ಮೆಟ್ರೊ ವಸತಿಗೃಹದಲ್ಲಿ ಸೈಕೊ ಕಾಟ: ಒಳ ಉಡುಪು ಮೂಸಿ ಹೋಗ್ತಾನೆ...!

7

ಮೆಟ್ರೊ ವಸತಿಗೃಹದಲ್ಲಿ ಸೈಕೊ ಕಾಟ: ಒಳ ಉಡುಪು ಮೂಸಿ ಹೋಗ್ತಾನೆ...!

Published:
Updated:
ಮೆಟ್ರೊ ವಸತಿಗೃಹದಲ್ಲಿ ಸೈಕೊ ಕಾಟ: ಒಳ ಉಡುಪು ಮೂಸಿ ಹೋಗ್ತಾನೆ...!

ಬೆಂಗಳೂರು: ಮೆಟ್ರೊ ಮಹಿಳಾ ಉದ್ಯೋಗಿಗಳು ವಾಸವಿರುವ ಬೈಯಪ್ಪನಹಳ್ಳಿ ಬಳಿಯ ವಸತಿಗೃಹದಲ್ಲಿ ಸೈಕೊ ಕಾಟ ಶುರುವಾಗಿದೆ. ಚಾಕು ಹಿಡಿದು ಮಧ್ಯರಾತ್ರಿ ವಸತಿಗೃಹಕ್ಕೆ ಬಂದಿದ್ದ ಆ ಸೈಕೊ, ಒಳ ಉಡುಪುಗಳನ್ನು ಮೂಸಿ ಹೊರಟು ಹೋಗಿದ್ದಾನೆ.

ಈ ಬಗ್ಗೆ ವಸತಿಗೃಹದಲ್ಲಿ ವಾಸವಿರುವ ಮೆಟ್ರೊ ರೈಲು ಚಾಲಕಿಯೊಬ್ಬರು ಬೈಯಪ್ಪನಹಳ್ಳಿ ಠಾಣೆಗೆ ದೂರು ನೀಡಿದ್ದಾರೆ. ಜೀವ ಬೆದರಿಕೆ (ಐಪಿಸಿ 506) ಹಾಗೂ ಅತಿಕ್ರಮ ಪ್ರವೇಶ (ಐಪಿಸಿ 448) ಆರೋಪದಡಿ ಎಫ್‌ಐಆರ್‌ ದಾಖಲಿಸಿಕೊಂಡಿರುವ ಪೊಲೀಸರು, ಆತನಿಗಾಗಿ ಹುಡುಕಾಟ ಆರಂಭಿಸಿದ್ದಾರೆ.

‘ಮೆಟ್ರೊದಲ್ಲಿ ಚಾಲಕಿಯರಾಗಿ ಕೆಲಸ ಮಾಡುತ್ತಿರುವ ಮೂವರು ಸಹೋದ್ಯೋಗಿಗಳು ಒಂದೇ ವಸತಿಗೃಹದಲ್ಲಿ ವಾಸವಿದ್ದಾರೆ. ಅವರ ಪೈಕಿ ಒಬ್ಬಾಕೆಯ ಹುಟ್ಟುಹಬ್ಬ ಜ. 10ರಂದು ಇತ್ತು. ಅಂದು ಕೆಲಸ ಮುಗಿಸಿ ಸಂಭ್ರಮ ಆಚರಿಸಲು ಮೂವರು ಇಂದಿರಾನಗರಕ್ಕೆ ಸಂಜೆ ಹೋಗಿದ್ದರು. ಅಲ್ಲಿಯೇ ಊಟ ಮುಗಿಸಿಕೊಂಡು ರಾತ್ರಿ ವಾಪಸ್‌ ವಸತಿಗೃಹಕ್ಕೆ ಮರಳಿದ್ದರು. ಅದೇ ದಿನ ಮದ್ಯರಾತ್ರಿ ಸೈಕೊ ಬಂದು ಹೋಗಿದ್ದಾನೆ’ ಎಂದು ಪೊಲೀಸರು ತಿಳಿಸಿದರು.

ಹಾಸಿಗೆ ಪಕ್ಕವೇ ಕುಳಿತಿದ್ದ: ‘ಎಂದಿನಂತೆ ಮೂವರು ಒಂದೇ ಕೊಠಡಿಯಲ್ಲಿ ಮಲಗಿದ್ದೆವು. ಮಧ್ಯರಾತ್ರಿ ಎಚ್ಚರವಾಯಿತು. ನಮ್ಮ ಹಾಸಿಗೆ ಪಕ್ಕದಲ್ಲೇ ಒಬ್ಬಾತ ಚಾಕು ಹಿಡಿದುಕೊಂಡು ಕುಳಿತುಕೊಂಡಿದ್ದ. ಗಾಬರಿಗೊಂಡು ಅಕ್ಕ–ಪಕ್ಕದಲ್ಲಿ ಮಲಗಿದ್ದ ಸ್ನೇಹಿತೆಯರನ್ನು ಎಬ್ಬಿಸಿದೆ’ ಎಂದು ದೂರುದಾರ ಯುವತಿ ಹೇಳಿದ್ದಾರೆ.

‘ನೀನು ಯಾರು, ನಿನ್ನನ್ನು ಇಲ್ಲಿಗೆ ಕಳುಹಿಸಿದ್ದು ಯಾರು, ಎಲ್ಲಿಂದ ಬಂದೆ ಎಂದು ಗೆಳತಿ ಆತನನ್ನು ಪ್ರಶ್ನಿಸಿದ್ದರು. ಅದಕ್ಕೆ ಆತ, ವಾಚ್‌ಮನ್‌ ಕಳುಹಿಸಿದ್ದಾನೆ. ನಾನೊಬ್ಬ ಕಳ್ಳ. ಮನೆಯಿಂದ ಹೊರ ಹಾಕಿದ್ದಾರೆ. ಅದಕ್ಕೆ ಇಲ್ಲಿಗೆ ಬಂದೆ ಎಂದಷ್ಟೇ ಉತ್ತರಿಸಿದ್ದ.’

‘ಅದಾದ ನಂತರ ಮೂವರಿಗೂ ಚಾಕು ತೋರಿಸಿ ಸುಮ್ಮನೇ ಮಲಗಿಕೊಳ್ಳುವಂತೆ ಹೇಳಿದ್ದ ಆತ, 10 ನಿಮಿಷ ಬಾಗಿಲು ಬಳಿಯೇ ನಿಂತುಕೊಂಡಿದ್ದ. ನಂತರ ಬಾಲ್ಕನಿಗೆ ಹೋಗಿ, ಅಲ್ಲಿ ಒಣಗಲು ಹಾಕಿದ್ದ ಒಳ ಉಡುಪುಗಳನ್ನು ತೆಗೆದುಕೊಂಡು ಪುನಃ ನಮ್ಮ ಕೊಠಡಿಗೆ ಬಂದಿದ್ದ.’

‘ನಮ್ಮೆದುರೇ ಉಡುಪುಗಳನ್ನು ಮೂಸಿ ನೋಡುತ್ತಿದ್ದ ಆತ, ಮಾನಸಿಕ ಅಸ್ವಸ್ಥನಂತೆ ವರ್ತಿಸುತ್ತಿದ್ದ. ಒಳ ಉಡುಪುಗಳು ಯಾರದ್ದು ಎಂದು ಪದೇ ಪದೇ ಕೇಳುತ್ತಿದ್ದ. ನಮ್ಮದಲ್ಲವೆಂದು ಹೇಳಿದೆವು. ಅದೇ ವೇಳೆ ಸ್ನೇಹಿತೆಯೊಬ್ಬರು ಅಳಲು ಆರಂಭಿಸಿದ್ದರು. ಅದನ್ನು ನೋಡಿ ಸೈಕೊ ಅಲ್ಲಿಂದ ಹೊರಟು ಹೋದ’ ಎಂದು ದೂರಿನಲ್ಲಿ ಯುವತಿ ಮಾಹಿತಿ ನೀಡಿದ್ದಾರೆ.

‘ರಾತ್ರಿಯೇ ಭದ್ರತಾ ಸಿಬ್ಬಂದಿಯನ್ನು ಕೊಠಡಿಗೆ ಕರೆಸಿದೆವು. ಅವರು ವಸತಿಗೃಹದಲ್ಲಿ ಹುಡುಕಾಟ ನಡೆಸಿದರು. ಅವರ ಕಣ್ಣಿಗೆ ಆತ ಬೀಳಲಿಲ್ಲ. ಹಾಲ್‌ನಲ್ಲಿ ನೋಡಿದಾಗ, ಆತ ಸೇದಿ ಎಸೆದಿದ್ದ ಸಿಗರೇಟ್ ತುಣುಕುಗಳು ಬಿದ್ದಿದ್ದವು’ ಎಂದು ಯುವತಿ ತಿಳಿಸಿದ್ದಾರೆ.

ಟೀ–ಶರ್ಟ್‌ ಧರಿಸಿದ್ದ: ‘ಗೆಳತಿಯ ಪರ್ಸ್‌ನಲ್ಲಿದ್ದ ₹150 ಆತ ಕದ್ದುಕೊಂಡು ಹೋಗಿದ್ದಾನೆ. ಹಾಲಿನ ಕೆನೆಯ ಬಣ್ಣದ ಟೀ–ಶರ್ಟ್‌ ಧರಿಸಿದ್ದ. ಆತನ ವಯಸ್ಸು 20ರಿಂದ 25 ವರ್ಷವಿರಬಹುದು. ತೆಳ್ಳನೆಯ ಮೈಕಟ್ಟು, ಕೋಲು ಮುಖ ಹೊಂದಿದ್ದ ಆ ವ್ಯಕ್ತಿ ಕನ್ನಡದಲ್ಲಿ ಮಾತನಾಡುತ್ತಿದ್ದ. ಅವನು ಬಂದು ಹೋದಾಗಿನಿಂದ ಭಯ ಶುರುವಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ’ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಸಿ.ಸಿ.ಟಿ.ವಿ ಕ್ಯಾಮೆರಾ ಇಲ್ಲ: ಬೆಂಗಳೂರು ಮೆಟ್ರೊ ರೈಲು ನಿಗಮದ (ಬಿಎಂಆರ್‌ಸಿಎಲ್‌) ವಸತಿಗೃಹದಲ್ಲಿ 25ಕ್ಕೂ ಹೆಚ್ಚು ಮಹಿಳಾ ಉದ್ಯೋಗಿಗಳು ವಾಸವಿದ್ದಾರೆ. ಆದರೆ, ವಸತಿಗೃಹದ ಹೊರಗಾಗಲಿ, ಒಳಗಾಗಲೀ ಯಾವುದೇ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸಿಲ್ಲ. ಹೀಗಾಗಿ ಸೈಕೊನನ್ನು ಪತ್ತೆ ಹಚ್ಚುವುದು ಪೊಲೀಸರಿಗೆ ಸವಾಲಾಗಿವೆ.

‘ಸೈಕೊ ಬಂದು ಹೋಗಿದ್ದು ಮಾತ್ರ ಗೊತ್ತಾಗಿದೆ. ಆತ ಯಾರು ಎಂಬುದು ತಿಳಿಯುತ್ತಿಲ್ಲ. ಕೆಲವು ತಿಂಗಳ ಹಿಂದೆ ಮಹಾರಾಣಿ ಕಾಲೇಜಿನ ಹಾಸ್ಟೆಲ್‌ನ ವಿದ್ಯಾರ್ಥಿನಿಯರಿಗೂ ಮಾನಸಿಕ ಅಸ್ವಸ್ಥನೊಬ್ಬ ಕಾಟ ಕೊಟ್ಟಿದ್ದ. ಅಲ್ಲಿಯ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ದೃಶ್ಯ ಸೆರೆಯಾಗಿತ್ತು. ಅದರ ಸಹಾಯದಿಂದ ಆತನನ್ನು ಪತ್ತೆ ಮಾಡಿದ್ದೆವು. ಈ ಪ್ರಕರಣದಲ್ಲಿ ಅಂಥ ದೃಶ್ಯಗಳು ಸಿಕ್ಕಿಲ್ಲ. ಅಕ್ಕ–ಪಕ್ಕದ ಕಟ್ಟಡಗಳಲ್ಲಿರುವ ಕ್ಯಾಮೆರಾಗಳನ್ನು ಪರಿಶೀಲನೆ ನಡೆಸುತ್ತಿದ್ದೇವೆ’ ಎಂದು ಬೈಯಪ್ಪನಹಳ್ಳಿ ಪೊಲೀಸರು ತಿಳಿಸಿದರು.

ಗೋಡೆ ಹಾರಿ ಬಂದಿರುವ ಶಂಕೆ: ‘ವಸತಿಗೃಹಕ್ಕೆ ಒಂದೇ ಗೇಟ್‌ ಇದೆ. ಅದರ ಮೂಲಕವೇ ನಿವಾಸಿಗಳು ಓಡಾಡುತ್ತಾರೆ. ಅಲ್ಲಿ ಭದ್ರತಾ ಸಿಬ್ಬಂದಿಯೂ ಇರುತ್ತಾರೆ. ವಸತಿಗೃಹದ ಸುತ್ತಲೂ ಗೋಡೆ ಇದ್ದು, ಆರೋಪಿಯು ಅದನ್ನು ಹಾರಿ ಒಳಗೆ ಬಂದಿರುವ ಅನುಮಾನವಿದೆ’ ಎಂದು ಹೆಚ್ಚುವರಿ ಪೊಲೀಸ್‌ ಕಮಿಷನರ್‌ ಸೀಮಂತ್‌ ಕುಮಾರ್‌ ಸಿಂಗ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಯುವತಿಯರು ಬಿಟ್ಟರೆ, ಬೇರೆ ಯಾರೂ ಆರೋಪಿಯನ್ನು ನೋಡಿಲ್ಲ. ಪ್ರಕರಣ ಭೇದಿಸಲು ಹಲಸೂರು ಉಪವಿಭಾಗದ ಎಸಿಪಿ ನೇತೃತ್ವದಲ್ಲಿ ವಿಶೇಷ ತಂಡಗಳನ್ನು ರಚಿಸಿದ್ದೇವೆ’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry