‘ರವಿ ಜಾತಿ ಪ್ರಮಾಣಪತ್ರವೇ ನಕಲು’

7

‘ರವಿ ಜಾತಿ ಪ್ರಮಾಣಪತ್ರವೇ ನಕಲು’

Published:
Updated:

ರಾಮನಗರ: ‘ನಗರಸಭೆಯ ಜೆಡಿಎಸ್ ಸದಸ್ಯ ಎ.ರವಿ ಅವರ ಜಾತಿ ಪ್ರಮಾಣ ಪತ್ರವೇ ನಕಲಿಯಾಗಿದೆ. ಇದರ ವಿರುದ್ಧ ನ್ಯಾಯಾಲಯದಲ್ಲಿ ಹೋರಾಟ ನಡೆಸಿ ಅವರ ಬಣ್ಣ ಬಯಲು ಮಾಡುತ್ತೇನೆ’ ಎಂದು ನಗರಸಭೆ ಅಧ್ಯಕ್ಷ ಪಿ. ರವಿಕುಮಾರ್ ಹೇಳಿದರು.

‘ನನ್ನ ವಿರುದ್ಧ ಆರೋಪ ಮಾಡುವ ಮೊದಲು ತಾನು ಎಷ್ಟು ಪ್ರಾಮಾಣಿಕ ಎಂದು ಅವರು ಪ್ರಶ್ನಿಸಿಕೊಳ್ಳಬೇಕು. ವಿನಾಕಾರಣ ನನ್ನ ಮೇಲೆ ಅವರು ಸುಳ್ಳು ಆರೋಪಗಳನ್ನು ಮಾಡಿದ್ದು ದಾಖಲೆ ಇದ್ದರೆ ಬಿಡುಗಡೆ ಮಾಡಲಿ’ ಎಂದು ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಸವಾಲು ಹಾಕಿದರು.

‘2011ರಿಂದ ಜೆಡಿಎಸ್ ಅಧಿಕಾರದಲ್ಲಿದ್ದ ಸಂದರ್ಭ ಅಕ್ರಮ ಖಾತೆಗಳು ಮತ್ತು ಬಡಾವಣೆಗಳು ನಿಮಾಣವಾಗಿವೆ. ನನ್ನ ಅವಧಿಯಲ್ಲಿ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಜೆಡಿಎಸ್‌ನ ಕೆಲವು ಸದಸ್ಯರು ಮಾಡಿರುವ ಆರೋಪದಲ್ಲಿ ಸತ್ಯಾಂಶವಿಲ್ಲ. ಈ ಕ್ಷಣದಲ್ಲಿಯೇ ಎಸಿಬಿ, ಸಿಒಡಿ ಸೇರಿದಂತೆ ಯಾವುದೇ ತನಿಖೆಗೂ ನಾನು ಸಿದ್ಧನಾಗಿದ್ದೇನೆ’ ಎಂದು ಅವರು ಸ್ಪಷ್ಟನೆ ನೀಡಿದರು.

‘ಮತ್ತೊಬ್ಬ ಜೆಡಿಎಸ್ ಸದಸ್ಯ ಎ.ಆರ್. ಮಂಜುನಾಥ್ ನನ್ನ ಬಗ್ಗೆ ಅಗೌರವದಿಂದ ಮಾತನಾಡಿದ್ದಾರೆ. ಅವರ ಅಕ್ರಮಗಳ ದಾಖಲೆಗಳು ನನ್ನ ಬಳಿ ಇದ್ದು, ಅವರು ಹದ್ದುಮೀರಿದರೆ ಬಹಿರಂಗಗೊಳಿಸುತ್ತೇನೆ’ ಎಂದು ಎಚ್ಚರಿಸಿದರು.

‘ಅಕ್ರಮ ಮರಳು ದಂಧೆ ಮಾಫಿಯಾ, ಬಡ್ಡಿ ವ್ಯವಹಾರ, ಸಾಲ ಕೊಡದಿರುವವರನ್ನು ಊರು ಬಿಟ್ಟು ಓಡಿಸುವ ಕೆಲಸ ಮಾಡಿರುವವರಿಂದ ನಾನು ಬುದ್ಧಿ ಕಲಿಯಬೇಕಾಗಿಲ್ಲ, ನಾಲಿಗೆ ಹರಿಯಬಿಡದೆ ಬಿಗಿಹಿಡಿದು ಮಾತನಾಡಲಿ’ ಎಂದರು.

‘ನಾನು ನಗರಸಭೆ ಸದಸ್ಯನಾಗಿ ಆಯ್ಕೆಯಾಗುವ ಮುನ್ನ ಇಲ್ಲಿಯೇ ಎಸ್‍ಎಎಸ್ ಬರೆಯುತ್ತಿದ್ದೆ. ಚಹಾ ಮಾರುತ್ತಿದ್ದ ಹುಡುಗ ಪ್ರಧಾನಿ ಆಗಬಹುದಾದರೆ ನಾನು ನಗರಸಭೆ ಅಧ್ಯಕ್ಷನಾಗಬಾರದೇ’ ಎಂದರು.

‘ನಗರಸಭೆಯಲ್ಲಿ ಪ್ರತಿ ತಿಂಗಳು ಸಾಮಾನ್ಯ ಸಭೆ ನಡೆಯುತ್ತದೆ. ಇಲ್ಲಿ ನಗರದ ಅಭಿವೃದ್ಧಿಯ ಬಗ್ಗೆ ಚರ್ಚಿಸಬೇಕು. ಅದನ್ನು ಬಿಟ್ಟು ಎಲ್ಲೋ ಕುಳಿತುಕೊಂಡು ನಗರಸಭೆಯಲ್ಲಿ ಅಕ್ರಮಗಳು ನಡೆಯುತ್ತಿವೆ ಎಂದರೆ ಏನೂ ಪ್ರಯೋಜನವಾಗುವುದಿಲ್ಲ. ನನಗೆ ಇಲ್ಲಿನ ಶಾಸಕರ ಬಗ್ಗೆ ಗೌರವವಿದೆ’ ಎಂದು ತಿಳಿಸಿದರು.

ನಗರಸಭೆ ಉಪಾಧ್ಯಕ್ಷೆ ತಹಸೀನ್‌ ತಾಜ್‌, ಸ್ಥಾಯಿ ಸಮಿತಿ ಅಧ್ಯಕ್ಷ ಅಬ್ದುಲ್ ಬಾಸಿದ್, ಸದಸ್ಯರಾದ ಎ.ಬಿ. ಚೇತನ್‌ಕುಮಾರ್, ಆರ್‌. ಮುತ್ತುರಾಜ್‌, ಮಂಗಳಾ ಶಂಭುಗೌಡ, ಲಕ್ಷ್ಮಮ್ಮಹುಚ್ಚಯ್ಯ, ನಾಮಕರಣ ಸದಸ್ಯರಾದ ದೊಡ್ಡಿಸುರೇಶ್, ಸೋಮಶೇಖರ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry