ತಿದ್ದಾರೆ. ರಾಜ್ಯದಲ್ಲಿ ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತಂದು ಯಡಿಯೂರಪ್ಪ ಅವರನ್ನೇ ಮುಖ್ಯಮಂತ್ರಿಯನ್ನಾಗಿ ಮಾಡುವುದು ನಮ್ಮ ಗುರಿ’ ಎಂದರು. ಮುಖಂಡರಾದ ಬೀರೂರು ದೇವರಾಜ್, ರೇಖಾ ಹುಲಿಯಪ್ಪಗೌಡ, ಕೆ.ಬಿ. ಸೋಮೇಶ್, ಅರೇಕಲ್‍ಪ್ರಕಾಶ್, ಎ.ಮಣಿ, ಕೆ.ಎಸ್.ಸೋಮ್‍ಪ್ರಸಾದ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry